ಬೋರ್‌ವೆಲ್‌ ನೀರು ಬಿಟ್ಟರೆ ಒಣಗುತ್ತದೆ ಹತ್ತಿ ಬೆಳೆ! ಇದೆಂಥಾ ಬೀಜವೆಂದ ರೈತರು

By Sathish Kumar KHFirst Published Jul 17, 2023, 10:19 PM IST
Highlights

ರಾಜ್ಯದ ಬರದನಾಡು ರಾಯಚೂರಿನಲ್ಲಿ ಈ ವರ್ಷ ಬರಗಾಲ ಆವರಿಸುವ ಛಾಯೆ ಕಂಡುಬರುತ್ತಿದೆ. ನೀರಾವರಿ ಇರುವ ಪ್ರದೇಶಕ್ಕೆ ಹತ್ತಿ ಬಿದ್ದನೆ ಮಾಡಿದ್ದು, ಬೋರ್ವೆಲ್‌ ನೀರು ಹರಿಸಿದರೆ ಬೆಳೆಯೇ ಒಣಗುತ್ತಿದೆ.

ರಾಯಚೂರು (ಜು.17): ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆಯಿಲ್ಲದೆ ಅನ್ನದಾತರು ಕಂಗಾಲಾಗಿ ಹೋಗಿದ್ದಾರೆ. ಜೂನ್ ತಿಂಗಳಲ್ಲಿ ಮಳೆ ಬರುತ್ತೆ ಅಂತ ರೈತರು ಸಾಲ-ಸೂಲ ಮಾಡಿ ಬಿತ್ತನೆಗೆ ಬೇಕಾದ ಬೀಜ ಮತ್ತು ಗೊಬ್ಬರ ಖರೀದಿ ಮಾಡಿದ್ದಾರೆ. ಆದರೆ, ಬಿತ್ತನೆ ಮಾಡಿದ ಹತ್ತಿ ಬೆಳೆಗೆ ನೀರು ಹಾಯಿಸಿದರೂ ಎಲೆ ಕೆಂಪಾಗಿ ಒಣಗಿ ಹೋಗುತ್ತಿದೆ. 

ರೈತರು ಅಲ್ಪಸಲ್ವ ಮಳೆ ಬಂದ ತಕ್ಷಣವೇ ಹಿಂದೆ-ಮುಂದೆಯೂ ಆಲೋಚನೆ ಮಾಡದೇ ಒಣಭೂಮಿಗೆ ಬೀಜ ಹಾಕಿ ಈಗ ಆಕಾಶ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ರೈತರು ಬೋರ್ವೆಲ್ ನೀರು ಮತ್ತು ನದಿ ನೀರು ನಂಬಿ ಹತ್ತಿ ಬೀಜ ಹಾಕಿದ್ದಾರೆ. ಆದ್ರೆ ಜಮೀನಿನಲ್ಲಿ ಹಾಕಿದ ಹತ್ತಿ ಬೆಳೆಯೂ ಬೆಳೆಯುವ ಹಂತದಲ್ಲಿಯೇ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಒಣಗಿ ಹೋಗುತ್ತಿವೆ. ಬಹುತೇಕ ರೈತರ ಜಮೀನಿನಲ್ಲಿ ಹತ್ತಿ ಬೀಜವೂ ಮೊಳಕೆಯೇ ಒಡೆದಿಲ್ಲ. ಹೀಗಾಗಿ ಅನ್ನದಾತರು ಕಂಗಾಲಾಗಿ ಹೋಗಿದ್ದಾರೆ. ಈ ಬಗ್ಗೆ ಕೃಷಿ ಅಧಿಕಾರಿಗಳಿಗೆ ಹಾಗೂ ಕೃಷಿ ವಿಜ್ಞಾನಿಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನೆ ಆಗದೇ ಕಂಗಾಲಾಗಿ ಹೋಗಿದ್ದಾರೆ.

