ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವ ಹೇಮಾವತಿ ನಾಲೆಯ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗಾಗಿ ಬೃಹತ್ ಪೈಪ್‌ಗಳನ್ನು ಹೊತ್ತು ತರುತ್ತಿದ್ದ ಲಾರಿಗಳನ್ನು ಗುಬ್ಬಿ ತಾಲೂಕಿನ ಸಿ.ಎಸ್.ಪುರ ಬಳಿ ರೈತರು ತಡೆದು ಲಾರಿಗಳನ್ನು ವಾಪಸ್ ಕಳಿಸಿದರು.
ತುಮಕೂರು (ಮೇ.20): ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವ ಹೇಮಾವತಿ ನಾಲೆಯ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗಾಗಿ ಬೃಹತ್ ಪೈಪ್‌ಗಳನ್ನು ಹೊತ್ತು ತರುತ್ತಿದ್ದ ಲಾರಿಗಳನ್ನು ಗುಬ್ಬಿ ತಾಲೂಕಿನ ಸಿ.ಎಸ್.ಪುರ ಬಳಿ ರೈತರು ತಡೆದು ಲಾರಿಗಳನ್ನು ವಾಪಸ್ ಕಳಿಸಿದರು. ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಭಟನೆ ನಡೆಸಿ ಲಾರಿಗಳನ್ನು ತಡೆದಿದ್ದು, ಮಾಜಿ ಸಚಿವ ಸೊಗಡು ಶಿವಣ್ಣ ಲಾರಿಗೆ ಅಡ್ಡ ಮಲಗಿ ಪ್ರತಿಭಟಿಸಿದರು. ಯಾವುದೇ ಕಾರಣಕ್ಕೂ ಈ ಕೆನಾಲ್ ಕಾಮಗಾರಿ ಮುಂದುವರೆಸಲು ಬಿಡುವುದಿಲ್ಲ.
ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಲು ಒತ್ತಾಯಿಸಿ ನಡೆದಿರುವ ಹೋರಾಟ ತೀವ್ರಗೊಂಡಿದೆ. ಇತ್ತೀಚೆಗೆ ಗುಬ್ಬಿ ತಾಲೂಕಿನ ಡಿ.ರಾಂಪುರ ಸಮೀಪ ಕೆನಾಲ್ ಕಾಮಗಾರಿ ನಡೆದಿರುವ ಸ್ಥಳದಲ್ಲಿ ವಿವಿಧ ಪಕ್ಷಗಳ ಶಾಸಕರು, ಮುಖಂಡರು, ರೈತ ಸಂಘಟನೆ, ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಕೆನಲ್ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಈ ನಡುವೆ ಭಾನುವಾರ ನಾಲೆ ನಿರ್ಮಾಕ್ಕಾಗಿ ಸುಮಾರು ಹನ್ನೆರಡು ಅಡಿ ಎತ್ತರದ ಬೃಹತ್ ಪೈಪ್‌ಗಳನ್ನು ಲಾಗಿಗಳಲ್ಲಿ ತರಲಾಗುತ್ತಿತ್ತು. ಪೈಪ್ ತರುತಿದ್ದ ಸುಮಾರು 20 ಲಾರಿಗಳನ್ನು ಮಾರ್ಗ ಮಧ್ಯದಲ್ಲಿ ಸಿ.ಎಸ್.ಪುರ ಬಳಿ ರೈತರು ತಡೆದು ಪ್ರತಿಭಟನೆ ನಡೆಸಿದರು.
undefined
ಕೆನಾಲ್ ಕಾಮಗಾರಿಯಿಂದ ಮುಂದಿನ ಪೀಳಿಗೆಗೆ ನೀರು ಸಿಗಲ್ಲ: ಶಾಸಕ ಎಂ.ಟಿ.ಕೃಷ್ಣಪ್ಪ
ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ವಿವಿಧ ಸಂಘಟನೆಗಳ ಮುಖಂಡರು ರೈತರ ಹೋರಾಟದಲ್ಲಿ ಪಾಲ್ಗೊಂಡು ಲಾರಿಗಳನ್ನು ತಡೆದು ವಾಪಸ್ ಕಳುಹಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಇತ್ತೀಚಿಗೆ ಪ್ರತಿಭಟನೆ ನಡೆಸಿದಾಗ ಕಾಮಗಾರಿ ಮುಂದುವರೆಸುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೂ ಇಂದು ಪೈಪ್‌ಗಳನ್ನು ತಂದು ಕೆಲಸ ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ, ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಕೂಡದು ಎಂದರು.ಇಷ್ಟು ದೊಡ್ಡ ಪ್ರಮಾಣದ ಪೈಪ್‌ಗಳಲ್ಲಿ ತಂದು ನೀರು ತೆಗೆದುಕೊಂಡು ಹೋದರೆ ಜಿಲ್ಲೆಯ ಜನರಿಗೆ ಹನಿ ನೀರೂ ಸಿಗುವುದಿಲ್ಲ,
ನಮ್ಮ ಜನರಿಗೆ ಅನ್ಯಾಯ ಮಾಡಿ ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುದನ್ನು ನೋಡಿಕೊಂಡು ಸುಮ್ಮನಿರಲಾಗುವುದಿಲ್ಲ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸರ್ಕಾರದ ಜೊತೆ ಸೇರಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತನಾಡುತ್ತಿದ್ದಾರೆ. ಜನರಿಗೆ ಅನ್ಯಾಯವಾದಾಗ ಪಕ್ಷಬೇಧ ಮರೆತು ಹೋರಾಟ ಮಾಡಬೇಕು ಎಂದು ಹೇಳಿದರು. ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಅನೇಕ ಮಹನೀಯರು ಹೋರಾಟ ಮಾಡಿ ಜಿಲ್ಲೆಗೆ ನೀರು ಬರಲು ಕಾರಣರಾಗಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ಕಾರಣ ನಮಗೆ ಹೇಮಾವತಿ ನೀರು ಬರುತ್ತಿದೆ. ಮಾಗಡಿ, ರಾಮನಗರಕ್ಕೆ ಪ್ರತ್ಯೇಕ ನೀರಾವರಿ ಯೋಜನೆ ರೂಪಿಸಲಿ. ನಮ್ಮ ಪಾಲಿನ ನೀರನ್ನು ಕೊಡುವುದಿಲ್ಲ ಎಂದು ಹೇಳಿದರು.
ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯಿಂದ ಕುಡಿಯುವ ನೀರಿಗೆ ತೊಂದರೆ!
ಈ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಯಾವುದೇ ರೀತಿಯ ಹೋರಾಟಕ್ಕೂ ನಾವು ಸಿದ್ಧ. ರೈತರು ರೊಚ್ಚಿಗೆದ್ದು ಕಾನೂನು ವ್ಯವಸ್ಥೆ ಕೆಟ್ಟರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಆಧಾರ. ಜಿಲ್ಲೆಯ ಎಲ್ಲಾ ಪಕ್ಷಗಳ ಶಾಸಕರು, ಮುಖಂಡರು, ರೈತರು, ಸಂಘಟನೆಗಳು ಸಾರ್ವಜನಿಕರು ಒಗ್ಗಟಾಗಿ ಹೋರಾಟ ಮಾಡಿ ನಮ್ಮ ಪಾಲಿನ ನೀರನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ರಾಜಕೀಯ ನಾಯಕರು, ಚುನಾಯಿತ ಪ್ರತಿನಿಧಿಗಳು ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾಮಗಾರಿ ನಿಲ್ಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.