ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ಮೂರು ದಿನಗಳಲ್ಲಿ ಮೂರು ಚಿರತೆಗಳು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿವೆ. ಇತ್ತೀಚೆಗೆ ರೈತರೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಬೆಂಗಳೂರು/ನೆಲಮಂಗಲ (ನ.27) : ಬೆಂಗಳೂರಿನ ಹೊರ ವಲಯ ನೆಲಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಬೋನಿಗೆ ಮೂರು ದಿನದಲ್ಲಿ ಬರೋಬ್ಬರಿ ಮೂರು ಚಿರತೆಗಳು ಬಿದ್ದಿವೆ. ಇತ್ತೀಚೆಗೆ ರೈತನೊಬ್ಬನ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದವು.
ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೊಂದಿಕೊಂಡಂತೆ ಬೆಳೆಯುತ್ತಿರುವ ನೆಲಮಂಗಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ಮಾಡಿದ ಚಿರತೆ, ರೈತನನ್ನು ಕೊಂದು ಹಾಕಿದ್ದವು. ಜೊತೆಗೆ, ಬೆಂಗಳೂರು ನಗರ ಪ್ರದೇಶದಿಂದ ಕೆಲಸ ಮಾಡಿ ರಾತ್ರಿ ವೇಳೆ ಬೈಕ್ ಹಾಗೂ ಇತರೆ ವಾಹನಗಳಲ್ಲಿ ತೆರಳುವಾಗ ಚಿರತೆಗಳು ರಸ್ತೆಯ ಪಕ್ಕದಲ್ಲಿಯೇ ಓಡಾಡುತ್ತಿದ್ದರಿಂದ ದಾಳಿ ಮಾಡುವುದಾಗಿ ಜನರು ಭಯಬೀತಗೊಂಡಿದ್ದರು. ಇದರಿಂದಾಗಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಸ್ಥಳೀಯ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದರು.
ಇದರ ಬೆನ್ನಲ್ಲಿಯೇ ಸ್ಥಳ ಪರಶೀಲನೆ ಮಾಡಿದ ಅರಣ್ಯ ಅಧಿಕಾರಿಗಳಿಗೆ ಚಿರತೆ ಇರುವುದು ದೃಢಪಟ್ಟಿದೆ. ಹೀಗಾಗಿ, ಚಿರತೆ ಸೆರೆಗಾಗಿ ಬೋನು ಅಳವಡಿಕೆ ಮಾಡಿದ್ದಾರೆ. ಮೊದಲ ದಿನ ಒಂದು ಚಿರತೆ ಬೋನಿಗೆ ಬಿದ್ದಿದೆ. ಆದರೆ, ಬೋನಿನ ಸುತ್ತಲೂ ಚಿರತೆಯ ಹೆಜ್ಜೆಗಳನ್ನು ನೋಡಿದ ಅರಣ್ಯ ಅಧಿಕಾರಿಗಳು ಇಲ್ಲಿ ಕೇವಲ ಒಂದು ಚಿರತೆಯಲ್ಲಿ ಇನ್ನೂ ಒಂದೆರೆಡು ಚಿರತೆಗಳು ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಮೊದಲ ದಿನ ಸೆರೆ ಸಿಕ್ಕ ಚಿರತೆಯನ್ನು ಹಸ್ತಾಂತರಿಸಿ ಪುನಃ ಅದೇ ಬೋನನ್ನು ಇಟ್ಟು ಹೋಗಿದ್ದರು. ಇದೇ ರೀತಿ 2ನೇ ದಿನ ಮತ್ತು 3ನೇ ದಿನವೂ ದಿನಕ್ಕೆ ಒಂದರಂತೆ ಬೃಹತ್ ಗಾತ್ರದ ಚಿರತೆಗಳು ಬೋನಿಗೆ ಬಿದ್ದಿವೆ.
ಇದನ್ನೂ ಓದಿ: ವೀಕೆಂಡ್ ಪಿಕ್ನಿಕ್ ಅಂತ ಕಾಡಿಗೆ ಬಂದವರ ಮೇಲೆ ಚಿರತೆ ದಾಳಿ: ಮೂವರಿಗೆ ಗಂಭೀರ ಗಾಯ
ನೆಲಮಂಗಲ ವಲಯ ಅರಣ್ಯಾಧಿಕಾರಿಗಳ ಕಾರ್ಯಚರಣೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 80ಕ್ಕೂ ಅಧಿಕ ಜನರ ತಂಡವು ಕಾರ್ಯಚರಣೆ ಮಾಡಿದೆ. ಇಂದು (ಬುಧವಾರ) ಸಂಜೆ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ 3ನೇ ಚಿರತೆ ಬೋನಿಗೆ ಬಿದ್ದಿದೆ. ಇನ್ನು ಚಿರತೆಗೆ ಇಡಲಾಗಿದ್ದ ಬೋನಿನಲ್ಲಿ ನಾಯಿಯನ್ನು ಕಟ್ಟಿ ಹಾಕಿದ್ದರಿಂದ ನಾಯಿ ತಿನ್ನಲು ಬಂದ ಚಿರತೆ ಸರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಈ ಚಿರತೆಯ ಬೋನಿನ ಬಾಗಿಲು ಲಾಕ್ ಮಾಡಲು ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಆರ್ಭಟಿಸಿದ ರೀತಿ ಭಯಭೀತಗೊಳಿಸುವಂತಿತ್ತು ಎಂದು ಇತರೆ ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.