ನರಗುಂದ ರೈತ ಹುತಾತ್ಮರ ದಿನಾಚರಣೆ: ಜು.21ಕ್ಕೆ ರೈತರ ಸಮಾವೇಶ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತರ ಸಭೆ: ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ನೇತೃತ್ವದಲ್ಲಿ ರೈತರೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ರೈತರಿಗೆ ನೀಡಲಾಗುವ ಬಿತ್ತನೆ ಬೀಜಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಮತ್ತು ಸರ್ಕಾರದಿಂದ ರೈತರಿಗಾಗಿ ಜಾರಿ ಮಾಡಲಾದ ವಿವಿಧ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಭೆಯಲ್ಲಿ ಭಾಗವಹಿಸಿದ ರೈತರು ರೈತ ಸಂಪರ್ಕ ಕೇಂದ್ರ ಅಥವಾ, ಖಾಸಗಿ ಅಂಗಡಿಗಳಿಂದ ರೈತರಿಗೆ ನೀಡಲಾಗುವ ಬಿತ್ತನೆ ಬೀಜಗಳು ಕಳಪೆ ಆಗಿವೆ ಎಂದು ದೂರು ನೀಡಿದ್ರು. ರೈತರ ದೂರು ಆಧರಿಸಿ ಕೃಷಿ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ 1000ಕ್ಕೂ ಅಧಿಕ ಕೃಷಿ ಬೀಜ ಮತ್ತು ಗೊಬ್ಬರ ಮಾರಾಟ ಮಾಡುವ ಮಳಿಗೆಗಳು ಇವೆ. ಈವರೆಗೂ ಎಷ್ಟು ಅಂಗಡಿಗಳ ಪರಿಶೀಲನೆ ಮಾಡಿ ಕ್ರಮ ಕೈಗೊಂಡಿದ್ರಿ ಎಂದು ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಪ್ರಶ್ನೆ ಮಾಡಿದ್ರು. ಅದಕ್ಕೆ ಕಕ್ಕಾಬಿಕ್ಕಿಯಾದ ಕೃಷಿ ಅಧಿಕಾರಿಗಳು ಕೇವಲ ಮೂರು ಅಂಗಡಿಗಳ ವಿರುದ್ಧ ಕೇಸ್ ದಾಖಲು ಮಾಡಿದ್ದಾಗಿ ತಿಳಿಸಿದ್ರು. ಇದಕ್ಕೆ ಗರಂ ಆದ ಜಿಲ್ಲಾಧಿಕಾರಿಗಳು ಜಿಲ್ಲೆಯ 997 ಅಂಗಡಿಗಳ ಮೇಲೆ ನಾನು ದಾಳಿ ಮಾಡಿದಾಗ ಕಳಪೆ ಬೀಜ ಪತ್ತೆಯಾದ್ರೆ ನಾನು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಪ್ರತಿ ಅಂಗಡಿಯಲ್ಲಿ ದರಪಟ್ಟಿ ಫಲಕಗಳು ಹಾಕಬೇಕು: ಪ್ರತಿ ವರ್ಷವೂ ಸಹ ಜೂನ್ ಮತ್ತು ಜುಲೈ ತಿಂಗಳಲ್ಲಿ ಬೀಜ ಮತ್ತು ಗೊಬ್ಬರ ಅಭಾವ ಸೃಷ್ಟಿಸಿ ದರ ಏರಿಕೆ ಮಾಡಿ ರೈತರಿಗೆ ಮೋಸ ಮಾಡುವ ದಂಧೆ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ. ಹೀಗಾಗಿ ರಾಯಚೂರು ಜಿಲ್ಲಾಧಿಕಾರಿಗಳು ಕೃಷಿ ಅಧಿಕಾರಿಗಳು ಮತ್ತು ರೈತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಖಡಕ್ ಆಗಿ ಆದೇಶ ಮಾಡಿದ್ರು. ರೈತರಿಗೆ ಪ್ರತಿ ಅಂಗಡಿಯಲ್ಲಿ ಉತ್ತಮ ಗುಣಮಟ್ಟದ ಬೀಜ ಸಿಗಬೇಕು. ಮುಖ್ಯವಾಗಿ ಹತ್ತಿ ಬೆಳೆಯ ಬಿತ್ತನೆ ಬೀಜಗಳಿಗೆ ಕಳಪೆ ಗುಣಮಟ್ಟದ ಬೀಜಗಳನ್ನು ಮಿಶ್ರಣ ಮಾಡುವುದನ್ನು ತಡೆಗಟ್ಟಬೇಕು.  ರೈತ ಸಂಪರ್ಕ ಕೇಂದ್ರಗಳು ಮತ್ತು ಕೃಷಿಗೆ ಸಂಬಂಧಿಸಿದ ಅಂಗಡಿಗಳಲ್ಲಿ ಕೃಷಿ ಪರಿಕರಗಳು ಹಾಗೂ ಬಿತ್ತನೆ ಬೀಜ, ರಸಗೊಬ್ಬರಗಳ ಕುರಿತು ದರಪಟ್ಟಿ ಫಲಕವನ್ನು ಅಳವಡಿಸಿರುವಂತೆ ನೋಡಿಕೊಳ್ಳಬೇಕು ಮತ್ತು ಬಿತ್ತನೆ ಬೀಜಗಳ ಕುರಿತು ಹಾಗೂ ಬಿತ್ತನೆ ಮಾಡುವ ವಿಧಾನಗಳ ಕುರಿತು ರೈತರಲ್ಲಿ ಆಯಾ ತಾಲೂಕು ವ್ಯಾಪ್ತಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರುಗಳು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದರು.

ಬೋರ್ವೆಲ್ ನೀರು ಬಿಟ್ಟರೂ ಒಣಗುತ್ತಿದೆ ಹತ್ತಿ ಬೆಳೆ: ರಾಯಚೂರು ಜಿಲ್ಲೆಯ ಪ್ರಮುಖ ಬೆಳೆ ಹತ್ತಿಯೂ ಸಹ ಒಂದಾಗಿದೆ. ಜಿಲ್ಲೆಯ ಶೇ. 50ರಷ್ಟು ರೈತರು ಹತ್ತಿ ಬೆಳೆಯುತ್ತಾರೆ. ಆದ್ರೆ ಈ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ಸುರಿದ ಅಲ್ಪಸಲ್ಪ ಮಳೆ ನಂಬಿ ಹತ್ತಿ ಹಾಕಿದ್ದಾರೆ. ಮಳೆ ಕೊರತೆಯಿಂದಾಗಿ ಬಹುತೇಕ ಜಮೀನಿನಲ್ಲಿ ಹತ್ತಿ ಮೊಳಕೆ ಒಡೆದಿಲ್ಲ. ಇನ್ನೂ ಕೆಲ ರೈತರ ಜಮೀನಿನಲ್ಲಿ 10 ಬೀಜಗಳ ಪೈಕಿ 3-4 ಬೀಜಗಳು ಮಾತ್ರ ಮೊಳಕೆ ಒಡೆದಿವೆ. ಕೆಲ ರೈತರು ಮಳೆಯಿಲ್ಲದಕ್ಕೆ ಬೋರ್ವೆಲ್ ನೀರು ಸಹ ಬಿಡಲು ಮುಂದಾಗಿದ್ದಾರೆ. ಆರಂಭದಲ್ಲಿ ಹತ್ತಿಯೂ ಮೊಳಕೆ ಒಡೆದು ಮೊಳಕ್ಕಾಲು ಎತ್ತರಕ್ಕೆ ಬೆಳೆದ ಹತ್ತಿಗೆ ವಿಚಿತ್ರವಾದ ರೋಗ ಶುರುವಾಗಿದೆ. ಹತ್ತಿ ಗಿಡದ ಕೆಳಭಾಗದ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಇಡೀ ಗಿಡವೇ ಒಣಗಿ ಹೋಗುತ್ತಿವೆ. ಈ ಬಗ್ಗೆ ಕೃಷಿ ವಿಜ್ಞಾನಿಯನ್ನ ಸಂಪರ್ಕಿಸಿದ ರೈತರಿಗೆ ಮಳೆ ಕೊರತೆಯಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ಬೋರ್ವೆಲ್ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಾಗಿ ಹೀಗೆ ಆಗುತ್ತಿರಬಹುದು ಎಂಬ ಸಬೂಬು ನೀಡುತ್ತಿದ್ದಾರೆ. ಆದ್ರೆ ರೈತರು ಮಾತ್ರ ಇದಕ್ಕೆ ಕಳಪೆ ಬೀಜವೇ ಕಾರಣ ಎನ್ನುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆದಾಗ ಮಾತ್ರ ನಿಜ ಬಯಲಾಗಲಿದೆ. 

