ಕಳೆದ ತಿಂಗಳ ಮಧ್ಯಾರಂಭದಲ್ಲಿ ಸುಮಾರಾಗಿ ಬರುತ್ತಿದ್ದ ಮಳೆಗೆ ತಾಲೂಕಿನ ರೈತರು ರಾಗಿ ಬಿತ್ತನೆ ಮಾಡಿದ್ದು, ಈಗ ಮಳೆ ಕೈಕೊಟ್ಟಿರುವ ಪರಿಣಾಮ ಹುಟ್ಟಿಬಂದಿರುವ ರಾಗಿ ಪೈರು ಭೂಮಿಯಲ್ಲಿಯೇ ಒಣಗುತ್ತಿರುವುದು ಒಂದು ಕಡೆಯಾದರೆ, ಬಿತ್ತನೆ ಮಾಡಬೇಕಾಗಿರುವ ರೈತರು ಮಳೆರಾಯನಿಗಾಗಿ ಕಾಯ್ದು ಕುಳಿತಿದ್ದು ರೈತರನ್ನು ಮತ್ತಷ್ಟುಆತಂಕಕ್ಕೆ ದೂಡುವಂತೆ ಮಾಡಿದೆ.
ಬಿ. ರಂಗಸ್ವಾಮಿ
ತಿಪಟೂರು : ಕಳೆದ ತಿಂಗಳ ಮಧ್ಯಾರಂಭದಲ್ಲಿ ಸುಮಾರಾಗಿ ಬರುತ್ತಿದ್ದ ಮಳೆಗೆ ತಾಲೂಕಿನ ರೈತರು ರಾಗಿ ಬಿತ್ತನೆ ಮಾಡಿದ್ದು, ಈಗ ಮಳೆ ಕೈಕೊಟ್ಟಿರುವ ಪರಿಣಾಮ ಹುಟ್ಟಿಬಂದಿರುವ ರಾಗಿ ಪೈರು ಭೂಮಿಯಲ್ಲಿಯೇ ಒಣಗುತ್ತಿರುವುದು ಒಂದು ಕಡೆಯಾದರೆ, ಬಿತ್ತನೆ ಮಾಡಬೇಕಾಗಿರುವ ರೈತರು ಮಳೆರಾಯನಿಗಾಗಿ ಕಾಯ್ದು ಕುಳಿತಿದ್ದು ರೈತರನ್ನು ಮತ್ತಷ್ಟುಆತಂಕಕ್ಕೆ ದೂಡುವಂತೆ ಮಾಡಿದೆ.
undefined
ಕಲ್ಪತರು ನಾಡಿನ ರೈತರ ಪಾಲಿಗೆ ಈ ವರ್ಷ ಮಳೆ ತೀರಾ ನಿರಾಶಾದಾಯಕವಾಗಿದ್ದು, ಮಳೆರಾಯ ಸಂಪೂರ್ಣ ಮುನಿಸಿಕೊಂಡಿರುವುದರಿಂದ ಮುಂಗಾರು ಬೆಳೆಗಳು ಅಷ್ಟೇನೂ ಲಾಭದಾಯಕವಾಗಿಲ್ಲ ಮತ್ತು ಜಾನುವಾರಗಳ ಮೇವಿಗೂ ಸಹ ಸಂಕಷ್ಟಎದುರಾಗಿದೆ. ಈಗ ಕೆಲ ವಾರಗಳ ಹಿಂದೆ ಸುಮಾರಾಗಿ ಮಳೆ ಸುರಿದಿದ್ದರಿಂದ ರೈತರು ಖುಷಿಯಿಂದಲೇ ಭೂಮಿಯನ್ನು ಸ್ವಚ್ಛ ಮಾಡಿಕೊಂಡು ಬೀಜದ ರಾಗಿ ಹಾಗೂ ಗೊಬ್ಬರ ಹೊಂದಿಸಿಕೊಂಡು ರಾಗಿ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದರು. ಸಾವಿರಾರು ರುಪಾಯಿ ಖರ್ಚು ಮಾಡಿಕೊಂಡು ತಾಲೂಕಿನಲ್ಲಿ ಈಗಾಗಲೆ ಸುಮಾರು ಶೇ.60ರಷ್ಟುಪ್ರದೇಶದಲ್ಲಿ ರಾಗಿಯನ್ನು ಬಿತ್ತನೆ ಮಾಡಿರುವುದು ಒಂದು ಕಡೆಯಾದರೆ ಸಾಲ ಮಾಡಿಕೊಂಡು ಬೀಜ, ಗೊಬ್ಬರ, ಉಳುಮೆಗೆ ಹಣ ಹೊಂದಿಸಿಕೊಂಡು ರಾಗಿ ಬಿತ್ತನೆ ಮಾಡಲು ಕಾಯುತ್ತಿರುವ ರೈತರಲ್ಲಿ ಸಕಾಲಕ್ಕೆ ಮಳೆ ಬಾರದಿದ್ದರೆ ಬಿತ್ತನೆ ಮಾಡಲು ಆಗುತ್ತದೆಯೋ ಇಲ್ಲವೋ ಎಂಬ ಭಯದಲ್ಲಿ ಮಳೆಗಾಗಿ ಕಾಯುತ್ತಿದ್ದಾರೆ.
