
ಬೆಂಗಳೂರು(ಏ.12): ನಗರದ ಹಲಸೂರು ಬಜಾರ್‌ನ ಅಂಚೆ ಕಚೇರಿ ಭಾರತದ ಮೊಟ್ಟ ಮೊದಲ ‘ತ್ರಿಡಿ ಪ್ರಿಂಟಿಂಗ್’ ಅಂಚೆ ಕಚೇರಿ ಕಟ್ಟಡವಾಗಿ ತಲೆ ಎತ್ತುತ್ತಿದೆ. ಒಂದೂವರೆ ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಬಳಕೆಗೆ ಲಭ್ಯವಾಗಲಿದೆ. ಕಟ್ಟಡ ನಿರ್ಮಾಣದಲ್ಲಿ ಹಣ, ಸಮಯದ ಉಳಿತಾಯದ ಮಾದರಿಯ ಕಟ್ಟಡ ಇದಾಗಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈಗಾಗಲೆ ಮನೆ, ಹೋಟೆಲ್ ಸೇರಿ ಇತರೆ ಕಟ್ಟಡಗಳು ‘ತ್ರಿಡಿ ಪ್ರಿಂಟಿಂಗ್’ ಮಾದರಿಯಲ್ಲಿವೆ. ಆದರೆ, ಸರ್ಕಾರಿ ಒಡೆತನದ ಕಟ್ಟಡವಾಗಿ ಅಂಚೆ ಕಚೇರಿ ಸ್ವರೂಪದಲ್ಲಿ ತಲೆ ಎತ್ತುತ್ತಿರುವ ಪ್ರಥಮ ಕಟ್ಟಡವಿದು.
1100 ಚದರ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಹಲಸೂರು ಅಂಚೆ ಕಚೇರಿಗೆ ಕೇವಲ .23 ಲಕ್ಷ ವ್ಯಯಿಸಲಾಗುತ್ತಿದೆ. ಐಐಟಿ ಮದ್ರಾಸ್ ಕಟ್ಟಡ ವಿನ್ಯಾಸವನ್ನು ಮಾನ್ಯ ಮಾಡಿದ್ದರೆ, ಬಿಎಂಟಿಪಿಸಿ (ಬ್ಯುಲ್ಡಿಂಗ್ ಮಟಿರಿಯಲ್ಸ್ ಆ್ಯಂಡ್ ಟೆಕ್ನಾಲಜಿ ಪ್ರಮೋಶನ್ ಕೌನ್ಸಿಲ್) ಈ ತಂತ್ರಜ್ಞಾನಕ್ಕೆ ಅನುಮೋದನೆ ನೀಡಿದೆ. ಎಲ್ ಆ್ಯಂಡ್ ಟಿ ಕಂಪನಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದೆ. ಪ್ರಸ್ತುತ ತಳಪಾಯ, ಗೋಡೆ ನಿರ್ಮಾಣ ಕಾರ್ಯ ನಡೆದಿದೆ.
ಸಣ್ಣ ಉಳಿತಾಯ ಖಾತೆದಾರರಿಗೆ ಗುಡ್ ನ್ಯೂಸ್: ಬಡ್ಡಿ ದರದಲ್ಲಿ ಭಾರಿ ಹೆಚ್ಚಳ
ಎಲ್ ಆ್ಯಂಡ್ ಟಿ ಕಟ್ಟಡ ನಿರ್ಮಾಣ ನಿರ್ದೇಶಕ ಎಂ.ವಿ.ಸತೀಶ್, ‘ಈ ಅಂಚೆ ಕಚೇರಿ ಬೆಂಗಳೂರಿನ ಹೊಸ ಲ್ಯಾಂಡ್ ಮಾರ್ಕ್ ಆಗಿ ಹೊರಹೊಮ್ಮಲಿದೆ. ‘ತ್ರಿಡಿ ಕಾಂಕ್ರೀಟ್ ಪ್ರಿಂಟ್’ ತಂತ್ರಜ್ಞಾನದಿಂದ ಅತೀವೇಗವಾಗಿ ನಿರ್ಮಾಣ ಕಾರ್ಯ ಸಾಧ್ಯ. ಅದೇ ವೇಳೆಗೆ ಕಟ್ಟಡ ಗುಣಮಟ್ಟದಿಂದಲೂ ಕೂಡಿರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ತ್ರೀಡಿ ಪ್ರಿಂಟಿಂಗ್ ತಂತ್ರಜ್ಞಾನದಿಂದ ಜಿ+3 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಬಹುದು. ಮಿಲಿಟ್ರಿ ಬ್ಯಾರಕ್‌ಗಳು, ಒಂದು ಮಹಡಿಯ ಶಾಲೆಗಳನ್ನು ಕಟ್ಟಬಹುದು. ಕಂಪನಿ ಈ ತಂತ್ರಜ್ಞಾನ ಬಳಸಿ ಇನ್ನಷ್ಟುಕ್ಷೇತ್ರದಲ್ಲಿ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಏ.1ರಿಂದ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಬದಲಾವಣೆ; ಮಹಿಳೆಯರಿಗೆ ಹೊಸ ಉಳಿತಾಯ ಯೋಜನೆ ಪ್ರಾರಂಭ
ಏನಿದು ‘3ಡಿ ಪ್ರಿಂಟಿಂಗ್’ ತಂತ್ರಜ್ಞಾನ?