ವಿವಿಧ ಅಂಗಡಿಯಲ್ಲಿ ಹತ್ತಿಬೀಜ ದುಬಾರಿಗೆ ಮಾರಾಟ: ರಾಯಚೂರಿನ ಪ್ರಮುಖ ವಾಣಿಜ್ಯ ಬೆಳೆ ಹತ್ತಿ ಆಗಿದೆ. ಈ ಹತ್ತಿ ಬೀಜ ಮಾರಾಟ ದಂಧೆಯೂ ರಾಯಚೂರು ಜಿಲ್ಲೆಯಾದ್ಯಂತ ವ್ಯವಸ್ಥಿತಿವಾಗಿ ನಡೆದುಕೊಂಡು ಬರುತ್ತಿದೆ. ಬಿತ್ತನೆ ವೇಳೆಯಲ್ಲಿ ರೈತರು ಕೇಳುವ ಬಿ.ಟಿ. ಹತ್ತಿ ಬೀಜದ ಅಭಾವ ಸೃಷ್ಟಿಸಿ ಮಾಡುವ ದಂಧೆಯೂ ಕೆಲ ಅಂಗಡಿಗಳ ಮಾಲೀಕರು ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ರೈತರು ದೂರು ನೀಡಿದ್ರು, ಕೃಷಿ ಅಧಿಕಾರಿಗಳು ಕೇರ್ ಮಾಡದೇ ಇರುವುದರಿಂದ ಅಂಗಡಿಗಳ ಮಾಲೀಕರು ರಾಜಾರೋಷವಾಗಿ ಈ ದಂಧೆ ನಡೆಸಿಕೊಂಡು ಬರುತ್ತಿದ್ದಾರೆ. 450 ಗ್ರಾಂ ತೂಕ ಇರುವ ಹತ್ತಿ ಬೀಜಕ್ಕೆ ಮಾರುಕಟ್ಟೆ ದರ 730 ರೂ. ಇದ್ರೆ, ಅದೇ ಬೆಲೆಯಲ್ಲಿ ಅಂಗಡಿಯವರು ಮಾರಾಟ ಮಾಡಬೇಕು. ಆದ್ರೆ ಕೆಲ ಅಂಗಡಿಗಳ ಮಾಲೀಕರು ಮನಬಂದಂತೆ 1000ರೂ.ವರೆಗೆ ಮಾರಾಟ ಮಾಡುವ ದಂಧೆ ನಡೆದಿದೆ. ಅಲ್ಲದೆ ರೈತರಿಂದ ಹೆಚ್ಚಿಗೆ ಹಣ ಪಡೆದರೂ ರಸೀಧಿ ಮಾತ್ರ ಮಾರಾಟದ ದರದಂತೆ ನೀಡುತ್ತಿದ್ದಾರೆ. ಈ ಬಗ್ಗೆ ರೈತರು ಪ್ರಶ್ನೆ ಮಾಡಿದ್ರೆ ಬೀಜವೇ ಇಲ್ಲವೆಂದು ಹೇಳಿ ರೈತರಿಗೆ ಹೆದರಿಸುವ ಕೆಲಸವೂ ನಡೆದಿದೆ ಎಂಬ ಆರೋಪ ಕೇಳಿಬಂದಿವೆ. ಇದಕ್ಕೆ ಕೃಷಿ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ.

Temple Mobile Ban:ಕರ್ನಾಟಕದ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಕೆ ನಿಷೇಧ

ದೂರು ಬಂದ ಅಂಗಡಿಗಳ ವಿರುದ್ಧ ಕ್ರಮಕ್ಕೆ ಡಿಸಿ ಸೂಚನೆ: ರಾಯಚೂರು ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ಬೀಜ ಮತ್ತು ಗೊಬ್ಬರ ಮಾರಾಟ ಮಾಡುವ ಅಂಗಡಿಗಳು ಇವೆ. ಜಿಲ್ಲೆಯ ಬಹುತೇಕ ಅಂಗಡಿಗಳ ಮಾಲೀಕರು ರೈತ ಸ್ನೇಹಿಯಾದ ವ್ಯಾಪಾರ ಮಾಡುತ್ತಾರೆ. ಆದ್ರೆ ಕೆಲ ಅಂಗಡಿಗಳ ಮಾಲೀಕರು ಹೆಚ್ಚಿನ ಲಾಭಗಳಿಕೆಗಾಗಿ ರೈತರಿಂದ ದುಬಾರಿ ಬೆಲೆ ವಸೂಲಿ ಮಾಡುವ ದಂಧೆ ನಡೆಸಿದ್ದಾರೆ. ಇದಕ್ಕೆ ಕೂಡಲ್ಲೇ ಕೃಷಿ ಅಧಿಕಾರಿಗಳು ಅಂಗಡಿಗಳ ಪರಿಶೀಲನೆ ಮಾಡಿ ಕ್ರಮ ಜರುಗಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕಿದ್ರೆ ನಾನು ನಿಮ್ಮ ವಿರುದ್ಧ ಕ್ರಮ ಜರುಗಿಸಬೇಕಾಗುತ್ತೆ ಎಂದು ರಾಯಚೂರು ಜಿಲ್ಲಾಧಿಕಾರಿಗಳು ಕೃಷಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ ಮೊದಲ್ಲೇ ಮಳೆಯಿಲ್ಲದೆ ಕಂಗಾಲಾದ ರೈತರಿಗೆ ಕೃಷಿ ಪರಿಕರಕ ಅಂಗಡಿಗಳ ಕಳ್ಳಾಟವೂ ಬರಗಾಲದಲ್ಲಿ ಅಧಿಕ ಮಾಸ ಬಂದಂತೆ ಆಗಿದೆ.

click me!