ಆಸ್ತಿಗಾಗಿ 2ನೇ ಗಂಡನಿಗೆ ಇಟ್ಲು ಮುಹೂರ್ತ: ತೆಲಂಗಾಣದಲ್ಲಿ ಹತ್ಯೆ ಮಾಡಿ ಕೊಡಗಿನಲ್ಲಿ ಸುಟ್ಟುಹಾಕಿದ್ದ ಸುಪನಾತಿ

By Govindaraj S  |  First Published Oct 26, 2024, 11:32 PM IST

ಆಕೆ ತಾನು ಮಾಡುವ ಸ್ಟೈಲಿನಿಂದಲೇ ಎಲ್ಲರನ್ನು ಸೆಳೆದು ಬಿಡುತ್ತಿದ್ದಳು. ನಂತರ ಪ್ರೀತಿ ಪ್ರೇಮ ಪ್ರಣಯ ಅಂತ ಬುಟ್ಟಿಗೆ ಹಾಕಿಕೊಂಡು ಕೊನೆಗೆ ಮದುವೆಯೂ ಆಗುತ್ತಿದ್ದಳು. ಆ ನಂತರದ ಸೀನೇ ಗಂಡನಿಗೆ ಮುಹೂರ್ತ ಇಡುವುದು. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಅ.26): ಆಕೆ ತಾನು ಮಾಡುವ ಸ್ಟೈಲಿನಿಂದಲೇ ಎಲ್ಲರನ್ನು ಸೆಳೆದು ಬಿಡುತ್ತಿದ್ದಳು. ನಂತರ ಪ್ರೀತಿ ಪ್ರೇಮ ಪ್ರಣಯ ಅಂತ ಬುಟ್ಟಿಗೆ ಹಾಕಿಕೊಂಡು ಕೊನೆಗೆ ಮದುವೆಯೂ ಆಗುತ್ತಿದ್ದಳು. ಆ ನಂತರದ ಸೀನೇ ಗಂಡನಿಗೆ ಮುಹೂರ್ತ ಇಡುವುದು. ಹಾಗೆ ಎರಡನೇ ಗಂಡನಿಗೆ ಮುಹೂರ್ತ ಇಟ್ಟು ಮೂರು, ನಾಲ್ಕನೆಯ ಪ್ರಿಯಕರರೊಂದಿಗೆ ಬಣ್ಣದ ಚಿಟ್ಟೆಯಾಗಿ ಹಾರುತ್ತಿದ್ದವಳು ಈಗ ಕೊಡಗು ಪೊಲೀಸರ ಅಥಿತಿಯಾಗಿ ಕಂಬಿ ಹಿಂದೆ ಮುದ್ದೆ ಮುರಿಯುತ್ತಿದ್ದಾಳೆ. ಅಕ್ಟೋಬರ್ 8, ಮಟಮಟ ಮಧ್ಯಾಹ್ನ. ಕೊಡಗು ಜಿಲ್ಲೆಯ ಕಾಫಿ ತೋಟದ ಒಳಗೆ ಯಾರದ್ದೋ ದೇಹ ಸುಟ್ಟು ಕರಕಲಾಗಿರುವ ಭಯಾನಕ ಘಟನೆ ಬೆಳಕಿಗೆ ಬಂದಿತ್ತು. ಈ ವಿಷಯ ಕೇಳಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ವಿಷಯ ತಿಳಿಯುತ್ತಲೇ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದರು. 

