ಬಿಬಿಎಂಪಿ ವಾರ್ಡ್‌ ಸಂಖ್ಯೆ ಹೆಚ್ಚಳಕ್ಕೆ ಅಧಿಸೂಚನೆ

By Kannadaprabha NewsFirst Published Oct 4, 2020, 8:43 AM IST
Highlights

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಾರ್ಡ್‌ಗಳು ವಿಭಜನೆಯಾಗಲಿವೆ|  ವಾರ್ಡ್‌ ಸಂಖ್ಯೆ ಹೆಚ್ಚಳ ಮಾಡುವಾಗ ಯಾವ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳನ್ನು ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಪುನರ್‌ ವಿಂಗಡಣೆ ಮಾಡಿ ವಾರ್ಡ್‌ ಸಂಖ್ಯೆ ಹೆಚ್ಚಿಸಬೇಕು| ಯಾವುದೇ ಕಾರಣಕ್ಕೂ ಒಂದು ಕ್ಷೇತ್ರದ ವಾರ್ಡುಗಳನ್ನು ಬೇರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಹಂಚಬಾರದು| 

ಬೆಂಗಳೂರು(ಅ.04): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಡ್‌ ಸಂಖ್ಯೆಯನ್ನು 198 ರಿಂದ 250ಕ್ಕೆ ಹೆಚ್ಚಳ ಮಾಡುವ ಬಗ್ಗೆ ರಾಜ್ಯ ಸರ್ಕಾರ ಶನಿವಾರ ರಾಜ್ಯಪತ್ರದ ಮೂಲಕ ಅ​ಧಿಸೂಚನೆ ಹೊರಡಿಸಿದೆ.

ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕಿಂತ ಕಡಿಮೆ ಇಲ್ಲದಂತೆ 250ರವರೆಗೆ ಹೆಚ್ಚಳ ಮಾಡಲು ಅ​ಧಿಸೂಚನೆ ಹೊರಡಿಸಿದೆ. ಪಾಲಿಕೆ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಸಂಬಂಧ ಕರ್ನಾಟಕ ನಗರ ಪಾಲಿಕೆಗಳ (3ನೇ ತಿದ್ದುಪಡಿ) ಅ​ಧಿನಿಯಮಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಾರ್ಡ್‌ಗಳು ವಿಭಜನೆಯಾಗಲಿವೆ. ವಾರ್ಡ್‌ ಸಂಖ್ಯೆ ಹೆಚ್ಚಳ ಮಾಡುವಾಗ ಯಾವ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳನ್ನು ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಪುನರ್‌ ವಿಂಗಡಣೆ ಮಾಡಿ ವಾರ್ಡ್‌ ಸಂಖ್ಯೆ ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಒಂದು ಕ್ಷೇತ್ರದ ವಾರ್ಡುಗಳನ್ನು ಬೇರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಹಂಚಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಪ್ರತಿ ವಾರ್ಡ್‌ಗಳ ಗಡಿ ನಿರ್ಧಾರ ವಿಧಾನವನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ಗಡಿ ನಿರ್ಧಾರ ಆಯೋಗ ರಚನೆ ಮಾಡಬೇಕು ಎಂದು ಅ​ಧಿಸೂಚನೆಯಲ್ಲಿ ತಿಳಿಸಲಾಗಿದೆ.

ಬಿಬಿಎಂಪಿ ವಾರ್ಡ್‌ ಸಂಖ್ಯೆ 250ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಜಂಟಿ ಸಮಿತಿ ಶಿಫಾರಸು

ವಿಧಾನಸಭೆಯಲ್ಲಿ ಒಪ್ಪಿಗೆ:

ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎಸ್‌.ರಘು ನೇತೃತ್ವದ ಜಂಟಿ ಪರಿಶೀಲನಾ ಸಮಿತಿಯ ಸಲ್ಲಿಸಿರುವ ವಿಶೇಷ ವರದಿದಲ್ಲಿ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 250ಕ್ಕೆ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಲಾಗಿತ್ತು. ಅದಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.

ಇದಕ್ಕೆ ಪೂರಕವಾಗಿ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ-1976ರ ನಿಯಮಾವಳಿಯಲ್ಲಿ ಸಣ್ಣ ಪ್ರಮಾಣದ ತಿದ್ದುಪಡಿ ಮಾಡಿ 200 ವಾರ್ಡ್‌ಗಳ (ಕಾಯಿದೆಯಲ್ಲಿ 200 ವಾರ್ಡ್‌ವರೆಗೆ ಅವಕಾಶವಿದೆ) ಹೆಸರಿನ ಬದಲಿಗೆ 250 ಎಂಬ ಪದ ಪ್ರಯೋಗಕ್ಕೆ ಒಪ್ಪಿಗೆ ಪಡೆಯಲಾಗಿತ್ತು.

