ಭ್ರೂಣಹತ್ಯೆ ಕೇಸ್‌ ಸಿಐಡಿ, ಎಸ್‌ಐಟಿ ತನಿಖೆಗೆ ನೀಡಲು ಚಿಂತನೆ: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Dec 1, 2023, 1:11 PM IST

ಜಿಲ್ಲೆಯಲ್ಲಿ ಪತ್ತೆಯಾಗಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಐಡಿ ಅಥವಾ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. 


ಮಂಡ್ಯ (ಡಿ.01): ಜಿಲ್ಲೆಯಲ್ಲಿ ಪತ್ತೆಯಾಗಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಐಡಿ ಅಥವಾ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಪ್ರಕರಣ ಎರಡು-ಮೂರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಕಾರಣ ಸಿಐಡಿ ಅಥವಾ ಬೇರೆ ತನಿಖಾ ಸಂಸ್ಥೆಗೆ ವಹಿಸಿದಾಗ ಪರಿಣಾಮಕಾರಿಯಾಗಿ ತನಿಖೆ ನಡೆಯಲು ಸಾಧ್ಯ. ಮುಖ್ಯಮಂತ್ರಿಗಳೂ ಆ ನಿಟ್ಟಿನಲ್ಲೇ ಚಿಂತನೆ ನಡೆಸುತ್ತಿದ್ದಾರೆ ಎಂದರು.

ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬೇಧಿಸಿದ್ದಾರೆ. ಮಂಡ್ಯ, ಬೆಂಗಳೂರು, ಮೈಸೂರು ಸೇರಿದಂತೆ ನಾಲ್ಕೈದು ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡಿದ್ದಾರೆ. ಮೈಸೂರಿನ ಶಿವನಂಜೇಗೌಡ, ಮಂಡ್ಯ ತಾಲೂಕು ಹುಳ್ಳೇನಹಳ್ಳಿಯ ನಯನ್‌ಕುಮಾರ್, ಪಾಂಡವಪುರ ತಾಲೂಕು ಸುಂಕಾ ತೊಣ್ಣೂರಿನ ನವೀನ್‌ಕುಮಾರ್, ದಾವಣಗೆರೆಯ ವೀರೇಶ್, ಸುಂಕಾತೊಣ್ಣೂರು ನವೀನ್‌ಕುಮಾರ್, ತಮಿಳುನಾಡಿನ ಡಾ.ತುಳಸೀರಾಂ, ಮೀನಾ, ಚಂದನ್ ಬಲ್ಲಾಳ್, ತುಕಾರಾಂ ಆಸ್ಪತ್ರೆ ಸಿಬ್ಬಂದಿ, ಮೈಸೂರಿನ ಮಾತಾ ಆಸ್ಪತ್ರೆ ಸಿಬ್ಬಂದಿಯನ್ನು ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆ. 

Latest Videos

undefined

ಅಧಿಕಾರಿಗಳ ಬೇಜವಾಬ್ದಾರಿತನವೇ ಹೆಣ್ಣು ಭ್ರೂಣ ಹತ್ಯೆಗೆ ಕಾರಣ: ಸಚಿವ ದಿನೇಶ್‌ ಗುಂಡೂರಾವ್

ಇದು ಮಂಡ್ಯಕ್ಕೆ ಸೀಮಿತವಾದ ಪ್ರಕರಣ ಅಲ್ಲ. ಸುತ್ತಮುತ್ತ ನಾಲ್ಕೈದು ಜಿಲ್ಲೆಗಳನ್ನು ಆವರಿಸಿಕೊಂಡಿದೆ. ಹಾಗಾಗಿ ಬೇರೆ ತನಿಖಾ ಸಂಸ್ಥೆಯಿಂದಲೇ ತನಿಖೆ ನಡೆಸುವುದು ಉತ್ತಮ ಎಂದು ಆಲೋಚಿಸುತ್ತಿದ್ದು, ಶೀಘ್ರವೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು. ಪ್ರಕರಣದಲ್ಲಿ ಸಿಲುಕಿರುವ ತಂಡದವರು ಸ್ಕ್ಯಾನಿಂಗ್ ಮಾಡುವುದಕ್ಕೆ ಶಾಶ್ವತವಾದ ಸ್ಥಳವನ್ನು ಹೊಂದಿರಲಿಲ್ಲ. ರಾಜ್ಯದಲ್ಲಿ ಬೇರೆ ಬೇರೆ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಮೊಬೈಲ್ ಸ್ಕ್ಯಾನಿಂಗ್ ಮಾಡುತ್ತಿದ್ದರು. ಭ್ರೂಣ ಪತ್ತೆ ಮಾಡಿ ಆಪರೇಷನ್‌ಗೆ ಮಾತ್ರ ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ಮಾಡಿರುವುದು ಗೊತ್ತಾಗಿದೆ. 

ಮಂಡ್ಯ ತಾಲೂಕಿನ ಆಲೆಮನೆಯಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದರೇ ವಿನಃ ಆಲೆಮನೆಯಲ್ಲಿ ಭ್ರೂಣ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಇಲ್ಲ ಎಂಸಿದರು. ಆಲೆಮನೆಯಲ್ಲಿ ಬಿಹಾರ ಮೂಲದ ಕಾರ್ಮಿಕರು ಇದ್ದರು. ಸ್ಕ್ಯಾನಿಂಗ್ ಮಾಡುತ್ತಿದ್ದರೆಂದು ಹೇಳಲಾದ ಕೊಠಡಿಯಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳೂ ಸಿಕ್ಕಿಲ್ಲ. ಸ್ಥಳೀಯ ಜನರನ್ನು ವಿಚಾರಿಸಿದಾಗ ಭ್ರೂಣ ಹತ್ಯೆ ನಡೆದಿರುವ ಬಗ್ಗೆ ಮಾಹಿತಿ ದೊರಕಿಲ್ಲ ಎಂದು ನುಡಿದರು.

ಭ್ರೂಣ ಹತ್ಯೆ ತಡೆಗಟ್ಟುವ ಸಲುವಾಗಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ, ಸರ್ಕಲ್ ಇನ್ಸ್‌ಪೆಕ್ಟರ್, ತಾಲೂಕು ಆರೋಗ್ಯಾಧಿಕಾರಿಯನ್ನೊಳಗೊಂಡ ನಾಲ್ಕು ಮಂದಿಯ ತಂಡ ಮಾಡಿ ತಾಲೂಕು ಮಟ್ಟದಲ್ಲಿ ಪರಿಶೀಲನೆ. ಪಂಚಾಯ್ತಿ ಮ್ಟಟದಲ್ಲೂ ಪಿಡಿಒ ನೇತೃತ್ವದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಏಳು ಮಂದಿಯ ತಂಡ ಮಾಡಿ ಭ್ರೂಣ ಹತ್ಯೆ ತಡೆಗೆ ಯೋಜನೆ ರೂಪಿಸಿದ್ದೇವೆ. ಮುಂದಿನ ೧೫ ದಿನಗಳೊಳಗೆ ಜಿಪಂ ಸಿಇಒ ಅವರು ಜಿಲ್ಲೆಯ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಪರವಾನಗಿ ಸೇರಿದಂತೆ ಎಲ್ಲ ಸ್ಕ್ಯಾನಿಂಗ್ ಇಮೇಜ್‌ಗಳನ್ನು ಪರಿಶೀಲನೆ ನಡೆಸುವುದು. ಪರವಾನಗಿ ಪಡೆಯದೆ ನಡೆಯುತ್ತಿರುವ ಕ್ಲಿನಿಕ್‌ಗಳು, ಆಸ್ಪತ್ರೆಗಳನ್ನು ಬಂದ್ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ನುಡಿದರು.

ಪೊಲೀಸರ ಮಾಹಿತಿ ಪ್ರಕಾರ ಮಂಡ್ಯದಲ್ಲಿ ಎರಡು-ಮೂರು ಸ್ಥಳಗಳಲ್ಲಿ ಸ್ಕ್ಯಾನಿಂಗ್ ಮಾಡಲು ಉಪಯೋಗಿಸಿಕೊಂಡಿದ್ದಾರೆ. ಅದು ಬಿಟ್ಟು ಬೇರೆ ಯಾವುದೇ ಚಟುವಟಿಕೆಗಳನ್ನೂ ಮಾಡಿಲ್ಲ. ಜಿಲ್ಲೆಯ ಯಾವುದೇ ವೈದ್ಯರೂ ಸಹ ಸಹಕಾರ ನೀಡಿಲ್ಲ. ಭ್ರೂಣಹತ್ಯೆ ಪ್ರಕರಣ ಸಂಬಂಧ ಬೇರೆ ಬೇರೆ ರೀತಿಯಲ್ಲೂ ತನಿಖೆ ಮಾಡುತ್ತಿದ್ದೇವೆ. ಸುಳಿವು ಸಿಕ್ಕಲ್ಲಿ ಕ್ರಮ ವಹಿಸಲಾಗುವುದು. ಸದ್ಯಕ್ಕೆ ಪ್ರಕರಣ ಕುರಿತಂತೆ ಪೂರ್ಣ ಪ್ರಮಾಣದ ಮಾಹಿತಿ ಸಿಕ್ಕಿಲ್ಲ. ಏಕೆಂದರೆ, ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಅವರಿಗೆ ಗೊತ್ತಿರುತ್ತದೆ. ಅವರಿಂದ ಮಾಹಿತಿ ಪಡೆದು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ಆಯುಷ್ಯ ಮೂರೇ ತಿಂಗಳು: ಸಂಸದ ಮುನಿಸ್ವಾಮಿ ಭವಿಷ್ಯ

ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬಂಧಿತ ಆರೋಪಿಗಳನ್ನು ಕರೆತಂದು ಇಲ್ಲಿ ಒಂದಷ್ಟು ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ಮಾಹಿತಿ ಪಡೆಯಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಇದಕ್ಕೆ ತಾರ್ಕಿಕ ಅಂತ್ಯ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಮಧು ಜಿ ಮಾದೇಗೌಡ, ದಿನೇಶ್ ಗೂಳೀಗೌಡ, ಮಂಡ್ಯ ಶಾಸಕ ರವಿಕುಮಾರ್‌ ಗೌಡ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

click me!