ಉಡುಪಿಯಲ್ಲಿ ನಿರಂತರ ಗಾಳಿ ಮಳೆ, ಮೀನಿನ ದರ ದುಪ್ಪಟ್ಟು

By Suvarna NewsFirst Published Aug 8, 2022, 5:14 PM IST
Highlights

ನಿರಂತರವಾಗಿ ಗಾಳಿ ಮಳೆಯಿಂದಾಗಿ ಹವಾಮಾನ ವೈಪರಿತ್ಯ ಕಾರಣ ಸಮುದ್ರಕ್ಕೆ ಇಳಿಯದಂತೆ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೀನಿನ ದರ ದುಪ್ಪಟ್ಟವಾಗಿದೆ.

ವರದಿ - ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್


ಉಡುಪಿ, (ಆಗಸ್ಟ್.08)
ಹವಾಮಾನ ವೈಪರಿತ್ಯ ಉಂಟಾಗಿರುವುದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೀನು ಖರೀದಿ ಮಾಡುವ ಗ್ರಾಹಕರ ಮೇಲೂ ಪರಿಣಾಮ ಬೀರಿದ್ದು ಮೀನಿನ ದರ ಗಗನಕ್ಕೇರಿದೆ.

ನಾಡ ದೋಣಿಗಳಿಗೆ ತಲೆನೋವು ಕೊಟ್ಟ ಹವಾಮಾನ ವೈಪರಿತ್ಯ, ಈಗ ಆಳಸಮುದ್ರ ಬೋಟುಗಳಿಗೂ ಸಮಸ್ಯೆ ತಂದೊಡ್ಡಿದೆ. ಅಗಸ್ಟ್ 1ರಿಂದ ಆಳ ಸಮುದ್ರ ಬೋಟುಗಳು ಕಡಲಿಗೆ ಇಳಿಯಲು ಸರಕಾರ ಅವಕಾಶ ಮಾಡಿಕೊಟ್ಟಿದೆ ಆಗಸ್ಟ್ ಐದರಂದು ಎಲ್ಲಾ ಸಿದ್ಧತೆ ಮಾಡಿಕೊಂಡು ಕಡಲಿಗಿಳಿಯಲು ಬೋಟುಗಳು ತಯಾರಾಗಿದ್ದವು‌. ಆದರೆ ಹವಾಮಾನ ವೈಪರೇತ್ಯದಿಂದ ಬೋಟುಗಳು ಕಡಲ ತೀರದಲ್ಲೇ ಲಂಗರು ಹಾಕಿವೆ.

ಕಡಲಿನಲ್ಲಿ ಎದ್ದಿರುವ ತೂಫಾನ್ ಆಳ ಸಮುದ್ರ ಮೀನುಗಾರಿಕೆಗೆ ಅಡ್ಡಿ ಪಡಿಸಿದೆ.ಉಡುಪಿ ಜಿಲ್ಲೆಯ ಮಲ್ಪೆ, ಗಂಗೊಳ್ಳಿ ಇತ್ಯಾದಿ ಪ್ರಮುಖ ಬಂದರುಗಳಲ್ಲಿ ಸಾವಿರಾರು ಬೋಟುಗಳು ಸಮುದ್ರಕ್ಕಿಳಿಯದೆ ಬಾಕಿಯಾಗಿವೆ. ಒಂದು ಬೋಟು ಆಳಸಮುದ್ರಕ್ಕೆ ಇಳಿಯಬೇಕೆಂದರೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತೆ. 

ಕೊಳೆತು ನಾರುವ ಮೀನಿಗೆ ಸಖತ್ ಡಿಮ್ಯಾಂಡ್! ಮನುಷ್ಯನ ದೇಹದಲ್ಲಿ ಮೂಳೆಯೇ ಇಲ್ಲದಿದ್ದರೆ ಏನಾಗ್ತಿತ್ತು?

ಲಕ್ಷಾಂತರ ಮೌಲ್ಯದ ಡಿಸೇಲ್ ತುಂಬಿಸಿ, ಬಲೆಗಳನ್ನು ಸಜ್ಜುಗೊಳಿಸಿ, ಕಾರ್ಮಿಕರಿಗೆ ಸಂಬಳ ಕೊಟ್ಟು ಬೋಟು ಓಡಿಸಬೇಕು. ಇಷ್ಟೆಲ್ಲಾ ಖರ್ಚು ಮಾಡಿ ಮೀನುಗಾರಿಕೆ ನಡೆಸಲು ಸಾಧ್ಯವಾಗದಿದ್ದರೆ ಖಾಲಿ ಕೈಯಲ್ಲಿ ವಾಪಸ್ ಬರಬೇಕಾದ ಸ್ಥಿತಿ. ಹಾಗಾಗಿ ಬೋಟುಗಳು ಸದ್ಯ ಕಡಲಿಗೆ ಇಳಿದಿಲ್ಲ.

