ಅನ್ನದಾತನಿಗೆ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ, ನಾವು ಏನು ಅನ್ಯಾಯ ಮಾಡಿದ್ದೇವೆ. ನಮಗೆ ಏನು ತಿಳಿಯೋದಿಲ್ಲ ಎಂದು ನಮ್ಮ ಭೂಮಿ ಕಿತ್ತುಕೊಂಡು ನಮ್ಮನ್ನು ಬೀದಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ. ಸೂಕ್ತ ಪರಿಹಾರ ಕೊಟ್ಟು ಕಾಮಗಾರಿ ಮಾಡಿ, ಇಲ್ಲಾ ಅಂದ್ರೆ ವಿಷ ಕುಡಿದು ಪ್ರಾಣ ಬಿಡ್ತೇವೆ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಡಿ.16) : ಅನ್ನದಾತನಿಗೆ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ, ನಾವು ಏನು ಅನ್ಯಾಯ ಮಾಡಿದ್ದೇವೆ. ನಮಗೆ ಏನು ತಿಳಿಯೋದಿಲ್ಲ ಎಂದು ನಮ್ಮ ಭೂಮಿ ಕಿತ್ತುಕೊಂಡು ನಮ್ಮನ್ನು ಬೀದಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ. ಸೂಕ್ತ ಪರಿಹಾರ ಕೊಟ್ಟು ಕಾಮಗಾರಿ ಮಾಡಿ, ಇಲ್ಲಾ ಅಂದ್ರೆ ವಿಷ ಕುಡಿದು ಪ್ರಾಣ ಬಿಡ್ತೇವೆ ಎಂದು ರೈತರು ಪಟ್ಟು ಹಿಡಿದಿದ್ದಾರೆ.
undefined
ಭರದಿಂದ ಸಾಗುತ್ತಿರುವ ಎಕ್ಸ್‍ಪ್ರೆಕ್ಸ್ ಹೈವೇ(express highway) ಹೆದ್ದಾರಿ ಕಾಮಗಾರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು, ಸರಿಯಾದ ಪರಿಹಾರ ನೀಡದ ಹೊರತು ತಮ್ಮ ಪ್ರಾಣ ಹೋದರೂ ಒಂದಿಂಚೂ ಭೂಮಿಯನ್ನು ಹೆದ್ದಾರಿಗೆ ಬಿಟ್ಟು ಕೊಡೋದಿಲ್ಲ ಎನ್ನುತ್ತಿರುವ ಭೂಮಿ ಮಾಲೀಕರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ.
ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ
ಹೌದು ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಚೆನ್ನೈ ಎಕ್ಸ್‌ಪ್ರೆಸ್ ಹೈವೇ ಹಾದು ಹೋಗಲಿದೆ. ಈ ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೇ ವೇಳೆ ಹೆದ್ದಾರಿ ಪ್ರಾಧಿಕಾರ ರೈತರಿಗೆ ಪಕ್ಷಪಾತ ಮಾಡಲಾಗುತ್ತಿದೆ. ಭೂಸ್ವಾಧೀನ ನಿಯಮ ಪಾಲನೆ ಮಾಡದೆ ರೈತರನ್ನು ಬೀದಿಗೆ ತಳ್ಳುವ ಕೆಲಸ ನಡೆಯುತ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅದರಲ್ಲೂ ಮಾಲೂರು ತಾಲೂಕಿನ ಲಕ್ಷ್ಮೀಸಾಗರ, ಕೂಗಿಟ್ಟಗಾನಹಳ್ಳಿ, ಹೂಗೇನಹಳ್ಳಿ, ಪಾಶ್ರ್ವಗಾನಹಳ್ಳಿ, ಸಬ್ಬೇನಹಳ್ಳಿ, ಅಬ್ಬೇನಹಳ್ಳಿ ಸೇರಿದಂತೆ ಬಂಗಾರಪೇಟೆ ತಾಲ್ಲೂಕಿನ ಕಲ್ಲುಕೆರೆ, ಐತಾಂಡಹಳ್ಳಿ, ದೊಡ್ಡೂರು, ಸೂಲಿಕುಂಟೆ, ಕುಪ್ಪನಹಳ್ಳಿ ಹಾಗೂ ಕೆಜಿಎಫ್ ತಾಲ್ಲೂಕಿನ ವಡ್ರಹಳ್ಳಿ, ದೊಡ್ಡಕಾರಿ, ದಾದೇನಹಳ್ಳಿಯ ಹತ್ತಾರು ಗ್ರಾಮಗಳಲ್ಲಿ ಹೆದ್ದಾರಿ ಪ್ರಾಧಿಕಾರ ರೈತರ ಜಮೀನುಗಳನ್ನು ವಶಕ್ಕೆ ಪಡೆದು ಮಾರುಕಟ್ಟೆ ಬೆಲೆ ನೀಡಿಲ್ಲ. ಜೊತೆಗೆ ಭೂ ಸ್ವಾಧೀನ ನಿಯಮದಂತೆ ಅಲ್ಲಿನ ಭೂಮಿಯ ಬೆಲೆಯ ಎರಡು ಪಟ್ಟು ಹೆಚ್ಚಿಗೆ ಹಣ ಪರಿಹಾರ ನೀಡಬೇಕು. ಯಾವುದೇ ನಿಯಮ ಪಾಲಿಸದೆ ರೈತರು ನೂರಾರು ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ರೈತರಿಗೆ ವಂಚನೆ ಮಾಡಿದ್ದಾರೆ ಅನ್ನೋದು ರೈತರ ಆರೋಪ.