Tap to resize

Latest Videos

undefined

ಹೌದು ಸುಂಟಿಕೊಪ್ಪದಿಂದ ಮಾದಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಿಂದ ಅನತಿ ದೂರದಲ್ಲಿಯೇ ಇದ್ದ ಸಂದೇಶ್ ಎಂಬುವರ ತೋಟದಲ್ಲಿ ಮಾನವನ ದೇಹವೊಂದನ್ನು ಸುಟ್ಟು ಹಾಕಲಾಗಿತ್ತು. ಘಟನೆ ಸಂಬಂಧ ತೋಟದ ಮಾಲೀಕರು ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಸ್ಥಳಕ್ಕೆ ಬಂದಿದ್ದ ಪೊಲೀಸರಿಗೆ ದೊರೆತ್ತಿದ್ದು ಬಹುತೇಕ ಸುಟ್ಟು ಕರಕಲಾಗಿ, ಒಂದೇ ಒಂದು ಕಾಲಿನ ಒಂದು ತುಂಡು ಮಾತ್ರ. ತಕ್ಷಣಕ್ಕೆ ಪ್ರಕರಣ ದಾಖಲಿಸಿಕೊಂಡ ಸುಂಟಿಕೊಪ್ಪ ಪೊಲೀಸರಿಗೆ ಪ್ರಕರಣ ಭೇದಿಸುವುದಕ್ಕೆ ಯಾವುದೇ ಸಾಕ್ಷ್ಯ, ಸುಳಿವುಗಳೇ ಇರಲಿಲ್ಲ. ಆದರೆ ಪೊಲೀಸರು ಮಾತ್ರ ಪ್ರಕರಣದ ಕಿಡಿಗೇಡಿಗಳ ಬೆನ್ನು ಬಿದ್ದಿದ್ದರು. ಯಾವುದೇ ಸುಳಿವೇ ಇಲ್ಲದ ಪ್ರಕರಣವನ್ನು ಭೇದಿಸಲು ಹೊರಟಿದ್ದ ಕೊಡಗು ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾಗಳೇ ಸುಳಿವು ನೀಡಿದ್ದವು. 

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ: ಸ್ಟಾರ್‌ವಾರ್ ಮಾತ್ರವಲ್ಲ ಕುಟುಂಬ ಕದನಕ್ಕೂ ಸಿದ್ಧ!

ಮಧ್ಯರಾತ್ರಿ ನಡೆದಿದ್ದ ಪ್ರಕರಣದಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ಕಾರಿನ ಬಣ್ಣವೇ ಪೊಲೀಸರಿಗೆ ದೊಡ್ಡ ಸಾಕ್ಷಿಯಾಗಿತ್ತು. ಅದರ ಜಾಡು ಹಿಡಿದು ಹೊರಟ ಪೊಲೀಸರು ಕೊಡಗಿನಿಂದ ತುಮಕೂರಿನ ಬೆಳ್ಳೂರು ಕ್ರಾಸ್ ವರೆಗೆ ಬರೋಬ್ಬರಿ 500 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅಂತು ಕೊನೆಗೂ ಬೆಳ್ಳೂರು ಕ್ರಾಸ್ ಬಳಿ ಅದೇ ಕೆಂಪು ಕಾರಿನ ನಂಬರ್ ಕೂಡ ದೊರೆತಿತ್ತು. ಆ ಕಾರಿನ ನಂಬರ್ ಪಡೆದ ಪೊಲೀಸರು ಮುಂದುವರೆದು ಹುಡುಕಾಡುತ್ತಾ ಹೊರಟಾಗ ಅದೊಂದು ಸರ್ವೀಸ್ ಸ್ಟೇಷನ್ನಲ್ಲಿ ಇರುವುದು ಗೊತ್ತಾಗಿತ್ತು. ಅಲ್ಲಿಗೆ ಹೋಗಿ ಸರ್ವೀಸ್ ಗೆ ಬಿಟ್ಟವರು ಯಾರೆಂದು ಕೇಳಿದಾಗ ಹತ್ಯೆಯ ಸುಳಿವು ಬಿಚ್ಚಿಕೊಂಡಿತ್ತು. ಕಾರನ್ನು ಸರ್ವೀಸ್ಗೆ ಬಿಟ್ಟವರೇ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ಕೊಡಗಿಗೆ ತಂದು ಸುಟ್ಟು ಹಾಕಿದ್ದರು ಎನ್ನುವ ಭಯಾನಕ ಸತ್ಯ ಬೆಳಕಿಗೆ ಬಂದಿತ್ತು. 