ಪರಿಣಾಮ ಇದೀಗ ರಾಜ್ಯ ಸರ್ಕಾರ ಬೆಂಗಳೂರಿಗೆ ಪ್ರತ್ಯೇಕವಾಗಿ ಕಾಯ್ದೆ (ಬಿಬಿಎಂಪಿ ವಿಧೇಯಕ -2020) ಮಂಡನೆ, ಅಂಗೀಕಾರ ವಿಳಂಬವಾದರೂ ಅಥವಾ ತಕ್ಷಣ ಹೈಕೋರ್ಟ್‌ ಚುನಾವಣೆ ನಡೆಸುವಂತೆ ಘೋಷಣೆ ಮಾಡಿದರೂ ಬಿಬಿಎಂಪಿ ವಾರ್ಡ್‌ಗಳನ್ನು 198ರಿಂದ 250ಕ್ಕೆ ಪುನರ್‌ರಚನೆ ಮಾಡಿ ಪರಿಷ್ಕೃತ ವಾರ್ಡ್‌ಗಳ ಸಂಖ್ಯೆಗೆ ಚುನಾವಣೆ ನಡೆಸಲು ಸರ್ಕಾರ ವೇದಿಕೆ ಸಜ್ಜುಗೊಳಿಸಿಕೊಂಡಿದೆ.

ಏನಿದು ತಿದ್ದುಪಡಿ?

2020ನೇ ಸಾಲಿನ ಬಿಬಿಎಂಪಿ ವಿಧೇಯಕವನ್ನು (ಬಿಬಿಎಂಪಿ ವಿಧೇಯಕ-2020) ಪರಿಶೀಲಿಸಲು ಶಾಸಕ ಎಸ್‌.ರಘು ನೇತೃತ್ವದಲ್ಲಿ ಕರ್ನಾಟಕ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯನ್ನು ರಚನೆ ಮಾಡಲಾಗಿದೆ. ಆದರೆ, ಸಮಿತಿಯು ತನ್ನ ಅಂತಿಮ ವರದಿ ಸಲ್ಲಿಸಲು ನವೆಂಬರ್‌ ಅಂತ್ಯದವರೆಗೆ ಗಡುವು ಪಡೆದಿದ್ದು, ಅಲ್ಲಿಯವರೆಗೆ ವಿಧೇಯಕಕ್ಕೆ ಒಪ್ಪಿಗೆ ದೊರೆಯುವುದು ಅನುಮಾನ ಎಂಬಂತಾಗಿದೆ.

ಇದರ ನಡುವೆ ಸೆ.15ರಂದು ಸಮಿತಿಯು ಒಂದು ಪುಟದ ವಿಶೇಷ ವರದಿ ಸಲ್ಲಿಸಿ ‘ಬಿಬಿಎಂಪಿಯ ಚುನಾಯಿತ ಸದಸ್ಯರ ಅವಧಿ ಮುಗಿದಿದ್ದು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಬೇಕಾಗಿರುತ್ತದೆ. ಪ್ರಸ್ತುತ ವಿದ್ಯಮಾನಗಳು ಬೆಂಗಳೂರು ಮಹಾನಗರದಲ್ಲಿ ಹೆಚ್ಚಳವಾದ ಜನಸಂಖ್ಯೆ ಹಾಗೂ ವಿಸ್ತೀರ್ಣದ ಆಧಾರದ ಮೇಲೆ 1976ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ ಪ್ರಕರಣ 7ಕ್ಕೆ ತಿದ್ದುಪಡಿ ತಂದು ವಾರ್ಡ್‌ ಹೆಚ್ಚಳಕ್ಕೆ ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ 1976ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 7(1)ನೇ ಉಪ ಪ್ರಕರಣದ (ಎ) ಖಂಡರದಲ್ಲಿ 200 ಬದಲಿಗೆ 250 ಎಂಬ ಪದ ಪ್ರಯೋಗಿಸಬೇಕು’ ಎಂದು ವರದಿ ನೀಡಿದ್ದರು.

1000 ಚದರ ಕಿ.ಮೀ.ಗೆ ನಗರದ ವ್ಯಾಪ್ತಿ ಹೆಚ್ಚಳ

ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಪ್ರದೇಶ ಹೀಗಾಗಲೇ ಸಾಕಷ್ಟುಅಭಿವೃದ್ಧಿಯಾಗಿದ್ದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿವೆ. ಹಾಗಾಗಿ, ಈ ಪ್ರದೇಶಗಳು ಬಿಬಿಎಂಪಿಗೆ ಸೇರಲಿದ್ದು, ಬಿಬಿಎಂಪಿ ವ್ಯಾಪ್ತಿಯನ್ನು 800 ಚದರ ಕಿ.ಮೀ.ಯಿಂದ 1 ಸಾವಿರ ಚದರ ಕಿ.ಮೀ.ಗೆ ಏರಿಕೆಯಾಗಲಿದೆ.
 

click me!