ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರಾಘವೇಂದ್ರ-ಗೀತಾಗೆ ಪೈಪೋಟಿ ನೀಡಿರುವ ಈಶ್ವರಪ್ಪ

By Kannadaprabha NewsFirst Published May 4, 2024, 10:13 AM IST
Highlights

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಬ್ಬರ, ಮಲೆನಾಡಿನ ಬಿಸಿಲಿನ ಧಗೆಯನ್ನು ಮೀರಿಸುವಂತಿದೆ. ಬಿಜೆಪಿಯ ಬಿ.ವೈ.ರಾಘವೇಂದ್ರ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿಯವರ ವರ್ಚಸ್ಸಿನ ನೆಲೆಯಲ್ಲಿ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

ಗೋಪಾಲ್‌ ಯಡಗೆರೆ

ಶಿವಮೊಗ್ಗ (ಮೇ.04): ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಬ್ಬರ, ಮಲೆನಾಡಿನ ಬಿಸಿಲಿನ ಧಗೆಯನ್ನು ಮೀರಿಸುವಂತಿದೆ. ಬಿಜೆಪಿಯ ಬಿ.ವೈ.ರಾಘವೇಂದ್ರ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿಯವರ ವರ್ಚಸ್ಸಿನ ನೆಲೆಯಲ್ಲಿ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತ, ನಾಲ್ಕು ಸೋಲುಗಳ ಸೇಡು ತೀರಿಸಿಕೊಳ್ಳಲು ಸಚಿವ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ತಮ್ಮ ಸೋದರಿ ಗೀತಾ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಮೂಲಕ ಗೆಲುವನ್ನು ಎದುರು ನೋಡುತ್ತಿದ್ದಾರೆ. ಇನ್ನು, ಯಾರೂ ನಿರೀಕ್ಷಿಸದ ರೀತಿಯಲ್ಲಿ ಕಣಕ್ಕಿಳಿದು ಅದೇ ಅಬ್ಬರದಲ್ಲಿ ಕ್ಷೇತ್ರದಾದ್ಯಂತ ಭಾರೀ ಜನಬೆಂಬಲ ಗಳಿಸುವಂತೆ ಕಾಣುತ್ತಿರುವ ಸ್ವತಂತ್ರ ಅಭ್ಯರ್ಥಿ ಕೆ. ಎಸ್‌. ಈಶ್ವರಪ್ಪ ಎಲ್ಲರ ಕೇಂದ್ರ ಬಿಂದುವಾಗಿ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ, ಯಡಿಯೂರಪ್ಪನವರ ತವರು ನೆಲದಲ್ಲಿ ಜಿದ್ದಾಜಿದ್ದಿ ಹೋರಾಟವೇ ನಡೆದಿದೆ.

ನೇರ ಸ್ಪರ್ಧೆಯನ್ನು ನಿರೀಕ್ಷಿಸುತ್ತಿದ್ದ ಬಿ.ವೈ.ರಾಘವೇಂದ್ರ ಅವರಿಗೆ ಈಶ್ವರಪ್ಪನವರ ಸ್ಪರ್ಧೆ ಆತಂಕ ಸೃಷ್ಟಿಸಿರುವುದಂತೂ ಸುಳ್ಳಲ್ಲ. ಇವರಿಬ್ಬರ ನಡುವೆ ಕಾಂಗ್ರೆಸ್‌ ಸುಲಭವಾಗಿ ಗೆಲ್ಲಲಿದೆ ಎಂಬ ಮಾತನ್ನು ಸುಳ್ಳು ಮಾಡಲು ಬಿಜೆಪಿ ಬೆವರು ಹರಿಸುತ್ತಿದೆ. ರಾಘವೇಂದ್ರ ಅವರಿಗೆ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ ವಲಯ ಗೆಲುವಿನ ರಕ್ಷಣೆ ನೀಡಲಿದೆ. ಜೊತೆಗೆ, ಕಳೆದ 10 ವರ್ಷಗಳಲ್ಲಿ ಮಾಡಿದ ಅಭಿವೃದ್ದಿಯ ಕಾರ್ಯದ ಮಹಾಪೂರವೇ ಗೆಲುವಿನ ಗೆರೆಯನ್ನು ಸ್ಪಷ್ಟವಾಗಿಸುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಜೊತೆಗೆ, ಹಿಂದೆ ಜೆಡಿಎಸ್‌ ಎದುರು ಸ್ಪರ್ಧಿಸಿ ಗೆದ್ದಿದ್ದ ಬಿಜೆಪಿಗೆ, ಈಗ ಅದೇ ಪಕ್ಷ ಬೆಂಬಲ ನೀಡುತ್ತಿರುವುದರಿಂದ ಗೆಲುವಿನಲ್ಲಿ ಯಾವ ಅನುಮಾನವೂ ಇಲ್ಲ ಎಂಬುದು ರಾಘವೇಂದ್ರ ಅವರ ಸ್ಪಷ್ಟ ನುಡಿ.

