* ತುಂಗಭದ್ರಾ ಜಲಾಶಯ ವೀಕ್ಷಣೆಗೆ ಟ್ಯೂರಿಸ್ಟ್ ದಂಡು
* ನೀರಿನ ಅಲೆಗಳ ವೀಕ್ಷಣೆಯ ರೋಮಾಂಚನ
* ತೆರೆಗಳ ಏರಿಳಿತ ವೀಕ್ಷಿಸಲು ಹಾತೊರೆಯುತ್ತಿರುವ ಪ್ರವಾಸಿಗರು
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಜು.22): ಕಲ್ಯಾಣ ಕರ್ನಾಟಕದ ಜೀವನಾಡಿ ಮೈದುಂಬಿಕೊಳ್ಳುತ್ತಿರುವುದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
undefined
ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿದ್ದು, ಗಾಳಿಯ ರಭಸಕ್ಕೆ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ನೀರಿನ ಹೋಯ್ದಾಟ, ತೆರೆಗಳ ಏರಿಳಿತವನ್ನು ವೀಕ್ಷಿಸಲು ಪ್ರವಾಸಿಗರು ಹಾತೊರೆಯುತ್ತಿದ್ದಾರೆ. ಅದರಲ್ಲೂ ಹಂಪಿ ಹಾಗೂ ಕಮಲಾಪುರದ ಜೂಲಾಜಿಕಲ್ ಪಾರ್ಕ್‌ಗೆ ಆಗಮಿಸುವ ಪ್ರವಾಸಿಗರು ಡ್ಯಾಂ ವೀಕ್ಷಿಸಿಯೇ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಹಿನ್ನೀರು ಪ್ರದೇಶದ ಸಸ್ಯೋದ್ಯಾನ ಬಳಿ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ.
ಏರಿದ ಒಳಹರಿವು:
ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿದೆ. ಡ್ಯಾಂನ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜು. 21ಕ್ಕೆ ಜಲಾಶಯದಲ್ಲಿ 1620.29 ಅಡಿ ನೀರು ಸಂಗ್ರಹವಾಗಿದ್ದು, 59.011 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. 60,781 ಕ್ಯುಸೆಕ್ ಒಳಹರಿವು ಇದ್ದು, 4064 ಕ್ಯುಸೆಕ್‌ನಷ್ಟು ಹೊರಹರಿವು ಇದೆ. ಕಳೆದ ವರ್ಷ ಇದೇ ದಿನ 32.464 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ಹೆಚ್ಚು ನೀರಿದ್ದು, ಒಳಹರಿವು ಕೂಡ ಏರುಗತಿಯಲ್ಲಿರುವುದರಿಂದ ಜಲಾಶಯ ನೆಚ್ಚಿರುವ ರೈತರು ಖುಷಿಯಾಗಿದ್ದಾರೆ. ಇನ್ನೊಂದೆಡೆ ಪ್ರವಾಸಿಗರು ಕೂಡ ಜಲಾಶಯದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಡ್ಯಾಂನಲ್ಲಿ ಪ್ರವಾಸಿ ಲೋಕ ಸೃಷ್ಟಿಯಾಗುತ್ತಿದೆ.
ತುಂಗಭದ್ರಾ ಜಲಾಶಯಿಂದ ಬಳ್ಳಾರಿಗೆ ನೀರಿಲ್ಲ, ಆಡಳಿತ ಮಂಡಳಿ ನಡೆಯಿಂದ ರೈತರು ಕಂಗಾಲು
ಗಂಗೆ ಪೂಜೆ:
ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದೆ. ಏತನ್ಮಧ್ಯೆ ಕಾಲುವೆಗಳಿಗೂ ನೀರು ಹರಿಸಿರುವುದರಿಂದ ಜಲಾಶಯ ನೆಚ್ಚಿರುವ ಗಂಗಾವತಿ, ಕಂಪ್ಲಿ, ಸಿರುಗುಪ್ಪ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ಕಮಲಾಪುರ ಮತ್ತು ಹೊಸಪೇಟೆ ಭಾಗದ ರೈತರು ಆಗಮಿಸಿ ಗಂಗೆಪೂಜೆ ಮಾಡುತ್ತಿದ್ದಾರೆ. ಗಂಗಾಮಾತೆಗೆ ಪೂಜೆ ಸಲ್ಲಿಸಿದ ಬಳಿಕ ಹೊಲ- ಗದ್ದೆಗಳಲ್ಲಿ ಭತ್ತ ನಾಟಿ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಬಹುತೇಕರು ರೈತರು ಕೂಡ ಸೇರಿದ್ದಾರೆ.
ತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕದ ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ರೈತರ ಜಮೀನುಗಳಿಗೆ ನೀರು ಒದಗಿಸುತ್ತದೆ. ಈ ನಾಲ್ಕು ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್ ಪ್ರದೇಶ ಜಲಾಶಯವನ್ನೇ ಆಶ್ರಯಿಸಿದೆ. ಈ ಮಧ್ಯೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಕೂಡ ಜಲಾಶಯದ ನೀರು ಪಡೆಯುತ್ತವೆ. ಹೀಗಾಗಿ ಈ ಜಲಾಶಯ ಕೃಷಿಪ್ರಧಾನ ಡ್ಯಾಂ ಆಗಿದೆ. ರೈತರ ಬದುಕಿಗೆ ಜಲಾಶಯವೇ ಆಧಾರವಾಗಿದೆ.
ಜಲಾಶಯವೇ ನಮಗೆ ಜೀವನಾಧಾರವಾಗಿದೆ. ಡ್ಯಾಂನಲ್ಲಿ ನೀರು ಇದ್ದರೆ ನಮ್ಮ ಬದುಕು ನಡೆಯುತ್ತದೆ. ಹೀಗಾಗಿ ಪ್ರತಿವರ್ಷ ಜಲಾಶಯಕ್ಕೆ ಆಗಮಿಸಿ ಗಂಗೆಗೆ ಕೈಮುಗಿದೇ ಗದ್ದೆ ಕಾರ್ಯ ಆರಂಭಿಸುತ್ತೇವೆ ಎಂದು ಸಿರುಗುಪ್ಪ ರೈತ ವಿಜಯಕುಮಾರ ತಿಳಿಸಿದ್ದಾರೆ.