ಎಂದಿನಂತೆ ಸಂಚಾರ| ಅಗತ್ಯ ವಸ್ತು ಖರೀದಿಗೆ ಕೊಟ್ಟ ವಕಾಶ ದುರುಪಯೋಗ| ಕೊರೋನಾ ಭೀಕರತೆ ಅರ್ಥ ಮಾಡಿಕೊಳ್ಳದ ನಗರಿಗರು| ಬಂಕ್ ಮುಂದೆ ವಾಹನಗಳ ಸಾಲು|
ಬೆಂಗಳೂರು(ಮೇ.01): ದೇಶದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿತರು ಬೆಂಗಳೂರಿನಲ್ಲಿದ್ದರೂ ಜನರಿಗೆ ಕೊರೋನಾ ಭೀಕರತೆ ಆರ್ಥವಾದಂತಿಲ್ಲ. ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಕಠಿಣ ಕರ್ಫ್ಯೂ ಜಾರಿ ಮಾಡಿದ್ದರೂ ಸಾರ್ವಜನಿಕರು ಎಂದಿನಂತೆ ಸಾಮಾಜಿಕ ಅಂತರವಿಲ್ಲದೆ ಗುಂಪು ಗುಂಪಾಗಿ ತಿರುಗಾಡುತ್ತಿದ್ದಾರೆ. ಜನರನ್ನು ನಿಯಂತ್ರಿಸಬೇಕಾದ ಪೊಲೀಸರು ಮೃದು ಧೋರಣೆ ಅನುಸರಿಸುತ್ತಿದ್ದು, ಜನತಾ ಕರ್ಫ್ಯೂ ಯಶಸ್ವಿಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಕರ್ಫ್ಯೂ ಜಾರಿ ಬಳಿಕ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕು. ಆದರೆ, ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಗರದಲ್ಲಿ ಸಾವನ್ನಪ್ಪುವವರ ಸಂಖ್ಯೆ ಏರುಗತಿಯಲ್ಲಿಯೇ ಸಾಗುತ್ತಿದೆ. ಆದರೂ, ಜನ ಸಾಮಾನ್ಯರು ಕೊರೋನಾ ಸೋಂಕನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 4 ಗಂಟೆ ಮಾರುಕಟ್ಟೆಗಳು ಮತ್ತು ದಿನಸಿ ಪದಾರ್ಥಗಳ ಖರೀದಿಗೆ ಅವಕಾಶ ನೀಡಿರುವುದನ್ನೇ ಜನ ದುರ್ಬಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಫ್ರ್ಯೂ ನಡುವೆ ಕೆಲ ಚಟುವಟಿಕೆಗಳನ್ನು ಮುಂದುವರೆಸಲು ಸರ್ಕಾರ ಅವಕಾಶ ನೀಡಿರುವುದರಿಂದ ನಿರ್ಲಕ್ಷ್ಯವಹಿಸುತ್ತಿದ್ದು, ಗುಂಪುಗೂಡುವುದು. ಐದಾರು ಜನ ಏಕಕಾಲಕ್ಕೆ ಒಟ್ಟಾಗಿ ನಿಂತು ಮಾತನಾಡುವುದು ಮುಂದುವರೆದಿದೆ.
undefined
ಕೊರೋನಾ ಸೋಂಕಿತರು ಮನೆಗಳಿಂದ ಹೊರಗಡೆ ಬಂದು ದಿನನಿತ್ಯದ ವಸ್ತುಗಳು ಮತ್ತು ಔಷಧಗಳನ್ನು ಖರೀದಿಯಲ್ಲಿ ತೊಡಗಿದ್ದಾರೆ. ಜೊತೆಗೆ, ಕೊರೋನಾ ಸೋಂಕು ಇಲ್ಲದವರೊಂದಿಗೆ ತಾಸುಗಟ್ಟಲೆ ಚರ್ಚೆ ಮಾಡುತ್ತಿದ್ದು, ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈ ಕಾರಣದಿಂದ ಕರ್ಫ್ಯೂ ನಡುವೆ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಾದ ಕೆ.ಜಿ.ರಸ್ತೆ, ತುಮಕೂರು ರಸ್ತೆ, ಸಂಪಿಗೆ ರಸ್ತೆ, ಮೈಸೂರು ರಸ್ತೆ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಜನತೆ ಸಾಮಾನ್ಯದಂತೆ ಓಡಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
24 ಗಂಟೆಯಲ್ಲಿ 50 ಸಾವಿರ ದಾಟಿದ ಕೊರೋನಾ; ಅಪಾಯದಲ್ಲಿ ಕರ್ನಾಟಕ!
ಅಗತ್ಯವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ್ದರೂ ನಗರದ ಕೆಲ ಭಾಗಗಳಲ್ಲಿ ಬೇಕರಿಗಳು, ಗ್ಯಾರೇಜ್‌ಗಳು ಸೇರಿದಂತೆ ಹಲವು ಸಣ್ಣ ಪುಟ್ಟ ಕಿರಾಣಿ ಅಂಗಡಿಗಳು ಎಂದಿನಂತೆ ತೆಗೆದಿದ್ದು, ಕೋರೋನಾ ಮರೆತು ಜನ ಖರೀದಿಯಲ್ಲಿ ನಿರತರಾಗಿದ್ದಾರೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಿದ್ದರೂ, ಕೆಲ ಹೋಟೆಲ್‌ಗಳ ಮುಂದೆ ಜನ ನಿಂತು ತಿಂಡಿ ತಿನ್ನುವುದು ಘಟನೆಗಳು ನಡೆದಿವೆ.