ಕೇಂದ್ರ ಸರ್ಕಾರ ಪ್ರಜ್ವಲ್‌ ರೇವಣ್ಣಗೆ ರಕ್ಷಣೆ ನೀಡುತ್ತಿದೆ: ಸಿಎಂ ಸಿದ್ದರಾಮಯ್ಯ ಕಿಡಿ

2014ರ ಚುನಾವಣೆಯಲ್ಲಿ ಸೋತ ಬಳಿಕ ಬೆಂಗಳೂರು ಸೇರಿದ್ದ ಗೀತಾ ಅವರು, ಈ ಬಾರಿ ಗೆದ್ದರೂ ಕ್ಷೇತ್ರದಲ್ಲಿ ಇರುವುದಿಲ್ಲ ಎಂಬ ಟೀಕೆಯ ಹೊರತಾಗಿಯೂ ಕಾಂಗ್ರೆಸ್‌ ನಾಯಕರು ಗೆಲುವಿಗಾಗಿ ರಾಜ್ಯ ಸರ್ಕಾರದ ಗ್ಯಾರಂಟಿಯನ್ನೇ ನಂಬಿದ್ದಾರೆ. ಸಂಘಟಿತ ಹೋರಾಟ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಲು ಕೆಲ ನಾಯಕರು ತಡಬಡಾಯಿಸುತ್ತಿರುವುದು ಸುಳ್ಳಲ್ಲ. ಇವರಿಬ್ಬರ ನಡುವೆ ಅನಿರೀಕ್ಷಿತವಾಗಿ ಪ್ರವೇಶ ಮಾಡಿರುವ ಕೆ.ಎಸ್‌.ಈಶ್ವರಪ್ಪ, ರಾಷ್ಟ್ರಭಕ್ತರ ಬಳಗದ ವತಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. 

ಆರಂಭದಲ್ಲಿ ಯಡಿಯೂರಪ್ಪ ಕುಟುಂಬ ರಾಜಕಾರಣದ ವಿರುದ್ಧದ ಹೋರಾಟ ಎಂದು ಸಾಂಕೇತಿಕ ಹೋರಾಟವಾಗಿ ಸ್ಪರ್ಧೆಗೆ ಧುಮುಕಿದ್ದ ಈಶ್ವರಪ್ಪನವರು ಬಳಿಕ ತಮಗೆ ಸಿಕ್ಕ ಅಭೂತಪೂರ್ವ ಬೆಂಬಲ ಕಂಡು ನಿಜವಾದ ಹೋರಾಟ ಆರಂಭಿಸಿದ್ದಾರೆ. ಈಶ್ವರಪ್ಪ ಅವರಿಗೆ ಸಿಗುತ್ತಿರುವ ಬೆಂಬಲ ಕಂಡು ಎರಡೂ ಪಕ್ಷಗಳ ನಾಯಕರು ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ. ಇವರಿಗೆ ಸಿಗುತ್ತಿರುವ ಬೆಂಬಲ ಯಾವ ಮೂಲದ್ದು ಎಂಬುದು ಈ ಕ್ಷಣದವರೆಗೂ ನಿಗೂಢವಾಗಿಯೇ ಇದೆ. ಈಶ್ವರಪ್ಪನವರು ತಮ್ಮ ಮತದಾರರನ್ನು ‘ಅದೃಶ್ಯ ಮತದಾರರು’ ಎನ್ನುತ್ತಿರುವುದರ ಹಿಂದೆ ಬೇರೆ ಏನೋ ಇರಬಹುದೆಂಬ ಸಂಶಯ ಹಲವರಲ್ಲಿದೆ. 

ಬಿ. ವೈ. ರಾಘವೇಂದ್ರ: ಯಡಿಯೂರಪ್ಪನವರ ಪ್ರಭಾವ ವಲಯದ ಮೂಲಕ ರಾಜಕಾರಣ ಪ್ರವೇಶಿಸಿ, ಬಳಿಕ ಸ್ವಂತ ವರ್ಚಸ್ಸು ಬೆಳೆಸಿಕೊಂಡವರು. ಅಭಿವೃದ್ಧಿಯ ಹರಿಕಾರ ಎಂದು ವಿರೋಧಿಗಳೂ ಹೇಳುವಂತೆ ಕೆಲಸ ಮಾಡಿದವರು. ನಾಲ್ಕನೇ ಬಾರಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದು, ಕ್ಷೇತ್ರದಾದ್ಯಂತ ಇರುವ ಬಿಜೆಪಿಯ ಸಂಪರ್ಕ ಜಾಲ, ಕಾರ್ಯಕರ್ತರ ಪಡೆ, ನರೇಂದ್ರ ಮೋದಿಯವರ ವರ್ಚಸ್ಸನ್ನು ನಂಬಿಕೊಂಡಿದ್ದಾರೆ.

ಗೀತಾ: ಖ್ಯಾತ ನಟ ರಾಜ್‌ಕುಮಾರ್‌ ಕುಟುಂಬದ ಸೊಸೆ, ನಟ ಹಾಗೂ ಪತಿ ಶಿವರಾಜ್‌ಕುಮಾರ್‌ ಅವರ ಪತ್ನಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿ ಎಂಬ ಅಂಶಗಳನ್ನು ಮುಂದಿಟ್ಟುಕೊಂಡು ಕಣಕ್ಕೆ ಇಳಿದಿದ್ದಾರೆ. ಮಧು ಬಂಗಾರಪ್ಪ ಉಸ್ತುವಾರಿ ಸಚಿವರಾಗಿರುವುದನ್ನು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೇ ಬಂಡವಾಳವನ್ನಾಗಿಸಿಕೊಂಡಿದ್ದಾರೆ. ಅಪರೂಪದ ಅತಿಥಿ ಎಂಬ ಟೀಕೆಯನ್ನು ಎದುರಿಸುತ್ತಾ ಬಿಜೆಪಿಯ ಒಡಕಿನ ಲಾಭ ಪಡೆಯಬಹುದೆಂಬ ನಂಬಿಕೆಯಲ್ಲಿದ್ದಾರೆ.

ಕೆ. ಎಸ್‌. ಈಶ್ವರಪ್ಪ: ಹಿಂದುತ್ವದ ಫೈರ್‌ ಬ್ರಾಂಡ್‌ ಎಂದೇ ಖ್ಯಾತಿವೆತ್ತ ಮಾಜಿ ಸಚಿವ ಈಶ್ವರಪ್ಪ ಅವರ ಸ್ಪರ್ಧೆಯನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಅವರಿಗೆ ಸಿಗುತ್ತಿರುವ ಜನ ಬೆಂಬಲ, ಸಭೆಗಳಿಗೆ ಸೇರುತ್ತಿರುವ ಜನರು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲವು ನಾಯಕರ ಬೆಂಬಲ ಅವರ ಹೋರಾಟಕ್ಕೆ ದೊಡ್ಡ ಬಲ ಸಿಕ್ಕಿದೆ. ಹಿಂದುತ್ವ, ಮೋದಿ ಹೆಸರು, ಬಿಜೆಪಿ ಪಕ್ಷದ ಶುದ್ಧೀಕರಣದ ಹೆಸರಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. 

ಜಾತಿ ಲೆಕ್ಕಾಚಾರ: ಲಿಂಗಾಯಿತ, ಈಡಿಗ ಮತ್ತು ಮುಸ್ಲಿಮರು ಬಹುತೇಕ ಸಮಸಂಖ್ಯೆಯಲ್ಲಿದ್ದು, ಉಳಿದಂತೆ ಬ್ರಾಹ್ಮಣರು, ಹಿಂದುಳಿದ ವರ್ಗ, ದಲಿತ ವರ್ಗದವರು ಫಲಿತಾಂಶ ನಿರ್ಣಯಿಸುವ ಮಟ್ಟಿಗಿದ್ದಾರೆ. ಕಾಂಗ್ರೆಸ್‌, ಈಡಿಗ ಮತ್ತು ಮುಸ್ಲಿಂ ಮತದಾರರನ್ನು, ಬಿಜೆಪಿ, ಲಿಂಗಾಯಿತ ಮತ್ತು ಬ್ರಾಹ್ಮಣ ಸಮುದಾಯವನ್ನು ನಂಬಿಕೊಂಡಿದೆ. ಉಳಿದ ಸಮುದಾಯಗಳು ಎಲ್ಲ ಕಡೆ ಹಂಚಿ ಹೋಗಿವೆ. ಇವರ ನಡುವೆ ಜಾತ್ಯತೀತವಾಗಿ ಎಲ್ಲರೂ ತಮಗೆ ಬೆಂಬಲ ನೀಡುತ್ತಿದ್ದಾರೆ ಎಂದು ಈಶ್ವರಪ್ಪ ನಂಬಿದ್ದಾರೆ.

2019ರ ಫಲಿತಾಂಶ
ಬಿ.ವೈ.ರಾಘವೇಂದ್ರ [ಬಿಜೆಪಿ]-ಗೆಲುವು--7,29,872.
ಮಧು ಬಂಗಾರಪ್ಪ [ಜೆಡಿಎಸ್]-ಸೋಲು- 5,06,512.

400 ರೇಪ್‌: ರಾಹುಲ್‌ ಗಾಂಧಿ ಹೇಳಿಕೆಗೆ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ

ಮತದಾರರ ಸಂಖ್ಯೆ
ಒಟ್ಟು ಮತದಾರರು: 17,29,901
ಪುರುಷರು-8,52,107
ಮಹಿಳೆಯರು- 8,77,761
ಇತರೆ 33

click me!