ತೆಲಂಗಾಣ ರಾಜ್ಯದ ನಿಹಾರಿಕಾ, ಬೆಂಗಳೂರಿನ ಪಶುವೈದ್ಯ ನಿಖಿಲ್ ಹಾಗೂ ಹರಿಯಾಣ ರಾಜ್ಯದ ಅಂಕುರ್ ಠಾಕೂರ್ ಮೂವರು ಸೇರಿ ಹತ್ಯೆ ಮಾಡಿ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ತೆಲಂಗಾಣದವರು ಕೊಡಗಿನಲ್ಲಿ ಯಾರನ್ನು ಸುಟ್ಟು ಹಾಕಿದ್ದರು ಎನ್ನುವುದೇ ಅಚ್ಚರಿಯ ಸಂಗತಿ. ಒಟ್ಟಿನಲ್ಲಿ ಸುಂಟಿಕೊಪ್ಪ ಸಮೀಪದ ಕಾಫಿ ತೋಟವೊಂದರಲ್ಲಿ ವ್ಯಕ್ತಿಯನ್ನು ಸುಟ್ಟು ಹಾಕಿದ್ದವರಲ್ಲಿ ಇಬ್ಬರನ್ನು ಹೆಡೆಮುರಿ ಕಟ್ಟಿ ತಂದು ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಿಸಿದಾಗಲೇ ಪಾಪಿಗಳು ಸತ್ಯ ಕಕ್ಕಿದ್ದರು. ನಿಹಾರಿಕ ಕಟ್ಟಿಕೊಂಡ ಎರಡನೇ ಗಂಡನಿಗೆ ಮುಹೂರ್ತ ಇಟ್ಟು ಈಗ ಕೊಡಗಿನ ಪೊಲೀಸರ ಅಥಿತಿಯಾಗಿರುವವಳು. ಮೂಲತಃ ತೆಲಂಗಾಣ ರಾಜ್ಯದ ಯಾಯತಿ ಜಿಲ್ಲೆಯವಳಾದ ನಿಹಾರಿಕಾಗೆ 10 ನೇ ತರಗತಿಯಲ್ಲಿರುವಾಗಲೇ ಮದುವೆ ಆಗಿಬಿಟ್ಟಿತ್ತು. 

ಗಂಡ ಸಿವಿಲ್ ಇಂಜಿನಿಯರ್ ಆಗಿದ್ದ. ಕೆಲವೇ ವರ್ಷಗಳಲ್ಲಿ ಮುದ್ದಾದ ಎರಡು ಮಕ್ಕಳಾಗಿದ್ದವು. ಆದರೆ ಅದೇನು ಆಯ್ತೋ ಏನೋ, ಮೊದಲ ಗಂಡನಿಗೆ ಡೈವೋರ್ಸ್ ನೀಡಿದ್ಲು. ಮೊದಲ ಗಂಡನಿಗೆ ಡೈವೋರ್ಸ್ ಕೊಟ್ಟು ಹೇಗೋ ಮತ್ತೆ ಕಾಲೇಜು ಶಿಕ್ಷಣ ಮುಗಿಸಿ ಬಿ. ಟೆಕ್ ಪದವಿಯನ್ನೂ ಪೂರೈಸಿದ್ದಳು. ವಿಪ್ರೋ ಸೇರಿದಂತೆ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಲಕ್ಷಗಟ್ಟಲೆ ಸಂಬಳ ಪಡೆದು ಕೆಲಸ ಮಾಡುತ್ತಾ ರಿಯಲ್ ಎಸ್ಟೇಟ್ ಉದ್ಯಮಿ 54 ವರ್ಷದ ರಮೇಶ್ ಎಂಬಾತನ ಮದುವೆಯಾಗಿದ್ದಳು. ಇವಳ ಆಟ ಇಷ್ಟಕ್ಕೆ ನಿಲ್ಲಲ್ಲರೀ, ಮೊದಲನೇ ಗಂಡನಿಗೆ ಡಿವೋರ್ಸ್ ನೀಡಿದ್ದ ಇವಳು, ಎರಡನೇ ಗಂಡನ್ನೂ ಬಿಟ್ಟು ಅದ್ಹೇಗೋ ಹರಿಯಾಣಕ್ಕೆ ಹಾರಿದ್ದಳು. ಹರಿಯಾಣಕ್ಕೆ ಹೋಗಿದ್ದ ಇವಳು ಅಲ್ಲಿಯೂ ಒಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಜೈಲು ಹಕ್ಕಿ ಆಗಿದ್ದಳು. ಅಲ್ಲಿ ಪರಿಚಯವಾದವನೇ ಅಂಕುರ್ ಠಾಕೂರ್. 

ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಜೈಲು ಸೇರಿದ್ದ ಐನಾತಿ, ಜೈಲಿನಲ್ಲಿ ಪರಿಚಯವಾಗಿದ್ದ ಒಬ್ಬಾಕೆಯ ಮಗ ಅಂಕುರ್ ಠಾಕೂರ್ ಎಂಬಾತನನ್ನು ಬುಟ್ಟಿಗೆ ಹಾಕಿಕೊಂಡಿದ್ದಳು. ನಂತರ ಆತನೊಂದಿಗೆ ಬೆಂಗಳೂರಿಗೆ ಬಂದು ನೆಲಸಿದ್ದ ಇವಳು ಇದರ ನಡುವೆ ಬೆಂಗಳೂರಿನಲ್ಲಿ ಪಶುವೈದ್ಯನೊಬ್ಬನೊಂದಿಗೆ ಲವ್ವಿಡವ್ವಿ ಶುರು ಮಾಡಿಕೊಂಡಿದ್ದಳು. ನಂತರ ಕಟ್ಟಿಕೊಂಡ ಗಂಡ ರಮೇಶನಿಗೆ ಮುಹೂರ್ತ ಇಟ್ಟಿದ್ದಳು. ಮೊದಲನೇ ಗಂಡನಿಗೆ ಡಿವೋರ್ಸ್ ಕೊಟ್ಟು ಎರಡನೆಯವನನ್ನು ಮದುವೆಯಾಗಿದ್ದ ಇವಳು ಆತನ ಆಸ್ತಿ ಮೇಲೆ ಕಣ್ಣಿಟ್ಟಿದ್ದಳು. ತನ್ನ ಗಂಡ ರಮೇಶನಿಗೆ ಒತ್ತಡ ಹಾಕಿ ಮೂರು ಎಕರೆ ಜಾಗವನ್ನು ಜಿಪಿಎಸ್ ಮಾಡಿಸಿಕೊಂಡಿದ್ದಳು. ಜೈಲಿನಿಂದ ಹೊರಗೆ ಬಂದಿದ್ದ ಇವಳು ಹರಿಯಾಣದ ಅಂಕುರ್ ಠಾಕೂರ್ ನೊಂದಿಗೆ ಬೆಂಗಳೂರಿಗೆ ಬಂದು ನೆಲಸಿದ್ದಳು. 

ಇಲ್ಲಿಯೂ ಸರಿಯಾಗಿ ಸಂಸಾರ ಮಾಡದ ಇವಳು ಬೆಂಗಳೂರಿನಲ್ಲಿ ಪಶುವೈದ್ಯ ನಿಖಿಲ್ ಎಂಬಾತನಿಗೆ ಬಲೆ ಬೀಸಿ ಅವನನ್ನು ತನ್ನ ಕೈವಶ ಮಾಡಿಕೊಂಡಿದ್ದಳು. ಒಟ್ಟಿನಲ್ಲಿ ಈಕೆ ಪರಮ ಪಾಂಚಾಲಿ ಎಂದರೆ ತಪ್ಪಲ್ಲರಿ. ಹೀಗೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಐವರ ಬದುಕಿನಲ್ಲಿ ಆಟವಾಡುತ್ತಿದ್ದ ಇವಳು ಹರಿಯಾಣದ ಅಂಕುರ್ ಠಾಕೂರ್ ನೊಂದಿಗೆ ಸೇರಿ ತನ್ನ ಗಂಡ ರಮೇಶ್ ನಿಗೆ ಹಣ, ಆಸ್ತಿ ಕೊಡುವಂತೆ ಇನ್ನಿಲ್ಲದ ಕಾಟ ಕೊಡುತ್ತಿದ್ದಳು. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ರಮೇಶ್ ಕ್ಯಾರೇ ಎಂದಿರಲಿಲ್ಲ. ಕೊನೆಗೂ ನಿನ್ನೊಂದಿಗೆ ಮಾತನಾಡಬೇಕು ಎಂದು ಹೈದರಾಬಾದಿನ ಒಂದು ಜಾಗಕ್ಕೆ ಕರೆಸಿಕೊಂಡಿದ್ದ ಅಂಕುರ್ ಮತ್ತು ನಿಹಾರಿಕಾ ರಮೇಶನ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದರು. ಮೃತದೇಹವನ್ನು ಅಲ್ಲಿಯೇ ಬಿಟ್ಟು ರಮೇಶ್ ತಂದಿದ್ದ ಕಾರಿನಲ್ಲಿಯೇ ರಮೇಶ್ ಅಪಾರ್ಟ್ಮೆಂಟಿಗೆ ಹೋಗಿ ಆತನ ಮನೆಯಲ್ಲಿದ್ದ ಹಣ, ಆಸ್ತಿ ಪತ್ರಗಳನ್ನೆಲ್ಲಾ ದೋಚಿದ್ದರು. 

ಪುನಃ ಶವದ ಬಳಿಗೆ ಬಂದು, ಅರ್ಧ ಗಂಟೆ ಶವದ ಬಳಿಯೇ ಕುಳಿತು ಇದನ್ನು ಎಲ್ಲಿ ಡಿಸ್ಪೋಸ್ ಮಾಡಬೇಕು. ಹೇಗೆ ಡಿಸ್ಪೋಸ್ ಮಾಡಬೇಕು ಎಂದು ಪ್ಲಾನ್ ಮಾಡಿದ್ದರು. ಕೂಡಲೇ ಬೆಂಗಳೂರಿನಲ್ಲಿ ಇದ್ದ ಪಶುವೈದ್ಯ ನಿಖಿಲ್ ಗೆ ಫೋನ್ ಮಾಡಿ ಹತ್ಯೆ ಮಾಡಿರುವ ವಿಷಯವನ್ನು ತಿಳಿಸಿದ್ದಾರೆ. ಆಗ ಪಶುವೈದ್ಯ ನಿಖಿಲ್ ಕೂಡ ಒಂದು ಪ್ಲಾನ್ ಮಾಡಿದ್ದ. ಆತನ ಪ್ಲಾನಿನ ಪ್ರಕಾರ ಶವವನ್ನು ಕೊಡಗಿಗೆ ತಂದು ಸುಟ್ಟು ಹಾಕುವುದಕ್ಕೆ ಅಂತಿಮ ಪ್ಲಾನ್ ರೆಡಿಯಾಗಿತ್ತು. ಪ್ಲಾನ್ ಮಾಡಿದವನೇ ನಿಖಿಲ್ ತಾನೇ ಹೋಗಿ ಪೆಟ್ರೋಲ್ ಬಂಕಿನಿಂದ ಪೆಟ್ರೋಲ್ ತಂದಿದ್ದ. 