ವಾಹನಗಳಿಗೆ ನಿರ್ಬಂಧ ಇಲ್ಲ
ಕರ್ಫ್ಯೂ ಜಾರಿ ನಡುವೆ ತುರ್ತು ಸೇವೆ ಸೇರಿದಂತೆ ಕೆಲ ಚಟವಟಿಕೆಗಳನ್ನು ನಡೆಸಲು ಸರ್ಕಾರ ಅವಕಾಶ ನೀಡಿರುವ ಕಾರಣದಿಂದ ಬೆಂಗಳೂರು ನಗರದಲ್ಲಿ ವಾಹನ ಸಂಚಾರ ಹೆಚ್ಚಳವಾಗುತ್ತಿದೆ. ಜನತಾ ಕರ್ಫ್ಯೂ ಜಾರಿ ಮಾಡಿ ಮೂರು ದಿನಗಳಾಗಿದೆ. ಆದರೆ, ಮೊದಲ ದಿನಕ್ಕಿಂತ ಎರಡನೇ ದಿನ ಮತ್ತು ಮೂರನೇ ದಿನಗಂದು ಹೆಚ್ಚು ವಾಹನಗಳು ರಸ್ತೆಗಿಳಿದಿದ್ದು, ಕಾಟಾಚಾರಕ್ಕಾಗಿ ಕರ್ಫ್ಯೂ ಜಾರಿ ಮಾಡಿದಂತಾಗಿದೆ.
ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲ ರೀತಿಯ ಸಾರಿಗೆ ವಾಹನಗಳನ್ನು ರಸ್ತೆಗಿಳಿಸದಂತೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಕೆಲ ಖಾಸಗಿ ಸಂಸ್ಥೆಗಳಿಗೆ ಶೇ.50ರಷ್ಟು ಸೇವೆ ಸಲ್ಲಿಸುತ್ತಿರುವುದರಿಂದ ಹೆಚ್ಚು ವಾಹನಗಳು ರಸ್ತೆಗಿಳಿದಿದ್ದು, ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು. ಕೆ.ಆರ್. ವೃತ್ತ, ಹಡ್ಸನ್ ವೃತ್ತ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿಯಲ್ಲಿ ಅತಿ ಹೆಚ್ಚು ವಾಹನಗಳ ಸಂಚಾರ ಕಂಡುಬಂತು. ಪರಿಣಾಮ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಪರದಾಡಿದರು.
ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚು ಜನ
ಜನತಾ ಕರ್ಫ್ಯೂ ವಿಧಿಸಿ ಮೂರು ದಿನ ಕಳೆಯುತ್ತಿದ್ದರೂ ಯಶವಂತಪುರ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರದ ರಸೇಲ್ ಮಾರುಕಟ್ಟೆಯಲ್ಲಿ ಜನದಟ್ಟಣೆ ಸಾಮಾನ್ಯವಾಗಿತ್ತು. ತರಕಾರಿ, ಸೊಪ್ಪು, ಮಾಂಸ, ಮೀನು ಖರೀದಿಗೆ ಮುಗಿಬಿದ್ದ ಜನತೆ ಮೈಮರೆತು ವ್ಯಾಪಾರದಲ್ಲಿ ತೊಡಗಿದ್ದರು. ಅಲ್ಲದೆ, ಬೆಳಗ್ಗೆ 10ಕ್ಕೆ ಮುಚ್ಚಬೇಕಾಗಿದ್ದ ಅಂಗಡಿ ಮುಂಗಟ್ಟಗಳು ಕೆಲ ಭಾಗಗಳಲ್ಲಿ ಕದ್ದುಮುಚ್ಚಿ ಮಧ್ಯಾಹ್ನದ ಮೇಲೆಯೂ ವ್ಯಾಪಾರ ಮುಂದುವರೆದಿತ್ತು.
ಬಂಕ್ ಮುಂದೆ ವಾಹನಗಳ ಸಾಲು
ನಗರದಲ್ಲಿ ಕರ್ಫ್ಯೂ ನಡುವೆಯೂ ವಾಹನ ಸಂಚಾರ ಹೆಚ್ಚಾಗಿದ್ದು, ನಗರದ ಹಲವು ಪೆಟ್ರೋಲ್ ಬಂಕ್‌ಗಳ ಮುಂದೆ ಬೆಳಗ್ಗೆ ಆರು ಗಂಟೆಯಿಂದಲೇ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದರು. ಗಂಗಾನಗರ, ಸದಾಶಿವನಗರ, ಬಸವನಗುಡಿ, ಯಲಹಂಕ, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಬಂಕ್‌ಗಳ ಮುಂದೆ ಉದ್ದುದ್ದ ವಾಹನಗಳ ಸಾಲು ಇತ್ತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona