ಕೊಪ್ಪಳ: ಸಾಂಕ್ರಾಮಿಕ ರೋಗ, 100ಕ್ಕೂ ಅಧಿಕ ಜನ ಅಸ್ವಸ್ಥ

By Kannadaprabha News  |  First Published Mar 12, 2021, 1:25 PM IST

ಮೆಣಸಗೇರಿ ತಾಂಡಾದಲ್ಲಿ ಚಿಕೂನ್‌ ಗುನ್ಯಾ, ಡೆಂಘೀ ಜ್ವರ ಹಾವಳಿ| ಕಳೆದ ಒಂದು ತಿಂಗಳಿನಿಂದ ಕಾಣಿಸಿಕೊಂಡ ಚಿಕೂನ್‌ಗುನ್ಯಾ| ಪ್ರತಿದಿನ ಒಬ್ಬಿಬ್ಬರಂತೆ ಕಾಯಿಲೆಯಿಂದ ಹಾಸಿಗೆ ಹಿಡಿಯುತ್ತಿರುವ ಜನರು| ಗ್ರಾಮದಲ್ಲಿ ತಾತ್ಕಾಲಿಕ ಕ್ಲಿನಿಕ್‌ ತೆರೆದು ರೋಗಿಗಳಿಗೆ ಚಿಕಿತ್ಸೆ| 
 


ದೋಟಿಹಾಳ(ಮಾ.12): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗಡಿ ಭಾಗದಲ್ಲಿರುವ ಕ್ಯಾದಗುಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸಗೇರಿ ತಾಂಡಾದಲ್ಲಿ ಕಳೆದ 1 ತಿಂಗಳಿನಿಂದ ಸುಮಾರು 100ಕ್ಕೂ ಹೆಚ್ಚು ಜನರು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದು, ಗ್ರಾಮದಲ್ಲಿ ತಾತ್ಕಾಲಿಕ ಕ್ಲಿನಿಕ್‌ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತಿದಿನ ಈ ತಾಂಡಾದಿಂದ 10ಕ್ಕೂ ಹೆಚ್ಚು ಜನ ಹೆಚ್ಚಿನ ಚಿಕಿತ್ಸೆಗಾಗಿ ಇಳಕಲ್‌ ಹಾಗೂ ಕೊಪ್ಪಳಗಳಿಗೆ ತೆರಳುತ್ತಿದ್ದಾರೆ. ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ ತಾಂಡಾದಲ್ಲಿ ಚಿಕೂನ್‌ ಗುನ್ಯಾ ಹಾಗೂ ಡೆಂಘೀ ಜ್ವರ ಪ್ರಕರಣಗಳು ಕಂಡುಬಂದಿದೆ. ಹೀಗಾಗಿ ತಾಂಡಾದಲ್ಲಿ ಮಂಗಳವಾರದಿಂದ ತಾತ್ಕಾಲಿಕ ಕ್ಲಿನಿಕ್‌ ಆರಂಭಿಸಿದ್ದು, ಮೊದಲ ದಿನವೇ 50ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದು, ಇಲ್ಲಿಯವರೆಗೆ ಸುಮಾರು 100ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ.

Latest Videos

undefined

ಕ್ಯಾದಗುಂಪಿ ಗ್ರಾಪಂ ಮೆಣಸಗೇರಿ ತಾಂಡಾದ ಸ್ವಚ್ಛತೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಅಲ್ಲಲ್ಲಿ ಚರಂಡಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದುವೇ ರೋಗ ಹೆಚ್ಚಾಗಲು ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿಕೂನ್‌ಗುನ್ಯಾ ಕಾಣಿಸಿಕೊಂಡಿದ್ದು, ಪ್ರತಿದಿನ ಒಬ್ಬಿಬ್ಬರಂತೆ ಕಾಯಿಲೆಯಿಂದ ಹಾಸಿಗೆ ಹಿಡಿಯುತ್ತಿದ್ದಾರೆ. ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕಿದ್ದ ಗ್ರಾಪಂ ಇಲಾಖೆಯ ನಿರ್ಲಕ್ಷ್ಯದಿಂದ ಕಾಯಿಲೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಗ್ರಾಮಸ್ಥರ ಆರೋಪ.

ಗಂಗಾವತಿ: ಕಳುವು ಕೇಸ್‌ ಭೇದಿಸಿದಾಗ ಕೊಲೆ ಪ್ರಕರಣ ಬೆಳಕಿಗೆ..!

ಅಧಿಕಾರಿಗಳ ಭೇಟಿ:

ಮೆಣಸಗೇರಿ ತಾಂಡಾಕ್ಕೆ ಬುಧವಾರ ಜಿಲ್ಲಾ ಆರೋಗ್ಯ ಇಲಾಖೆಯ ಮಲೇರಿಯಾ ತಾಂತ್ರಿಕ ವಿಭಾಗದ ಹಿರಿಯ ಆರೋಗ್ಯ ಅಧಿಕಾರಿಗಳಾದ ಸತೀಶ್‌, ಭೀಮೇಶ್‌, ಸೋಮಶೇಖರ, ತಾಲೂಕು ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಪ್ರಕಾಶ ಜಿ. ಅವರು ಭೇಟಿ ನೀಡಿ ಚಿಕೂನ್‌ಗುನ್ಯಾ ನಿಯಂತ್ರಣ ಕುರಿತು ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿದರು. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ತಾಂಡಾದ ಲಾರ್ವಾ ಸಮೀಕ್ಷೆ ಮಾಡಿದರು.

ಮೆಣಸಗೇರಿ ತಾಂಡಾದಲ್ಲಿ ಚಿಕೂನ್‌ಗುನ್ಯಾ ಹರಡಿದ್ದು, ಗ್ರಾಮಸ್ಥರು ಆತಂಕಗೊಳ್ಳುವುದು ಬೇಡ. ಈಗಾಗಲೇ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಚಿಕಿತ್ಸೆಗೆ ಮುಂದಾಗಿದ್ದಾರೆ. ತಾಂಡಾದಲ್ಲಿ ತಾತ್ಕಾಲಿಕ ಕ್ಲಿನಿಕ್‌ ತೆರೆದು ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಆನಂದ ಗೋಟೂರ ತಿಳಿಸಿದ್ದಾರೆ.

ಮೆಣಸಗೇರಿ ತಾಂಡಾದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದಲೇ ಅಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದಲೇ ಚಿಕೂನ್‌ಗುನ್ಯಾ, ಡೆಂಘೀ ಜ್ವರ, ಮಲೇರಿಯಾದಂತಹ ಕಾಯಿಲೆಗಳು ಬರುತ್ತವೆ. ವಾಸಿಸುವ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವುದರಿಂದ ಕಾಯಿಲೆ ನಿಯಂತ್ರಿಸಬಹುದು ಎಂದು ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನೇತ್ರಾವತಿ ಬಿ.ಕೆ ಹೇಳಿದ್ದಾರೆ. 
 

click me!