ಬಾಡಿಗೆ ಕಟ್ಟಲು, ರೇಷನ್ ತರಲೂ ದುಡ್ಡಿಲ್ಲ: ಸಂಬಳ ಸಿಗದೇ ಶಿಕ್ಷಕರ ಪರದಾಟ

By Kannadaprabha NewsFirst Published Apr 23, 2020, 9:35 AM IST
Highlights

ಕಳೆದ ಮೂರು ತಿಂಗಳಿಂದ ಸಂಬಳ ನೀಡದೇ ಸತಾಯಿಸುತ್ತಿರುವ ಆಡಳಿತ ಮಂಡಳಿಗಳು|ಧಾರವಾಡ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಶಾಲೆಗಳಿವೆ| ಯಾರೊಬ್ಬರಿಗೂ ಸಂಬಳವನ್ನೇ ಕೊಟ್ಟಿಲ್ಲ| ಜೀವನ ನಡೆಸಲು ಶಿಕ್ಷಕ ವೃಂದ ಪರದಾಟ|

ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.23): ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ಕಂಪನಿ, ತನ್ನ ಸಿಬ್ಬಂದಿಗಳ ಸಂಬಳವನ್ನು ಕಡಿತಗೊಳಿಸಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಸ್ಪಷ್ಟ ನಿರ್ದೇಶನವನ್ನೇ ನೀಡಿವೆ. ಆದರೆ ಧಾರವಾಡ ಜಿಲ್ಲೆಯಲ್ಲಿನ ಖಾಸಗಿ ಅನುದಾನ ರಹಿತ ಆಂಗ್ಲ ಮಾಧ್ಯಮಗಳ ಶಾಲೆಗಳಲ್ಲಿನ ಶಿಕ್ಷಕರಿಗೆ ಕಳೆದ ಮೂರು ತಿಂಗಳಿಂದ ಸಂಬಳವನ್ನೇ ಆಡಳಿತ ಮಂಡಳಿಗಳು ನೀಡಿಲ್ಲ. ಈ ಮೂಲಕ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಇದು ಶಿಕ್ಷಕರನ್ನು ಕಂಗೆಡಿಸಿದ್ದು, ಜೀವನ ನಡೆಸಲು ಶಿಕ್ಷಕ ವೃಂದ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

Latest Videos

ಹೌದು, ಧಾರವಾಡ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಖಾಸಗಿ ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಗಳಿವೆ. ಸರಿಸುಮಾರು 3500 ಕ್ಕೂ ಅಧಿಕ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಈ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಜನವರಿಯಿಂದ ಈ ಸಿಬ್ಬಂದಿಗಳಿಗೆ ಸಂಬಳವನ್ನೇ ಕೊಟ್ಟಿಲ್ಲ. ಹಾಗೆ ನೋಡಿದರೆ ಈ ಖಾಸಗಿ ಶಾಲೆಗಳು ಸಂಬಳ ನೀಡುವುದೇ ಅತ್ಯಂತ ಕಡಿಮೆ. ಕನಿಷ್ಠವೆಂದರೆ 8 ಸಾವಿರ ಗರಿಷ್ಠ ಎಂದರೆ 20-25 ವಿರ ರೂ.ವರೆಗೆ ಸಂಬಳ ನೀಡಿದರೆ ಅದೇ ದೊಡ್ಡದು ಎಂಬಂತಹ ಪರಿಸ್ಥಿತಿಯಿದೆ. ಅದರಲ್ಲೂ ಕೆಲವೊಂದು ಶಾಲೆ ವರ್ಷದಲ್ಲಿ ಬರೀ 10 ತಿಂಗಳು ಮಾತ್ರ ಸಂಬಳ ಕೊಡುತ್ತಾರಂತೆ. ಇನ್ನೆರಡು ತಿಂಗಳು ಶಾಲೆಗೆ ರಜೆ ಇರುತ್ತದೆ. ಹೀಗಾಗಿ ನೀವು ಕೆಲಸ ಮಾಡಿರುವುದಿಲ್ಲ. ಹೀಗಾಗಿ ಕೊಡಲ್ಲ ಎಂದು ಹೇಳುತ್ತಾರಂತೆ.

