ಮಂಡ್ಯ : ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ನಿರ್ಧಾರ

By Kannadaprabha NewsFirst Published Nov 4, 2022, 5:37 AM IST
Highlights

ನಗರದ ಪೇಟೆ ಬೀದಿಯ ರೈಲ್ವೆ ಹಳಿ ಬಳಿ ಕೆಳಸೇತುವೆ ನಿರ್ಮಾಣ ಮಾಡುವ ಹಲವು ದಶಕಗಳ ಕನಸು ಈಗ ನನಸಾಗುವ ಸಮಯ ಹತ್ತಿರವಾಗಿದೆ. ಸುಮಾರು 9 ಅಡಿ ಆಳದಲ್ಲಿ ಕೆಳಸೇತುವೆ ನಿರ್ಮಿಸಿ ಲಘು ವಾಹನಗಳ ಸಂಚಾರಕ್ಕಷ್ಟೇ ಅನುಮತಿ ನೀಡಲು ನಿರ್ಧರಿಸಲಾಗಿದೆ. ಇದರಿಂದ ಪೇಟೆ ಬೀದಿಗೆ ತೆರಳಲು ಜನರಿಗೆ ಅಡ್ಡಿಯಾಗಿದ್ದ ಸಮಸ್ಯೆ ನಿವಾರಣೆಯಾದಂತಾಗಿದೆ.

ಮಂಡ್ಯ ಮಂಜುನಾಥ

 ಮಂಡ್ಯ (ನ.04):  ನಗರದ ಪೇಟೆ ಬೀದಿಯ ರೈಲ್ವೆ ಹಳಿ ಬಳಿ ಕೆಳಸೇತುವೆ ನಿರ್ಮಾಣ ಮಾಡುವ ಹಲವು ದಶಕಗಳ ಕನಸು ಈಗ ನನಸಾಗುವ ಸಮಯ ಹತ್ತಿರವಾಗಿದೆ. ಸುಮಾರು 9 ಅಡಿ ಆಳದಲ್ಲಿ ಕೆಳಸೇತುವೆ ನಿರ್ಮಿಸಿ ಲಘು ವಾಹನಗಳ ಸಂಚಾರಕ್ಕಷ್ಟೇ ಅನುಮತಿ ನೀಡಲು ನಿರ್ಧರಿಸಲಾಗಿದೆ. ಇದರಿಂದ ಪೇಟೆ ಬೀದಿಗೆ ತೆರಳಲು ಜನರಿಗೆ ಅಡ್ಡಿಯಾಗಿದ್ದ ಸಮಸ್ಯೆ ನಿವಾರಣೆಯಾದಂತಾಗಿದೆ.

Latest Videos

ಗುರುವಾರ ಸಂಸದೆ ಸುಮಲತಾ ಅಂಬರೀಶ್‌ (Sumalatha ) ಅವರು (Railway)  ಇಲಾಖೆ ಎಂಜಿನಿಯರ್‌ಗಳು, ಜಿಲ್ಲಾಧಿಕಾರಿ, ನಗರಸಭೆ ಹಾಗೂ ವರ್ತಕರೊಂದಿಗೆ ಸಮಾಲೋಚನೆ ನಡೆಸಿ ಪೇಟೆಬೀದಿ ಬಳಿ ರೈಲ್ವೆ ಸೇತುವೆ ನಿರ್ಮಾಣ ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಕಾಲುವೆ ನೀರನ್ನು ಪೈಪ್‌ಲೈನ್‌ ಅಳವಡಿಸಿ ಡವರಿ ಸಮಾಜದ ಹಿಂಭಾಗದ ಹಳ್ಳಕ್ಕೆ ಹರಿದುಬಿಡುವ ನಿರ್ಧಾರ ಮಾಡುವುದರೊಂದಿಗೆ ಸಮಸ್ಯೆಗೆ ಪರಿಹಾರ ಸೂಚಿಸಲಾಯಿತು. ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿ ಕೆಳ ಸೇತುವೆ ನಿರ್ಮಾಣಕ್ಕೆ ಗ್ರೀನ್‌ಸಿಗ್ನಲ್‌ ನೀಡಿದರು.

