4100 ಕ್ಯೂಸೆಕ್ಸ್ ನೀರಿನಲ್ಲಿ 1,700ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಕಳ್ಳತನ
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು(ಆ.03): ರಾಜ್ಯದಲ್ಲಿ ಈ ವರ್ಷ ಭಾರೀ ಮಳೆ ಆಗುತ್ತಿದೆ. ಅವಧಿಗೂ ಮುನ್ನವೇ ಬಹುತೇಕ ಡ್ಯಾಂಗಳು ಭರ್ತಿ ಆಗಿವೆ. ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದರಿಂದ ತುಂಗಭದ್ರಾ ಡ್ಯಾಂ ಸಹ ಭರ್ತಿ ಆಗಿ ನದಿ ಮತ್ತು ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದ್ರೂ ಸಹ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಮೇಲ್ಭಾಗದ ರೈತರು ಕಾಲುವೆಗೆ ಪಂಪ್ ಸೆಟ್ ಗಳನ್ನು ಅಳವಡಿಕೆ ಮಾಡಿ ನೀರು ಕಳ್ಳತನ ಮಾಡುತ್ತಿದ್ದಾರೆ. ಹೀಗಾಗಿ ಕೆಳಭಾಗದ ರೈತರು ಕಾಲುವೆ ನೀರಿಗಾಗಿ ಗೋಳಾಟ ನಡೆಸಿದ್ದಾರೆ. ತುಂಗಭದ್ರಾ ಎಡದಂಡೆ ಕಾಲುವೆ ರಾಯಚೂರು ಜಿಲ್ಲೆಗೆ ಅತೀ ಮುಖ್ಯವಾಗಿದೆ. ಮುಂಚೆ ತುಂಗಭದ್ರಾ ಎಡದಂಡೆ ನಾಲೆಯಲ್ಲಿ 3600 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ರೆ ಕೊನೆಯ ಭಾಗದ ಎಲ್ಲಾ ರೈತರ ಜಮೀನುಗಳಿಗೆ ನೀರು ಮುಟ್ಟುತ್ತಿತ್ತು. ಆದ್ರೆ ಇತ್ತೀಚಿಗೆ 3600 ಆಯ್ತು, 4000, 4100 ಹೋಯ್ತು.. ಈಗ 5,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ರೂ ಕೆಳಭಾಗದ ರೈತರ ಜಮೀನಿಗೆ ನೀರು ಮುಟ್ಟುತ್ತಿಲ್ಲ. ಅಷ್ಟೇ ಅಲ್ಲದೇ ಸಿರವಾರ ಭಾಗಕ್ಕೂ ಕಾಲುವೆಯಲ್ಲಿ ಕುಡಿಯುವ ನೀರು ಸಿಗಲಾರದ ಪರಿಸ್ಥಿತಿ ಇದೆ. ಹಾಗಾದರೇ 5000 ಕ್ಯೂಸೆಕ್ಸ್ ನೀರು ಎಲ್ಲಿ ಹೋಯ್ತು. ಈ ಬಗ್ಗೆ ಸರ್ಕಾರದ ಎಲ್ಲರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ.
undefined
ರಾಯಚೂರು, ಸಿರವಾರ ತಾಲೂಕಿನ ರೈತರು ನೀರಿಗಾಗಿ ಪರದಾಟ
ತುಂಗಭದ್ರಾ ಎಡದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ 6 ಲಕ್ಷ 2 ಸಾವಿರ ಎಕರೆ ಭೂಮಿ ಬರುತ್ತೆ..ಇಷ್ಟು ವಿಶಾಲವಾದ ಪ್ರದೇಶಕ್ಕೆ ನೀರಾವರಿ ಆಗಬೇಕು ಎಂಬ ಉದ್ದೇಶದಿಂದ ತುಂಗಭದ್ರಾ ಎಡದಂಡೆ ಕಾಲುವೆ ನಿರ್ಮಾಣ ಮಾಡಿದ್ದಾರೆ. ಆದ್ರೆ ಶೇ.50ರಷ್ಟು ಪ್ರದೇಶಕ್ಕೆ ನೀರೇ ಬರುವುದಿಲ್ಲ. ಅದರಲ್ಲೂ ರೈತರು ಬೆಳೆ ಬೆಳೆಯಲು ಬೇಕಾದಷ್ಟು ನೀರು ಬರುವುದೇ ಇಲ್ಲ. ಈ ಅಚ್ಚುಕಟ್ಟು ಪ್ರದೇಶಕ್ಕಾಗಿ ಡ್ರಾ ಮಾಡಿದ ನೀರು ಎಲ್ಲಿ ಹೋಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ನಿತ್ಯ ಕಳ್ಳತನ ಆಗುತ್ತಿರುವ ನೀರು ನಿಲ್ಲಿಸಬೇಕಾಗಿದೆ.
RAICHUR: ಮಳೆಗಾಲದಲ್ಲಿಯೂ ಲಿಂಗಸುಗೂರು ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ!
