ಬೆಂಗಳೂರಲ್ಲಿ ಗಮನ ಸೆಳೆದ ಮಹಿಳೆಯರ ಬೈಕ್‌, ವಿಂಟೇಜ್‌, ಜೀಪ್‌ ರ‌್ಯಾಲಿ

By Kannadaprabha NewsFirst Published Jan 27, 2020, 8:36 AM IST
Highlights

ಬೆಂಗಳೂರಲ್ಲಿ ನಡೆದ ಮಹಿಳೆಯರ ಬೈಕ್‌ ಹಾಗೂ ಕಾರ್‌ ರ‌್ಯಾಲಿ| ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಭಾವೈಕ್ಯತೆ ಸಂದೇಶ ಸಾರಿದರು|ಅರಮನೆ ಮೈದಾನದ ಪೆಬ್ಬಲ್ಸ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ|

ಬೆಂಗಳೂರು(ಜ.27): ಮೈ ಕೊರೆಯುವ ಚಳಿಯ ಮಧ್ಯೆ ಎಲ್ಲೆಲ್ಲೂ ತಿರಂಗ ಧ್ವಜದ ಹಾರಾಟ, ಒಂದೆಡೆ ಮಹಿಳಾ ಬೈಕ್‌ ಸವಾರರು, ಇನ್ನೊಂದೆಡೆ ವಿಂಟೇಜ್‌ ಕಾರ್‌ಗಳು ಹಾಗೂ ಜೀಪ್‌ಗಳಲ್ಲಿ ಜೈಕಾರ ಕೂಗುತ್ತಾ ಬಿಂದಾಸ್‌ ಆಗಿ ತೆರಳುತ್ತಿದ್ದ ಯುವತಿಯರು!

ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮ ಯೋಧರ ಕುಟುಂಬಗಳಿಗೆ ಸಹಾಯಾರ್ಥ ಹಾಗೂ ‘ಗಣರಾಜ್ಯೋತ್ಸವ’ದ ಅಂಗವಾಗಿ ಶೀ ಫಾರ್‌ ಸೊಸೈಟಿ ಸಂಘ ಏರ್ಪಡಿಸಿದ್ದ ‘ಮಹಿಳೆಯರ ಬೈಕ್‌ ಹಾಗೂ ಕಾರ್‌ ರ‌್ಯಾಲಿ’ಯ ದೃಶ್ಯ.
ಜೋಡಿಧರ್‌ ಫೌಂಡೇಷನ್‌ ಹಾಗೂ ಸಿ.ಕೃಷ್ಣಯ್ಯ ಚೆಟ್ಟಿಗ್ರೂಪ್‌ ಆಫ್‌ ಜ್ಯುವೆಲ್ಸ್‌ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ರ‌್ಯಾಲಿಯಲ್ಲಿ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಭಾವೈಕ್ಯತೆ ಸಂದೇಶ ಸಾರಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಗ್ಗೆ 6.30ಕ್ಕೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡಿರುವ ಮೊದಲ ಮಹಿಳಾ ಕ್ಯಾಪ್ಟನ್‌ ಭಾವನಾ ಕಸ್ತೂರಿ ಧ್ವಜಾರೋಹಣ ನೆರವೇರಿಸಿದರು. ನಂತರ ರ‌್ಯಾಲಿಗೆ ಚಾಲನೆ ನೀಡಲಾಯಿತು.
ನಗರದ ಸ್ವಾತಂತ್ರ್ಯ ಉದ್ಯಾನದಿಂದ ಅರಮನೆ ಮೈದಾನದವರೆಗೆ ಜರುಗಿದ ರ‌್ಯಾಲಿಯಲ್ಲಿ 120 ಮಹಿಳಾ ಬೈಕ್‌ ಸವಾರರು, 20 ಮಂದಿ ಮಹಿಳಾ ಪೊಲೀಸರು ಪಾಲ್ಗೊಂಡಿದ್ದರು. ಕೇಸರಿ, ಬಿಳಿ, ಹಸಿರು ಬಣ್ಣದ ಉಡುಪಿನಲ್ಲಿ ಮಿಂಚುತ್ತಿದ್ದ ಮಹಿಳೆಯರು ವಿಂಟೇಜ್‌ ಕಾರು, ಜೀಪ್‌ನಲ್ಲಿ ಮೆರವಣಿಗೆ ಸಾಗುವ ಮೂಲಕ ಗಮನ ಸೆಳೆದರು. ಬೆಂಗಳೂರು ನಗರ ಮಹಿಳಾ ಪೊಲೀಸರು ರಾಯಲ್‌ ಎನ್‌ಫೀಲ್ಡ್‌ನಲ್ಲಿ ರಾರ‍ಯಲಿಗೆ ಸಾಥ್‌ ನೀಡಿದ್ದು ವಿಶೇಷವಾಗಿತ್ತು.
ನಂತರ ಅರಮನೆ ಮೈದಾನದ ಪೆಬ್ಬಲ್ಸ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವ ಜತೆಗೆ ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ, ಪ್ರಸ್ತುತ ದಿನಗಳಲ್ಲಿ ಯುವಪೀಳಿಗೆಗೆ ಸ್ವಾತಂತ್ರ್ಯದ ಮಹತ್ವದ ಕುರಿತಂತೆ ಜಾಗೃತಿ ಮೂಡಿಸಬೇಕಿದೆ. ಸೀ ಫಾರ್‌ ಸೊಸೈಟಿಯು ಮುಂದಿನ ದಿನಗಳಲ್ಲೂ ಸಮಾಜ ಹಾಗೂ ದೇಶಕ್ಕೆ ಪೂರಕವಾದ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕವಿತಾ ಜೋಡಿಧರ್‌, ಡಾ.ಸಿ.ವಿನೋದ್‌ ಹಯಗ್ರಿವ್‌, ಮನ್ಸೂರ್‌ ಅಲಿ ಖಾನ್‌, ಶೀ ಫಾರ್‌ ಸೊಸೈಟಿಯ ಸಹ ಸಂಸ್ಥಾಪಕಿ ಬೈಕರ್‌ ಹರ್ಷಿಣಿ ಇನ್ನಿತರರು ಪಾಲ್ಗೊಂಡಿದ್ದರು.

click me!