ಹುಬ್ಬಳ್ಳಿ: ಲಘು ವಿಮಾನ ನಿರ್ಮಾಣ, ಕೆಎಲ್‌ಇ ಏರೋಸ್ಪೇಸ್‌ ಕ್ಲಬ್‌ ತಂಡದ ಸಾಧನೆ

By Web DeskFirst Published Nov 21, 2019, 7:36 AM IST
Highlights

ಡ್ರೋಣ್ ನಂತೆ ಕಾರ್ಯನಿರ್ವಹಿಸುವ ವಿಮಾನ|ದೇಶದ ರಕ್ಷಣೆ ಸೇರಿದಂತೆ ಯಾವುದೇ ವಿಭಾಗದಲ್ಲಿ ಈ ವಿಮಾನ ಬಳಸಬಹುದು| ವಿಮಾನಕ್ಕೆ ಕ್ಯಾಮೆರಾ ಅಳವಡಿಸಿದರೆ ಚಿತ್ರ ಸೆರೆ ಹಿಡಿದು ಕಂಪ್ಯೂಟರ್‌ಗೆ ರವಾನಿಸಲಿದೆ| 

ನಾಗರಾಜ ಮಾರೇರ

ಹುಬ್ಬಳ್ಳಿ(ನ.21): ಗಡಿಯಲ್ಲಿರುವ ಸೈನಿಕರಿಗೆ ಶಸ್ತ್ರಾಸ್ತ ಪೂರೈಸಲು ಡ್ರೋಣ್ ಬಳಸುತ್ತಿದ್ದು, ಅದೇ ಮಾದರಿಯಲ್ಲಿ ಸೇನೆಗೆ ನೆರವಾಗಬೇಕು ಎಂಬ ದೂರದೃಷ್ಟಿಯಿಂದ ಇಲ್ಲಿನ ಕೆಎಲ್‌ಇ ಎಂಜಿನಿಯರ್‌ ಕಾಲೇಜಿನ ಏರೋಸ್ಪೇಸ್‌ ಕ್ಲಬ್‌ನ ತಂಡ ಕಡಿಮೆ ತೂಕದ, ಹೆಚ್ಚು ಭಾರ ಹೊತ್ತು ಕ್ರಮಿಸುವ ವಿಮಾನ ಅಭಿವೃದ್ಧಿ ಪಡಿಸಿದೆ.

ಚೆನ್ನೈನಲ್ಲಿ ಜುಲೈ ತಿಂಗಳಲ್ಲಿ ‘ಸೊಸೈಟಿ ಆಫ್‌ ಆಟೋಮೊಬೈಲ್‌ ಎಂಜಿನಿಯರ್‌’ ಏರ್ಪಡಿಸಿದ ‘ಏರೋ ಮಾಡಲಿಂಗ್‌ ಕಾಂಫಿಟೇಶನ್‌’ನ ರೆಗ್ಯುಲರ್‌ ವಿಭಾಗದಲ್ಲಿ ದೇಶಕ್ಕೆ ಮೊದಲ ಸ್ಥಾನ ಮತ್ತು ಮೈಕ್ರೋ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದೆ ಈ ಹುಬ್ಬಳ್ಳಿ ಹುಡುಗರ ವಿಮಾನ. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ 146 ತಂಡಗಳು ಭಾಗವಹಿಸಿದ್ದವು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೇಶದ ರಕ್ಷಣೆ ಸೇರಿದಂತೆ ಯಾವುದೇ ವಿಭಾಗದಲ್ಲಿ ಈ ವಿಮಾನ ಬಳಸಬಹುದು. ಸೇನೆಯಲ್ಲಿ ಶಸ್ತ್ರಾಸ್ತ ಹೊತ್ತೊಯ್ಯಲು, ಉಗ್ರರ ಚಲನವಲನಗಳ ಮೇಲೆ ನಿಗಾ ಇಡಲು ಡ್ರೋಣ್ ಬಳಸಲಾಗುತ್ತಿದೆ. ಅದೇ ಮಾದರಿಯಲ್ಲಿ ನಾವು ಸಿದ್ಧಪಡಿಸಿದ ವಿಮಾನವೂ ಕಾರ್ಯ ನಿರ್ವಹಿಸಲಿದೆ. ವಿಮಾನಕ್ಕೆ ಕ್ಯಾಮೆರಾ ಅಳವಡಿಸಿದರೆ ಚಿತ್ರ ಸೆರೆ ಹಿಡಿದು ಕಂಪ್ಯೂಟರ್‌ಗೆ ರವಾನಿಸಲಿದೆ ಎನ್ನುತ್ತಾರೆ 22 ಸದಸ್ಯರ ತಂಡದ ಕ್ಯಾಪ್ಟನ್‌ ರೋಹಿತ್‌ ಅನ್ವೇಕರ್‌.