ಬಲವಂತದ ಭೂಸ್ವಾಧೀನಕ್ಕೆ ಕೆಐಎಡಿಬಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ದ ರೈತರ ಆಕ್ರೋಶ!
ಇನ್ನು ಪ್ರಮುಖವಾಗಿ ಈ ಮೊದಲು ಭೂಸ್ವಾಧೀನ ಪ್ರಕ್ರಿಯೇ ವೇಳೆ ಪಿ-ನಂಬರ್ ನಲ್ಲಿರುವ ಸರ್ವೆ ನಂಬರ್‌ಗಳಿಗೂ ಪರಿಹಾರ ನೀಡಲಾಗುತಿತ್ತು. ಆದರೆ ಈಗ ಹೆದ್ದಾರಿ ಪ್ರಾಧಿಕಾರ ಭೂಸ್ವಾದೀನ ವೇಳೆ ಪಿ-ನಂಬರ್ ನಲ್ಲಿರುವ ಸರ್ವೇ ನಂಬರ್‌ಗಳಿಗೆ ಪರಿಹಾರ ನೀಡಿಲ್ಲ. ಇದೇ ಹೆದ್ದಾರಿಯಲ್ಲಿ ಮಾಲೂರಿನ ಕೆಲವೆಡೆ ಪಿ ನಂಬರ್ ಭೂಮಿಗೆ ಪರಿಹಾರ ನೀಡದೆ ರೈತರಿಗೆ ವಂಚನೆ ಮಾಡಲಾಗುತ್ತಿದೆ.
ಈಗಾಗಲೇ ಸುಮಾರು 1700 ರೈತರ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿಗೆ ನಮಗ್ಯಾಕೆ ಶಿಕ್ಷೆ ಅನ್ನೋದು ರೈತರ ಒತ್ತಾಯವಾಗಿತ್ತು. ಹತ್ತಾರು ವರ್ಷಗಳಿಂದ ಈ ಭೂಮಿ ನಂಬಿಕೊಂಡು ಗ್ರಾಮದಲ್ಲಿ ಬದುಕುತ್ತಿದ್ದೇವೆ. ಹೀಗಿರುವಾಗ ನಮ್ಮ ಭೂಮಿ ಕಿತ್ತುಕೊಂಡು ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಹಾಗಾಗಿ ರೈತರು ರಸ್ತೆ ಕಾಮಗಾರಿಕೆ ಅಡ್ಡಿಪಡಿಸಿ ಕಾಮಗಾರಿ ಮಾಡಲು ಬಿಟ್ಟಿಲ್ಲ ಅನ್ನೋದು ರೈತರ ಅಳಲು. ಇನ್ನು ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಆದರೂ ತಮ್ಮ ಸಮಸ್ಯೆ ಬಗೆಹರಿಯುವ ಮೊದಲು ಅಧಿಕಾರಿಗಳೇ ಬದಲಾಗುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಆದಷ್ಟು ಬೇಗೆ ಇದಕ್ಕೆ ಪರಿಹಾರ ನೀಡುವರು ಅನ್ನೋದು ತಹಶೀಲ್ದಾರ್ ಮಾತು.
ಒಟ್ನಲ್ಲಿ ಹೆದ್ದಾರಿ ಭೂ ಸ್ವಾಧೀನಾಧಿಕಾರಿಗಳ ದ್ವಂದ್ವ ನೀತಿ ಹಾಗೂ ಎಡವಟ್ಟಿನಿಂದ ಬಡ ರೈತರು ಇಂದು ಭೂಮಿಯೂ ಇಲ್ಲದೆ, ಪರಿಹಾರವೂ ಇಲ್ಲದೆ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ. ಗೊಂದಲದಲ್ಲಿರುವ ಭೂಮಿ ಕಳೆದುಕೊಂಡ ರೈತರು ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕಿದೆ.