ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಇದರ ಉದ್ದೇಶ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಹಲವು ವಿಷಯಗಳಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿಯ ಐಟಿ ಟೆಕ್ ಹಬ್ ಸೇರಿದಂತೆ ಇಲ್ಲಿಯ ವಾತಾವರಣವೂ ದೇಶ-ವಿದೇಶದ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಇದರ ಜೊತೆಯಲ್ಲಿ ಬೆಂಗಳೂರು ನಗರದ ಟ್ರಾಫಿಕ್‌ನಿಂದಲೂ ಸದ್ದು ಮಾಡುತ್ತಿದೆ. ಸಿಲ್ಕ್ ಬೋರ್ಡ್, ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯ ಭಾಗದ ಟ್ರಾಫಿಕ್ ಅಂದ್ರೆ ಬೆಂಗಳೂರಿನ ಜನರು ಕನಸಿನಲ್ಲಿಯೂ ಬೆಚ್ಚಿ ಬೀಳುತ್ತಾರೆ. ಕೇವಲ ಈ ಮೂರು ಭಾಗದಲ್ಲಿ ಮಾತ್ರವಲ್ಲ ಜನಸಂದಣಿ ಹೆಚ್ಚಿರೋ ಭಾಗದಲ್ಲಿಯೂ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುತ್ತದೆ. ವಿಶೇಷವಾಗಿ ಬೆಂಗಳೂರು ನಗರ ಪ್ರವೇಶಿಸುವ ಮಾರ್ಗದಲ್ಲಿ ಅತ್ಯಧಿಕ ವಾಹನದಟ್ಟಣೆ ಉಂಟಾಗುತ್ತದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿಯೂ ವಾಹನದಟ್ಟಣೆ ಹೆಚ್ಚಾಗುತ್ತಿದೆ. ಬಳ್ಳಾರಿ ರಸ್ತೆಯಲ್ಲಿನ ಟ್ರಾಫಿಕ್ ನಿಯಂತ್ರಣಕ್ಕೆ ನಾಲ್ಕು ಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI- National Highways Authority of India) ಚಿಂತನೆ ನಡೆಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕೊಡಿಗೇಹಳ್ಳಿ, ಬ್ಯಾಟರಾಯನಪುರ, ಜಕ್ಕೂರು ಮತ್ತು ಅಲ್ಲಾಳಸಂದ್ರದಂತಹ ಪ್ರಮುಖ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಲು NHAI ಚಿಂತನೆ ನಡೆಸಿದ್ದು, ಈ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಸ್ತೆಯಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ. ಒಂದು ವೇಳೆ ಈ ನಾಲ್ಕು ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ನಿರ್ಮಿಸಿದ್ರೆ ಏರ್‌ಪೋರ್ಟ್‌ಗೆ ಟ್ರಾಫಿಕ್ ಕಿರಿಕಿರಿ ಇಲ್ಲದೇ ತಲುಪಬಹುದಾಗಿದೆ.
