ಹುಬ್ಬಳ್ಳಿ: ಕೊರೋನಾತಂಕದ ನಡುವೆಯೇ ಬಾಗಿಲು ತೆರೆಯುತ್ತಿವೆ ಕೈಗಾರಿಕೆಗಳು

By Kannadaprabha NewsFirst Published Sep 14, 2020, 9:48 AM IST
Highlights

ಶೇ. 60- 65 ರಷ್ಟು ಉತ್ಪಾದನೆ ಪ್ರಾರಂಭ| ಕೈಗಾರಿಕೆ ವಲಯಕ್ಕೆ ಕಾರ್ಮಿಕರದ್ದೇ ಸಮಸ್ಯೆ| ಐಟಿ ಬಿಟಿ ವಲಯ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ| ಬಹುಶಃ ಅಕ್ಟೋಬರ್‌ 1ರಿಂದ ಪ್ರಾರಂಭವಾಗಬಹುದು| ಐಟಿಬಿಟಿ ಕಂಪನಿಗಳು ವರ್ಕ್ ಫ್ರಂ ಹೋಂನಿಂದಲೇ ಚಟುವಟಿಕೆಗಳನ್ನು ಪುನಾರಂಭಿಸಿವೆ| 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಸೆ.14): ಕೊರೋನಾದಿಂದಾಗಿ ಸಂಪೂರ್ಣ ಸ್ಥಗಿತಗೊಂಡಿದ್ದ ಕೈಗಾರಿಕಾ ವಲಯ ನಿಧಾನವಾಗಿ ಬಾಗಿಲು ತೆರೆದುಕೊಳ್ಳುತ್ತಿದೆ. ಕೊರೋನಾತಂಕದ ನಡುವೆಯೇ ಉತ್ಪಾದನೆಯನ್ನೂ ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿವೆ. ಸದ್ಯ ಶೇ.60- 65 ರಷ್ಟು ಉತ್ಪಾದನೆ ಮಾಡಲಾರಂಭಿಸಿವೆ. ಕಾರ್ಮಿಕರ ಸಮಸ್ಯೆಯೇ ಕೈಗಾರಿಕೆಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 44917 ಎಂಎಸ್‌ಎಂಇ (ಮೈಕ್ರೋ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು) ಇವೆ. ಇದರಲ್ಲಿ ಸದ್ಯ 30212 ಕೈಗಾರಿಕೆಗಳು ಕಾರ್ಯಾರಂಭ ಮಾಡಿವೆ. ಇನ್ನುಳಿದವು ಪ್ರಾರಂಭವಾಗಿಲ್ಲ. ಇದೀಗ ಪ್ರಾರಂಭವಾಗಿರುವ ಎಂಎಸ್‌ಎಂಇ ಕೈಗಾರಿಕೆಗಳು ಶಿಫ್ಟ್‌ ಮೇಲೆ ಕಾರ್ಯನಿರ್ವಹಿಸುತ್ತಿವೆ. ಆದಷ್ಟು ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿವೆ.

ಉತ್ಪಾದನೆ:

ಮೊದಲಿಗೆ ಅತಿ ಅಗತ್ಯವಿರುವ ಕೈಗಾರಿಕಾ ಘಟಕಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಅಂದರೆ ಫುಡ್‌ ಪ್ರೋಸೆಸಿಂಗ್‌ ಯುನಿಟ್‌, ಪ್ಯಾಕೇಜಿಂಗ್‌ ಯುನಿಟ್‌, ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಯುನಿಟ್‌ಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಇದೀಗ ಎಲ್ಲ ಬಗೆಯ ಕೈಗಾರಿಕೆಗಳನ್ನು ಪುನಾರಂಭಿಸಬಹುದಾಗಿದೆ. ಆದರೆ ಕೊರೋನಾದಿಂದಾಗಿ ಹೆಚ್ಚಿನ ಕಾರ್ಮಿಕರನ್ನು ಕರೆಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಉತ್ಪಾದನೆ ಪ್ರಮಾಣ ಬಹಳ ಕಡಿಮೆಯಿತ್ತು. ಆದರೆ ಇದೀಗ ಕೊಂಚ ಉತ್ತಮ ಸ್ಥಿತಿಯಿದೆ. ಕೈಗಾರಿಕೆಗಳು ಶೇ.60- 65 ರಷ್ಟು ಉತ್ಪಾದನೆಯನ್ನು ಮಾಡಲಾರಂಭಿಸಿವೆ. ಮೊದಲಿನಂತೆ ಪೂರ್ಣ ಉತ್ಪಾದನೆಯಾಗಬೇಕು ಅಂದರೆ ಇನ್ನೂ ಕೆಲ ದಿನಗಳೇ ಬೇಕಾಗುವುದು. ಬಹುಶಃ ಇನ್ನು ಒಂದು ವರ್ಷವಾದರೂ ಬೇಕಾಗುತ್ತದೆ ಎನ್ನುತ್ತಾರೆ ಕೈಗಾರಿಕೋದ್ಯಮಿಗಳು. 