ತಡವಾಗಿರುವ ರಾಗಿ ಬಿತ್ತನೆ: ಜೂನ್ ತಿಂಗಳಿಗೆ ಸರಿಯಾದ ಸಮಯಕ್ಕೆ ಮಳೆರಾಯ ಕೃಪೆ ತೋರಿದರೆ, ಜಮೀನುಗಳನ್ನು ಉಳುಮೆ ಮಾಡಿಕೊಂಡು ಜುಲೈ ಅಂತ್ಯದೊಳಗಡೆ ರಾಗಿ ಬಿತ್ತನೆ ಮಾಡಿದಲ್ಲಿ ಹುಲುಸಾಗಿ ಬೆಳೆದು ಉತ್ತಮ ಇಳುವರಿಯೂ ಬರುತ್ತದೆ. ಆದರೆ ಈ ಬಾರಿ ಜೂನ್ ತಿಂಗಳಿನಲ್ಲಿ ಮಳೆ ಕೈಕೊಟ್ಟಪರಿಣಾಮ ಜುಲೈ 2ನೆ ವಾರದಲ್ಲಿ ಬಂದ ಮಳೆಗೆ ಬಹುಪಾಲು ರೈತರು ರಾಗಿಯನ್ನು ಬಿತ್ತನೆ ಮಾಡಿದ್ದು ಒಂದೆರಡು ಇಂಚು ಬೆಳೆದಿರುವ ಈ ಪೈರಿಗೆ ಮಳೆ ಇಲ್ಲವಾಗಿದೆ. ಕೆಲ ಭಾಗಗಳ ರೈತರು ಮಳೆ ಬರುತ್ತದೆ ಎಂಬ ವಿಶ್ವಾಸದಿಂದ ಒಣ ಭೂಮಿಗೆ ರಾಗಿ ಬಿತ್ತನೆ ಮಾಡಿದ್ದು ಮಳೆ ಕೈಕೊಟ್ಟಿರುವ ಕಾರಣ ರಾಗಿ ಪೈರು ಹುಟ್ಟಿಲ್ಲ. ಅತ್ಯಂತ ಕಡಿಮೆ ಮಳೆಗೂ ಮೊಳಕೆಯೊಡೆಯುವ ರಾಗಿ ಮೊಳಕೆಯೊಡೆದು ಹಸಿರು ಚೆಲ್ಲುವ ಬದಲು ಭೂಮಿಯಲ್ಲೇ ಭಸ್ಮವಾಗುತ್ತಿರುವುದು ಮತ್ತಷ್ಟುಆತಂಕಕ್ಕೆಡೆ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ತಾಲೂಕಿನ ಜನ-ಜಾನುವಾರುಗಳ ಪ್ರಮುಖ ಆಹಾರ ಬೆಳೆಯಾದ ರಾಗಿ ಈ ಬಾರಿ ಕೈಕೊಡುವುದು ಗ್ಯಾರಂಟಿ ಎಂಬುದು ರೈತರಲ್ಲಿ ಆತಂಕ ಹುಟ್ಟಿಸಿದೆ.
ಪಶುಸಂಗೋಪನೆಗೆ ರಾಗಿ ಹುಲ್ಲು ಪ್ರಮುಖ: ತಾಲೂಕಿನಲ್ಲಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬಿಟ್ಟರೆ, ನಂತರದ ರೈತರ ಆದಾಯವೆಂದರೆ ಪಶುಸಂಗೋಪನೆ. ಆದರೆ ಪಶುಸಂಗೋಪನೆಗೆ ಪ್ರಮುಖವಾಗಿ ರಾಗಿ ಹುಲ್ಲು ಅಗತ್ಯವಾಗಿದೆ. ಮಳೆರಾಯನ ಮುನಿಸಿನಿಂದ ಈ ವರ್ಷವೂ ದನಕರುಗಳು, ಕುರಿ ಮೇಕೆಗಳನ್ನು ಮೇಯಿಸಲು ಹೊಲತೋಟಗಳ ಬದುಗಳಲ್ಲಾಗಲಿ, ಕೆರೆ ಅಂಗಳಗಳಲ್ಲಾಗಲಿ ಹಸಿರು ಮೇವು ಇಲ್ಲದೆ ಮತ್ತು ತಾಲೂಕಿನ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಬರಗಾಲ ಎದುರಾಗಿದೆ.
ತೆಂಗಿಗೂ ಬೇಕಿದೆ ನೀರು: ನೀರಿನ ಭವಣೆ ಹಾಗೂ ರೋಗರುಜಿನೆಗಳಿಗೆ ಸಿಲುಕಿರುವ ತಾಲೂಕಿನ ವಾಣಿಜ್ಯ ಬೆಳೆಯಾದ ತೆಂಗು ಹಾಗೂ ಅಡಿಕೆ ಸಂಪೂರ್ಣ ಕೈಕೊಟ್ಟಿರುವುದರಿಂದ ತೆಂಗು ಬೆಳೆಗಾರರು ಇತ್ತ ತೆಂಗಿನ ಆದಾಯ ಇಲ್ಲದೆ, ಅತ್ತ ಖುಷ್ಕಿ ಬೆಳೆಗಳೂ ಇಲ್ಲದೆ ಕಂಗಾಲಾಗಿದ್ದಾರೆ. ಕಳೆದ ವರ್ಷ ಬಿದ್ದ ಮಳೆಯಿಂದ ಕೆರೆಕಟ್ಟೆಗಳು ತುಂಬಿದ್ದವಾದರೂ, ಈ ವರ್ಷ ಹೇಳಿಕೊಳ್ಳುವಷ್ಟುಮಳೆ ಬಂದಿಲ್ಲದ ಕಾರಣ ತೆಂಗು ಒಣಗುತ್ತಿದ್ದು ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ. ನಶಿಸಿ ಹೋಗುತ್ತಿರುವ ತೆಂಗನ್ನು ಉಳಿಸುವ ಕೆಲಸಕ್ಕೆ ಮಳೆರಾಯನ ಕೃಪೆಯೂ ಮುಖ್ಯವಾಗಿದ್ದು, ಈ ಮೂಲಕ ತೆಂಗು ಬೆಳೆಗಾರರು ಬದುಕು ಕಟ್ಟಿಕೊಳ್ಳುವಂತಾಗಬೇಕಿದೆ.
ಮಳೆಯ ಕೊರತೆಯಿಂದ ರಾಗಿ ಬಿತ್ತನೆ ಕುಂಠಿತವಾಗಿದ್ದು, ತಾಲೂಕಿನಲ್ಲಿ 21 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಬೇಕಿದ್ದು, ಸದ್ಯ 14ರಿಂದ 15 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಕೆಲ ಭಾಗಗಳಲ್ಲಿ ಹುಟ್ಟಿಬಂದಿರುವ ಪೈರಿಗೂ ಮಳೆ ಇಲ್ಲವಾಗಿದ್ದು, ಇನ್ನೂ ಕೆಲ ರೈತರು ಹದ ಮಳೆ ಬರಲಿ ಎಂದು ಕಾಯುತ್ತಿದ್ದಾರೆ. ಕೃಷಿ ಇಲಾಖೆಯಿಂದ ಈಗಾಗಲೇ ಬಿತ್ತನೆಗಾಗಿ ವಿವಿಧ ರಾಗಿ ತಳಿಗಳನ್ನು ಸಬ್ಸಿಡಿಯಲ್ಲಿ ಮಾರಾಟ ಮಾಡಲಾಗಿದೆ. ರೈತರು ವರುಣನಿಗಾಗಿ ಕಾಯುತ್ತಿದ್ದು ಅಂದುಕೊಂಡಂತೆ ಮಳೆ ಬಂದರೆ ರಾಗಿ ಉತ್ತಮವಾಗಿ ಬರಲಿದೆ.
ಚನ್ನಕೇಶವಮೂರ್ತಿ ಸಹಾಯಕ ಕೃಷಿ ನಿರ್ದೇಶಕರು, ತಿಪಟೂರು.
ಮಳೆಯನ್ನು ನೆಚ್ಚಿಕೊಂಡು ರಾಗಿ ಬಿತ್ತನೆ ಮಾಡಿದ್ದು, ಬಿತ್ತಿದಾಗಿನಿಂದಲೂ ಮಳೆ ಇಲ್ಲ. ನಮಗೆ ರಾಗಿ ಮೇವು ಮತ್ತು ರಾಗಿ ಎರಡೂ ಮುಖ್ಯವಾಗಿದ್ದು, ಆದರೆ ಮಳೆ ಇಲ್ಲದೆ ಈ ವರ್ಷ ರಾಗಿ ಬೆಳೆ ಎಲ್ಲಿ ಕೈಕೊಡಲಿದೆಯೋ ಎಂಬ ಆತಂಕ ಕಾಡುತ್ತಿದೆ.
ರಮೇಶ ಎಂ.ಎಸ್. ಮಾರುಗೊಂಡನಹಳ್ಳಿ ರೈತ.