ಅಕ್ಷರ ಸ್ವಾತಂತ್ರ್ಯ ನೀಡಿದ ಹುಬ್ಬಳ್ಳಿ ಹರಿಜನ ಬಾಲಿಕಾಶ್ರಮ

By Web DeskFirst Published Oct 2, 2018, 4:42 PM IST
Highlights

ಇಂದು ಈ ವಿದ್ಯಾಪೀಠದೊಳಗೆ ಕಾಲಿಟ್ಟರೆ, ಅಲ್ಲಿ ಓಡಾಡುವ, ಓದುವ ಬಾಲಕಿಯರನ್ನು ನೋಡಿದರೆ ಬಾಪೂಜಿ ಇನ್ನೂ ಉಸಿರಾಡಿಸುತ್ತಿದ್ದಾರೆ ಎನಿಸುತ್ತಿದೆ. ಗಾಂಧಿ ಚಿತಾಭಸ್ಮವನ್ನು ಕೂಡ ಇಲ್ಲಿಯೇ ಪ್ರತಿಷ್ಠಾಪಿಸಿದ್ದರಿಂದ ಇಲ್ಲಿನ ಎಲ್ಲ ಬಾಲೆಯರು ನಿತ್ಯ ಅಲ್ಲಿ ನಿಂತು ಭಜನೆ ಮಾಡುವ ಮೂಲಕ ಬಾಪೂಜಿ ಸ್ಮರಣೆ ಮಾಡುತ್ತಾರೆ.

- ಶಿವಾನಂದ ಗೊಂಬಿ

ಹುಬ್ಬಳ್ಳಿ(ಅ.02): ಮಹಾತ್ಮ ಗಾಂಧೀಜಿ ಪ್ರೇರಣೆ ಮತ್ತು ನಿರ್ದೇಶನದಂತೆ ಇಲ್ಲಿ ವಿದ್ಯಾನಗರದಲ್ಲಿ ಆರಂಭವಾದ ‘ಹರಿಜನ ಬಾಲಿಕಾಶ್ರಮ’ಇಂದು ‘ಮಹಿಳಾ ವಿದ್ಯಾಪೀಠ’ವಾಗಿ ಸಾವಿರಾರು ಬಾಲಕಿಯರ ಅಕ್ಷರ ದೀಕ್ಷೆಯ ಕೈಂಕರ್ಯ ಮುಂದುವರಿಸಿದೆ.

ಹರಿಜನ ಬಾಲಕಿಯರಿಗೆ ಅಕ್ಷರಭ್ಯಾಸಕ್ಕೆ ಮುಂದಾದ ದೇಶದ ಮೊದಲ ಆಶ್ರಮವಿದು. ಸರ್ದಾರ್ ವೀರನಗೌಡ ಪಾಟೀಲ್ ಮತ್ತು ನಾಗಮ್ಮ ಪಾಟೀಲ್ ದಂಪತಿ ಕೇರಿ ಕೇರಿ ಸುತ್ತಿ ಹರಿಜನ ಬಾಲಕಿಯರನ್ನು ಕರೆದು ತಂದು ಊಟ, ವಸತಿ ನೀಡಿ ಅಕ್ಷರಭ್ಯಾಸ ಮಾಡಿಸಿದ್ದರಿಂದ ಉತ್ತರ ಕರ್ನಾಟಕದಲ್ಲಿ ಹರಿಜನ ಮಹಿಳೆಯರು ಅಕ್ಷರವಂತರಾಗಲು ಸಾಧ್ಯವಾಯಿತು.

ಇಂದು ಈ ವಿದ್ಯಾಪೀಠದೊಳಗೆ ಕಾಲಿಟ್ಟರೆ, ಅಲ್ಲಿ ಓಡಾಡುವ, ಓದುವ ಬಾಲಕಿಯರನ್ನು ನೋಡಿದರೆ ಬಾಪೂಜಿ ಇನ್ನೂ ಉಸಿರಾಡಿಸುತ್ತಿದ್ದಾರೆ ಎನಿಸುತ್ತಿದೆ. ಗಾಂಧಿ ಚಿತಾಭಸ್ಮವನ್ನು ಕೂಡ ಇಲ್ಲಿಯೇ ಪ್ರತಿಷ್ಠಾಪಿಸಿದ್ದರಿಂದ ಇಲ್ಲಿನ ಎಲ್ಲ ಬಾಲೆಯರು ನಿತ್ಯ ಅಲ್ಲಿ ನಿಂತು ಭಜನೆ ಮಾಡುವ ಮೂಲಕ ಬಾಪೂಜಿ ಸ್ಮರಣೆ ಮಾಡುತ್ತಾರೆ.

ಸ್ವಾತಂತ್ರ್ಯದ ಕರೆ:
ಅದು ಸ್ವಾತಂತ್ರ್ಯ ಹೋರಾಟದ ಕಾಲ. ಮಹಾತ್ಮ ಗಾಂಧೀಜಿ ಕರೆಗೆ ದೇಶದ ಲಕ್ಷಾಂತರ ಯುವ ಸಮೂಹವೇ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಅವರಲ್ಲಿ ಇಲ್ಲಿನ ವೀರನಗೌಡ ಪಾಟೀಲ ಹಾಗೂ ಪತ್ನಿ ನಾಗಮ್ಮ ಪಾಟೀಲರೂ ಕೂಡ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಹೋರಾಟ ನಡೆಸಿದವರಲ್ಲಿ. ವೀರನಗೌಡರು ಪ್ರಮುಖರು. ನಂತರ ಸಬರಮತಿ ಆಶ್ರಮದಲ್ಲಿ ಸುಮಾರು ವರ್ಷ ಇದ್ದು, ಖಾದಿ, ಸ್ವಾವಲಂಬನೆ, ಉಪವಾಸ ಸತ್ಯಾಗ್ರಹ, ಸಂಘಟನೆ, ವಿವಿಧ ಚಳವಳಿಗಳನ್ನು ರೂಢಿಸಿಕೊಂಡರು.

1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅವೇಶನದಲ್ಲಿ ‘ಅಸ್ಪಶ್ಯತಾ ನಿವಾರಣೆಗೆ ಕಂಕಣಬದ್ಧರಾಗಿ’ಎಂದು ಬಾಪೂಜಿ
ನೀಡಿದರು. ಗಾಂಧೀಜಿ ಆಶಯದಂತೆ  ಅಸ್ಪೃಶ್ಯತೆ ನಿವಾರಣೆಯ ದೀಕ್ಷೆ ತೊಟ್ಟು 1931ರಲ್ಲಿ ಹುಬ್ಬಳ್ಳಿಗೆ ಬಂದು ವಿದ್ಯಾನಗರದಲ್ಲಿ ‘ಹರಿಜನ ಬಾಲಿಕಾಶ್ರಮ’ ತೆರೆದರು ವೀರನಗೌಡ- ನಾಗಮ್ಮ ದಂಪತಿ. ಸಾಲದ್ದಕ್ಕೆ ತಮ್ಮ ಮಕ್ಕಳನ್ನೂ ಹರಿಜನ ಮಕ್ಕಳೊಟ್ಟಿಗೆ ಬೆಳೆಸಿದರು. ಸವರ್ಣೀಯ ಹೆಣ್ಮಕ್ಕಳಿಗೆ ಅಕ್ಷರಾಭ್ಯಾಸ ನೀಡದ ಆಗಿನ ಕಾಲದಲ್ಲಿ ಆಶ್ರಮದಲ್ಲಿನ ಹರಿನಜ ಹೆಣ್ಣು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

ರಾಷ್ಟ್ರೀಯತೆ, ದೇಶಪ್ರೇಮ, ಸ್ವಾವಲಂಬನೆಯ ಬದುಕು ಕಟ್ಟಿಕೊಡುತ್ತಾ ಉತ್ತಮ ಸಂಸ್ಕಾರ ನೀಡಿದ ಈ ಆಶ್ರಮ, ಮುಂದೆ ಕುರುಡ, ಕುಂಟ, ನಿರಾಶ್ರಿತ ಹೆಣ್ಮಕ್ಕಳಿಗೆ ಆಶ್ರಯ ತಾಣವಾಯಿತು. ಅಸ್ಪೃಶ್ಯತೆ ತಾಂಡವಾಡುತ್ತಿದ್ದ ಆಗಿನ ಕಾಲದಲ್ಲೇ ಆಶ್ರಮದ ಮಕ್ಕಳನ್ನು ಸಭೆ, ಸಮಾರಂಭ, ಮದುವೆಗಳಿಗೆ ಕರೆದೊಯ್ದರು. ಸಹಪಂಕ್ತಿ ಭೋಜನಕ್ಕೆ ಸಂಪ್ರದಾಯವಾದಿಗಳು ಪ್ರತಿರೋಧ ಒಡ್ಡಿದಾಗ ತಾವೂ ಊಟ ಬಿಟ್ಟು ಎದ್ದು ಬರುತ್ತಿದ್ದರು. ಅಕ್ಷರಾಭ್ಯಾಸ, ಸ್ವಾವಲಂಬಿ ಬದುಕಿಗೆ ಬೇಕಾದಂತಹ ತರಬೇತಿ ನೀಡಿದ ಕೀರ್ತಿ ಈ ಆಶ್ರಮಕ್ಕೆ ಸಲ್ಲುತ್ತದೆ.

ಹಳ್ಳಿಗಳಲ್ಲಿ ಆಶ್ರಮದ ಮಕ್ಕಳಿಂದ ನೃತ್ಯ, ಪ್ರಾರ್ಥನೆಗಳನ್ನು ಆಯೋಜಿಸಿ ದೇಶ ಚಳವಳಿ ಮೂಡಿಸಿದರು. ಇದರಿಂದ ಸವರ್ಣೀಯರಿಗೆ ಹರಿಜನರ ಬಗ್ಗೆ ಇರುವ ತಿರಸ್ಕಾರ ಭಾವನೆ ತಗ್ಗಿತು. ಇಲ್ಲಿನ ಬಾಲಕೀಯರೆಲ್ಲ ಇವರನ್ನು ‘ಅಪ್ಪ -ಅವ್ವ ’ ಎಂದು ಕರೆಯುತ್ತಿದ್ದರು. ಇಂಥ ಆಶ್ರಮಕ್ಕೆ ಮಹಾತ್ಮ ಗಾಂಧೀಜಿಯೇ ಒಮ್ಮೆ ಇಲ್ಲಿ ಭೇಟಿ ನೀಡಿ ಆಶ್ರಮದಲ್ಲಿ ಬಾಲಕಿಯರು ಸ್ವತಂತ್ರವಾಗಿ ಉಸಿರಾಡುವುದನ್ನು ನೋಡಿ ಹರ್ಷ ವ್ಯಕ್ತಪಡಿಸಿದರು.

ಮುಂದೆ 1951ಕ್ಕೆ ಇಲ್ಲಿಗೆ ಪಂಡಿತ ಜವಾಹರ ಲಾಲ ನೆಹರು ಇಲ್ಲಿಗೆ ಭೇಟಿ ನೀಡಿದ್ದರು. ಆಗ ಹರಿಜನ ಬಾಲಿಕಾ ಆಶ್ರಮ ಕಸ್ತೂರಬಾ ಬಾಲಿಕಾಶ್ರಮವಾಗಿ ಮಾರ್ಪಡಿತ್ತು. ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಮಹಿಳಾ ವಿದ್ಯಾಪೀಠ ಸ್ಥಾಪನೆಯಾಯಿತು. ಈಗಲೂ ಎಸ್ಸಿಎಸ್ಟಿ ಮಕ್ಕಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ ಇದೆ.

ಗಣ್ಯರ ಭೇಟಿ: ಬಾಬು ರಾಜೇಂದ್ರ ಪ್ರಸಾದ, ಲಾಲ್ ಬಹಾದುರ್ ಶಾಸ್ತ್ರಿ, ಮೊರಾರ್ಜಿ ದೇಸಾಯಿ, ಕಾಮರಾಜ ನಾಡಾರ, ಇಂದಿರಾಗಾಂಧಿ, ನಿಜಲಿಂಗಪ್ಪ ಹೀಗೆ ಹಲವು ಮಹನೀಯರು ಇಲ್ಲಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದುಂಟು.

ಆರಂಭದಲ್ಲಿ ಶಿಶುವಿಹಾರ, ಪ್ರಾಥಮಿಕ ಶಾಲೆ ಮಾತ್ರ ಇದ್ದ ಮಹಿಳಾ ವಿದ್ಯಾಪೀಠದಲ್ಲಿ ಸದ್ಯ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿವರೆಗೂ ಶಿಕ್ಷಣ ಪಡೆಯಲು ಅವಕಾಶವಿದೆ. ಮಹಿಳೆಯನ್ನು ಸ್ವಾವಲಂಬಿಯನ್ನಾಗಿಸುವ ವೃತ್ತಿಪರ ಕೋರ್ಸ್‌ಗಳು ಇಲ್ಲಿ ಲಭ್ಯ. ಇಲ್ಲಿನ ವಿದ್ಯಾರ್ಥಿನಿಯರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದುಂಟು. ಸದ್ಯ 1200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಗಾಂಧಿ ಸ್ಮರಣೆ ನಿತ್ಯ ನಿರಂತರ:
ವೀರನಗೌಡ ಪಾಟೀಲರು ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ತಂದು ಇಲ್ಲಿ ಪ್ರತಿಷ್ಟಾಪಿಸಿದ್ದಾರೆ. ಆ ಸ್ಥಳವೀಗ ಪ್ರಾರ್ಥನಾ ಮಂದಿರವಾಗಿದೆ. ಪ್ರತಿನಿತ್ಯ ಬಾಪೂಜಿ ಸ್ಮರಣೆ ಮಾಡಿಯೇ ಇಲ್ಲಿನ ಕಾರ್ಯಚಟುವಟಿಕೆಗಳು ಆರಂಭವಾಗುತ್ತವೆ. ಧ್ಯಾನ, ಯೋಗ ಇಲ್ಲಿ ನಿರಂತರ. ಗಾಂಧೀಜಿ ಕನಸು ಸಾಕಾರಗೊಳಿಸಲು ಮಹಿಳಾ ವಿದ್ಯಾಪೀಠ, ಕಸ್ತೂರಬಾ ಬಾಲಿಕಾಶ್ರಮ ತನ್ನದೇ ಆದ ಕೊಡುಗೆ ನೀಡುತ್ತಿವೆ.
 

click me!