ಸಾಂಪ್ರದಾಯಿಕ ಶೈಲಿಯಲ್ಲಿ ಉಸುಕು, ಸಿಮೆಂಟ್, ಜೆಲ್ಲಿಕಲ್ಲು, ಕಬ್ಬಿಣ, ಸ್ಟೀಲ್ ಸ್ಟ್ರಕ್ಚರ್‌ಗಳಿಂದ ಕಟ್ಟಡ ಕಟ್ಟುವುದು ಸಹಜ. ಆದರೆ, ಇಲ್ಲಿ 3ಡಿ ಪ್ರಿಂಟಿಂಗ್ ಟೆಕ್ನಾಲಜಿ ಮೂಲಕ ಸಿಮೆಂಟ್‌ನ ಪದರನ್ನು ಮೊದಲು ರೂಪಿಸಿ ಕೊಳ್ಳಲಾಗಿದೆ. ಜೊತೆಗೆ ವಾಟರ್‌ಪ್ರೂಫ್ ಕೆಮಿಕಲ್‌ಗಳನ್ನೂ ಈ ಚೌಕಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇವುಗಳನ್ನು ಒಂದರ ಮೇಲೊಂದರಂತೆ ತ್ರೀಡಿ ವಿನ್ಯಾಸದಲ್ಲಿ ಜೋಡಿಸಲಾಗುತ್ತದೆ. ಗ್ರೀನ್ ಕಾಂಕ್ರೀಟನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಕಟ್ಟಡ ನಿರ್ಮಾಣ ಆಗುತ್ತಿರುವಂತೆ ವೇಗವಾಗಿ ಗಟ್ಟಿಯಾಗುವ ಜೊತೆಗೆ ಹೆಚ್ಚಿನ ಹೊರೆ ಹೊರುವ ಸಾಮರ್ಥ್ಯವನ್ನೂ ಹೊಂದಿರಲಿದೆ. ಕಟ್ಟಡವು ಸಾಧಾರಣವಾಗಿ ಚೌಕ, ಆಯತ, ವೃತ್ತಾಕಾರದಲ್ಲಿರದೆ ತ್ರೀಡಿ ವಿನೂತನ ವಿನ್ಯಾಸದಲ್ಲಿ ನಿರ್ಮಾಣ ಆಗುತ್ತಿರುವುದು ಇನ್ನೊಂದು ವಿಶೇಷ.
ಇನ್ನಷ್ಟು ಕಟ್ಟಡ ತ್ರೀಡಿ
ಸಾಮಾನ್ಯ ಕಟ್ಟಡಗಳಿಗೆ ಹೋಲಿಸಿದರೆ ಶೇ. 40ರಷ್ಟು ಹಣ ಉಳಿತಾಯವಾಗುತ್ತದೆ. ಅಂಚೇ ಕಚೇರಿಯ ನಿರ್ಮಾಣಕ್ಕಾಗಿ ನಮ್ಮಲ್ಲಿ 400ಕ್ಕು ಹೆಚ್ಚು ಸ್ಥಳಗಳಿವೆ. ಈ ಕಟ್ಟಡ ಪೂರ್ಣಗೊಂಡ ಬಳಿಕ ಮೇಲಧಿಕಾರಿಗಳಿಗೆ ಇದರ ಸಾಧಕ-ಬಾಧಕದ ಕುರಿತು ವರದಿ ನೀಡಲಾಗುವುದು. ಒಪ್ಪಿಗೆ ದೊರೆತಲ್ಲಿ ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಬಳಸಿಯೇ ಕಟ್ಟಡ ನಿರ್ಮಿಸಲಾಗುವುದು ಎಂದು ಮುಖ್ಯ ಅಂಚೆ ಮಹಾನಿರ್ದೇಶಕ ಎಸ್.ರಾಜೇಂದ್ರಕುಮಾರ್ ಹೇಳಿದ್ದಾರೆ.