ಲಂಚ, ವಂಚನೆ ಪ್ರಕರಣ : ಅದಾನಿ ಬಂಧಿಸಿ, ದೇಶದ ಗೌರವ ಉಳಿಸಿ -ಡಿಸಿಎಂ ಡಿಕೆ ಶಿವಕುಮಾರ

By Kannadaprabha News  |  First Published Nov 23, 2024, 7:22 AM IST

ರಾಹುಲ್‌ ಹೇಳಿದರೆ ಕೇಳಲಿಲ್ಲ, ಇದೀಗ ಅಮೆರಿಕ ಕೋರ್ಟ್‌ ಅಕ್ರಮ ಬಯಲಿಗೆಳೆದಿದೆ. ಅರೆಸ್ಟ್ ವಾರೆಂಟ್ ಇದ್ರೂ ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಅದಾನಿ ವಿರುದ್ಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಯಾಕೆ? ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಪ್ರಶ್ನಿಸಿದದರು.


ಬೆಂಗಳೂರು (ನ.23): ದೇಶದ ಗೌರವ ಉಳಿಸುವ ಸಲುವಾಗಿ ಕೇಂದ್ರ ಸರ್ಕಾರ ಉದ್ಯಮಿ ಗೌತಮ್‌ ಅದಾನಿ ಅವರನ್ನು ಬಂಧಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಈವರೆಗೆ ಉದ್ಯಮಿ ಗೌತಮ್‌ ಅದಾನಿ ಅವರನ್ನು ರಕ್ಷಿಸುತ್ತಾ ಬಂದಿದೆ. ಈಗ ಅಮೆರಿಕದ ನ್ಯಾಯಾಲಯ ಗೌತಮ್‌ ಅದಾನಿ ಅಧಿಕಾರಿಗಳಿಗೆ ಲಂಚ ನೀಡಿ ವಿದ್ಯುತ್‌ ಹಂಚಿಕೆ ಯೋಜನೆ ಪಡೆದಿದ್ದಾರೆ. ಹೀಗಾಗಿ ಅವರನ್ನು ಬಂಧಿಸುವಂತೆ ಆದೇಶಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌತಮ್‌ ಅದಾನಿ ಅವರನ್ನು ಬಂಧಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದರು.

Latest Videos

undefined

ಲಂಚ, ವಂಚನೆ ಆರೋಪ: ಅಮೆರಿಕ ಕೋರ್ಟ್ ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಅದಾನಿಗೆ ಸೆಬಿ ಶಾಕ್!

ಕಳೆದ ಏಳೆಂಟು ವರ್ಷಗಳಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗೌತಮ್‌ ಅದಾನಿ ಅವರ ಸಂಸ್ಥೆಗಳ ವಿರುದ್ಧ ಆರೋಪ ಮಾಡುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ವಿಚಾರ ಸಂಸತ್ತಿನಲ್ಲೂ ಚರ್ಚೆಯಾಗಿತ್ತು. ಇದೀಗ ಅಮೆರಿಕ ನ್ಯಾಯಾಲಯ ಗೌತಮ್‌ ಅದಾನಿ ಅವರನ್ನು ಬಂಧಿಸುವಂತೆ ಆದೇಶಿಸಿದೆ. ಮುಖ್ಯಮಂತ್ರಿಗಳು ಸೇರಿದಂತೆ ವಿಪಕ್ಷದ ನಾಯಕರನ್ನು ಬಂಧಿಸುವ ಕೇಂದ್ರ ಸರ್ಕಾರ ಈಗ ಅದಾನಿ ಅವರನ್ನು ಬಂಧಿಸಿ ದೇಶದ ಮರ್ಯಾದೆ ಉಳಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಗೌತಮ್‌ ಅದಾನಿ ಅವರನ್ನು ರಕ್ಷಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ದೇಶದ ಜನಸಾಮಾನ್ಯರು ಅದಾನಿ ಸಂಸ್ಥೆಗಳ ಷೇರುಗಳ ಮೇಲೆ ಹೂಡಿಕೆ ಮಾಡಿರುವ ಸಾವಿರಾರು ಕೋಟಿಯನ್ನು ರಕ್ಷಿಸುವುದಕ್ಕೆ ಮುಂದಾಗಬೇಕು ಎಂದು ಕೋರಿದರು.

