ಪಾತಾಳಕ್ಕೆ ಕುಸಿದ ಅಂತರ್ಜಲ : ತೆಂಗು ಬೆಳೆಗಾರರಿಗೆ ಸಂಕಷ್ಟ

By Kannadaprabha NewsFirst Published Apr 25, 2024, 12:11 PM IST
Highlights

ತಾಲೂಕಿಗೆ ಕಳೆದ ಆರೇಳು ವರ್ಷಗಳಿಂದ ಕಾಲಕಾಲಕ್ಕೆ ಮಳೆ ಇಲ್ಲದೆ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು-ಅಡಿಕೆ ಬೆಳೆಗಳು ಒಣಗುತ್ತಿವೆ. ಅಂತರ್ಜಲ ಮಟ್ಟ ಪಾತಾಳಕ್ಕ ಕುಸಿದಿದ್ದು, ಹನಿ ನೀರಿಗಾಗಿ ಪರಿತಪಿಸುವಂತಾಗಿದೆ.

 ತಿಪಟೂರು :  ತಾಲೂಕಿಗೆ ಕಳೆದ ಆರೇಳು ವರ್ಷಗಳಿಂದ ಕಾಲಕಾಲಕ್ಕೆ ಮಳೆ ಇಲ್ಲದೆ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು-ಅಡಿಕೆ ಬೆಳೆಗಳು ಒಣಗುತ್ತಿವೆ. ಅಂತರ್ಜಲ ಮಟ್ಟ ಪಾತಾಳಕ್ಕ ಕುಸಿದಿದ್ದು, ಹನಿ ನೀರಿಗಾಗಿ ಪರಿತಪಿಸುವಂತಾಗಿದೆ.

ಮಳೆ ಇಲ್ಲದೆ ತಾಲೂಕು ಭೀಕರ ಬರದ ಸುಳಿಗೆ ಸಿಲುಕಿರುವುದರಿಂದ ತೆಂಗು ವಿನಾಶದಂಚಿಗೆ ತಲುಪಿದೆ. ಅಂತರ್ಜಲ ಮಟ್ಟ ಸಾವಿರ ಅಡಿಗೂ ಹೆಚ್ಚು ಕುಸಿದಿದೆ. ಇದರಿಂದ ತೆಂಗು ಉಳಿಸಿಕೊಳ್ಳಲಾಗದೆ ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ತೆಂಗಿಗೆ ನುಸಿಪೀಡೆ, ಗರಿರೋಗ, ರಸ ಸೋರುವ ರೋಗಗಳು ಕಾಡುತ್ತಿವೆ. ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳಲಾಗದಂತಾಗಿದೆ. ಕೆಲವೆಡೆ ತೆಂಗು ಹಾಗೂ ಅಡಿಕೆ ಮರಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ದುಬಾರಿ ಹಣ ನೀಡಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿ ಮರಗಳಿಗೆ ಹಾಯಿಸುತ್ತಿದ್ದಾರೆ. ಸಾವಿರಾರು ಅಡಿ ಆಳದ ಕೊಳವೆ ಬಾವಿ ತೆಗೆಸಿದರೂ ನೀಗುತ್ತಿಲ್ಲ. ಕೊಳವೆ ಬಾವಿಗಾಗಿ ಮಾಡಿದ ಲಕ್ಷಾಂತರ ರು. ಸಾಲ ಮಾಡಿ ತೀರಿಸಲಾಗುತ್ತಿಲ್ಲ. ಸರ್ಕಾರ ತೆಂಗು ಉಳಿಸಿಕೊಳ್ಳಲು ಯಾವುದೇ ನೆರವಿಗೂ ನೀಡುತ್ತಿಲ್ಲ.

ಪಶು ಸಂಗೋಪನೆಗೂ ಕಂಟಕ:

ಬೆಳೆಗಾರರು ಹತಾಶಬಾವದಿಂದ ಇತ್ತೀಚೆಗೆ ತಮ್ಮ ದಿನನಿತ್ಯದ ಬದುಕು ಸಾಗಿಸಲು ಪಶು ಸಂಗೋಪನೆ ಕಡೆ ಮುಖ ಮಾಡಿದ್ದಾರೆ. ಆದರೆ ಕಳೆದ ವರ್ಷ ಮಳೆ ಕೊರತೆಯಿಂದ ರಾಗಿ ಬೆಳೆಯೂ ಕೈಕೊಟ್ಟಿದೆ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ರೈತರು ಮೇವು ಖರೀದಿಸಲು ಮುಂದಾಗುತ್ತಿರುವುದು ಬರಗಾಲದ ತೀವ್ರತೆಯನ್ನು ತೋರಿಸುತ್ತಿದೆ.

ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ:

ತಾಲೂಕಿನ ಯಾವ ಪಂಚಾಯಿತಿಗಳ ವ್ಯಾಪ್ತಿಯ ಕೆರೆ-ಕಟ್ಟೆಗಳಲ್ಲೂ ಜಾನುವಾರುಗಳಿಗೆ, ಪಶು-ಪಕ್ಷಿಗಳಿಗೆ ಕುಡಿಯಲು ನೀರಿಲ್ಲ. ಆಡು, ಕುರಿ, ದನಕರುಗಳಿಗೆ ರೈತರು ಗ್ರಾಮಗಳಲ್ಲಿನ ಕಿರುನೀರು ಸರಬರಾಜು ಟ್ಯಾಂಕ್‌ಗಳನ್ನೇ ಅವಲಂಬಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿ ಆತಂಕದ ಪರಿಸ್ಥಿತಿ ಎದುರಾಗಿದೆ. ಜನಪ್ರತಿನಿದಿಗಳು, ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಇಲ್ಲಿನ ತೆಂಗು ಬೆಳೆಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಬೆಳೆಗಾರರ ಸಂಕಷ್ಟಗಳು, ತೆಂಗು ವಿನಾಶದ ಬಗ್ಗೆ ಸರ್ಕಾರಕ್ಕೆ ಸಮರ್ಪಕ ಮಾಹಿತಿ ನೀಡಬೇಕಾದ ಜನಪ್ರತಿನಿದಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇನ್ನಾದರೂ ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಶೀಘ್ರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು. .

ಸತತ ಬರಗಾಲ, ರೋಗಗಳ ಕಾಟದಿಂದ ತಿಪಟೂರು ತಾಲೂಕಿನಲ್ಲಿ ಸಾಕಷ್ಟು ತೆಂಗಿನ ಮರಗಳು ಈಗಾಗಲೇ ಒಣಗುತ್ತಿರುವುದು ಕಂಡು ಬಂದಿದೆ. ಈಗಲೂ ಮಳೆ ಬಂದರೆ ಸಹಾಯವಾಗಲಿದೆ. ಸರ್ಕಾರದ ಕಡೆಯಿಂದ ಇನ್ನೂ ಯಾವುದೇ ಪರಿಹಾರ ಘೋಷಣೆಯಾಗಿಲ್ಲ. ಇಲಾಖೆಯಿಂದ ಯಾವುದಾದರೂ ಪರಿಹಾರ ಬಂದಲ್ಲಿ ಬೆಳೆಗಾರರಿಗೆ ತಿಳಿಸಲಾಗುವುದು.

- ಚಂದ್ರಶೇಖರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತಿಪಟೂರು.

ತಾಲೂಕಿನ ರೈತರ ಬದುಕಿನ ಜೀವಾಳ ತೆಂಗು ಬೆಳೆಯಾಗಿದ್ದು, ಲಕ್ಷಾಂತರ ತೆಂಗಿನ ಮರಗಳು ಬರಗಾಲ ಮತ್ತು ಅಂತರ್ಜಲ ಕೊರತೆಯಿಂದ ಒಣಗಿ ಹೋಗಿವೆ. ಸರ್ಕಾರ ಬರಗಾಲವೆಂದು ಘೋಷಿಸಿದ್ದು ತೆಂಗು, ಅಡಿಕೆ ಬೆಳೆಗಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಹೇಮಾವತಿ, ಎತ್ತಿನ ಹೊಳೆಯಿಂದ ಕೆರೆಕಟ್ಟೆಗಳಿಗೆ ನೀರು ತುಂಬಿಸಿದರೆ ತೆಂಗು ಬೆಳೆಗೆ ಅನುಕೂಲವಾಗಲಿದೆ.

-ಕೆ.ಆರ್. ಅರುಣ್‌ಕುಮಾರ್, ತೆಂಗು ಬೆಳೆಗಾರರು, ಕೊಬ್ಬರಿ ವರ್ತಕರು, ತಿಪಟೂರು.

ಫೋಟೋ ೧೯-ಟಿಪಿಟಿ೯ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ :

ಮಳೆ ಕೊರತೆ ಹಾಗೂ ರೋಗಗಳ ಕಾಟದಿಂದಾಗಿ ತೆಂಗಿನ ಮರಗಳು ಒಣಗಿರುವುದು.

click me!