ಈಗಾಗಲೇ ಈ ಮಾರ್ಗದಲ್ಲಿ ಬಿಎಂಆರ್‌ಸಿಎಲ್‌ನ ನೀಲಿ ಮಾರ್ಗದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ವಾಹನ ಸಂಚಾರದ ಮೇಲೆ ನೇರ ಪರಿಣಾಮ ಬೀರಿದ್ದರಿಂದ ಪೀಕ್ ಅವರ್‌ನಲ್ಲಿ ಟ್ರಾಫಿಕ್ ಉಂಟಾಗುತ್ತಿದೆ. ಈ ಕುರತು ಮಾತನಾಡಿರುವ, NHAI ನಿರ್ದೇಶಕ ಕೆ.ಬಿ.ಜಯಕುಮಾರ್, ನಗರ ಭಾಗದ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡುವದರಿಂದ ಸಂಚಾರ ಸುಲಭವಾಗುತ್ತದೆ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಕೆ.ಬಿ.ಜಯಕುಮಾರ್, ರಾಷ್ಟ್ರೀಯ ಹೆದ್ದಾರಿಯ ಎಲಿವೇಟೆಡ್ ಕಾರಿಡಾರ್‌ನ ಕೆಳಗೆ ಬಹು ಜಂಕ್ಷನ್‌ಗಳಿವೆ. ಅಂಡರ್‌ಪಾಸ್ ನಿರ್ಮಾಣ ಭೂಮಿಯ ಲಭ್ಯತೆ ಮತ್ತು ಎಲಿವೇಟೆಡ್ ಕಾರಿಡಾರ್‌ಗಾಗಿ ನಿರ್ಮಿಸಲಾದ ದೈತ್ಯ ಪಿಲ್ಲರ್‌ಗಳೇ ದೊಡ್ಡ ಸವಾಲುಗಳು. ಅಂಡರ್‌ಪಾಸ್‌ಗೆ ಪಿಲ್ಲರ್‌ಗಳು ಅಡ್ಡಿಯಾಗಬಹುದು ಎಂಬ ಅಂಶಗಳನ್ನು ಉಲ್ಲೇಖಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಿದ್ರೆ ಕನ್ನಡ ಕಲಿಯಿರಿ: Zoho CEO ಶ್ರೀಧರ್ ವೆಂಬು
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾವಿತ ನವೀಕರಣಗಳ ಪಟ್ಟಿ
*IAF ಯಲಹಂಕ ಸ್ಟೇಶನ್ ಅಂಡರ್‌ಪಾಸ್: ಈ ಭಾಗದಲ್ಲಿ ಕಟ್ ಆಂಡ್ ಕವರ್ ಮೆಥಡ್ ಬಳಸಿ 750 ಮೀಟರ್ ಉದ್ದದ ಅಂಡರ್‌ಪಾಸ್ ನಿರ್ಮಾಣಕ್ಕೆ ಚಿಂತನೆ. ಈ ಅಂಡರ್‌ಪಾಸ್ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
*ಸಾದಹಳ್ಳಿ ಅಂಡರ್‌ಪಾಸ್: ಈ ಅಂಡರ್‌ಪಾಸ್ ನಿರ್ಮಾಣದಿಂದ ಟೋಲ್‌ಗೇಟ್ ಬಳಿಯಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಕಡಿತಗೊಳಿಸಬಹುದು ಎಂಬುವುದು NHAI ಚಿಂತನೆಯಾಗಿದೆ.
*ಸರ್ವಿಸ್ ರೋಡ್ ಸಂಚಾರ ಪುನಾರರಂಭ: ಮೆಟ್ರೋ ಕಾಮಗಾರಿಯಿಂದ ಸರ್ವಿಸ್ ರಸ್ತೆಗಳಲ್ಲಿಯೇ ಎಲ್ಲಾ ವಾಹನಗಳ ಸಂಚಾರ ನಡೆಯುತ್ತಿದೆ. ಅಲ್ಲಾಳಸಂದ್ರ ಮತ್ತು ಜಕ್ಕೂರು ಜಂಕ್ಷನ್ ನಡುವೆ ಮೆಟ್ರೋ ಕಾಮಗಾರಿಯಿಂದ ಟ್ರಾಫಿಕ್ ಉಂಟಾಗುತ್ತಿದೆ. ಸರ್ವಿಸ್ ರೋಡ್ ಪುನಶ್ಚೇತನದಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ.
ಇದೆಲ್ಲದರ ಜೊತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಬ್ಬಾಳ ರಸ್ತೆಯಲ್ಲಿ EV ಚಾರ್ಜಿಂಗ್ ವ್ಯವಸ್ಥೆ ಮತ್ತು ಬಸ್‌ಗಳಿಗೆ ಪ್ರತ್ಯೇಕ ಮಾರ್ಗದ ಬಗ್ಗೆಯೂ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಎಸ್ಟೀಮ್ ಮಾಲ್ ಅಂತಹ ಜನಸಂದಣಿ ಪ್ರದೇಶದಲ್ಲಿ ಸರ್ವಿಸ್ ರೋಡ್ ನಿರ್ಮಿಸುವ ಚಿಂತತೆಯನ್ನು ಸಹ ಹೊಂದಿದೆ. ಸರ್ವಿಸ್ ರಸ್ತೆ ನಿರ್ಮಾಣದಿಂದ ಪೀಕ್ ಅವರ್‌ನಲ್ಲಿನ ಟ್ರಾಫಿಕ್ ನಿಯಂತ್ರಿಸಬಹುದು.
ಇದನ್ನೂ ಓದಿ: ಕೋಟಿ ಕೋಟಿ ಹಣ ಉಳಿಸಲು ಬೆಂಗಳೂರಿನಲ್ಲಿನ ಪ್ರಧಾನ ಕಚೇರಿ ಸ್ಥಳಾಂತರಿಸಲು ಮುಂದಾದ 5000 ಉದ್ಯೋಗಿಗಳ ಕಂಪನಿ