ಗ್ಯಾರಂಟಿ ಸ್ಕೀಂ ಕುರಿತು ಬಿಜೆಪಿಯಿಂದ ಸುಳ್ಳು ಮಾಹಿತಿ:

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸುಳ್ಳು ಪ್ರಚಾರ ಮಾಡಿರುವ ಕುರಿತಂತೆ ಬಿಜೆಪಿ ನಾಯಕರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದರು.

ನಮ್ಮ ಗ್ಯಾರಂಟಿ ಯೋಜನೆ ಕುರಿತಂತೆ ಕನಿಷ್ಠ ಪರಿಜ್ಞಾನವಿಲ್ಲದೇ ಬಿಜೆಪಿ ನಾಯಕರು ಜಾಹೀರಾತು ಪ್ರಕಟಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ. ಈ ಹಿಂದೆ ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಪರಿಶೀಲಿಸುವಂತೆ ಬಿಜೆಪಿ ನಾಯಕರನ್ನು ಆಹ್ವಾನಿಸಿದ್ದೆ. ಆದರೂ,ಗ್ಯಾರಂಟಿ ಜಾರಿ ಕುರಿತಂತೆ ಯಾವುದೇ ಮಾಹಿತಿಯಿಲ್ಲದೆ ಜಾಹೀರಾತು ನೀಡಿದ್ದಾರೆ. ಈ ಬಗ್ಗೆ ಮಾನಹಾನಿ ಪ್ರಕರಣ ದಾಖಲಿಸುತ್ತೇವೆ ಎಂದರು.

ಚನ್ನಪಟ್ಟಣ ಫಲಿತಾಂಶ ಏನೇ ಆದರೂ ನಾನೇ ಅಭ್ಯರ್ಥಿ:

ಚುನಾವಣೆ ಫಲಿತಾಂಶ ಕುರಿತಂತೆ ಹೊರಬಂದಿರುವ ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಸುಳ್ಳಾಗಲಿದೆ. ಈ ಹಿಂದೆ ಕರ್ನಾಟಕ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಸಮೀಕ್ಷೆಗಳು ಸುಳ್ಳಾಗಿದ್ದವು. ಅದು ಉಪ ಚುನಾವಣಾ ಫಲಿತಾಂಶದ ಸಮೀಕ್ಷೆಯೂ ಸುಳ್ಳಾಗಲಿದ್ದು, ಎಲ್ಲ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ಅದರಲ್ಲೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಆದರೂ, ಅಲ್ಲಿ ನಾನೇ ಅಭ್ಯರ್ಥಿ. ಗೆದ್ದರೂ ನಾನೇ ಗೆದ್ದಂತೆ, ಸೋತರೂ ನಾನೇ ಸೋತಂತೆ. ನನ್ನ ಮುಖ ಮುಂದಿಟ್ಟುಕೊಂಡು ಚುನಾವಣೆ ನಡೆಸಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಅದಾನಿ ಸರ್ಕಾರದ ಆಸ್ತಿ ಪಡೆದು, ಅವುಗಳನ್ನೇ ಅಡವಿಟ್ಟು ಬ್ಯಾಂಕ್ ಸಾಲ ಪಡೆಯುತ್ತಾರೆ; ಮಲ್ಲಿಕಾರ್ಜುನ ಖರ್ಗೆ

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಚುನಾವಣಾ ಫಲಿತಾಂಶಗಳೂ ಕಾಂಗ್ರೆಸ್‌ ಪರವಾಗಿರಲಿದೆ. ಅಲ್ಲಿ ಅತಂತ್ರ ಫಲಿತಾಂಶ ಬಂದರೆ ಶಾಸಕರನ್ನು ರಾಜ್ಯಕ್ಕೆ ಕರೆತರುವ ಬಗ್ಗೆ ಎಐಸಿಸಿ ನಾಯಕರು ಯಾವುದೇ ಸೂಚನೆ ನೀಡಿಲ್ಲ. ನನ್ನ ಪ್ರಕಾರ ಎರಡೂ ಕಡೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಯಾವುದೇ ರೀತಿಯ ರೆಸಾರ್ಟ್‌ ರಾಜಕಾರಣ ನಡೆಯುವುದಿಲ್ಲ ಎಂದರು.

ಎಐಸಿಸಿ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದಿದ್ದರು. ಇದೀಗ ದೆಹಲಿಗೆ ವಾಪಾಸಾಗಿದ್ದಾರೆ. ಹೀಗಾಗಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ರಾಜಕೀಯ ಹೊರತಾಗಿ ಬೇರೆ ವಿಚಾರವನ್ನು ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

click me!