ಶಾಲೆ ಆವರಣದಲ್ಲಿ ಐಸ್ ಕ್ರೀಂ, ಸೌತೆಕಾಯಿ, ಪಾನಿಪೂರಿ ಮಾರಾಟ ಮಾಡುವವರೆ ಇದರ ಪೆಡ್ಲರ್ ಆಗಿದ್ದಾರೆ. ಶಾಲೆ ಅರಂಭ ಮತ್ತು ಬಿಡುವ ಪೊಲೀಸರು ಮಫ್ತಿಯಲ್ಲಿರಬೇಕು. ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ
ಕಲಬುರಗಿ(ಆ.09): ಶಾಲಾ-ಕಾಲೇಜು ಸುತ್ತಮುತ್ತ ಮಾದಕ ವಸ್ತು ಮಿಶ್ರಿತ ಚಾಕಲೇಟ್‌ಗಳ ಮಾರಾಟ ಕಂಡು ಬಂದಿದೆ. ಇಂತವುಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎರಡು ಮೂರು ದಿನ ತಪಾಸಣೆ ನಡೆಸಿ ಮೈಮರೆತರೆ ಆಗಲ್ಲ. ನಿರಂತರ ತಪಾಸಣೆ ನಡೆಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಸೂಚಿಸಿದ್ದಾರೆ.
ರಾಯಚೂರಿನಲ್ಲಿ ಈಗಾಗಲೇ ಈ ರೀತಿಯ ಚಾಕಲೇಟ್ ಜಪ್ತಿ ಮಾಡಿಕೊಳ್ಳಲಾಗಿದೆ. ಇದರ ತಡೆಗೆ ಮೂರು ದಿನ ಕೆಲಸ ಮಾಡಿ ಸುಮ್ಮನಿರುವುದಲ್ಲ. ನಿರಂತರವಾಗಿ ಶ್ರಮ ಹಾಕಿ ಎಂದು ಅವರು ಸೂಚಿಸಿದರು. ಅಲ್ಲದೇ ಶಾಲೆ ಕಾಲೇಜುಗಳ ಸುತ್ತ ಮುತ್ತ ತಂಬಾಕು, ಗುಟಕಾ, ಪಾನ್ ಪರಾಕ್ ಹಾಗೂ ಮದ್ಯ ಮಾರಾಟವಾಗದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕು ಎಂದರು.
undefined
ಕಲಬುರಗಿ: ಕಾರು ಪಲ್ಟಿ, ಹೆಡ್ ಕಾನ್ಸಟೇಬಲ್ ಸಾವು
ಇಂದು(ಬುಧವಾರ) ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರ್.ಟಿ.ಇ, ಪೋಕ್ಸೋ, ಬಾಲ ನ್ಯಾಯ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆ ಆವರಣದಲ್ಲಿ ಐಸ್ ಕ್ರೀಂ, ಸೌತೆಕಾಯಿ, ಪಾನಿಪೂರಿ ಮಾರಾಟ ಮಾಡುವವರೆ ಇದರ ಪೆಡ್ಲರ್ ಆಗಿದ್ದಾರೆ. ಶಾಲೆ ಅರಂಭ ಮತ್ತು ಬಿಡುವ ಪೊಲೀಸರು ಮಫ್ತಿಯಲ್ಲಿರಬೇಕು. ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದರು.
18 ವರ್ಷದೊಳಗಿನ ಮಕ್ಕಳು ಇತ್ತೀಚೆಗೆ ಹುಕ್ಕಾ, ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಖೇದಕರವಾಗಿದೆ. ಮಕ್ಕಳು ಇದಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದ ಕೆ.ನಾಗಣ್ಣಗೌಡ ಅವರು, ವಿಶೇಷವಾಗಿ ಬಾಲ್ಯ ವಿವಾಹ, ಮಕ್ಕಳ ಕಳ್ಳ ಸಾಗಣೆ, ಅತ್ಯಾಚಾರ ಪ್ರಕರಣವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು, ಆಗಾಗ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಶಾಲೆಗಳಲ್ಲಿ ಮಕ್ಕಳ ಕುಂದುಕೊರತೆ ಆಲಿಸಿ ಪರಿಹರಿಸಬೇಕು. 3-4 ದಿನದಿಂದ ಮಗು ಶಾಲೆಗೆ ಬರದಿದ್ದರೆ, ಅಂತಹ ಮಗು ಎಲ್ಲಿ ಹೋಗಿದೆ? ಶಾಲೆ ಬಿಡಲು ಕಾರಣ ಪತ್ತೆ ಹಚ್ಚಬೇಕು. ಅಂದಾಗ ಮಾತ್ರ ಡ್ರಾಪ್ ಔಟ್ ಪ್ರಮಾಣ ತಗ್ಗಿಸಬಹುದು. ಈ ಪ್ರಮಾಣ ತಗ್ಗಿದಲ್ಲಿ ಮಕ್ಕಳನ್ನು ದುಶ್ಚಟದಿಂದ ದೂರವಿಡಬಹುದಾಗಿದೆ ಎಂದರು.
ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆ, ಸುರಕ್ಷತೆ ಬಗ್ಗೆ ಅರಿವು ತರಬೇತಿ ಕೊಡಬೇಕು. ಪ್ರತಿ ಶಾಲೆಯಲ್ಲಿ ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೆ ಚೈಲ್ಡ್ ಲೈನ್ ಟೋಲ್ ಫ್ರೀ ಸಂಖ್ಯೆ 1098 ಮತ್ತು ಇ.ಆರ್.ಎಸ್.ಎಸ್. ಸಂಖ್ಯೆ 112 ಪೋಸ್ಟ್‌ರ್ ಅಳವಡಿಸಬೇಕು. ಇನ್ನು ಬಾಲ್ಯ ವಿವಾಹ ಪ್ರಕರಣ ಸಾಬೀತಾದಲ್ಲಿ ಜೈಲು ಭಾಗ್ಯದ ಕುರಿತು ಖಡಕ್ ಸಂದೇಶವುಳ್ಳ ಪೋಸ್ಟ್‌ರ್ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಬೇಕು ಎಂದರು.
ಶಾಲಾ ಶುಲ್ಕ ಪಾವತಿ ಕಾರಣ ನೀಡಿ ಫಲಿತಾಂಶ, ಪರೀಕ್ಷೆಗೆ ನಿರಾಕರಿಸುವಂತಿಲ್ಲ:
ಶಾಲೆ ಶುಲ್ಕ ಕಟ್ಟಿಲ್ಲ ಎಂದು ಫಲಿತಾಂಶ ತಡೆ ಹಿಡಿಯುವುದಾಗಲಿ, ಪರೀಕ್ಷೆ ಬರೆಯಲು ಅವಕಾಶ ಮಾಡದಿರುವುದು ಮಕ್ಕಳ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಇದನ್ನು ಜಿಲ್ಲೆಯಲ್ಲಿ ಎಲ್ಲಿಯೂ ಮರುಕಳಿಸದಂತೆ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಕೆ.ನಾಗಣಗೌಡ ನಿರ್ದೇಶನ ನೀಡಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಜಿಲ್ಲೆಯ ಪ್ರತಿ ಶಾಲೆ, ವಸತಿ ಶಾಲೆ, ವಸತಿ ನಿಲಯದಲ್ಲಿ ದೂರು ಪೆಟ್ಟಿಗೆ ಸ್ಥಾಪಿಸಬೇಕು. ಮಕ್ಕಳು ಮತ್ತು ಪಾಲಕರು ಒಳಗೊಂಡು ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಿ, ಪ್ರತಿ ಮಾಸಿಕ ಸಭೆ ಕರೆದು ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮಕ್ಕಳ ಕಾವಲು ಸಮಿತಿ ಸಕ್ರಿಯವಾಗಬೇಕು. ಡಾಬಾ, ಹೋಟೆಲ್, ರಸ್ಟೋರೆಂಟ್ ಗಳಲ್ಲಿ ಬಾಲ ಕಾರ್ಮಿಕರನ್ನು ಬಳಕೆ ಮಾಡುತ್ತಿದ್ದು, ಕಾರ್ಮಿಕ, ಪೊಲೀಸ್, ಅಬಕಾರಿ, ಡಿ.ಸಿ.ಪಿ.ಓ ಘಟಕ ಜಂಟಿಯಾಗಿ ವಾರಕ್ಕೊಮ್ಮೆ ದಾಳೆ ಮಾಡಿ ಮಕ್ಕಳನ್ನು ರಕ್ಷಿಸಿ ಮುಖ್ಯ ವಾಹಿನಿಗೆ ತರಬೇಕು ಎಂದು ಸೂಚಿಸಿದರು.