ಹುಬ್ಬಳ್ಳಿ: ಆಯುರ್ವೇದಿಕ್‌ ಔಷಧವೆಂದು ಮುಧುಮುನಕ್ಕಾ ಮಾರಾಟ, ಇಬ್ಬರ ಬಂಧನ

ಸಮಸ್ಯೆಯೇನು?:

ಕೈಗಾರಿಕೆಗಳಲ್ಲಿ ಸಮಸ್ಯೆಯಾಗಿರುವುದು ಕಾರ್ಮಿಕರದ್ದು. ಕಾರ್ಮಿಕರನ್ನು ಮೊದಲಿನಂತೆ ಗುಂಪು- ಗುಂಪಾಗಿ ಕೂಡಿಸಲು ಬರುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಾರ್ಮಿಕರಿಗೆ ಎಲ್ಲರೂ ಬನ್ನಿ ಎಂದು ಹೇಳಲು ಆಗುತ್ತಿಲ್ಲ. ಸ್ವಲ್ಪ ಕಾರ್ಮಿಕರಲ್ಲಿ ಕೆಲಸ ತೆಗೆದುಕೊಳ್ಳಬೇಕು. ಬೇರೆ ಬೇರೆ ರಾಜ್ಯಗಳ ವಲಸೆ ಕಾರ್ಮಿಕರು ಇನ್ನೂ ಪೂರ್ಣ ಪ್ರಮಾಣದಲ್ಲಿ ಮರಳಿ ಬಂದಿಲ್ಲ. ಹೊರರಾಜ್ಯಗಳ ಕಾರ್ಮಿಕರೆಲ್ಲರೂ ಬರಬೇಕೆಂದರೆ ಇನ್ನೂ ಕೆಲ ದಿನಗಳೇ ಬೇಕಾಗಬಹುದು. ಇನ್ನು ಹೀಗೆ ತಮ್ಮ ತಮ್ಮೂರಿಗೆ ಹೋದ ಕಾರ್ಮಿಕರು ಈಗಾಗಲೇ ಅಲ್ಲಲ್ಲೇ ಬೇರೆ ಬೇರೆ ಕೆಲಸ ಮಾಡಿಕೊಂಡು ಸೆಟ್‌ ಆಗಿದ್ದುಂಟು. ಹೀಗಾಗಿ ಹೀಗೆ ಸೆಟ್‌ ಆದ ಕಾರ್ಮಿಕರು ಮರಳಿ ಬರುತ್ತಾರೆ ಎಂಬ ನಂಬಿಕೆ ಇಲ್ಲ ಎಂದು ಕೆಲ ಕೈಗಾರಿಕೆಗಳ ಮಾಲೀಕರು ಹೇಳುತ್ತಾರೆ. ಹೀಗಾಗಿ ಸಣ್ಣ ಕೈಗಾರಿಕೆಗಳು ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿವೆ.

ಆದರೂ ಪರವಾಗಿಲ್ಲ:

ಕೊರೋನಾ ವೇಳೆ ಸಂಪೂರ್ಣ ಕೈಗಾರಿಕೆಗಳು ಸ್ಥಗಿತವಾಗಿದ್ದವು. ಇದೀಗ ಸಣ್ಣದಾಗಿ ತೆರೆದುಕೊಳ್ಳುತ್ತಿರುವುದು ಸಂತಸಕರ. ಉತ್ಪಾದನೆಯ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ. ನಾವು ಕೊರೋನಾದ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗಾರಿಕೆ ಆರಂಭಿಸುತ್ತಿದ್ದೇವೆ ಎಂದು ಕೈಗಾರಿಕೋದ್ಯಮಿಗಳು ತಿಳಿಸುತ್ತಾರೆ.

ಐಟಿ ಬಿಟಿ ವಲಯ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ. ಬಹುಶಃ ಅಕ್ಟೋಬರ್‌ 1ರಿಂದ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಐಟಿಬಿಟಿ ಕಂಪನಿಗಳು ವರ್ಕ್ ಫ್ರಂ ಹೋಂನಿಂದಲೇ ಚಟುವಟಿಕೆಗಳನ್ನು ಪುನಾರಂಭಿಸಿವೆ. ಒಟ್ಟಿನಲ್ಲಿ ಕೊರೋನಾತಂಕದ ನಡುವೆಯೇ ಕೈಗಾರಿಕಾ ಚಟುವಟಿಕೆಗಳು ನಡೆಯುತ್ತಿರುವುದಂತೂ ಸತ್ಯ.

ಸದ್ಯ ಶೇ. 60- 65 ರಷ್ಟು ಉತ್ಪಾದನೆಯನ್ನೂ ಕೈಗಾರಿಕೆಗಳು ಮಾಡುತ್ತಿವೆ. ಎಲ್ಲ ಕೈಗಾರಿಕೆಗಳು ಪ್ರಾರಂಭವಾಗಿ, ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯನ್ನೂ ಪ್ರಾರಂಭಿಸಬೇಕೆಂದರೆ ಕನಿಷ್ಠವೆಂದರೂ ಇನ್ನೊಂದು ವರ್ಷ ಬೇಕಾಗಬಹುದು ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ನಿಂಗಪ್ಪ ಬಿರಾದಾರ ಅವರು ಹೇಳಿದ್ದಾರೆ. 

ಕೊರೋನಾ ನಂತರ ಇದೀಗ ಬದುಕು ಸಹಜ ಸ್ಥಿತಿಗೆ ಮರಳುತ್ತಿದೆ. ಕೈಗಾರಿಕೆಗಳು ಉತ್ಪಾದನೆ ಪ್ರಾರಂಭಿಸಿವೆ. ಬೇರೆ ಬೇರೆ ಊರುಗಳಿಗೆ ತೆರಳಿರುವ ಕಾರ್ಮಿಕರಲ್ಲಿ ಎಲ್ಲರೂ ಇನ್ನೂ ಬಂದಿಲ್ಲ. ಸದ್ಯ ಉತ್ತಮ ಸ್ಥಿತಿಯಲ್ಲಿ ಕೈಗಾರಿಕಾ ವಲಯ ಸಾಗುತ್ತಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ ಅವರು ತಿಳಿಸಿದ್ದಾರೆ. 
 

click me!