ಪ್ರತಿ ವರ್ಷ ಚೆನ್ನೈನಲ್ಲಿ ಸ್ಪರ್ಧೆ ನಡೆಯಲಿದೆ. ಜುಲೈನಲ್ಲಿ ನಡೆದ ಸ್ಪರ್ಧೆಯಲ್ಲಿ ರೆಗ್ಯುಲರ್‌ ವಿಭಾಗದಲ್ಲಿ 4.5 ಕೆಜಿ ತೂಕದ ವಿಮಾನ ನಿರ್ಮಿಸಿ 8.5 ಕೆಜಿ ಭಾರ ಹೊತ್ತು 1 ಕಿಲೋ ಮೀಟರ್‌ಗೂ ಹೆಚ್ಚು ದೂರ ಸಾಗಿದರೆ, ಮೈಕ್ರೋ ವಿಭಾಗದಲ್ಲಿ 900 ಗ್ರಾಂನ ವಿಮಾನ ನಿರ್ಮಿಸಿ 2.01 ಕೆಜಿ ಭಾರ ಹೊತ್ತು ಇದು ಸಹ 1 ಕಿಲೋ ಮೀಟರ್‌ ಕ್ರಮಿಸಿದೆ. ಮೈಕ್ರೋ ವಿಮಾನ 60 ಸೆಂಟಿ ಮೀಟರ್‌ ಇದ್ದರೆ, ರೆಗ್ಯುಲರ್‌ ವಿಮಾನ 7 ಅಡಿ ರೆಕ್ಕೆ, 5 ಅಡಿ ಮಧ್ಯಭಾಗ ಹೊಂದಿದೆ. ವಿಮಾನಗಳ ಗಾತ್ರ, ಮೋಟಾರ್‌, ಟ್ರಾನ್ಸ್‌ಮೀಟರ್‌ ಸಾರ್ಮರ್ಥ್ಯ ಹೆಚ್ಚಿದಂತೆ ಎತ್ತುವ ಭಾರ, ಕ್ರಮಿಸುವ ದೂರವೂ ಹೆಚ್ಚುತ್ತದೆ.

1.5 ಲಕ್ಷ ರು. ವೆಚ್ಚ:

ಕಳೆದ ವರ್ಷ ವಿಮಾನ ನಿರ್ಮಿಸಲು 1.5 ಲಕ್ಷ ರು. ವ್ಯಯಿಸಲಾಗಿದೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿ, ವಿಮಾನಕ್ಕೆ ಬಿಡಿ ಭಾಗ ಪೂರೈಸಿದ ಕಂಪನಿ ರಿಯಾಯಿತಿ ದರದಲ್ಲಿ ಯಂತ್ರ ನೀಡಿ ಸಹಾಯ ಮಾಡಿವೆ. ವಿಮಾನದಲ್ಲಿ ಬಿಎಲ್‌ಡಿಎಸ್‌ ಮೋಟಾರ್‌, ಬ್ಯಾಟರಿ ಅಳವಡಿಸಲಾಗುತ್ತದೆ. ಮೋಟಾರ್‌ ಹಾಗೂ ಟ್ರಾನ್ಸ್‌ಮೀಟರ್‌ ಸಾರ್ಮಥ್ಯದ ಮೇಲೆ ಭಾರ ಎತ್ತುವ ಹಾಗೂ ಎಷ್ಟುದೂರ ಕ್ರಮಿಸಬೇಕು ಎಂಬುದು ನಿರ್ಧಾರವಾಗಲಿದೆ. ಸುಮಾರು 50 ರಿಂದ 60 ಸಾವಿರ ಮೊತ್ತದ ಮೋಟಾರ್‌, ಟ್ರಾನ್ಸ್‌ಮೀಟರ್‌ ಅಳವಡಿಸಿದರೆ 15 ಕಿಲೋ ಮೀಟರ್‌ ವರೆಗೂ ಸಂಚರಿಸಬಹುದು.

