ಗ್ಯಾರಂಟಿ ಯೋಜನೆಯಡಿ ಇದೂವರೆಗೆ ಪಾವತಿ ಮಾಡಿಕೊಂಡ ಹಣ ವಾಪಸ್ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಕ್ರಮವಹಿಸಿ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್ ಅವರಿಗೆ ಖಡಕ್ ಸೂಚನೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ(ಡಿ.22): ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯಡಿ ಮಾಸಿಕ ನೀಡಲಾಗುವ 2,000 ರು. ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕಾರಣ ಬ್ಯಾಂಕ್ ಅಧಿಕಾರಿಗಳು ಈ ಹಣವನ್ನು ಫಲಾನುಭವಿ ಸಾಲದ ವಸೂಲಾತಿಗೆ ಬಳಕೆ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಇಲ್ಲಿ ನಡೆದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಮಂಗಳವಾರ ಚಿತ್ತಾಪೂರ ತಾಲೂಕಿನ ತರಕಸಪೇಟೆ ಗ್ರಾಮಕ್ಕೆ ಭೇಟಿ ನೀಡಿದಾಗ, ಮಹಿಳೆಯೊಬ್ಬಳು ಯೋಜನೆಯಡಿ ಬಂದ 2,000 ಹಣ ನಾಲವಾರದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಗಿರೀಶ ಅವರು ಸಾಲ ವಸೂಲಾತಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದರು.
undefined
ಕಲಬುರಗಿ: ಬಾಲಕಿಯರ ಹಾಸ್ಟೆಲ್ ಬಾತ್‌ರೂಂಗೆ ಕ್ಯಾಮೆರಾ ಇಟ್ಟವನ ಸೆರೆ
ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಗ್ಯಾರಂಟಿ ಯೋಜನೆಯಡಿ ಇದೂವರೆಗೆ ಪಾವತಿ ಮಾಡಿಕೊಂಡ ಹಣ ವಾಪಸ್ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಕ್ರಮವಹಿಸಿ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್ ಅವರಿಗೆ ಖಡಕ್ ಸೂಚನೆ ನೀಡಿದರು.
ಆಗ ಮಧ್ಯೆ ಪ್ರವೇಶಿಸಿದ ಎಂ.ಎಲ್.ಸಿ. ತಿಪ್ಪಣಪ್ಪ ಕಮಕನೂರ ಮಾತನಾಡಿ, ಬರೀ ಗ್ಯಾರಂಟಿ ಹಣ ಅಷ್ಟೆ ಅಲ್ಲ. ಸರ್ಕಾರದದಿಂದ ನೀಡಲಾಗುವ ವಿವಿಧ ಪರಿಹಾರ, ರೈತರ ಆತ್ಮಹತ್ಯೆ ಪರಿಹಾರದಂತಹ ಪ್ರಕರಣದಲ್ಲಿಯೂ ಬ್ಯಾಂಕ್ ಅಧಿಕಾರಿಗಳು ಇದೇ ರೀತಿ ಸಾಲ ವಸೂಲಾತಿ ಮಾಡುತ್ತಿರುವುದು ದುರಾದೃಷ್ಠಕರ. ಇದಕ್ಕೆ ಕಡಿವಾಣ ಹಾಕಬೇಕು. ಕೇವಲ ತರಕಸಪೇಟೆ ಮಾತ್ರವಲ್ಲ ಹೆಬ್ಬಾಳ ಹಾಗೂ ಕಾಳಗಿಯಲ್ಲಿಯೂ ಕೂಡಾ ಈ ತರ ಪ್ರಕರಣ ನಡೆದಿವೆ. ಬ್ಯಾಂಕ್ ನವರು ಬಡವರು, ದಲಿತರು ಬ್ಯಾಂಕ್ ಗೆ ಬಂದರೆ ಅಮಾನವೀಯವಾಗಿ ವರ್ತಿಸುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ಆಗ್ರಹಿಸಿದರು
ಇದೇ ವಿಷಯದ ಕುರಿತು ಮಾತನಾಡಿದ ಶಾಸಕ ಬಿ.ಆರ್. ಪಾಟೀಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರ ಸಭೆ ಕರೆದು ಸರ್ಕಾರ ಆದೇಶ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು ಎಂದು ಸಲಹೆ ನೀಡಿದರು.
ಈ ವರ್ಷ ಹೆಚ್ಚಿನ ಬೆಳೆ ವಿಮೆ ಪರಿಹಾರ:
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಹಿಂದೆಲ್ಲ ಬೆಳೆ ವಿಮೆ ಪರಿಹಾರ ಲೆಕ್ಕಕ್ಕಿರಲಿಲ್ಲ. ಈ ಬಾರಿ ವಿಮಾ ಕಂಪನಿ ಅವರೊಂದಿಗೆ ಸತತ ಸಂಪರ್ಕ ಸಾಧಿಸಿ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನಿಸಲಾಗಿದೆ. ಈ ವಿಚಾರದಲ್ಲಿ ಅಧಿಕಾರಿಗಳ ಪ್ರಯತ್ನ ಶ್ಲಾಘನೀಯ ಎಂದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಗ್ರೌಂಡ್ ಟ್ರುತ್ ರಿಪೋರ್ಟ್ ಆಧಾರದ ಮೇಲೆ ಪರಿಹಾರ ನೀಲಾಗುತ್ತಿದೆ ಎಂದರು.
