ಮಂಗಳೂರು: ಮಳೆಗಾಲ ಬಂದರೆ ಇವರಿಗೆ ದೋಣಿಯೇ ಆಸರೆ!

By Kannadaprabha NewsFirst Published Jul 11, 2023, 8:46 AM IST
Highlights

ಈ ಗ್ರಾಮದ ಸುತ್ತಲಿನ ನೂರಾರು ಎಕರೆ ಜಮೀನು ದಿನಗಟ್ಟಲೆ ಮುಳುಗಡೆಯಾಗುತ್ತದೆ. ಇಲ್ಲಿರುವ 30 ಕುಟುಂಬದವರು ಮನೆಯಿಂದ ಹೊರಗೆ ದಿನಸಿ ತರಬೇಕಾದರೂ ದೋಣಿಯಲ್ಲೇ ಸಾಗಬೇಕಾದ ಅವರ್ಣನೀಯ ನರಕಯಾತನೆ ಅನುಭವಿಸುತ್ತಿದ್ದಾರೆ. ಆಡಳಿತಕ್ಕೆ ಈ ಮಾಹಿತಿ ಇದ್ದರೂ ಇಲ್ಲಿನ ಜನರ ಗೋಳಿಗೆ ಸ್ಪಂದಿಸುತ್ತಲೇ ಇಲ್ಲ..!

ಸಂದೀಪ್‌ ವಾಗ್ಲೆ

ಮಂಗಳೂರು (ಜು.11) :  ಒಂದು ಕಿಂಡಿ ಅಣೆಕಟ್ಟಿನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಗಾಲ ಬಂತೆಂದರೆ ಈ ಗ್ರಾಮ ಸಂಪೂರ್ಣ ಜಲಾವೃತವಾಗಿ ಅಕ್ಷರಶಃ ದ್ವೀಪದಂತಾಗುತ್ತದೆ. ಗ್ರಾಮದ ಸುತ್ತಲಿನ ನೂರಾರು ಎಕರೆ ಜಮೀನು ದಿನಗಟ್ಟಲೆ ಮುಳುಗಡೆಯಾಗುತ್ತದೆ. ಇಲ್ಲಿರುವ 30 ಕುಟುಂಬದವರು ಮನೆಯಿಂದ ಹೊರಗೆ ದಿನಸಿ ತರಬೇಕಾದರೂ ದೋಣಿಯಲ್ಲೇ ಸಾಗಬೇಕಾದ ಅವರ್ಣನೀಯ ನರಕಯಾತನೆ ಅನುಭವಿಸುತ್ತಿದ್ದಾರೆ. ಆಡಳಿತಕ್ಕೆ ಈ ಮಾಹಿತಿ ಇದ್ದರೂ ಇಲ್ಲಿನ ಜನರ ಗೋಳಿಗೆ ಸ್ಪಂದಿಸುತ್ತಲೇ ಇಲ್ಲ..!

ಇದು ಮಂಗಳೂರು ಹೊರವಲಯದ ಆದ್ಯಪಾಡಿಯ ಮೊಗೇರ್‌ಕುದ್ರು ಗ್ರಾಮ(Mogerkudru village). ಜೋರು ಮಳೆ ಬಂದರೆ ಇಡೀ ಗ್ರಾಮವೇ ಮುಳುಗಡೆಯಾಗುತ್ತದೆ. ನಾಲ್ಕೈದು ದಿನಗಳ ಹಿಂದೆ ಸುರಿದ ಮಹಾಮಳೆಗೆ 2 ದಿನ ಸಂಪೂರ್ಣ ಮುಳುಗಿತ್ತು. ಗ್ರಾಮಕ್ಕೆ ಹೋಗುವ ಏಕೈಕ ರಸ್ತೆಗೂ ಪ್ರವಾಹ ನೀರು ನುಗ್ಗಿ ಜನರು ಜಲಬಂಧಿಯಾಗಿದ್ದರು. ಇದು ಎರಡು ದಿನಗಳ ಗೋಳಲ್ಲ, ಮತ್ತೆ ಮಳೆ ಬಂದರೆ ಮತ್ತೆ ಮುಳುಗುತ್ತದೆ!

 

ಭಾರಿ ಮಳೆಗೆ ಕೊಚ್ಚಿ ಹೋದ ಎಸ್‌ಬಿಐ ಎಟಿಎಂ, ಹಿಮಾಚಲ ಪ್ರದೇಶದಲ್ಲಿ ವಾಹನ, ಕಟ್ಟದ ಜಲಸಮಾಧಿ!