ಇನ್ಮುಂದೆ ಧಾರವಾಡದ ಡಿಮ್ಹಾನ್ಸ್‌ನಲ್ಲೂ ಕೊರೋನಾ ಟೆಸ್ಟಿಂಗ್‌

ಲಾಕ್‌ಡೌನ್ ಇದ್ದರೂ ಕೊಡ್ತಿಲ್ಲ:

ಇನ್ನೂ ಈ ವರ್ಷವಂತೂ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕೆಲ ಶಾಲೆಗಳು ಜನವರಿ, ಫೆಬ್ರವರಿ, ಮಾರ್ಚ್ ತಿಂಗಳ ಸಂಬಳ ಕೊಡಬೇಕಿದ್ದರೆ, ಕೆಲ ಶಾಲೆಗಳು ಜನವರಿ ತಿಂಗಳ ಸಂಬಳವನ್ನು ಮಾತ್ರ ಕೊಟ್ಟಿದ್ದು, ಫೆಬ್ರುವರಿ ಹಾಗೂ ಮಾರ್ಚ್ ತಿಂಗಳ ಸಂಬಳ ನೀಡಬೇಕಿದೆ. ಇನ್ನೂ ಲಾಕ್‌ಡೌನ್ ಆದ ಕಾರಣ ಮಾರ್ಚ್ ಎರಡನೆಯ ವಾರದಿಂದ ಶಾಲೆಗಳೆಲ್ಲ ಬಾಗಿಲು ಮುಚ್ಚಿವೆ. ಪರೀಕ್ಷೆ ಇಲ್ಲದೇ ಒಂದರಿಂದ 9ನೆಯ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿಯಾಗಿದೆ. ಇದರೊಂದಿಗೆ ಯಾವ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳಿಗೆ ಸಂಬಳ ಕಡಿತಗೊಳಿಸಬಾರದು. ಮಾರ್ಚ್ ತಿಂಗಳಿನ ಪೂರ್ಣ ಸಂಬಳ ನೀಡಬೇಕು. ಒಂದು ವೇಳೆ ಕಡಿತಗೊಳಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ಎಚ್ಚರಿಕೆ ನೀಡಿವೆ. ಆದರೂ ಆಡಳಿತ ಮಂಡಳಿ ಮಾತ್ರ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ.

ಏನು ಹೇಳುತ್ತಿವೆ:

ಈ ಸಲ ಪರೀಕ್ಷೆಯೂ ಇಲ್ಲ. ಸಿಬ್ಬಂದಿಗಳು ಶಾಲೆಗಳಿಗೆ ಬರುತ್ತಿಲ್ಲ. ಇನ್ನೂ ಲಾಕ್‌ಡೌನ್ ಮುಗಿಯುವವರೆಗೂ ಮಕ್ಕಳಿಂದ ಫೀಸ್‌ನ್ನೂ ಇಸಿದುಕೊಳ್ಳಬಾರದು. ಪಾಲಕರಿಗೆ ಫೀಸ್ ಕಟ್ಟುವಂತೆ ಒತ್ತಾಯಪಡಿಸುವಂತಿಲ್ಲ ಇದೇ ಸರ್ಕಾರ ಆದೇಶ ಮಾಡಿದೆ. ಇನ್ನೊಂದೆಡೆ ಆರ್‌ಟಿಇ ಸಂಬಂಧಿತವಾಗಿ ಸರ್ಕಾರದಿಂದ ಬರಬೇಕಿರುವ ಹಣವೂ ಬಂದಿಲ್ಲ. ಮತ್ತೆ ಹೇಗೆ ನಾವು ಶಿಕ್ಷಕರಿಗೆ ಸಂಬಳ ಕೊಡಲು ಸಾಧ್ಯ. ನಾವೇನೂ ಸಂಬಳ ಕೊಡಲು ಆಗಲ್ಲ ಅಂತೇನೂ ಹೇಳಿಲ್ಲ. ಕೊಡುತ್ತೇವೆ. ಈ ಸಲ ಸ್ವಲ್ಪ ತಡವಾಗಿದೆ ಅಷ್ಟೇ ಎಂದು ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿಯ ಅಧ್ಯಕ್ಷರೊಬ್ಬರು ನುಡಿಯುತ್ತಾರೆ.