ಆಗ ಮಧ್ಯೆ ಪ್ರವೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಬೆಳೆ ಕಟಾವು ಪ್ರಯೋಗ ಸರಿಯಾಗಿ ಆಗಬೇಕು. ಯಾಕೆಂದರೆ, ಬೆಳೆ ಪರಿಹಾರ ಆ ಪ್ರಯೋಗದ ಮೇಲೆ ಅವಲಂಬಿಸಿದೆ. ಈ ಪ್ರಯೋಗದಲ್ಲಿ ಏನಾದರೂ ಅಸಮರ್ಥತೆ ಕಂಡುಬಂದರೆ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದ ಅವರು ಜಿಲ್ಲಾಧಿಕಾರಿಗಳು ಕೂಡಲೆ ಸಹಾಯಕ ಆಯುಕ್ತರು, ತಹಶೀಲ್ದಾರರು, ಕೃಷಿ-ತೋಟಗಾರಿಕೆ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಬೇಕು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡ ಹೊಂದುವುದು ಅವಶ್ಯಕವಾಗಿದ್ದು, ಅನುದಾನ ಬೇಕಿದ್ದರೆ ಪ್ರಸ್ತಾವನೆ ಕೊಡಿ. ಕೆ.ಕೆ.ಆರ್.ಡಿ.ಬಿ ಮಂಡಳಿಯಿಂದ ಅನುದಾನ ನೀಡಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯ ಸರ್ಕಾರ ಮತ್ತೆ ಕೃಷಿ ಹೊಂಡ ಯೋಜನೆ ಜಾರಿಗೊಳಿಸಿದೆ. ಹಿಂದೆಲ್ಲ ಅವೈಜ್ಞಾನಿಕವಾಗಿ ನಿರ್ಮಿಸಿದೆ. ಮುಂದೆಯಾದರು ವೈಜ್ಞಾನಿಕವಾಗಿ ಕೃಷಿ ಹೊಂಡ ನಿರ್ಮಿಸಿ ಎಂದು ಶಾಸಕ ಬಿ.ಆರ್. ಪಾಟೀಲ ಸಲಹೆ ನೀಡಿದರು. ಕೃಷಿ ಹೊಂಡ ನಿರ್ಮಾಣ ಸಂಬಂಧ ಆಯ್ಕೆಗೆ ಶಾಸಕರ ಅಭಿಪ್ರಾಯ ಪಡೆಯವುದು ಸೂಕ್ತ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಜಿಲ್ಲೆಯಲ್ಲಿ 2023-24ನೇ ಸಾಲಿನ ಖಾರಿಫ್ ನಲ್ಲಿ 1,00,692 ನೀರಾವರಿ ಹೆಕ್ಟೇರ್ ಪೈಕಿ 90,804 ಹೆಕ್ಟೇರ್, 7,86,322 ಮಳೆಆಶ್ರಿತ ಪ್ರದೇಶ ಪೈಕಿ 8,72,701 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅದೇ ರೀತಿ ರೇಬಿನಲ್ಲಿ 35,180 ನೀರಾವರಿ ಹೆಕ್ಟೇರ್ ಪೈಕಿ 14,818 ಹೆಕ್ಟೇರ್, 1,87,262 ಮಳೆಆಶ್ರಿತ ಪ್ರದೇಶ ಪೈಕಿ 1,50,962 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.ಖಾರೀಫ್ ನಲ್ಲಿ 1,65,854 ಜನ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, 1,91,482.49 ಹೆಕ್ಟೇರ್ ಪ್ರದೇಶ ಇದರಲ್ಲಿ ಸೇರಿಕೊಂಡಿದೆ. 2023-24ನೆ ಸಾಲಿನಲ್ಲಿ ಬೆಳೆ ವಿಮೆ ಮಾಡಿಕೊಂಡ ರೈತರ ಪೈಕಿ ಸ್ಥಳೀಯ ವಿಕೋಪ ಪರಿಹಾರದಡಿ 47,173 ದೂರು ಸಲ್ಲಿಸಿದ್ದು, 12,636 ರೈತರಿಗೆ 4.98 ಕೋಟಿ ರೂ. ಪರಿಹಾರ ನೀಡಲಾಗಿದೆ. ಕಳೆದ 2022-23ನೇ ಸಾಲಿನಲ್ಲಿ 1,38,355 ರೈತರಿಗೆ 108 ಕೋಟಿ ರೂ. ಪರಿಹಾರ ಸಿಕ್ಕಿದೆ ಎಂದರು.ಜಿಲ್ಲೆಯಲ್ಲಿ ಒಟ್ಟು 32 ರೈತ ಸಂಪರ್ಕ ಕೇಂದ್ರಗಳಿವೆ ಅವುಗಳಲ್ಲಿ 30 ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ ಬಾಕಿ ಎರಡು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 77 ಹೊರಗುತ್ತಿಗೆ ಆಧಾರದ ಹುದ್ದೆಗಳು ಖಾಲಿ ಇದ್ದು ಅವುಗಳ ಪೈಕಿ ಕೇವಲ 17 ಹುದ್ದೆಗಳು ಮಂಜೂರಾಗಿವೆ. ಇದರಿಂದಾಗಿ ಕೃಷಿ ಇಲಾಖೆಯ ಕೆಲಸಗಳಿಗೆ ಮುಖ್ಯವಾಗಿ ಬೆಳೆ ಸರ್ವೆ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದರು.