ಯಾಂತ್ರಿಕೃತ ಬೋಟುಗಳು ಆಳ ಸಮುದ್ರ ಮೀನುಗಾರಿಕೆಗೆ ತೆರಳದೇ ಇರುವುದರಿಂದ ತಾಜಾ ಮೀನಿನ ಲಭ್ಯತೆ ಸದ್ಯಕ್ಕಿಲ್ಲ. ಸಕಾಲದಲ್ಲಿ ಮೀನುಗಾರಿಕೆ ಆರಂಭವಾದರೆ ಈ ಹೊತ್ತಿಗೆ ಭರಪೂರ ಮೀನುಗಳು ಸಿಗುತ್ತಿತ್ತು. ಕಡಲು ಪಕ್ಷುಬ್ದವಾದ ಪರಿಣಾಮ ಬೋಟುಗಳು ಸಮುದ್ರಕ್ಕೆ ಹೋಗುತ್ತಿಲ್ಲ. ತೂಫಾನು ಕಾರಣದಿಂದ ನಾಡದೋಣಿಗಳು ಕೂಡ ಮೀನು ಬೇಟೆ ನಡೆಸುತ್ತಿಲ್ಲ. ಹಾಗಾಗಿ ಮೀನು ಗ್ರಾಹಕರಿಗೆ ಉತ್ತಮ ದರ್ಜೆಯ ಮೀನು ಸಿಗುತ್ತಿಲ್ಲ..

ಮಾರುಕಟ್ಟೆಯಲ್ಲಿ ಎಲ್ಲಾ ಬಗೆಯ ಮೀನುಗಳ ದರ ದುಪ್ಪಟ್ಟಾಗಿದೆ.  ಮೀನುಗಾರಿಕೆ ಇರುವ ಹೊತ್ತಲ್ಲಿ ಸಾಧಾರಣವಾಗಿ ಬೂತಾಯಿ ಮೀನಿಗೆ ಪ್ರತಿ ಕೆಜಿಗೆ ನೂರರಿಂದ 150 ರೂಪಾಯಿ ಇರುತ್ತೆ. ಆದರೆ ಈಗ ಈ ದರ ರೂ.250ಕ್ಕೆ ತಲುಪಿದೆ. ನೂರು ರೂಪಾಯಿ ಇದ್ದ ಬಂಗುಡೆಯ ದರ 250 ರೂಪಾಯಿ ಆಗಿದೆ. ಪಾಂಪ್ಲೆಟ್ ಗೆ ಈಗಿನ ಧಾರಣೆ ಪ್ರತಿ ಕೆಜಿಗೆ ಒಂದು ಸಾವಿರ ರೂಪಾಯಿ ದಾಟಿದೆ. 500 ರೂಪಾಯಿ ಇದ್ದ ಸಣ್ಣ ಪಾಂಪ್ಲೆಟ್ ನ ದರ 700 ರೂಪಾಯಿ ಆಗಿದೆ. 

ಅಂಜಲ್ ಮೀನು ಪ್ರತಿ ಕೆಜಿಗೆ 1200 ರೂಪಾಯಿ ತಲುಪಿದೆ. ಸಿಹಿ ನೀರಿನಲ್ಲಿ ಸಿಗುವ ಮೀನು ಮಾರುಕಟ್ಟೆಗೆ ಬರುತ್ತಿದ್ದು ಅವುಗಳ ಧಾರಣೆಯೂ ಹೆಚ್ಚಾಗಿದೆ.

ಸದ್ಯ ಗಾಳ ಹಾಕಿ ಮೀನು ಹಿಡಿಯುವವರನ್ನೇ ಅವಲಂಬಿಸಿದ್ದು, ಆ ಮೀನಿನ ದರ ಕೂಡ ಮತ್ಸ್ಯ ಪ್ರಿಯರನ್ನು ಕಂಗೆಡಿಸಿದೆ. ಆಳ ಸಮುದ್ರ ಮೀನುಗಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದ ಪರ್ಸಿನ ಬೋಟ್ ಮಾಲಕರು ಡಿಸಿಲ್, ಬಲೆ ಸಿದ್ದಮಾಡಿ, ಮೀನುಗಾರ ಕಾರ್ಮಿಕರನ್ನು ನಿಯೋಜಿಸಿದ್ದಾರೆ. ಬೊಟು ಕಡಲಿಗಿಳಿಸದೆಯೂ ದೈನಂದಿನ ನಿರ್ವಹಣೆಗೆ ಹಣ ನೀಡಬೇಕಾಗಿದೆ. 

ಇನ್ನೂ ನಾಲ್ಕು ದಿನ ಮೀನುಗಾರಿಕೆ ನಡೆಸುವುದು ಕಷ್ಟ. ಮೀನು ಮಾರಾಟ ನಡೆಸುವ ವ್ಯಾಪಾರಿ ಮಹಿಳೆಯರಿಗೂ ಕೂಡ ಈ ಒಟ್ಟು ಬೆಳವಣಿಗೆಯಿಂದ ಸಂಕಷ್ಟ ಉಂಟಾಗಿದೆ.

click me!