ಶಾಪವಾದ ಮರವೂರು ಡ್ಯಾಂ: ಕೇವಲ 10 ವರ್ಷಗಳ ಹಿಂದೆ ಅಡಕೆ, ತೆಂಗು, ಬತ್ತ, ಬಾಳೆ, ತರಕಾರಿ ಇತ್ಯಾದಿ ಬೆಳೆಗಳಿಂದ ಸಮೃದ್ಧವಾಗಿದ್ದ ಮುಗೇರ್‌ ಕುದ್ರು ಗ್ರಾಮ, ಇತ್ತೀಚಿನ ವರ್ಷಗಳಲ್ಲಿ ಪ್ರವಾಹದಿಂದ ನಲುಗುವಂತಾಗಿದೆ. ಈ ಅವಾಂತರಕ್ಕೆ ಕಾರಣ ಫಲ್ಗುಣಿ ನದಿಗೆ ಮರವೂರಿನಲ್ಲಿ ಕಟ್ಟಿರುವ ಅವೈಜ್ಞಾನಿಕ ಅಣೆಕಟ್ಟು ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಇದು ಸ್ಥಾಪನೆಯಾದಂದಿನಿಂದ ಮೊಗೇರ್‌ ಕುದ್ರು ಗ್ರಾಮಸ್ಥರ ಅಳಲು ಕೇಳುವವರಿಲ್ಲವಾಗಿದೆ. ಅಣೆಕಟ್ಟಿನಿಂದ ಸರಾಗವಾಗಿ ನೀರು ಹೊರಹೋಗಲಾರದೆ ಕೃತಕ ಪ್ರವಾಹ ಉಂಟಾಗಿ ಮುಗೇರ್‌ ಕುದ್ರು ಮಾತ್ರವಲ್ಲದೆ, ಮೂಡುಶೆಡ್ಡೆ, ಪಡುಶೆಡ್ಡೆ, ಕಂದಾವರ, ಗುರುಪುರ, ಕೊಳಂಬೆ ಗ್ರಾಮದವರೆಗೆ ಕೃಷಿ ಭೂಮಿ ಮುಳುಗಡೆಯಾಗುತ್ತಿದೆ. ಪ್ರತಿವರ್ಷ ಇಲ್ಲಿನ ಜನರು ಎದುರಿಸುತ್ತಿರುವ ಯಾತನೆಯ ಪರಿಸ್ಥಿತಿ ಆಡಳಿತಕ್ಕೆ ಗೊತ್ತಿದ್ದರೂ, ಜನಪ್ರತಿನಿಧಿಗಳಾದಿಯಾಗಿ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಮನವಿ ನೀಡಿದರೂ ಪರಿಹಾರ ಮಾತ್ರ ಕಾಣುತ್ತಿಲ್ಲ.

ಒಂದೂವರೆ ತಿಂಗಳು ನೀರು ನಿಂತಿತ್ತು!: ಕಳೆದ ವರ್ಷ ಭಾರೀ ಮಳೆಯಿಂದಾಗಿ ಮೊಗೇರ್‌ ಕುದ್ರು ಗ್ರಾಮ ಸುಮಾರು ಒಂದೂವರೆ ತಿಂಗಳು ಜಲಾವೃತವಾಗಿತ್ತು. ನಾಟಿ ಮಾಡಿದ ಎಕರೆಗಟ್ಟಲೆ ಬತ್ತದ ಪೈರು ಸರ್ವನಾಶವಾಗಿ ತೀವ್ರ ನಷ್ಟವಾಗಿತ್ತು. ಸುದೀರ್ಘ ಕಾಲ ನೀರು ನಿಂತಿದ್ದರಿಂದ ಬಹಳಷ್ಟುಅಡಕೆ ಮರಗಳು ಸತ್ತುಹೋಗಿದ್ದರೆ, ಕಾಯಿ ಕಟ್ಟಿದ ಅಡಕೆಯೂ ಉದುರಿಬಿದ್ದಿತ್ತು. ತೆಂಗಿನ ಫಸಲೂ ತೀವ್ರ ಇಳಿಕೆಯಾಗಿತ್ತು. ಆದರೂ ಈ ವರ್ಷ ಇಲ್ಲಿನ ಜನ ಬತ್ತ ನಾಟಿಗಾಗಿ ಗದ್ದೆ ಉಳುಮೆ ಮಾಡಿಟ್ಟಿದ್ದಾರೆ. ಅಷ್ಟರಲ್ಲಿ ಮಹಾಮಳೆಗೆ ಗ್ರಾಮವೇ ಮುಳುಗಿದೆ.

ಪರಿಹಾರವೂ ಇಲ್ಲ: ‘‘ಕಳೆದ ವರ್ಷ ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದಾಗಿ ಮೊಗೇರ್‌ ಕುದ್ರುವಿನ ಮನೆಯೊಂದು ಕುಸಿದು ಬಿದ್ದಿತ್ತು. ಅವರಿಗೆ 50 ಸಾವಿರ ರು. ಪರಿಹಾರ ಸಿಕ್ಕಿದ್ದು ಬಿಟ್ಟರೆ ಬೆಳೆಹಾನಿಗೆ ಯಾವ ಪರಿಹಾರವೂ ಸಿಕ್ಕಿಲ್ಲ. ನಮಗೆ ಪರಿಹಾರ ಬೇಡ, ಆದರೆ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಾಮಗಾರಿ ಮಾಡಿದರೆ ಸಾಕು. ಅದೇ ದೊಡ್ಡ ಪರಿಹಾರ’’ ಎಂದು ಗ್ರಾಮದ ನಿವಾಸಿ ಶಿವರಾಮ್‌ ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷ ಭಾರಿ ಪ್ರವಾಹದ ಬಳಿಕ ಇಲ್ಲಿನ ಎರಡು ಮನೆಯವರು ಮನೆಯನ್ನೇ ತೊರೆದು ಬೇರೆಡೆಗೆ ಹೋಗಿ ನೆಲೆಸಿದ್ದಾರೆ. ಉಳಿದವರು ನೆಲದ ಪ್ರೀತಿಯಿಂದ ಅಲ್ಲೇ ಉಳಿದುಕೊಂಡಿದ್ದಾರೆ.

ದೋಣಿಗಳೇ ಸಂಪರ್ಕ ಸೇತು: ಪ್ರಸ್ತುತ ಮೊಗೇರ್‌ ಕುದ್ರು ಸಂಪೂರ್ಣ ಜಲಾವೃತವಾಗಿರುವುದರಿಂದ ಅತ್ತಿತ್ತ ಸಂಚರಿಸಲು ಸ್ಥಳೀಯರೇ ನಾಲ್ಕೈದು ದೋಣಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಲ್ಲಿಂದ ಕೆಲಸಕ್ಕೆ ಹೋಗುವವರು, ದಿನನಿತ್ಯದ ಸಾಮಗ್ರಿಗಳನ್ನು ತರಲು ಈ ದೋಣಿಗಳೇ ಸಂಪರ್ಕ ಸೇತು. ಇಷ್ಟಾದರೂ ಒಬ್ಬ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಸರ್ಕಾರದ ಶಾಶ್ವತ ಪರಿಹಾರದ ನಿರೀಕ್ಷೆಯಲ್ಲೇ ಜನರು ದಿನದೂಡುತ್ತಿದ್ದಾರೆ.

ಮೂಡುಬಿದಿರೆ: ಅಪಾಯಕಾರಿ ಕಾಲು ಸಂಕದಲ್ಲಿ ಕಾದಿದೆ ಅಪಾಯ!

ಪರಿಹಾರ ಏನು?

ಮರವೂರು ಕಿಂಡಿ ಅಣೆಕಟ್ಟನ್ನು ಕಟ್ಟುವಾಗ ನದಿಯ ಅಡಿಭಾಗದಲ್ಲಿ 10 ಮೀ. ಎತ್ತರಕ್ಕೆ ಶಾಶ್ವತ ಕಾಂಕ್ರೀಟ್‌ ಬೆಡ್‌ ಹಾಕಿದ್ದರಿಂದಲೇ ನೀರು ಸರಾಗವಾಗಿ ಹೊರಹೋಗದೆ ಮೊಗೇರ್‌ ಕುದ್ರು ಗ್ರಾಮ ದ್ವೀಪವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಅಣೆಕಟ್ಟಿನ ಎರಡೂ ತುದಿಗಳಲ್ಲಿ 30 ಮೀ.ನಷ್ಟುಉದ್ದಕ್ಕೆ ಹೈಡ್ರಾಲಿಕ್‌ ಗೇಟ್‌ ಅಳವಡಿಸಬೇಕು. ಹೀಗೆ ಮಾಡಿದರೆ ಮಳೆಗಾಲದಲ್ಲಿ ಗೇಟ್‌ ತೆರೆದು ನೀರು ಸರಾಗವಾಗಿ ಹೋಗಲು ಅವಕಾಶ ಮಾಡಬಹುದು. ಮಳೆಗಾಲ ಮುಗಿದ ಬಳಿಕ ಮತ್ತೆ ಗೇಟ್‌ ಹಾಕಿ ನೀರು ನಿಲ್ಲಿಸಬಹುದು ಎಂದು ಸ್ಥಳೀಯರಾದ ಶಿವರಾಮ್‌ ಹೇಳುತ್ತಾರೆ. ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಹಮತ ವ್ಯಕ್ತಪಡಿಸಿದ್ದರೂ ಇದುವರೆಗೂ ಪರಿಹಾರ ಕಾಮಗಾರಿಗೆ ಮುಂದಾಗಿಲ್ಲ. ಇನ್ನಾದರೂ ಪರಿಹಾರ ಕಾರ್ಯ ಆಗಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

click me!