ಕೃಷ್ಣಾ ನದಿ ನೀರು ಮಂಡಳಿಗೆ ಅಂಗೀಕಾರ ಮಾಡಿ ಅನುಮೋದನೆ ನೀಡಿದ ರಾಷ್ಟ್ರಪತಿ| ಇದರಿಂದ ಮುಂದೆ ರಾಜ್ಯಕ್ಕೆ ನೀರಿನ ವಿಷಯದಲ್ಲಿ ಸಾಕಷ್ಟು ತೊಂದರೆ| ಅಖಂಡ ಕರ್ನಾಟಕ ರೈತ ಸಂಘಟನೆಯಿಂದ ಡಿಸಿ ಮೂಲಕ ಪಿಎಂ ಮೋದಿಗೆ ಮನವಿ|
ವಿಜಯಪುರ(ಮೇ.06): ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ಕಾವೇರಿ ಹಾಗೂ ಗೋದಾವರಿ ಎಲ್ಲ ನದಿಗಳಲ್ಲಿ ಸಂಗ್ರಹವಾಗುವ ನೀರನ್ನು ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ನೀರು ನಿರ್ವಹಣೆ ಮಂಡಳಿಯನ್ನು ರಚನೆ ಮಾಡಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಆದ್ದರಿಂದ ಕೂಡಲೇ ಮಂಡಳಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಮಂಗಳವಾರ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಡಿಸಿ ಮೂಲಕ ಪಿಎಂ ಮೋದಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.
ಈಗಾಗಲೇ ರಾಷ್ಟ್ರಪತಿಯವರು ಕೃಷ್ಣಾ ನದಿ ನೀರು ಮಂಡಳಿಗೆ ಅಂಗೀಕಾರ ಮಾಡಿ ಅನುಮೋದನೆ ನೀಡಿದ್ದಾರೆ. ಇದರಿಂದ ಮುಂದೆ ರಾಜ್ಯಕ್ಕೆ ನೀರಿನ ವಿಷಯದಲ್ಲಿ ಸಾಕಷ್ಟುತೊಂದರೆಯಾಗುತ್ತದೆ. ನದಿ ನೀರು ಪ್ರಾಧಿಕಾರ ಕೃಷ್ಣಾ ವ್ಯಾಲಿ ಅಥಾರಟಿಯಲ್ಲಿ ನದಿ ವ್ಯಾಪ್ತಿಯ ನಾಲ್ಕು ರಾಜ್ಯದ ಒಬ್ಬಬ್ಬ ಸದಸ್ಯರಂತೆ ಒಟ್ಟು 4 ಸದಸ್ಯರಿರುತ್ತಾರೆ. ಅದರಲ್ಲಿ 2 ಕೇಂದ್ರದ ಸದಸ್ಯರಿರುತ್ತಾರೆ. 4 ಜನರಲ್ಲಿ ಒಮ್ಮತ ಅಭಿಪ್ರಾಯ ಬರದಿದ್ದರೆ, ಆಗ ಕೇಂದ್ರ ಸರ್ಕಾರ ಇಬ್ಬರು ಅಂತಿಮ ನಿರ್ಧಾರ ತಗೆದುಕೊಳ್ಳುತ್ತಾರೆ. ಅವರು ಯಾವ ಸಂದರ್ಭದಲ್ಲಿ ನೀರು ಬಿಡಲು ಸೂಚಿಸುತ್ತಾರೆಯೋ ಅದೇ ಸಂದರ್ಭದಲ್ಲಿ ನೀರು ಬಿಡಬೇಕು. ಯವಾಗ ಬಂದ್ ಮಾಡಬೇಕೆಂದು ಸೂಚಿಸಿದಾಗ ಸ್ಥಗಿತಗೊಳಿಸಬೇಕು. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ.
undefined
ದೇಶಕ್ಕೆ ಲಾಕ್‌ಡೌನ್ ಚಿಂತೆಯಾದ್ರೆ PSI ಗೆ ಸನ್ಮಾನದ್ದೇ ಚಿಂತೆ..!
ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ ಮಿಶ್ರಾ ನೇತೃತ್ವದ 2ನೇ ನ್ಯಾಯಾಧಿಕರಣದಲ್ಲಿ ಬಿ ಸ್ಕೀಮ್‌ನಲ್ಲಿ ಹಂಚಿಕೆಯಾದ 130 ಟಿಎಂಸಿ ನೀರನ್ನು ನೇರವಾಗಿ ರಾಜ್ಯಕ್ಕೆ ಬಳಸಿಕೊಳ್ಳಲು ಸಂಪೂರ್ಣ ಹಕ್ಕನ್ನು ನೀಡಬೇಕು. ಒಂದು ವೇಳೆ ನೀರು ನಿರ್ವಹಣೆ ಮಂಡಳಿ ಮುಂದುವರೆಸಿದರೆ ಮುಂದಿನ ದಿನಮಾನದಲ್ಲಿ ನೆರೆ ರಾಜ್ಯಗಳೊಂದಿಗೆ, ಕದನಕ್ಕೆ ಇಳಿಯಬೇಕಾಗುತ್ತದೆ. ಪ್ರತಿ ವರ್ಷವೂ ನೀರಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತದೆ.
ಈ ಮಂಡಳಿ ರಚನೆಯಿಂದ ವಿಜಯಪುರ ಜಿಲ್ಲೆಗೆ ಬಿ ಸ್ಕೀಮ್‌ನಲ್ಲಿ 130 ಟಿಎಂಸಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೃಷಿ ಜಮೀನುಗಳಿಗೆ ನೀರಾವರಿಗೆ ನೀರು ಸಿಗುವುದು ಕಷ್ಟ. ಕೃಷ್ಣಾ ಜಲಾಶಯದಿಂದ ನೀರು ಹರಿಸುವುದಕ್ಕೆ ಸ್ವತಂತ್ರ ತೀರ್ಮಾನ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲದಂತಾಗುತ್ತದೆ. ಈ ಮೊದಲು ಕೃಷ್ಣಾ ನದಿ ನೀರಿನ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ಇದ್ದರೂ ಕೂಡ ಉತ್ತರ ಕರ್ನಾಟಕ್ಕೆ ನೀರು ಬಳಸಿಕೊಳ್ಳಲು ಆಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಅಷ್ಟೊಂದು ತರಾತುರಿಯಲ್ಲಿ ಏಕ ಪಕ್ಷೀಯ ನಿರ್ಣಯ ಕೈಗೊಳ್ಳಲು ಅಗತ್ಯವೇನಿತ್ತು ಎಂದು ರೈತ ಸಂಘಟನೆ ಪ್ರಶ್ನಿಸಿದೆ.
ರೈತಾಪಿ ವರ್ಗಗಗಳು ಹಾಗೂ ಜನಸಾಮಾನ್ಯರ ಅಭಿಪ್ರಾಯ ಪಡೆಯದೆ ನಿರ್ಣಯ ತೆಗೆದುಕೊಂಡಿರುವುದು ಅಪಯಕಾರಿ. ಕೃಷಿಗೆ ನೀರು ಬಳಸುವ ವಿಚಾರಣೆ ಗಮನದಲ್ಲಿಟ್ಟುಕೊಂಡು ಚರ್ಚೆಯ ನಂತರ ಸಾಧಕ ಬಾಧಕಗಳನ್ನು ಗಣನೆಗೆ ತಗೆದುಕೊಳ್ಳಬೇಕಿತ್ತು. ಕೇಂದ್ರ ಸರ್ಕಾರ ರಚಿಸಿದ ನೀರು ನಿರ್ವಹಣೆ ಮಂಡಳಿಯಿಂದ ನೀರು ಬಿಡಿಸಲು ಅನುಮತಿ ಪಡೆದುಕೊಳ್ಳಬೇಕಾದರೆ ಕನಿಷ್ಠ 3 ತಿಂಗಳು ಬೇಕಾಗುತ್ತದೆ. ಆದ್ದರಿಂದ ಈಗ ರಚಿಸಿರುವ ಮಂಡಳಿಯನ್ನು ರದ್ದು ಪಡಿಸಲು ರಾಷ್ಟ್ರಪತಿಯವರು ಪುನಃ ಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ನಾಡಿನ ಮಠಾಧೀಶರೊಂದಿಗೆ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರಾಜ್ಯದ ರೈತರ ಒಡಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ರೈತ ಮುಖಂಡರಾದ ವಿಠಲ ಬಿರಾದಾರ, ಬಸವರಾಜ ಹೆಬ್ಬಾಳ ಇದ್ದರು.