ವಿಮಾನಕ್ಕೆ ಬಳಸುವ ವಸ್ತುಗಳು:

ಗ್ರಾಂ ಲೆಕ್ಕದಲ್ಲಿ ವಿಮಾನ ನಿರ್ಮಿಸುತ್ತಿರುವುದರಿಂದ ಬಾಲಾಸ್‌ ವುಡ್‌ (ಕಡಿಮೆ ತೂಕವಿದ್ದು ಹೆಚ್ಚು ಗಟ್ಟಿಯಾಗಿರುತ್ತದೆ) ಹಾಗೂ ಏರೋಪ್ಲೆನ್‌ಗಾಗಿಯೇ ಇರುವ ಫ್ಲೇವಿಡ್‌, ಬಿಎಲ್‌ಡಿಎಸ್‌ ಮೋಟಾರ್‌, ರಿಮೋಟ್‌ ಟ್ರಾನ್ಸ್‌ಮೀಟರ್‌, ರಿಸಿವರ್‌ ಬಳಸಿಕೊಳ್ಳಲಾಗುತ್ತದೆ. ವಿಮಾನಲ್ಲಿ ಮೋಟರ್‌, ಬ್ಯಾಟರಿ, ರಿಸಿವರ್‌ ಮಾತ್ರ ಇರಲಿದ್ದು ರಿಮೋಟ್‌ನಲ್ಲಿ ಟ್ರಾನ್ಸ್‌ಮೀಟರ್‌ನಿಂದಲೇ ಎಲ್ಲವನ್ನು ನಿಯಂತ್ರಿಸಲಾಗುತ್ತದೆ.

2020ರ ಮಾರ್ಚ್ ಅಥವಾ ಜೂನ್‌ ತಿಂಗಳಲ್ಲಿ ಸ್ಪರ್ಧೆ ನಡೆಯಲಿದ್ದು ಕಡಿಮೆ ತೂಕದ ವಿಮಾನಗಳನ್ನು ಸಿದ್ಧಪಡಿಸುತ್ತಿದ್ದೇವೆ. ನಿತ್ಯ ಎರಡರಿಂದ ಮೂರು ಗಂಟೆಗಳು ಇದಕ್ಕೆ ಮೀಸಲಿಡುತ್ತಿದ್ದೇವೆ. ಕಳೆದ ಬಾರಿಗಿಂತ ಕಡಿಮೆ ತೂಕದ ವಿಮಾನ ಸಿದ್ಧಪಡಿಸಿ ಹೆಚ್ಚಿನ ಭಾರ ಹೊತ್ತೊಯ್ಯುವ ವಿಮಾನ ನಿರ್ಮಿಸಿ ಮತ್ತೆ ಪ್ರಥಮ ಸ್ಥಾನ ಗಳಿಸಬೇಕೆಂಬ ಹೆಬ್ಬಯಕೆ. ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್‌ಮಿಟರ್‌, ಮೋಟಾರ ಹಾಗೂ ಬ್ಯಾಟರಿ ಅಳವಡಿಸಿದರೆ ಅದಕ್ಕೆ ತಕ್ಕಂತೆ ವಿಮಾನ ದೂರ ಪ್ರಯಾಣ ಮಾಡಲಿದೆ. ಯಾರಾದರೂ ಸಹಾಯ ಮಾಡಲು ಮುಂದೆ ಬಂದರೆ ಹೆಚ್ಚಿನ ಸಾಮರ್ಥ್ಯದ ವಿಮಾನ ಸಿದ್ಧಪಡಿಸುತ್ತೇವೆ ಎಂದು ತಂಡದ ಮುಖ್ಯಸ್ಥ ರೋಹಿತ್‌ ಅನ್ವೇಕರ್‌ ಅವರು ಹೇಳಿದ್ದಾರೆ. 
 

click me!