10 ಕೋಟಿ ರು. ಸರ್ಕಾರ ಮಂಜೂರು:

ಪೇಟೆ ಬೀದಿಗೆ ತೆರಳುವ ರೈಲ್ವೆ ಹಳಿ ಬಳಿ ಕೆಳಸೇತುವೆ ನಿರ್ಮಾಣಕ್ಕೆ 10 ಕೋಟಿ ರು.ಗಳನ್ನು ರೈಲ್ವೆ ಇಲಾಖೆ ಮಂಜೂರು ಮಾಡಿದೆ. 9 ಅಡಿ ಆಳದಲ್ಲಿ ಕೆಳಸೇತುವೆ ನಿರ್ಮಾಣ ಮಾಡುವುದರಿಂದ ಭಾರೀ ವಾಹನಗಳ ಸಂಚಾರ ಇಲ್ಲಿ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಲಘು ವಾಹನಗಳಿಗಷ್ಟೇ ಅವಕಾಶ ಕಲ್ಪಿಸುವುದಕ್ಕೆ ನಿರ್ಧರಿಸಲಾಗಿದೆ.

ಹಣ ಬಿಡುಗಡೆಯಾಗಿ ಮೂರು ವರ್ಷವಾದರೂ ಟೆಂಡರ್‌ ಆಗಿ ಮೂರು ತಿಂಗಳು ಕಳೆದರೂ ಕೆಳಸೇತುವೆ ನಿರ್ಮಾಣ ಮಾತ್ರ ನೆನೆಗುದಿಗೆ ಬಿದ್ದಿತ್ತು. ಇದರ ಬಗ್ಗೆ ವರ್ತಕರ ಸಂಘದ ಅಧ್ಯಕ್ಷ ಪ್ರಭಾಕರ್‌ ಅವರು ನಗರಸಭೆ, ಜಿಲ್ಲಾಡಳಿತ, ರೈಲ್ವೆ ಎಂಜಿನಿಯರ್‌ಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದುಕೊಂಡು ಸೇತುವೆ ನಿರ್ಮಾಣಕ್ಕೆ ಚಾಲನೆ ಕೊಡಿಸಲು ಶತಪ್ರಯತ್ನ ನಡೆಸಿದ್ದರು.

ಕಾಲುವೆ ನೀರಿನ ಸಮಸ್ಯೆಗೆ ಪರಿಹಾರ:

ರೈಲ್ವೆ ಕೆಳಸೇತುವೆ ನಿರ್ಮಾಣ ಮಾಡುವುದರಿಂದ ಮೇಲ್ಭಾಗದಲ್ಲಿರುವ ಕಾಲುವೆಯ ನೀರು ಭಾರೀ ಮಳೆಬಿದ್ದ ಸಮಯದಲ್ಲಿ ಸೇತುವೆ ಕೆಳಭಾಗಕ್ಕೆ ಹರಿದುಬರುವ ಆತಂಕವಿದ್ದ ಕಾರಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕಿದ್ದರು. ಈ ನೀರನ್ನು ಎಲ್ಲಿಗೆ ಸಂಪರ್ಕ ಕಲ್ಪಿಸಬೇಕೆಂಬ ಬಗ್ಗೆ ಗೊಂದಲ ಉಂಟಾಗಿತ್ತು.

ಕಾಲುವೆಯ ನೀರನ್ನು ಪೈಪ್‌ಲೈನ್‌ ಅಳವಡಿಸಿ ಸಂಗಪ್ಪನ ಛತ್ರ, ಜಬ್ಬರ್‌ ಸರ್ಕಲ್‌ ಮಾರ್ಗವಾಗಿ ಮೂಲಕ ಡವರಿ ಸಮಾಜದ ಬಳಿ ಇರುವ ಹಳ್ಳಕ್ಕೆ ಬಿಡುವುದರಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಸಲಹೆ ಬಂತು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ನಗರಸಭೆಯಿಂದ ಈ ಪೈಪ್‌ಲೈನ್‌ ಕಾಮಗಾರಿ ನಡೆಸಲಾಗುವುದು. ಇದರ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸಲಿದೆ ಎಂದು ತಿಳಿದುಬಂದಿದೆ.

ಗೊಂದಲಗಳಿಗೆ ತೆರೆ:

ಪೇಟೆ ಬೀದಿಯ ರೈಲ್ವೆ ಹಳಿ ಬಳಿ ಮೇಲ್ಸೇತುವೆ ನಿರ್ಮಾಣ ಮಾಡುವರೆಂಬ ವದಂತಿಗಳು ಹರಡಿ ಗೊಂದಲ ಸೃಷ್ಟಿಯಾಗಿತ್ತು. ಅಲ್ಲಿ ಮೇಲ್ಸೇತುವೆ ನಿರ್ಮಿಸುವುದು ಸಾಧ್ಯವಾಗದ ಮಾತು. ಮೇಲ್ಸೇತುವೆ ನಿರ್ಮಿಸಿದರೆ 50 ಕೋಟಿ ರು.ವರೆಗೆ ಹಣ ಖರ್ಚಾಗಲಿತ್ತು. ಹಾಗಾಗಿ ಕೆಳಸೇತುವೆ ನಿರ್ಮಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ರೈಲ್ವೆ ಇಲಾಖೆಯವರು ಬಂದು ಯೋಜನೆಯ ನಕಾಶೆ ತಯಾರಿಸಿದ್ದರು. ಕೊನೆಗೆ ಅದಕ್ಕೆ ಅನುಮತಿ ದೊರಕಿದ್ದು, ವರ್ತಕರ ಹೋರಾಟಕ್ಕೆ ಇದೀಗ ಜಯ ದೊರಕಿದಂತಾಗಿದೆ.

ದಶಕಗಳಿಂದ ಶತ ಪ್ರಯತ್ನ:

ಪೇಟೆಬೀದಿಗೆ ಸುಗಮವಾಗಿ ತೆರಳುವುದಕ್ಕೆ ಅಡ್ಡಿಯಾಗಿರುವುದೇ ರೈಲ್ವೆ ಹಳಿ. ದಶಕಗಳಿಂದ ಈ ಸಮಸ್ಯೆಗೆ ಮುಕ್ತಿಯೇ ದೊರಕಿರಲಿಲ್ಲ. ರೈಲುಗಳು ಹಾದುಹೋಗುವಾಗಲೆಲ್ಲಾ ಗೇಟುಗಳ ಬಳಿ ವಾಹನಗಳು, ಪ್ರಯಾಣಿಕರು ಕಾದು ನಿಲ್ಲುವುದು ಅನಿವಾರ್ಯವಾಗಿತ್ತು. ಇದರಿಂದ ಪಾರಾಗುವುದಕ್ಕೆ ಮಾರ್ಗವೇ ಕಾಣದೆ ಪರಿತಪಿಸುತ್ತಿದ್ದರು.

ವರ್ತಕರ ಸಂಘದವರು ಈ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿದರು. ಜನಪ್ರತಿನಿಧಿಗಳು, ಜಿಲ್ಲಾಡಳಿತ, ರೈಲ್ವೆ ಇಲಾಖೆಯೊಂದಿಗೆ ನಿರಂತರವಾಗಿ ರೈಲ್ವೆ ಹಳಿಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮನವರಿಕೆ ಮಾಡುತ್ತಲೇ ಇದ್ದರು. ರೈಲ್ವೆ ಹಳಿ ಬಳಿ ಸುಗಮ ಸಂಚಾರಕ್ಕೆ ಹಲವಾರು ನಕಾಶೆ ತಯಾರಿಸಿದರೂ ಯಾವುದಕ್ಕೂ ಒಪ್ಪಿಗೆ ಸಿಕ್ಕಿರಲಿಲ್ಲ. ಕೆಳಸೇತುವೆ ನಿರ್ಮಿಸುವುದೋ, ಮೇಲ್ಸೇತುವೆ ನಿರ್ಮಿಸುವುದೋ ಎಂಬ ಗೊಂದಲ ಶುರುವಾಗಿತ್ತು. ರೈಲ್ವೆ ಇಲಾಖೆಯಲ್ಲಿ ಇಂಜಿನಿಯರ್‌ಗಳು ಬದಲಾಗುತ್ತಿದ್ದರೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿತ್ತು. ಇದೀಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಕೆಳಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ.

---------

ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದ ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ. ಕೊನೆಗೂ ಪೇಟೆಬೀದಿಯ ರೈಲ್ವೆ ಹಳಿ ಬಳಿ ಕೆಳಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಗ್ರೀನ್‌ಸಿಗ್ನಲ್‌ ನೀಡಿದೆ. 9 ಅಡಿ ಆಳದಲ್ಲಿ ಸೇತುವೆ ನಿರ್ಮಿಸಲಾಗುತ್ತಿದ್ದು, ಲಘು ವಾಹನಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕೆಳಸೇತುವೆ ನಿರ್ಮಾಣಕ್ಕೆ ಸಹಕರಿಸಿದ ಸಂಸದೆ ಸುಮಲತಾ, ಜಿಲ್ಲಾಡಳಿತ, ರೈಲ್ವೆ ಇಲಾಖೆಗೆ ಅಭಿನಂದನೆಗಳು.

- ಕೆ.ಪ್ರಭಾಕರ್‌, ಅಧ್ಯಕ್ಷರು, ವರ್ತಕರ ಸಂಘ

click me!