ಹೈದರಾಬಾದಿನಿಂದ ಬೆಂಗಳೂರಿಗೆ ರಮೇಶನ ಕಾರಿನಲ್ಲೇ ಶವ ತಂದಿದ್ದ ಅಂಕುರ್ ಮತ್ತು ನಿಹಾರಿಕಾ ಇಡೀ ದಿನ ಬೆಂಗಳೂರಿನಲ್ಲಿ ರೆಸ್ಟ್ ಮಾಡಿದ್ದರು. ಅಂದು ರಾತ್ರಿಯೇ ಬೆಂಗಳೂರಿನಿಂದ ಕೊಡಗಿನತ್ತ ಪ್ರಯಾಣ ಆರಂಭಿಸಿದ್ದ ಇವರು ಮಧ್ಯರಾತ್ರಿ ಸುಂಟಿಕೊಪ್ಪದಿಂದ ಮಾದಾಪುರ ರಸ್ತೆಯಲ್ಲಿ 8 ಕಿಲೋ ಮೀಟರ್ ಸಾಗಿ ಅಲ್ಲಿ ಸಂದೇಶ್ ಎಂಬುವರ ಕಾಫಿ ತೋಟದಲ್ಲಿ ರಮೇಶನ ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಕಾರ್ಗತ್ತಲ ಮಧ್ಯರಾತ್ರಿಯಲ್ಲಿ ಶವ ತಂದು ಸುಟ್ಟಿದ್ದ ಇವರ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಯಾವಾಗ ಕಾರಿನ ನಂಬರ್ ಗೊತ್ತಾಗಿತ್ತೋ ಆಗ ಕೊಡಗು ಪೊಲೀಸರು ತಮ್ಮ ಹುಡುಕಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದರು. ಆಗಲೇ ನೋಡಿ ತಗಲಾಕಿಕೊಂಡಿದ್ದು ಈ ಚಾಲಕಿ ನಿಹಾರಿಕಾ ಹಾಗೂ ಪಶುವೈದ್ಯ ನಿಖಿಲ್. 

ಭಗೀರಥ ಅಂತ ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ: ಯೋಗೇಶ್ವರ್‌ಗೆ ಡಿವಿಎಸ್ ಸವಾಲು

ಇಬ್ಬರನ್ನು ಎತ್ತಾಕಿಕೊಂಡು ಬಂದು ತಮ್ಮದೇ ಭಾಷೆಯಲ್ಲಿ ವಿಚಾರಣೆ ಮಾಡುತ್ತಿದ್ದಂತೆ ಸತ್ಯ ಬಯಲಾಗಿದೆ. ಆದರೆ ಹತ್ಯೆ ಮಾಡಿದ್ದ ಅಂಕುರ್ ಠಾಕೂರ್ ಮಾತ್ರ ಎಲ್ಲವೂ ಮುಗಿಯುವವರೆಗೆ ಇತ್ತ ತಲೆ ಹಾಕುವುದೇ ಬೇಡ ಎಂದು ಹರಿಯಾಣಕ್ಕೆ ಹಾರಿಬಿಟ್ಟಿದ್ದ. ಅಲ್ಲಿಂದ ದೆಹಲಿಗೆ ಹೋಗಿದ್ದ. ಸಾಮಾನ್ಯ ಜನರಂತೆ ಬಟ್ಟೆ ಬ್ಯಾಗು ಹಿಡಿದು ಐದಾರು ದಿನ ಅಲೆದಿದ್ದ ಕೊಡಗಿನ ಪೊಲೀಸರು ಕೊನೆಗೂ ದೆಹಲಿಯ ಡಾಬಾ ಒಂದರಲ್ಲಿ ಊಟ ಮಾಡಲು ಕುಳಿತಿದ್ದ ಅಂಕುರ್ ನನ್ನು ಅಲ್ಲಿನ ಪೊಲೀಸರ ಸಹಾಯದೊಂದಿಗೆ ಹೆಡೆಮುರಿ ಕಟ್ಟಿದ್ದರು. ನನ್ನನ್ನು ಯಾಕೆ ಬಂಧಿಸುತ್ತಿದ್ದೀರಾ ಬಿಡಿ ಎಂದವನಿಗೆ ನಾವು ಕರ್ನಾಟಕ ಪೊಲೀಸ್. ನಿನ್ನ ಆಟ ಇನ್ನು ನಡೆಯುವುದಿಲ್ಲ ಬಾ ಎಂದು ಕೋಳ ತೊಡಿಸಿ ಕರೆತಂದಿದ್ದಾರೆ. ಒಟ್ಟಿನಲ್ಲಿ ಪಾತರಗಿತ್ತಿಯಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾರುತ್ತಿದ್ದ ಸುಪನಾತಿಯ ಐನಾತಿ ಆಟಕ್ಕೆ ಕೊನೆಗೂ ಕೊಡಗು ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

click me!