ಇನ್ನಷ್ಟು ದಿನ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ಕೇಳುವ ಸಾಧ್ಯತೆ| ವಿನಯ್ ಸಹಚರರನ್ನು ಮತ್ತೆ ಕರೆತಂದು ಸಮಕ್ಷಮ ವಿಚಾರಣೆ ನಡೆಸಿದ ಸಿಬಿಐ| ಜಿಪಂ ಎಇಇ ಆಗಿರುವ ಎಸ್.ಎನ್. ಗೌಡರ ಅವರನ್ನು ಸಿಬಿಐ ತಂಡ ಬೆಳಗ್ಗೆ ಕರೆತಂದು ತೀವ್ರ ವಿಚಾರಣೆ|
ಹುಬ್ಬಳ್ಳಿ(ನ.09): ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ತನ್ನ ವಶದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಇಂದು(ಸೋಮವಾರ) ನ್ಯಾಯಾಲಯಕ್ಕೆ ಹಾಜರು ಪಡಿಸಲಿದೆ.
ಗುರುವಾರ ಸಿಬಿಐ ವಶಕ್ಕೆ ಪಡೆದಿದ್ದ ವಿನಯ್ ಕುಲಕರ್ಣಿ ಅವರನ್ನು ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಹಿಂಡಲಗಾ ಜೈಲಿಗೆ ಕಳಿಸಿತ್ತು. ಮರುದಿನ ಶುಕ್ರವಾರ ನಡೆದ ವಿಚರಣೆ ವೇಳೆ ಪ್ರಮುಖ ವಿಷಯದ ವಿಚಾರಣೆಗಾಗಿ ಮೂರು ದಿನಗಳ ಕಾಲ ವಶಕ್ಕೆ ನೀಡುವಂತೆ ಮಾಡಿದ ಸಿಬಿಐ ಮನವಿಯನ್ನು ಪುಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ಸಿಬಿಐ ಶನಿವಾರ ಬೆಳಗ್ಗೆಯಿಂದ ತನ್ನ ವಶಕ್ಕೆ ಪಡೆದಿರುವ ವಿನಯ್ ಕುಲಕರ್ಣಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
undefined
ಎರಡನೇ ದಿನವಾದ ಭಾನುವಾರ ಸಿಬಿಐ ಅಧಿಕಾರಿಗಳು ವಿವಿಧ ಮಗ್ಗುಲಿನ ವಿಚಾರಣೆ ನಡೆಸಿದರು. ಜತೆಗೆ ಹಿಂದೆ ವಿಚಾರಣೆಗೆ ಒಳಪಡಿಸಿದ್ದ ವಿನಯ ಸಹಚರರನ್ನೆಲ್ಲ ಮತ್ತೊಮ್ಮೆ ಇಲ್ಲಿನ ಗೋಕುಲ ರಸ್ತೆ ಸಿಎಆರ್ ಮೈದಾನದಲ್ಲಿನ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿತು. ಸೋಮವಾರ ನ್ಯಾಯಾಲಯಕ್ಕೆ ವಿನಯ್ ಕುಲಕರ್ಣಿ ಹಾಜರುಪಡಿಸಿ ಇನ್ನಷ್ಟುದಿನ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಸಿಬಿಐ ಅಧಿಕಾರಿಗಳು ಕೋರುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಯೋಗೀಶ್ ಗೌಡ ಹತ್ಯೆ ಪ್ರಕರಣ: ಸಿಬಿಐ ತನಿಖೆ ವೇಳೆ ಒಂದೊಂದೆ ನಿಗೂಢ ಸತ್ಯ ಬಯಲು..!
ಭಾನುವಾರ ಬೆಳಗ್ಗೆ 9ರಿಂದಲೇ ವಿಚಾರಣೆ ಪ್ರಾರಂಭಿಸಿತು. ವಿನಯ ಕುಲಕರ್ಣಿ ಅವರ ಮಾಜಿ ಆಪ್ತ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡ, ಜಿಪಂ ಎಇಇ ಎಸ್.ಎನ್. ಗೌಡರ, ನ್ಯಾಮಗೌಡರ ಕಾರು ಚಾಲಕನಾಗಿದ್ದ ಪುಂಡಲೀಕ ಮೊರಬ, ವಿನಯ್ ಸೋದರ ಮಾವ ಚಂದ್ರಶೇಖರ ಇಂಡಿ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಯೋಗೀಶಗೌಡರ ಪತ್ನಿ ಮಲ್ಲಮ್ಮ ಗೌಡರ ಹೀಗೆ ಹಲವರನ್ನು ಕರೆತಂದು ವಿನಯ್ ಸಮಕ್ಷಮದಲ್ಲೇ ವಿಚಾರಣೆ ನಡೆಸಲಾಗಿದೆ.
ಹಣದ ಹರಿವು:
ಶನಿವಾರ ಕೆಲವು ಗಂಟೆ ವಿಚಾರಣೆ ನಡೆಸಿದ್ದ ವಿನಯ್ ಕುಲಕರ್ಣಿ ಮಾಜಿ ಆಪ್ತ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡ ಅವರನ್ನು ಭಾನುವಾರವೂ ವಿಚಾರಣೆ ನಡೆಸಿತು. ನ್ಯಾಮಗೌಡ ಅವರನ್ನು ಕಳೆದ ಮೂರು ದಿನಗಳಿಂದ ಸಿಬಿಐ ವಿಚಾರಣೆ ನಡೆಸುತ್ತಿದೆ. ವಿನಯ್ ಸಮಕ್ಷಮದಲ್ಲೇ ಸೋಮಶೇಖರ ವಿಚಾರಣೆ ನಡೆಸಲಾಗಿದೆ. ಸಾಕ್ಷ್ಯ ನಾಶಪಡಿಸಿ ಪ್ರಕರಣದ ದಿಕ್ಕು ತಪ್ಪಿಸಲು ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿದೆ. ಒಂದೇ ದಿನ ಕೋಟ್ಯಂತರ ರು. ವರ್ಗಾವಣೆಯಾಗಿದೆ ಎಂದು ಹೇಳಲಾಗಿದೆ. ಈ ವಿಷಯ ಕುರಿತು ಹಲವರ ವಿಚಾರಣೆ ನಡೆದಿದೆ. ಕೋಟ್ಯಂತರ ರುಪಾಯಿ ಯಾರಿಗೆ ಸಂದಾಯವಾಗಿದೆ? ಏಕೆ ನೀಡಲಾಗಿತ್ತು? ಎಂಬೆಲ್ಲ ಪ್ರಶ್ನೆಗಳನ್ನು ಈ ವೇಳೆ ಸಿಬಿಐ ಅಧಿಕಾರಿಗಳು ಕೇಳಿದ್ದಾರೆನ್ನಲಾಗಿದೆ.
ಇದೇ ವೇಳೆ ಕೊಲೆ ನಡೆದ ದಿನ ವಿನಯ್ ಕುಲಕರ್ಣಿ ದೆಹಲಿಯಲ್ಲಿ ಇರುವುದಾಗಿ ದಾಖಲೆ ಸೃಷ್ಟಿಮಾಡಿದ ವಿಷಯದ ಬಗ್ಗೆಯೂ ಈ ವೇಳೆ ಪ್ರಶ್ನೆಗಳನ್ನು ಕೇಳಲಾಗಿದೆ. ಈ ನಡುವೆ ಆಗ ನ್ಯಾಮಗೌಡ ವಾಹನ ಚಾಲಕನಾಗಿದ್ದ ಪುಂಡಲೀಕ ಮೊರಬ ಎಂಬುವನನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಇದು ಮತ್ತಷ್ಟುಕುತೂಹಲಕ್ಕೆ ಕಾರಣವಾಗಿದೆ.
ಜೈಲಿನಿಂದ ಹೊರ ಬಂದು ವಿನಯ್ ಕುಲಕರ್ಣಿ ಸಿಎಂ ಆಗ್ತಾರೆ..!
ಮಲ್ಲಮ್ಮ, ಗೌರಿ:
ಇನ್ನೂ ಕಾಂಗ್ರೆಸ್ ಮುಖಂಡ, ವಿನಯ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಾಗರಾಜ ಗೌರಿ ಅವರನ್ನು ಕರೆತಂದು ವಿಚಾರಣೆ ಮಾಡಲಾಯಿತು. ಯೋಗೀಶಗೌಡ ಹತ್ಯೆ ಪ್ರಕರಣದ ಸಂಧಾನ ನಡೆಸುವಲ್ಲಿ ಪ್ರಯತ್ನಿಸಿರುವವರಲ್ಲಿ ನಾಗರಾಜ ಗೌರಿ ಕೂಡ ಒಬ್ಬರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 2.30ಕ್ಕೆ ಕರೆತಂದು ವಿಚಾರಣೆಗೊಳಪಡಿಸಲಾಯಿತು. ಇದೇ ವೇಳೆ ವಿನಯ್ ಸೋದರ ಮಾವ ವಿಜಯಪುರದ ಚಂದ್ರಶೇಖರ ಇಂಡಿ, ಯೋಗೀಶ ಗೌಡ ಪತ್ನಿ ಮಲ್ಲಮ್ಮ ಅವರನ್ನು ಕರೆ ತಂದು ಕೆಲಕಾಲ ವಿಚಾರಣೆ ಮಾಡಲಾಗಿದೆ. ಈ ಹಿಂದೆ ಈ ಮೂವರನ್ನು ನಾಲ್ಕಾರು ಬಾರಿ ವಿಚಾರಣೆಗೊಳಪಡಿಸಲಾಗಿತ್ತು. ಆಗ ಎಲ್ಲರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿತ್ತು. ಇದೀಗ ಆಗ ನೀಡಿದ್ದ ಮಾಹಿತಿಯನ್ನು ವಿನಯ್ ಸಮಕ್ಷಮದಲ್ಲೇ ಪಡೆಯುವ ಉದ್ದೇಶದಿಂದ ಒಬ್ಬೊಬ್ಬರನ್ನಾಗಿ ಕರೆ ತಂದು ವಿಚಾರಣೆ ಒಳಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಂದುವರಿಸುವ ಸಾಧ್ಯತೆ:
