ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸೇವೆ ನೀಡುವ ಬಸ್ ಸೇರಿದಂತೆ ಇನ್ನಿತರ ಖಾಸಗಿ ವಾಹನಗಳಲ್ಲಿ ಪಟಾಕಿ ಸಾಗಣೆ ಮಾಡದಂತೆಯೂ ಅಧಿಕಾರಿಗಳು ಸೂಚಿಸಿದರು. ಒಂದು ವೇಳೆ ಪಟಾಕಿ ಸಾಗಿಸುತ್ತಿರುವುದು ಕಂಡು ಬಂದರೆ ಅಂತಹವರ ವಿರುದ್ಧ ದಂಡ ಸೇರಿದಂತೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಾರಿಗೆ ಇಲಾಕೆ ಅಧಿಕಾರಿಗಳು
ಬೆಂಗಳೂರು(ಅ.27): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ಟಿಕೆಟ್ ದರ ಹೆಚ್ಚಳ ಮಾಡಿದರೆ ಈ ಬಾರಿ ಪರ್ಮಿಟ್, ನೋಂದಣಿ ಪತ್ರ ರದ್ದು ಸೇರಿದಂತೆ ಮತ್ತಿತರ ಕ್ರಮ ಕೈಗೊಳ್ಳುವುದಾಗಿ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಶಾಂತಿನಗರದಲ್ಲಿನ ಸಾರಿಗೆ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿದ ಸಾರಿಗೆ ಅಧಿಕಾರಿಗಳು, ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ಬೇಕಾಬಿಟ್ಟಿಯಾಗಿ ಟಿಕೆಟ್ ದರ ಹೆಚ್ಚಳ ಮಾಡಿ ಸಾರ್ವಜನಿಕರ ಮೇಲೆ ಹೊರೆ ಹಾಕುತ್ತಿದ್ದೀರಿ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಎರಡರಿಂದ ಮೂರು ಪಟ್ಟು ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡುವುದು ಕಂಡುಬಂದರೆ ಬಸ್‌ಗಳ ರಹದಾರಿ ಮತ್ತು ನೋಂದಣಿ ಪತ್ರ ಅಮಾನತು ಮಾಡಲಾಗುವುದು. ಅದರ ಜತೆಗೆ ಟಿಕೆಟ್ ವಿತರಕ (ಟಿಕೆಟ್ ಬುಕ್ಕಿಂಗ್ ಆ್ಯಪ್)ರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
undefined
ಹಬ್ಬದ ವೇಳೆ ಬೇಕಾಬಿಟ್ಟಿ ಪ್ರಯಾಣ ದರ ಹೆಚ್ಚಳ: ಖಾಸಗಿ ಬಸ್ ಪರ್ಮಿಟ್ ರದ್ದು..!
ಅಧಿಕಾರಿಗಳ ಈ ಎಚ್ಚರಿಕೆಗೆ ಬಗ್ಗದ ಖಾಸಗಿ ಬಸ್ ಮಾಲೀಕರು, ಖಾಸಗಿ ಬಸ್‌ಗಳ ದರ ನಿಗದಿ ಮಾಡುವ ಅಧಿಕಾರ ಸಾರಿಗೆ ಇಲಾಖೆಗಿಲ್ಲ. ಅಲ್ಲದೆ, ಇದು ಯಾವ ನಿಯಮದ ಅಡಿಯಲ್ಲೂ ಬರುವುದಿಲ್ಲ. ಹೀಗಾಗಿ ಇಂತಿಷ್ಟೇ ಪ್ರಯಾಣ ದರ ಪಡೆಯಬೇಕು ಎಂಬುದನ್ನು ಇಲಾಖೆ ನಿರ್ಧರಿಸುವ ಹಾಗಿಲ್ಲ. ಜತೆಗೆ ಖಾಸಗಿ ಬಸ್‌ಗಳು ಪ್ರಯಾಣಿಕರಿಗೆ ಹೊರೆಯಾಗದಂತೆಯೇ ಪ್ರಯಾಣ ದರ ವಸೂಲಿ ಮಾಡುತ್ತಿವೆ ಎಂದು ತಿಳಿಸಿದರು.
ಅದನ್ನೊಪ್ಪದ ಸಾರಿಗೆ ಇಲಾಖೆ ಅಧಿಕಾರಿಗಳು, ಸಾರಿಗೆ ಇಲಾಖೆಗೆ ಖಾಸಗಿ ಬಸ್‌ಗಳನ್ನು ನಿಯಂತ್ರಿಸುವ ಅಧಿಕಾರವಿದೆ. ಅಲ್ಲದೆ, ಜನರಿಗೆ ಸಮಸ್ಯೆಯಾಗುವಂತೆ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸೂಚಿದರು.
ಅದರ ಜತೆಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸೇವೆ ನೀಡುವ ಬಸ್ ಸೇರಿದಂತೆ ಇನ್ನಿತರ ಖಾಸಗಿ ವಾಹನಗಳಲ್ಲಿ ಪಟಾಕಿ ಸಾಗಣೆ ಮಾಡದಂತೆಯೂ ಅಧಿಕಾರಿಗಳು ಸೂಚಿಸಿದರು. ಒಂದು ವೇಳೆ ಪಟಾಕಿ ಸಾಗಿಸುತ್ತಿರುವುದು ಕಂಡು ಬಂದರೆ ಅಂತಹವರ ವಿರುದ್ಧ ದಂಡ ಸೇರಿದಂತೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಪ್ರವರ್ತನ) ಸಿ.ಮಲ್ಲಿಕಾರ್ಜುನ್, ಖಾಸಗಿ ಸಾರಿಗೆ ಸಂಘಟನೆ ಮುಖಂಡ ನಟರಾಜ್ ಶರ್ಮಾ ಸೇರಿದಂತೆ ಇತರರಿದ್ದರು.
ಹೆಚ್ಚಿನ ದರ ಪಡೆದರೆ ದೂರು ನೀಡಿ
ಖಾಸಗಿ ಬಸ್‌ಗಳು ಬೇಕಾಬಿಟ್ಟಿಯಾಗಿ ಪ್ರಯಾಣ ದರ ಪಡೆಯುತ್ತಿರುವುದು ಕಂಡು ಬಂದರೆ ದೂರು ನೀಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ದೂರು ನೀಡಲು ಮೊಬೈಲ್ ಸಂಖ್ಯೆಗಳು: 9449863429, 9449863426. ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ತೆರಳಿ ದೂರು ನೀಡುವಂತೆಯೂ ತಿಳಿಸಿದ್ದಾರೆ.
ಖಾಸಗಿ ಬಸ್ ಬುಕಿಂಗ್ ಕಚೇರಿಗೆ ತೆರಳಿ ಪರಿಶೀಲನೆ
ಇಲಾಖೆ ಸೂಚನೆ ನಂತರವೂ ಬೇಕಾಬಿಟ್ಟಿಯಾಗಿ ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ದರ್ಜೆಯ ಅಧಿಕಾರಿಗಳು ಶನಿವಾರ ರಾತ್ರಿ ಖಾಸಗಿ ಬಸ್ ಟಿಕೆಟ್ ಬುಕ್ಕಿಂಗ್ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು. ಇದನ್ನು ದೀಪಾವಳಿ ಹಬ್ಬದವರೆಗೂ ಮುಂದುವರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.