ಅಂದು ನೆರೆ, ಇಂದು ಕೊರೋನಾ ಹೊಡೆತ: ರೈತರ ಕಷ್ಟ ತಪ್ಪಿದ್ದಲ್ಲ

By Kannadaprabha NewsFirst Published Apr 12, 2020, 10:05 AM IST
Highlights

ಲೌಕ್‌ಡೌನ್‌ದಿಂದ ಕಂಗಾಲಾದ ದ್ರಾಕ್ಷಿ ಬೆಳೆಗಾರರು| ದ್ರಾಕ್ಷಿ ಹಣ್ಣಿನ ಮಾರುಕಟ್ಟೆ ಮೇಲೆ ಕೊರೋನಾ ಕರಿ ನೆರಳು| ದ್ರಾಕ್ಷಿ ಬೆಳೆದರೂ ಮಾರುಕಟ್ಟೆ ಇಲ್ಲದೆ ರೈತರ ಬದುಕು ಅತಂತ್ರ ಒಂದು ನೆರೆ ಹಾವಳಿ ಹಾನಿ ಇನ್ನೊಂದು ಕೊರೋನಾ ಕರಿನೆರಳು ಹೀಗಾಗಿ ಒಂದಾದ ನಂತರ ಒಂದು ರೈತರ ಜೊತೆ ಚಲ್ಲಾಟ ಆಡುತ್ತಿದ್ದು, ಇದು ರೈತರ ಬದುಕಿನ ಹೊಟ್ಟೆಮೇಲೆ ಬರೆ ಎಳೆದಂತಾಗಿದೆ|

ಸಿ.ಎ.ಇಟ್ನಾಳಮಠ 

ಅಥಣಿ(ಏ.12): ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ಮಾತು ಅಕ್ಷರಶಃ ಸದ್ಯಕ್ಕೆ ದ್ರಾಕ್ಷಿ ಬೆಳೆಗಾರರಿಗೆ ಅನ್ವಯವಾಗುತ್ತದೆ. ಸಾರಿಗೆ, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ದ್ರಾಕ್ಷಿ ಬೆಳೆದ ರೈತ ಸದ್ಯಕ್ಕೆ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಇಡೀ ರಾಜ್ಯದಲ್ಲೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ವಿಜಯಪುರ ಹೊರತುಪಡಿಸಿದರೆ ಎರಡನೆ ಸ್ಥಾನದಲ್ಲಿರುವುದೇ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು. ಇಲ್ಲಿಂದ ನೆರೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ಕೇರಳ ವಿವಿಧ ಭಾಗಗಳಿಗೆ ಮಾರಾಟವಾಗುತಿದ್ದ ದ್ರಾಕ್ಷಿ ಹಣ್ಣಿನ ಮಾರುಕಟ್ಟೆ ಮೇಲೆ ಕೊರೋನಾ ಕರಿ ನೆರಳು ತನ್ನ ಕೆನ್ನಾಲಿಗೆ ಚಾಚಿದ್ದರಿಂದ ದ್ರಾಕ್ಷಿ ಬೆಳೆಗಾರರು ಮತ್ತಷ್ಟು ಬೀದಿಗೆ ಬಿದ್ದಂತಾಗಿದೆ. ಲಾಕ್‌ಡೌನ್‌ ದಿಂದ ಸಾರಿಗೆ ವ್ಯವಸ್ಥೆ ಇಲ್ಲ. ಮಾರುಕಟ್ಟೆ ಇಲ್ಲದೆ ಇವರ ದುಸ್ಥಿತಿ ಯಾರೂ ಕೇಳುವವರು ಇಲ್ಲದಂತಾಗಿದೆ. ಇದರಿಂದ ಆತ ಬೆಳೆದ ಬೆಳೆ ಭೂಮಿಯಲ್ಲೇ ನಾಶವಾಗುತ್ತಿದೆ.

ಕೊರೋನಾ ಭೀತಿ: ಬಫರ್‌ ಝೋನ್‌ ಇದ್ದರೂ ಕುಡಚಿ ಮಹಿಳೆ ಅಥಣಿಯಲ್ಲಿ ಪ್ರತ್ಯಕ್ಷ!

ತಾಲೂಕಾದ್ಯಂತ ಸುಮಾರು 4 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಇದರಲ್ಲಿ ಈಗಾಗಲೇ ಕಳೆದ ಏಳೆಂಟು ತಿಂಗಳ ಹಿಂದೆ ನೆರೆ ಹಾವಳಿಯಲ್ಲಿ ಸುಮಾರು 2 ಸಾವಿರ ಎಕರೆ ದ್ರಾಕ್ಷಿ ಬೆಳೆ ಹಾನಿಯಾಗಿದ್ದು, ಈಗ ಉಳಿದ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದರೂ ಮಾರುಕಟ್ಟೆ ಇಲ್ಲದೆ ರೈತರ ಬದುಕು ಅತಂತ್ರವಾಗಿದೆ. ಒಂದು ನೆರೆ ಹಾವಳಿ ಹಾನಿ ಇನ್ನೊಂದು ಕೊರೋನಾ ಕರಿನೆರಳು ಹೀಗಾಗಿ ಒಂದಾದ ನಂತರ ಒಂದು ರೈತರ ಜೊತೆ ಚಲ್ಲಾಟ ಆಡುತ್ತಿದ್ದು, ಇದು ರೈತರ ಬದುಕಿನ ಹೊಟ್ಟೆಮೇಲೆ ಬರೆ ಎಳೆದಂತಾಗಿದೆ.

ಕೊರೋನಾ ಕರಿನೆರಳಿಂದ ಮಾರುಕಟ್ಟೆವಂಚಿತವಾಗಿ ಸುಮಾರು 1 ಸಾವಿರಕ್ಕೂ ಮಿಕ್ಕಿ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಹಾನಿಯಾಗಿದೆ. ಇದರ ಅಂದಾಜು ಹಾನಿ ಮೊತ್ತ .150 ಕೋಟಿ. ಅದಲ್ಲದೆ ನೆರೆ ಹಾವಳಿಯಲ್ಲಿಸುಮಾರು 200 ಕೋಟಿಯಷ್ಟು ದ್ರಾಕ್ಷಿ ಹಾಳಾಗಿದೆ. ಇದರಿಂದ ರೈತ ಮಾಡಿದ ಸಾಲ ಹಾಗೂ ಇತರೇ ವೆಚ್ಚ ಸೇರಿ ಸಾಕಷ್ಟುಹಾನಿಯಾಗಿದೆ. ರೈತರಿಗೆ ವಿಶೇಷ ಫ್ಯಾಕೇಜ್‌ ಘೋಷಿಸಿ ಪರಿಹಾರ ಒದಗಿಸಬೇಕು ಎಂದು ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಎಸ್‌.ಎಂ.ನಾಯಕ ಹೇಳಿದ್ದಾರೆ. 

ನಾನು ಖದ್ದಾಗಿ ಅಧುನಿಕ ತಂತ್ರಜ್ಞಾನದ ಒಣದ್ರಾಕ್ಷಿ ಕಾರ್ಖಾನೆ ನಡೆಸುತಿದ್ದೇನೆ. ಮಾರುಕಟ್ಟೆ ಅನಾನುಕೂಲ ಮತ್ತು ಸಾರಿಗೆ ಸ್ಥಗಿತದಿಂದ ನನ್ನ ಕಾರ್ಖಾನೆ ಸುಮಾರು 40 ಕೋಟಿ ಹಾನಿ ಆಗುತ್ತಿದೆ. ನಾವು ತಯಾರಿಸಿದ ಒಣ ದ್ರಾಕ್ಷಿ ವಿದೇಶಕ್ಕೆ ನೇರ ಮಾರಾಟವಾಗುತ್ತವೆ. ಅದಕ್ಕಾಗಿ ರೈತರಿಗೆ ಬಹಳಷ್ಟು ಹಾನಿಯಾಗಿದೆ. ದ್ರಾಕ್ಷಿ ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಯಲ್ಲಿ ಸೇರಿಸಿಲ್ಲ. ತಕ್ಷಣ ಸೇರಿಸಬೇಕು ಎಂದು ಮಾಜಿ ಶಾಸಕ ಶಾಹಾಜಾನ ಡೊಂಗರಗಾಂವ ತಿಳಿಸಿದ್ದಾರೆ. 

ಪರಿಹಾರ ಎಂಬುದು ಗಗನ ಕುಸುಮವಾಗಿದೆ. ಹಿಂದೆ ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ಬರಗಾಲದಲ್ಲಿ ಪರಿಹಾರ ಬರಲಿಲ್ಲ. ಮುಂದೆ ಸುಮಾರು ಮೂರು ಬಾರಿ ನೆರೆ ಹಾವಳಿ ಅನುಭವಿಸಿದಾಗಲೂ ಸರಿಯಾಗಿ ಪರಿಹಾರ ಸಿಗಲಿಲ್ಲ. ಅದರಂತೆ ಈಗ ಆದ ಹಾನಿಗೂ ಪರಿಹಾರ ಬರುತ್ತದೆ ಎಂಬ ನಂಬಿಕೆ ನಮಗಿಲ್ಲ. ಅದಕ್ಕಾಗಿ ದ್ರಾಕ್ಷಿ ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು ಎಂದು ದ್ರಾಕ್ಷಿ ಬೆಳೆಗಾರ ಚಿದಾನಂದ ಶೇಗುಣಸಿ ಹೇಳಿದ್ದಾರೆ.  
 

click me!