ಪಶುಸಂಗೋಪನಾ ಇಲಾಖೆಯ ಚರ್ಚೆಯಲ್ಲಿ ಕೆಎಂಎಫ್ ತನ್ನ ಬೇಡಿಕೆ ತಕ್ಕಂತೆ ಹಾಲು ಉತ್ಪಾದನೆ ಮಾಡುತ್ತಿಲ್ಲ. ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗೆ ಒಟ್ಟು 5 ಲಕ್ಷ ಲೀಟರ್ ಬೇಡಿಕೆ ಇದ್ದು 80,000 ಲೀ. ಮಾತ್ರ ಉತ್ಪಾದನೆಯಾಗುತ್ತಿದೆ. ಎಮ್ಮೆ ಹಾಲಿಗೆ ಉತ್ತೇಜನ ನೀಡುವ ಸಲುವಾಗಿ ದಿಢೀರನೆ ಲೀಟರ್ ಒಂದಕ್ಕೆ 9.20 ರೂ. ಘೋಷಿಸಿದ ಪರಿಣಾಮ 2023-24 ಸಾಲಿನಲ್ಲಿ 2 ಕೋಟಿ ರೂ. ನಷ್ಠವಾಗಿದೆ. ಒಂದು ವೇಳೆ ಲೀಟರ್ ಗೆ 3 ರೂ. ಕಡಿಮೆ ಮಾಡಿದಲ್ಲಿ ನಷ್ಟ ತಪ್ಪಿಸಬಹುದಾಗಿದೆ ಎಂದು ಕೆ.ಎಂ.ಎಫ್ ಅಧಿಕಾರಿ ರವಿಂದ್ರಕುಮಾರ ಬಿರಾದಾರ ತಿಳಿಸಿದರು.
ಕಲಬುರಗಿ: ಕೋಡ್ಲಾ ವಸತಿ ಶಾಲೆಯ 23 ವಿದ್ಯಾರ್ಥಿನಿಯರು ಅಸ್ವಸ್ಥ
ಆಗ ಮಧ್ಯೆ ಪ್ರವೇಶಿಸಿದ ಶಾಸಕ ಬಿ.ಆರ್.ಪಾಟೀಲ ಅವರು ಹೊರ ರಾಜ್ಯಗಳಿಂದ ಕಳಪೆ ಗುಣಮಟ್ಟದ ಹಾಲು ಬರುತ್ತಿದೆ. ಈ ಬಗ್ಗೆ ತಪಾಸಣೆ ಮಾಡಬೇಕು ಎಂದು ಒತ್ತಾಯಿಸಿದರು. ಆಗ ಉತ್ತರಿಸಿದ ಅಧಿಕಾರಿ ಈ ಕುರಿತು ಆಹಾರ ಸುರಕ್ಷತೆ ಅಧಿಕಾರಿಗೆ ಪತ್ರ ಬರೆದಿದ್ದರೂ ಅವರಿಂದ ಕ್ರಮವಿಲ್ಲ ಎಂದರು. ಆಗ ಕೋಪಗೊಂಡ ಸಚಿವ ಪ್ರಿಯಾಂಕ್ ಖರ್ಗೆ ಬರೀ ಪತ್ರ ಬರೆಯಲು ಮಾತ್ರ ಇದಿರಾ? ಪತ್ರ ಬರೆದರೆ ಮುಗಿತಾ? ಆ ಬಗ್ಗೆ ಮುಂದಿನ ಕ್ರಮದ ಬಗ್ಗೆ ಫಾಲೋ ಅಪ್ ಯಾರು ಮಾಡಬೇಕು? ಜಿಲ್ಲಾಧಿಕಾರಿ ಅವರೇ ಈ ಕುರಿತು ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ಸಲ್ಲ್ಲಿಸಿ, ಕಾರಣೀಕರ್ತರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಎಂ.ವೈ.ಪಾಟೀಲ, ಕನೀಜ್ ಫಾತಿಮಾ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಅಲ್ಲಮಪ್ರಭು ಪಾಟೀಲ, ಶಶೀಲ ಜಿ. ನಮೋಶಿ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನೂರ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ್, ಡಿ.ಸಿ. ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.