ಬಾಣಂತಿಯರಿಗೆ ಬಿಸಿ ನೀರು ಕೊಡ್ರಿ:
ಅರೋಗ್ಯ ಇಲಾಖೆ ಚರ್ಚೆ ವೇಳೆಯಲ್ಲಿ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಇಂದು ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿ ಬಾಣಂತಿ ಮಹಿಳೆಯರಿಗೆ ಬಿಸಿ ನೀರು ಕೊಡ್ತಿಲ್ಲ ಎಂದು ದೂರಿದ್ದಾರೆ. ಮೊದಲು ಬಿಸಿ ನೀರು ಕೊಡಿ. ಅಲ್ಲಿ ಶುದ್ಧ ಕುಡಿಯುವ ನೀರು ವ್ಯವಸ್ಥೆ ಇಲ್ಲ. ಎನ್.ಆರ್.ಸಿ. ಘಟಕ ಎಂದು ನಾಮಫಲಕ ಸಹ ಹಾಕಿಲ್ಲ ಎಂದು ಜಿಮ್ಸ್ ಎನ್.ಐ.ಸಿ.ಯು ಕುರಿತು ವಿವರಿಸುತ್ತಿದ್ದ ಮಕ್ಕಳ ವೈದ್ಯ ಡಾ.ಸಂದೀಪ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಕೂಡಲೆ ಸರಿಪಡಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಡಿ.ಸಿ.ಫೌಜಿಯಾ ತರನ್ನುಮ್ ಮಾತನಾಡಿ, ಇಂದು ಸಾಯಂಕಾಲ ದೊಳಗೆ ಸದಸ್ಯರು ಗಮನಕ್ಕೆ ತಂದ ಎಲ್ಲಾ ನ್ಯೂನ್ಯತೆಗಳನ್ನು ಬಗೆಹರಿಸಿ ವರದಿ ನೀಡಬೇಕು ಎಂದು ಜಿಮ್ಸ್ ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಇಲಾಖೆ ಚರ್ಚೆ ವೇಳೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ವರ್ಷ 32 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 12 ಪ್ರಕರಣಗಳು ತನಿಖೆ ಹಂತದಲ್ಲಿವೆ. ಬಾಲ್ಯ ವಿವಾಹ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯ ಚಿಂಚೋಳಿ ಪೋಕ್ಸೋ ಪ್ರಕರಣದಲ್ಲಿ ಅಪರಾಧಿಗೆ ಮರಣ ದಂಡನೆಯಾಗಿದೆ. ಇಂತಹ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಶಿಕ್ಷೆ ಪ್ರಮಾಣ ಹೆಚ್ಚುದೆ ಎಂದು ಜಿಲ್ಲೆಯ ಹೆಚ್ಚುವರಿ ಎಸ್.ಪಿ.ಶ್ರೀನಿಧಿ ತಿಳಿಸಿದರು. ಕಲಬುರಗಿ ನಗರ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ 9 ಪೋಕ್ಸೋ ಪ್ರಕರಣ ದಾಖಲಾಗಿದ್ದು, 5 ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತಾಲಯದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು. ಮಾತನಾಡಿ, ಜಿಲ್ಲೆಯಾದ್ಯಂತ 3,620 ಅಂಗನವಾಡಿಗಳಿದ್ದು, 2,90,552 ಮಕ್ಕಳು ಇದರ ಫಲಾನುಭವಿಗಳಿದ್ದಾರೆ. 31,039 ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ವಿಶೇಷ ಕಾಳಜಿ ವಹಿಸಿದೆ. 2022-23ನೇ ಸಾಲಿನಲ್ಲಿ 52 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಂಗಳಾ ಪಾಟೀಲ ಮಾತನಾಡಿ, ಇತ್ತೀಚೆಗೆ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಲು ಹೆಣ್ಣು ಮಕ್ಕಳಿಗೆ ಸ್ವಯಂ ಸುರಕ್ಷತೆ ಮತ್ತು ಕರಾಟೆ ತರಬೇತಿ ನೀಡಲು ಈಗಾಗಲೆ 300 ಜನ ಟ್ರೇನರ್ ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಮುಂದಿನ ವಾರ ತರಬೇತಿ ನೀಡಲಾಗುತ್ತದೆ. ತದನಂತರ ತರಬೇತುದಾರರ ಮುಖೇನ 34 ದಿನದಲ್ಲಿ ಜಿಲ್ಲೆಯಾದ್ಯಂತ 4,224 ಶಾಲಾ-ಕಾಲೇಜು ಹಾಗೂ ವಸತಿ ನಿಲಯದಲ್ಲಿನ ಮಕ್ಕಳಿಗೆ ತರಬೇತಿ ನೀಡುವ ಯೋಜನೆ ಹಾಕಿಕೊಂಡಿದ್ದೇವೆ.
ಕಲಬುರಗಿ: ಜೈಲಿನಲ್ಲಿರುವ ಗೆಳೆಯನಿಗೆ ಗಾಂಜಾ ಸರಬರಾಜು ಮಾಡಲು ಯತ್ನ, ಇಬ್ಬರು ವಶ
ಜಿಲ್ಲೆಯಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಯ 16 ಪಾಲನಾ ಸಂಸ್ಥೆಗಳಿವೆ. ಇಲ್ಲಿನ ನಿವಾಸಿಗಳಿಗೆ ಪ್ರತಿ ಮಾಹೆ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಎಲ್ಲರು ಕ್ಷೇಮವಾಗಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ದೇವಿದಾಸ್, ಡಿ.ಎಚ್.ಓ ಡಾ.ರಾಜಶೇಖರ ಮಾಲಿ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಅರ್.ಟಿ.ಓ ನೂರ ಮೊಹಮ್ಮದ್ ಬಾಶಾ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿ.ಡಿ.ಪಿ.ಓ ಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.