ಲೀವಿಂಗ್‌ ಟುಗೆದರ್‌ : ಮಹಿಳೆಯ ಮೇಲೆ ಸಿಲಿಂಡರ್‌ ಎತ್ತಿಹಾಕಿ ಹತ್ಯೆ!

By Kannadaprabha NewsFirst Published Sep 23, 2019, 7:55 AM IST
Highlights

ಜೊತೆಯಾಗಿ ಜೀವನ ನಡೆಸುತ್ತಿದ್ದ ಗೆಳತಿಯ ಶೀಲ ಶಂಕಿಸಿ ಆಕೆಯ ಮೇಲೆ ಗ್ಯಾಸ್‌ ಸಿಲಿಂಡರ್‌ ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ಕೆ.ಆರ್‌.ಪುರ ಠಾಣಾ ವ್ಯಾಪ್ತಿಯ ದೊಡ್ಡಬಸನವಪುರದಲ್ಲಿ ನಡೆದಿದೆ.
 

ಬೆಂಗಳೂರು [ಸೆ.23]:  ಜೊತೆಯಾಗಿ ಜೀವನ ನಡೆಸುತ್ತಿದ್ದ ಗೆಳತಿಯ ಶೀಲ ಶಂಕಿಸಿ ಆಕೆಯ ಮೇಲೆ ಗ್ಯಾಸ್‌ ಸಿಲಿಂಡರ್‌ ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ಕೆ.ಆರ್‌.ಪುರ ಠಾಣಾ ವ್ಯಾಪ್ತಿಯ ದೊಡ್ಡಬಸನವಪುರದಲ್ಲಿ ನಡೆದಿದೆ.

ದೊಡ್ಡಬಸವನಪುರ ನಿವಾಸಿ ಶಶಿಕಲಾ (32) ಹತ್ಯೆಯಾದ ಮಹಿಳೆ. ಈ ಸಂಬಂಧ ಆರೋಪಿ ವೆಂಕಟಗಿರಿಯಪ್ಪನನ್ನು (40) ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವೆಂಕಟಗಿರಿಯಪ್ಪ ರೈತನಾಗಿದ್ದು, ವಿವಾಹವಾಗಿದೆ. ಈತನ ಕುಟುಂಬ ಮುಳಬಾಗಿಲಿನಲ್ಲಿ ನೆಲೆಸಿದೆ. ಆರೋಪಿ ಮತ್ತು ಶಶಿಕಲಾ ಕೆಲ ವರ್ಷಗಳಿಂದ ಲೀವಿಂಗ್‌ ಟುಗೇದರ್‌ನಲ್ಲಿದ್ದರು. ಶಶಿಕಲಾಗೆ ಆರೋಪಿ ಕೆ.ಆರ್‌.ಪುರದಲ್ಲಿ ಬಾಡಿಗೆ ಮನೆ ಮಾಡಿ ಇರಿಸಿದ್ದ. ಮಹಿಳೆಗೆ ಮೂರು ವರ್ಷದ ಪುತ್ರಿ ಇದ್ದಾಳೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶನಿವಾರ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ವೆಂಕಟಗಿರಿಯಪ್ಪ ಶಶಿಕಲಾಳ ಶೀಲ ಶಂಕಿಸಿ ಜಗಳ ತೆಗೆದು ಹಲ್ಲೆ ನಡೆಸುತ್ತಿದ್ದ. ಚೀರಾಟ ಶಬ್ದ ಕೇಳಿದ ಮನೆ ಮಾಲಿಕರು ಕೂಡಲೇ ಆರೋಪಿ ಮನೆ ಬಳಿ ತೆರಳಿ ಬಾಗಿಲು ತೆಗೆಯುವಂತೆ ಸೂಚಿಸಿದ್ದರು. ಎಷ್ಟೂಕೂಗಿದರೂ ಆರೋಪಿ ಬಾಗಿಲು ತೆಗೆದಿರಲಿಲ್ಲ. ಕಿಟಕಿ ಮೂಲಕ ಮನೆ ಮಾಲಿಕರು ಹಾಗೂ ಸ್ಥಳೀಯರು ನೋಡಿದಾಗ ಆರೋಪಿ, ಶಶಿಕಲಾ ಕತ್ತು ಹಿಸುಕುತ್ತಿದ್ದ. ಕೂಡಲೇ ಸಾರ್ವಜನಿಕರು ಕೂಗಾಡುತ್ತಾ, ಆಕೆಯನ್ನು ಬಿಡುವಂತೆ ಮನವಿ ಮಾಡಿದ್ದಾರೆ. ಯಾರ ಮಾತು ಕೇಳದ ಆರೋಪಿ ‘ನನ್ನ ಬಿಟ್ಟು ಬೇರೆ ಅವರ ಸಹವಾಸ ಮಾಡುತ್ತೀಯಾ’ ಎಂದು ನಿಂದಿಸುತ್ತಾ, ಅಡುಗೆ ಮನೆಗೆ ಹೋಗಿ ಸಿಲಿಂಡರ್‌ ತರಲು ಹೋಗಿದ್ದಾನೆ. ಈ ವೇಳೆ ಮಹಿಳೆ ತೆವಳುತ್ತಾ ಬಾಗಿಲು ತೆಗೆಯಲು ಮುಂದಾದಾಗ ವೆಂಕಟಗಿರಿಯಪ್ಪ ಮಹಿಳೆಗೆ ಸಿಲಿಂಡರ್‌ನಿಂದ ಹೊಡೆದು ಕೆಳಗೆ ಬೀಳಿಸಿದ್ದಾನೆ. ಕೆಳಗೆ ಬಿದ್ದ ಆಕೆಯ ತಲೆ ಮೇಲೆ ಆರೋಪಿ ಗ್ಯಾಸ್‌ ಸಿಲಿಂಡರ್‌ ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.

ಪೊಲೀಸರು ಬರಲಿ ಎಂದು ವತಾರ!

ರಕ್ತದ ಮಡುವಿನಲ್ಲಿದ್ದ ಮಹಿಳೆಯನ್ನು ಕಂಡ ಸ್ಥಳೀಯರು ಬಾಗಿಲು ತೆಗೆಯುವಂತೆ ಆರೋಪಿಗೆ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿ ಸ್ಥಳಕ್ಕೆ ಪೊಲೀಸರು ಬರುವ ತನಕ ಬಾಗಿಲು ತೆಗೆಯುವುದಿಲ್ಲ ಎಂದು ಹೇಳಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದು ಮನವೊಲಿಸಿದ ಬಳಿಕ ಆರೋಪಿ ಬಾಗಿಲು ತೆಗೆದಿದ್ದು, ನಂತರ ಆತನನ್ನು ವಶಕ್ಕೆ ಪಡೆಯಲಾಗಿದೆ. ತಲೆ ಮೇಲೆ ಸಿಲಿಂಡರ್‌ ಎತ್ತಿಹಾಕಿದ ಪರಿಣಾಮ ಮಹಿಳೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮನೆ ಬಾಡಿಗೆ ಪಡೆಯುವಾಗ ಆರೋಪಿ ವೆಂಕಟಗಿರಿಯಪ್ಪ, ಶಶಿಕಲಾ ತನ್ನ ಪತ್ನಿ ಎಂದು ಹೇಳಿದ್ದಾನೆ. ಘಟನೆ ಬಳಿಕ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಮಹಿಳೆ ಸಂಬಂಧಿಕರನ್ನು ಸಂಪರ್ಕಿಸಲಾಗಿದ್ದು, ಕೊಲೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

click me!