ನೀರು ಕಳ್ಳತನ ಮಾಫಿಯಾಕ್ಕೆ ಬ್ರೇಕ್ ಹಾಕುವುದು ಯಾವಾಗ
ತುಂಗಭದ್ರಾ ಎಡದಂಡೆ ಕಾಲುವೆಗೆ ಎಷ್ಟೇ ನೀರುಬಿಟ್ಟರೂ ಕೊನೆಯ ಭಾಗದ ರೈತರಿಗೆ ನೀರು ಸಿಗದೇ ರೈತರು ಪ್ರತಿವರ್ಷವೂ ಗೋಳಾಟ ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ನೀರಾವರಿ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳಲು ಮುಂದೆ ಆಗುತ್ತಿಲ್ಲ. ನಿತ್ಯವೂ 1ಲಕ್ಷ 70 ಸಾವಿರ ಎಕರೆ ಪ್ರದೇಶಕ್ಕೆ ಸುಮಾರು ಶೇ. 26ರಷ್ಟು ಅಕ್ರಮವಾಗಿ ಪಂಪ್ ಸೆಟ್ ಗಳು ಅಳವಡಿಕೆ ಮಾಡಿ ನೀರು ಕಳ್ಳತನ ಮಾಡುತ್ತಿದ್ದಾರೆ. ಈ ಕಳ್ಳತನದಿಂದಲ್ಲೇ ಕೆಳಭಾಗದ ರೈತರು ನೀರು ಸಿಗದೇ ಪರದಾಟ ನಡೆಸಿದ್ದಾರೆ. ಈ ನೀರು ಕಳ್ಳತನದ ಬಗ್ಗೆ ಸರ್ಕಾರದ ಜೊತೆಗೆ ನಾವು ಹತ್ತಾರು ಚರ್ಚೆ ನಡೆಸಿದ್ದೇವೆ. ಆದ್ರೂ ಅಧಿಕಾರಿಗಳು ನೀರಿನ ಕಳ್ಳತನ ನಿಲ್ಲಿಸಲು ಮುಂದಾಗುತ್ತಿಲ್ಲವೆಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಲುವೆ ನೀರು ಕಳ್ಳತನದ ಬಗ್ಗೆ ರಾಯಚೂರು ಡಿಸಿ ಹೇಳಿದ್ದೇನು?
ಐಸಿಸಿ ಸಭೆಯ ತೀರ್ಮಾನದಂತೆ ತುಂಗಭದ್ರಾ ಎಡದಂಡೆ ಕಾಲುವೆಗೆ 4100 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಬರುವ ಮೈಲ್ 47ನ ಕಾಲುವೆಯಲ್ಲಿ 2,730 ಕ್ಯೂಸೆಕ್ಸ್ ನೀರು ಇರಬೇಕು. ಆದ್ರೆ ನಾನು ಇಂಜಿನಿಯರ್ ಗಳ ಸಭೆ ಮಾಡಿದಾಗ ಮೈಲ್ 47ರಲ್ಲಿ 400 ಕ್ಯೂಸೆಕ್ಸ್ ನೀರು ಕಡಿಮೆ ಇರುವುದು ತಿಳಿದು ಬಂದಿದೆ. ಸಭೆಯಲ್ಲಿ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ್ದೇನೆ. ರಾಯಚೂರು ಜಿಲ್ಲೆಗೆ ಎಷ್ಟು ಪ್ರಮಾಣದಲ್ಲಿ ನೀರು ಬರಬೇಕು. ನಿತ್ಯವೂ ಎಷ್ಟು ಗೇಜ್ ಇರಬೇಕೋ ಅಷ್ಟೇ ಗೇಜ್ ನಿರ್ವಹಣೆ ಮಾಡಬೇಕು. ಮುಂದಿನ ಎಲ್ಲಾ ಮೈಲ್ ಗಳಲ್ಲಿಯೂ ನೀರಿನಲ್ಲಿ ವ್ಯತ್ಯಾಸ ಆಗಬಾರದು.ನೀರಿನ ವ್ಯತ್ಯಾಸವಾಗದಂತೆ ನಿರ್ವಹಣೆ ಮಾಡಲು ಒಂದು ವಿಶೇಷ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ರಚನೆಯಾದ ತಂಡವೂ ನಿತ್ಯ ಓಡಾಟ ನಡೆಸಲಿದೆ. ರೈತರಿಗೆ ತೊಂದರೆ ಆಗದಂತೆ ಕಾಲುವೆಗೆ ನೀರು ಹರಿಸಲು ನಾವು ಮುಂದಾಗುತ್ತೇವೆ ಎಂದು ರಾಯಚೂರು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ಭರವಸೆ ನೀಡಿದ್ದರು.
ಒಟ್ಟಿನಲ್ಲಿ ರಾಜ್ಯಾದ್ಯಂತ ಮಳೆ ಆಗಿ ಹಳ್ಳಿಕೊಳ್ಳಗಳು ತುಂಬಿ ಹರಿಯುತ್ತಿದ್ರೂ, ರಾಯಚೂರು ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ಕಾಲುವೆಯ ನೀರಿಗೆ ಕನ್ನ ಹಾಕುವುದು ಮಾತ್ರ ಇನ್ನೂ ನಿಂತಿಲ್ಲ.