ಗದಗ: ಮಹಾದಾಯಿ ಇತ್ಯರ್ಥ, ಪ್ರಧಾನಿ ಮಧ್ಯ ಪ್ರವೇಶಕ್ಕೆ ಪಾಟೀಲ ಆಗ್ರಹ

By Suvarna NewsFirst Published Dec 20, 2019, 8:29 AM IST
Highlights

ಮಹಾದಾಯಿ ಕುರಿತು ಸರ್ವಪಕ್ಷ ಸಭೆ ಕರೆದು, ಸ್ಪಷ್ಟ ನಿಲುವು ಕೈಗೊಳ್ಳಿ| ಬಿ.ಎಸ್. ಯಡಿಯೂರಪ್ಪಗೆ ಬಹಿರಂಗ ಪತ್ರದ ಮೂಲಕ ಒತ್ತಾಯಿಸಿದ ಎಚ್.ಕೆ. ಪಾಟೀಲ|ಮಹಾದಾಯಿ ಜಲವಿವಾದ ನ್ಯಾಯಾಧಿಕರಣ ತನ್ನ ಐ- ತೀರ್ಪಿನ ವರದಿ ಸಲ್ಲಿಸಿ 1 ವರ್ಷ 3 ತಿಂಗಳು ಕಳೆದಿದೆ|

ಗದಗ[ಡಿ.20]:  ರಾಜ್ಯದ ಹಿತಕ್ಕಾಗಿ ಮಹಾದಾಯಿ ವಿಚಾರವಾಗಿ ಸರ್ವಪಕ್ಷಗಳ ಸಭೆ ಕರೆದು, ಪ್ರಧಾನ ಮಂತ್ರಿಗಳು ತಕ್ಷಣವೇ ಮಧ್ಯ ಪ್ರವೇಶ ಮಾಡಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವತ್ತ ಲಕ್ಷ್ಯ ವಹಿಸಬೇಕು, ಈ ಕುರಿತು ಮುಖ್ಯಮಂತ್ರಿಗಳು ಗಮನ ಹರಿಸುವಂತೆ ಆಗ್ರಹಿಸಿ ಮಾಜಿ ಸಚಿವ, ಗದಗ ಮತಕ್ಷೇತ್ರದ ಶಾಸಕ ಎಚ್.ಕೆ. ಪಾಟೀಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಹಿರಂಗ ಪತ್ರದ ಮೂಲಕ ಒತ್ತಾಯಿಸಿದ್ದಾರೆ. 

ಮಹಾದಾಯಿ ಜಲವಿವಾದ ನ್ಯಾಯಾಧಿಕರಣ ತನ್ನ ಐ- ತೀರ್ಪಿನ ವರದಿ ಸಲ್ಲಿಸಿ 1 ವರ್ಷ 3 ತಿಂಗಳು ಕಳೆದಿದೆ. ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಗಳು ಮಹಾದಾಯಿ ನದಿಯ ತಿರುವಿನ ಅತ್ಯಂತ ಪ್ರಮುಖ ಯೋಜನೆಗಳಾಗಿವೆ. ಕರ್ನಾಟಕ ಪ್ರದೇಶದಲ್ಲಿ ಹರಿಯುವ ಮತ್ತು ಮಹಾದಾಯಿ ಕಣಿವೆಗೆ ಜಲಸಂಪನ್ಮೂಲದ ಕೊಡುಗೆ ನೀಡುವ ಈ ಎರಡೂ ಯೋಜನೆಗಳ ಮೂಲಕ ಕರ್ನಾಟಕ ಹಕ್ಕಿನ ನೀರನ್ನು ಪಡೆಯಲು 2 ದಶಕಗಳ ಸುದೀರ್ಘ ಹೋರಾಟ ನಡೆದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದರಿಂದ ತೀವ್ರ ಅನ್ಯಾಯಕ್ಕೊಳಗಾಗಿ ಅಲ್ಪ ಪ್ರಮಾಣದ ಹಂಚಿಕೆ ನ್ಯಾಯಾಧಿಕರಣದ ಮೂಲಕ ಆಗಿದೆ. ಈ ರೀತಿ ಹಂಚಿಕೆಯಾಗಿ ತನ್ನ ಪಾಲಿನ ನೀರನ್ನು ಪಡೆದಿರುವ ನಮ್ಮ ರಾಜ್ಯ ತ್ವರಿತ ಗತಿಯಲ್ಲಿ ಯೋಜನೆಗೆ ಚಾಲನೆ ನೀಡಿ ಜಲಸಂಪನ್ಮೂಲದ ಸದ್ಬಳಕೆಗೆ ಅಣಿಯಾಗಬೇಕಿದೆ ಹಾಗೂ ನಮ್ಮ ಕಾನೂನಾತ್ಮಕ ಹೋರಾಟ ಮುಂದುವರೆಯಬೇಕಿದೆ. ಆದರೆ, ಈ ನೀರಿನ ಸದ್ಬಳಕೆ ಅತ್ಯಂತ ಮಹತ್ವದ ಮಂಜೂರಾತಿಯಾಗಿದ್ದ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯು ತಾನೇ 17-10-2019 ರಂದು ನೀಡಿದ ಮಂಜೂರಾತಿಯನ್ನು 18-12-2019 ರಂದು ತಡೆಹಿಡಿರುವುದು ರಾಜ್ಯಕ್ಕೆ ಬಹುದೊಡ್ಡ ಆಘಾತ ತಂದು ಅನ್ಯಾಯದ ಪರಂಪರೆಯನ್ನು ಮುಂದುವರೆಸಿದೆ. 

ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ರೈತರು ಮತ್ತು ನಾಗರಿಕರ ಕಲ್ಯಾಣದ ಹಿತದೃಷ್ಟಿಯಿಂದ  ಗಮನಹರಿಸಬೇಕಾದದ್ದು ಬಹಳ ಮಹತ್ವದ ಅಗತ್ಯತೆಯಾಗಿದೆ. ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳು 1999 ರಲ್ಲಿ ಬೀಜಾಂಕುರಗೊಂಡು ಚಾಲನೆಗೆ ಬಂದಿವೆ. 7.65  ಟಿಎಂಸಿ ನೀರನ್ನು ಮಲಪ್ರಭಾ ಕಣಿವೆಗೆ ವರ್ಗಾಯಿಸುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆ 28-03-2003 ರಂದು ನಡೆದ ತನ್ನ ಅರಣ್ಯ ಸಲಹಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಆದರೆ, ಈ ಸಭೆಯ ನಿರ್ಣಯವನ್ನು ಕರ್ನಾಟಕಕ್ಕೆ ಅಧಿಕೃತವಾಗಿ ತಿಳಿಸಲಿಲ್ಲ. 

ಸಭೆಯ ನಿರ್ಣಯವನ್ನು ಅನುಷ್ಠಾನಗೊಳಿಸುವ ಕುರಿತು ಅಂದಿನ ಕೇಂದ್ರ ಅರಣ್ಯ ಸಚಿವರು ಇದರ ಅನುಷ್ಠಾನ ತಡೆದು ಟಿಪ್ಪಣಿ ಮಾಡಿದರು. ಕಡತಗಳನ್ನು ಗುಪ್ತವಾಗಿಸಿಸುವ ಪ್ರಯತ್ನ ಮಾಡಲಾಯಿತು. ಆರ್‌ಟಿಐ ಮೂಲಕ ಕಡತದ ಬಹುತೇಕ ವಿವರಗಳನ್ನು ಕರ್ನಾಟಕದ ರಾಜ್ಯ ಹಿತಾಸಕ್ತಿಯ ಬಗ್ಗೆ ಆಸಕ್ತಿಯುಳ್ಳ ನಾಗರಿಕ ಲಕ್ಷ್ಮಿಕಾಂತ ಜೋಶಿ ಪಡೆದಿದ್ದಾರೆ. ಈಗ ನ್ಯಾಯಾಧಿಕರಣದ ಐ ತೀರ್ಪಿನಿಂದಾಗಿ ಅಂತಾರಾಜ್ಯ ಜಲವಿವಾದವು ನಿರ್ಣಯವಾಗಿದೆ. ಜಲವಿವಾದ ನ್ಯಾಯಾಧಿಕಣಗಳು ನೀಡುವ ಐ ತೀರ್ಪುಗಳು ಸರ್ವೋಚ್ಛ ನ್ಯಾಯಾಲಯದ ಡಿಕ್ರಿಗೆ ಸಮಾನ ಎಂದು ನಮ್ಮ ಅಂತಾರಾಜ್ಯ ಜಲವಿವಾದ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಯೋಜನೆ ಕುರಿತು ಕೇಂದ್ರ ಸರ್ಜಾರದ ಕಣ್ಣು ತೆರೆಸುವ ಪ್ರಯತ್ನ ಮಾಡುವುದು ಮತ್ತು ಪ್ರಧಾನ ಮಂತ್ರಿಯವರ ಮಧ್ಯ ಪ್ರವೇಶಕ್ಕೆ ಇನ್ನೊಮ್ಮೆ ಅನಿವಾರ್ಯವಾಗಿ ಒತ್ತಾಯಿಸುವುದು ಅಗತ್ಯ. ಮಲಪ್ರಭಾ ಕಣಿವೆ ಕೊರತೆ ಕಣಿವೆಯಾಗಿದ್ದು, ಮಹಾದಾಯಿ ಕಣಿವೆ 200 ಟಿಎಂಸಿ ಯಷ್ಟು ಜಲಸಂಪನ್ಮೂಲ ಲಭ್ಯತೆಯೊಂದಿಗೆ ಹೆಚ್ಚುವರಿ ನೀರಿನ ಕಣಿವೆಯಾಗಿದೆ ಎಂಬುದು ಸಾಬೀತಾದ ಅಂಶ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಅನುಮತಿ ನೀಡುವಲ್ಲಿ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳಂತೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮೋದನೆಯನ್ನು ನೀಡಲಾಗಿತ್ತು. 

ಅಂತರ್ ಕಣಿವೆ ವರ್ಗಾವಣೆಗಳಿಗೆ ರಾಷ್ಟ್ರೀಯ ಜಲನೀತಿಯ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಸತ್ತು ಅಂಗೀಕರಿಸಿರುವ ರಾಷ್ಟ್ರೀಯ ಜಲನೀತಿಯ ಅಡಿಯಲ್ಲಿ ಕಳಸಾ ಬಂಡೂರಿ ಯೋಜನೆಗೆ ಅಗತ್ಯದ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮೋದನೆ ನೀಡಲು ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಆದರೆ, ಈಗ ರಾಷ್ಟ್ರೀಯ ಜಲನೀತಿ ಮತ್ತು ಅರಣ್ಯ ಮಾರ್ಗಸೂಚಿಗಳನ್ನು ಈಗಾಗಲೇ ನ್ಯಾಯಾಧಿಕರಣ ನೀಡಿರುವ ಐ-ತೀರ್ಪಿನ ಸ್ಪಷ್ಟೀಕರಣ ಕೋರಿ ನ್ಯಾಯಾಧಿಕರಣದ ಮುಂದೆಯೇ ಸಲ್ಲಿಸಲಾದ ಅರ್ಜಿಯನ್ನೇ ನೆಪ ಮಾಡಿಕೊಂಡು ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಗೋವಾ ಸಲ್ಲಿಸಿರುವ ಮೇಲ್ಮನವಿಯನ್ನು ಆಧರಿಸಿ ಕೇವಲ ಗೋವಾದ ರಾಜಕೀಯ ಉದ್ದೇಶಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ತನ್ನ ಆದೇಶವನ್ನು ತಡೆಹಿಡಿದಿರುವುದು ನ್ಯಾಯಾಧಿಕರಣ ಐ ತೀರ್ಪಿಗೆ ತೋರಿರುವ ಅಗೌರವ ಹಾಗೂ ಕರ್ನಾಟಕಕ್ಕೆ ಮಹಾ ಅನ್ಯಾಯ. 

ಇಂತಹ ಗಂಭೀರ ಅನ್ಯಾಯವಾದಾಗಲೆಲ್ಲ ಎಲ್ಲ ಪಕ್ಷಗಳೂ ಸೇರಿ ಸಮಾಲೋಚನೆ ನಡೆಸಿ ರಾಜ್ಯದ ಒಗ್ಗಟ್ಟಿನ ನಿಲುವು ಕೈಗೊಳ್ಳುವುದು ನಮ್ಮ ರಾಜ್ಯದ ಹಿತ ಕಾಪಾಡಲು ಮಾಡುವ ಸತ್ಸಂಪ್ರದಾಯ, ಈ ಹಿನ್ನೆಲೆಯಲ್ಲಿ ಮುಂಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದು ಸ್ಪಷ್ಟ ನಿಲುವು ಕೈಗೊಳ್ಳಲು ಹಾಗೂ ನ್ಯಾಯ ಪಡೆಯಲು ಕ್ರಮ ಕೈಗೊಳ್ಳುವಂತೆ ಎಚ್. ಕೆ. ಪಾಟೀಲ ಒತ್ತಾಯಿಸಿದ್ದಾರೆ.

click me!