ಚಿಕ್ಕಬಳ್ಳಾಪುರ(ಸೆ.23): ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆ ವಿಮೆ ನೊಂದಣಿ ಕುಸಿತ ಕಾಣುತ್ತಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ರೈತರ ಬೆಳೆ ವಿಮೆ (crop-insurance) ನೊಂದಣಿ ಸುಮಾರು 5 ಸಾವಿರದಷ್ಟು ನೊಂದಣಿ ಕಡಿಮೆ ಆಗಿರುವುದು ಎದ್ದು ಕಾಣುತ್ತಿದೆ.
ಬೆಳೆ ವಿಮೆ ಕುರಿತು ಸೂಕ್ತ ಪ್ರಚಾರದ ಕೊರತೆ, ರೈತರ (farmers) ವಂತಿಗೆ ಶುಲ್ಕ ಹೆಚ್ಚಳ, ಸಕಾಲದಲ್ಲಿ ಕೈ ಸೇರದೇ ಕಾಟಾಚಾಟಕ್ಕೆ ಬೆಳೆ ವಿಮೆ ಬಗ್ಗೆ ರೈತರಲ್ಲಿ ರುವ ಬೇಸರದ ಮನೋಭಾವನೆ, ಬ್ಯಾಂಕುಗಳ ಕಿರಿಕಿರಿ ಮತ್ತಿತರ ಕಾರಣಗಳಿಗೆ ಜಿಲ್ಲೆಯಲ್ಲಿ ಈ ವರ್ಷವು ಕೂಡ ಕೃಷಿ ಇಲಾಖೆ ಬೆಳೆ ವಿಮೆ ನೊಂದಣಿಯ ನಿಗದಿ ಗುರಿ ಸಾಧನೆ ಮಾಡುವಲ್ಲಿ ಎಡವಿದೆ.
'ಬಾಕಿ ವಿಮೆ ಹಣ ರೈತರ ಖಾತೆಗೆ ಶೀಘ್ರದಲ್ಲಿ ಜಮಾ'
ಕಳೆದ ವರ್ಷ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ (PMFBY) ಬೆಳೆ ವಿಮೆ ಯೋಜನೆಯಡಿ ಬರೋಬ್ಬರಿ 17,256 ಮಂದಿ ರೈತರು ತಮ್ಮ ಹೆಸರುಗಳನ್ನು ನೊಂದಣಿ ಮಾಡಿಕೊಂಡಿದ್ದರು ಈ ಬಾರಿ ಅವಧಿ ಮುಕ್ತಾಯಕ್ಕೆ ಕೇವಲ 12,273 ಮಂದಿ ರೈತರು ಮಾತ್ರ ಪಿಎಂಎಫ್‌ಬಿವೈ ಯೋಜನೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ.
ಆ ಪೈಕಿ ಬಾಗೇಪಲ್ಲಿ ತಾಲೂಕಿನಲ್ಲಿ ಪ್ರಧಾನಿ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆಗೆ ಒಟ್ಟು 3,245, ಚಿಕ್ಕಬಳ್ಳಾಪುರದಲ್ಲಿ 126, ಚಿಂತಾಮಣಿಯಲ್ಲಿ 333, ಗೌರಿಬಿದನೂರು ತಾಲೂಕಿನಲ್ಲಿ 5,921, ಗುಡಿಬಂಡೆ ತಾಲೂಕಿನಲ್ಲಿ 1,226, ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 1,413 ಮಂದಿ ರೈತರು ಬೆಳೆ ವಿಮೆ ಯೋಜನೆಯಡಿ ಹೆಸರು ನೊಂದಾಯಿಕೊಂಡಿದ್ದಾರೆ. ಇನ್ನೂ ಹವಮಾನ ವೈಪರೀತ್ಯ ಆಧಾರಿತ ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆ ಬಾಗೇಪಲ್ಲಿ ತಾಲೂಕಿನಲ್ಲಿ 0, ಚಿಕ್ಕಬಳ್ಳಾಪುರದಲ್ಲಿ 699, ಚಿಂತಾಮಣಿಯಲ್ಲಿ 79, ಗೌರಿಬಿದನೂರಲ್ಲಿ 52, ಗುಡಿಬಂಡೆಯಲ್ಲಿ 20 ಹಾಗೂ ಶಿಡ್ಲಘಟ್ಟದಲ್ಲಿ ಕೇವಲ 120 ರೈತರು ಮಾತ್ರ ನೊಂದಾಯಿಸಿಕೊಂಡಿದೆ.
ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಇದ್ದರು ಕೇಂದ್ರ ಸರ್ಕಾರದ ಬೆಳ ವಿಮೆ ಯೋಜನೆಗೆ ತೀವ್ರ ನಿರಾಸಕ್ತಿ ತೋರಿರುವುದು ಜಿಲ್ಲಾದ್ಯಂತ ಎದ್ದು ಕಾಣುತ್ತಿದೆ. ಅವೈಜ್ಞಾನಿಕ ಬೆಳೆ ವಿಮೆ ನೀತಿ: ಕಳೆದ ಹಲವು ವರ್ಷಗಳಿಂದ ಬೆಳೆ ವಿಮೆ ಯೋಜನೆಗೆ ಕೇಂದ್ರ ಸರ್ಕಾರ ರೂಪಿಸಿರುವ ಮಾನದಂಡಗಳು ಸಾಕಷ್ಟು ಅವೈಜ್ಞಾನಿಕವಾಗಿದೆಯೆಂಬ ಕಾರಣಕ್ಕೆ ರೈತರು ಬೆಳೆ ವಿಮೆ ನೊಂದಣಿಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬ ಮಾತು ರೈತ ವಲಯದಲ್ಲಿ ಕೇಳಿ ಬರುತ್ತಿದೆ.
ರೈತರಿಗೆ ಇನ್ನೂ ಬಾರದ ಬೆಳೆವಿಮೆ ಪರಿಹಾರ: ಅನ್ನದಾತರ ಆಕ್ರೋಶ
ಜೊತೆಗೆ ಬೆಳೆ ವಿಮೆ ಹಣ ಕೂಡ ಸಕಾಲದಲ್ಲಿ ರೈತರಿಗೆ ಬರಲ್ಲ. ಬೆಳೆ ವಿಮೆ ಪಡೆಯಲು ಹರಸಾಹಸ ಮಾಡಬೇಕು, ಬ್ಯಾಂಕುಗಳು ಕೂಡ ಸರಿಯಾಗಿ ಸ್ಪಂದಿಸುವುದಿಲ್ಲ. ಕೇವಲ ವಿಮೆ ಕಂಪನಿಗಳಿಗೆ ಮಾತ್ರ ಲಾಭ ಆಗುವ ಇತಂಹ ಬೆಳ ವಿಮೆಗೆ ಏಕೆ ನೊಂದಣಿ ಮಾಡಿಸಬೇಕೆಂದು ರೈತರೊಬ್ಬರು ಪ್ರಶ್ನಿಸಿದರು.
ಬೆಳೆ ವಿಮೆ ನೊಂದಣಿಗೆ ಚಿಕ್ಕಬಳ್ಳಾಪುರ ರೈತರು ಕೇವಲ 126 ಮಂದಿ ಮಾತ್ರ ನೊಂದಾಯಿಸಿಕೊಂಡಿದ್ದಾರೆ. ಇನ್ನೂ ಅತಿ ಹೆಚ್ಚು ಕೃಷಿ ಕ್ಷೇತ್ರ (agriculture) ಹೊಂದಿರುವ ಚಿಂತಾಮಣಿ ತಾಲೂಕಿನಲ್ಲಿ ಕೇವಲ 333 ಮಂದಿ ರೈತರು ನೊಂದಾಯಿಸಿಕೊಂಡಿದ್ದಾರೆ. ಅತಿ ಚಿಕ್ಕ ತಾಲೂಕಾದ ಗುಡಿಬಂಡೆ 1,226, ಮಾಜಿ ಕೃಷಿ ಸಚಿವ ತರುವ ಗೌರಿಬಿದನೂರಲ್ಲಿ ಅತಿ ಹೆಚ್ಚು 5,921 ಮಂದಿ ನೊಂದಣಿ ಮಾಡಿಕೊಂಡಿದ್ದಾರೆ.