ಬಾಡಿಗೆ ತುಂಬಲು ದುಡ್ಡಿಲ್ಲ:

ನಮ್ಮ ಬದುಕು ಇದರ ಮೇಲೆ ನಿಂತಿದೆ. ನಾವು ಪ್ರತಿ ತಿಂಗಳು ಬಾಡಿಗೆ ಕಟ್ಟಬೇಕು. ರೇಷನ್ ತರಬೇಕು. ನಮ್ಮ ಬದುಕೇ ಸಂಬಳದ ಮೇಲಿರುತ್ತದೆ. ಆದರೆ ಇವರು ನೋಡಿದರೆ ಎರಡ್ಮೂರು ತಿಂಗಳ ಸಂಬಳ ಕೊಡದಿದ್ದರೆ ನಾವು ಜೀವನ ನಡೆಸುವುದಾದರೂ ಹೇಗೆ ಎಂಬ ಪ್ರಶ್ನೆ ಶಿಕ್ಷಕರದ್ದು.

ಡಿಸಿಗೆ ಮನವಿ; ಇಲಾಖೆ ಆದೇಶ:

ಈ ನಡುವೆ ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಈ ಮೇಲ್ ಮೂಲಕವೇ ಜಿಲ್ಲಾ ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘವು ಮನವಿ ಸಲ್ಲಿಸಿದೆ. ಎರಡ್ಮೂರು ತಿಂಗಳಿAದ ಸಂಬಳ ಬಾರದಿರುವುದರಿಂದ ಬದುಕು ನಡೆಸುವುದು ದುಸ್ತರವಾಗಿದೆ. ಆದಕಾರಣ ಸಂಬಳ ನೀಡುವಂತೆ ಆಡಳಿತ ಮಂಡಳಿಗೆ ಸೂಚಿಸಬೇಕು ಎಂದು ಮನವಿ ಮಾಡಿವೆ. ಇದಕ್ಕೆ ಸ್ಪಂದಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಶೀಘ್ರವೇ ಸಂಬಳ ಬಿಡುಗಡೆ ಮಾಡುವಂತೆ ಸೂಚನೆಯನ್ನೂ ಎಲ್ಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಗೂ ನೀಡಿದೆ. ಆದರೆ ಅದಕ್ಕೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಕ್ಯಾರೇ ಎನ್ನುತ್ತಿಲ್ಲ.

ಇನ್ನೂ ಮೇಲಾದರೂ ಶಿಕ್ಷಕ ವೃಂದ ಸಂಬಳ ನೀಡಿ ಪುಣ್ಯ ಕಟ್ಟಿಕೊಳ್ಳಬೇಕು ಎಂಬ ಬೇಡಿಕೆ ಶಿಕ್ಷಕರದ್ದು. ಇದಕ್ಕೆ ಆಡಳಿತ ಮಂಡಳಿ ಯಾವ ರೀತಿ ಸ್ಪಂದಿಸುತ್ತದೆ. ಸಂಬಳ ಕೊಡದಿದ್ದರೆ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ

ಹೌದು ಕೆಲವೊಂದು ಶಾಲೆಗಳಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ಇದರಿಂದ ಶಿಕ್ಷಕರು ಬದುಕು ಸಾಗಿಸುವುದು ದುಸ್ತರವಾಗಿದೆ. ಕೂಡಲೇ ಸಂಬಳ ಕೊಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.ಎಂ.ರಂಜನ್, ಉಪಾಧ್ಯಕ್ಷರು, ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಶಿಕ್ಷಕರಿಗೆ ಕೂಡಲೇ ಸಂಬಳ ನೀಡಬೇಕು ಎಂದು ಎಲ್ಲ ಆಡಳಿತ ಮಂಡಳಿಗಳಿ ಸೂಚನೆ ನೀಡಿದ್ದೇನೆ. ಈ ಸಂಬಂಧ ಪತ್ರವನ್ನು ಎಲ್ಲ ಶಾಲೆಗಳಿಗೆ ಬರೆಯಲಾಗಿದೆ. ಶೀಘ್ರದಲ್ಲೇ ಎಲ್ಲ ಶಾಲೆಗಳು ಸಂಬಳ ನೀಡಬಹುದು ಎಂಬ ವಿಶ್ವಾಸವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ಹಂಚಾಟೆ ಅವರು ಹೇಳಿದ್ದಾರೆ. 
 

click me!