ಈ ನಡುವೆ ವಿನಯ್ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಇನ್ನಷ್ಟುದಿನ ಸಿಬಿಐ ಕಸ್ಟಡಿಗೆ ವಿನಯ್ ಅವರನ್ನು ಕೇಳುವ ಸಾಧ್ಯತೆ ಇದೆ. ಕೆಲವೊಂದು ಪ್ರಶ್ನೆಗಳಿಗೆ ವಿನಯ್ ಸಹಕಾರ ನೀಡುತ್ತಿಲ್ಲ ಎನ್ನಲಾಗಿದ್ದು, ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡದಿದ್ದಲ್ಲಿ ದಾಖಲೆಗಳನ್ನು ಮುಂದಿಟ್ಟು ಮತ್ತೆ ಪ್ರಶ್ನೆಗಳ ಸುರಿಮಳೆಯನ್ನು ಸಿಬಿಐ ಸುರಿಸುತ್ತಿದೆ. ಇದರಿಂದ ವಿನಯ್ ಇಕ್ಕಟ್ಟಿಗೆ ಸಿಲುಕಿದಂತಾಗಿದೆ ಎಂದು ಹೇಳಲಾಗುತ್ತಿದೆ. ರಾಕೇಶ ರಂಜನ್ ನೇತೃತ್ವದ ಐವರು ಅಧಿಕಾರಿಗಳ ತಂಡ ವಿಚಾರಣೆ ನಡೆಸುತ್ತಿದೆ. ಒಟ್ಟಿನಲ್ಲಿ ಭಾನುವಾರದ ವಿಚಾರಣೆ ವೇಳೆ ವಿನಯ್‌ಗೆ ಇಕ್ಕಟ್ಟಿಗೆ ಸಿಲುಕುವಂತೆ ಪ್ರಶ್ನೆಗಳ ಸುರಿಮಳೆಯನ್ನೇ ಸಿಬಿಐ ಸುರಿಸಿದ್ದಂತೂ ಸತ್ಯ.
ಜಿಪಂ ಎಇಇಗೂ ಡ್ರಿಲ್
ಇನ್ನೂ ಜಿಪಂ ಎಇಇ ಆಗಿರುವ ಎಸ್.ಎನ್. ಗೌಡರ ಅವರನ್ನು ಸಿಬಿಐ ತಂಡ ಬೆಳಗ್ಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿತು. 2016ರಲ್ಲಿ ಜಿಪಂ ಚುನಾವಣೆ ನಡೆದಿತ್ತು. ಆಗ ಹೆಬ್ಬಳ್ಳಿ ಕ್ಷೇತ್ರದಿಂದ ಯೋಗೀಶಗೌಡ ಗೆದ್ದಿದ್ದರು. ಎಸ್.ಎನ್. ಗೌಡರ ಆಗ ಫ್ಲೈಯಿಂಗ್ ಸ್ಕ್ವಾಡ್ ಆಗಿದ್ದರು. ಯೋಗೀಶಗೌಡರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ದಾಖಲಿಸಲು ವಿನಯ್ ಕುಲಕರ್ಣಿ ಒತ್ತಡ ಹೇರಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಎಸ್.ಎನ್. ಗೌಡರ ಅವರನ್ನು ಕರೆತಂದು ಡ್ರಿಲ್ ಮಾಡಲಾಯಿತು. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಆಗ ಯೋಗೀಶಗೌಡ ಜೈಲಿಗೂ ಹೋಗಿದ್ದರು. ಜೈಲಿನಲ್ಲಿದ್ದುಕೊಂಡೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಯೋಗೀಶಗೌಡ ಹಾಗೂ ವಿನಯ್ ಕುಲಕರ್ಣಿ ಮಧ್ಯೆ ರಾಜಕೀಯ ದ್ವೇಷ ಶುರುವಾಗಲು ಈ ಪ್ರಕರಣವೇ ಕಾರಣ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಎಸ್.ಎನ್. ಗೌಡರ ಅವರನ್ನು ಸುಮಾರು 4 ಗಂಟೆಗೂ ಹೆಚ್ಚು ಕಾಲ ಡ್ರಿಲ್ ಮಾಡಲಾಗಿದೆ. ಆಗಿನ ಚುನಾವಣೆಯಲ್ಲಿ ನಡೆದ ಘಟನಾವಳಿಗಳ ಬಗ್ಗೆ ಎಳೆ ಎಳೆಯಾಗಿ ಪ್ರಶ್ನಿಸಿ ಮಾಹಿತಿಯನ್ನು ಸಿಬಿಐ ಪಡೆದಿದೆ ಎಂದು ಮೂಲಗಳು ತಿಳಿಸುತ್ತವೆ.