ರಂಗವೇರದೇ ಉಳಿದು ಬಿಡುತ್ತಿದ್ದ ನಾಟಕಗಳು - ರಂಗಶಂಕರದಲ್ಲಿ ಮಾತ್ರ

By Web DeskFirst Published Oct 15, 2018, 5:58 PM IST
Highlights

ಅಕ್ಟೋಬರ್ - ನವೆಂಬರಿನಲ್ಲಿ ಕಲೆಗಳು ಅರಳುತ್ತದಂತೆ. ಹೌದು. ಅಂಥ ಹಲವು ಪ್ರದರ್ಶನಗಳ ಗುಚ್ಛ ನಿಮಗಾಗಿ. ನಾಟಕ ಪ್ರಿಯರಿಗಾಗಿ. ಅಕ್ಟೋಬರ್ 27 ರಿಂದ ನವೆಂಬರ್ 4ರವರೆಗೆ ನಡೆಯುವ ಈ ನಾಟಕೋತ್ಸವದಲ್ಲಿ ನಡೆಯುವ ನಾಟಕಗಳ ವಿಶೇಷತೆ ಬಗ್ಗೆ ದಿಗ್ಗಜರು ಹೇಳುವುದೇನು?

ಬೆಂಗಳೂರು: ನಗರದ ಜೆಪಿ ನಗರದ ರಂಗ ಶಂಕರದಲ್ಲಿ ಅಕ್ಟೋಬರ್ 27ರಿಂದ ನವೆಂಬರ್ 4ರ ತನಕ ನಾಟಕೋತ್ಸವ ನಡೆಯಲಿದೆ. ಎಲ್ಲಿಯೂ ಪ್ರದರ್ಶನವಾಗದ ನಾಟಕಗಳು ಇಲ್ಲಿ ಪ್ರದರ್ಶಿತಗೊಳ್ಳುವುದು ಈ ಉತ್ಸವದ ವಿಶೇಷ. 

ರಂಗ ಶಂಕರ: ನಾಟಕ ಪ್ರಿಯರ ಮನತಣಿಸುವ ಹಬ್ಬ

ನಾಟಕಗಳಿರುವಷ್ಟು ಕಾಲ ನಾಟಕಕ್ಕೆ ಪ್ರತಿರೋಧವೂ ಇದ್ದೇ ಇರುತ್ತದೆ. ಜಾತಿ, ಧರ್ಮ, ಸಾಮಾಜಿಕ, ರಾಜಕೀಯ ಇತ್ಯಾದಿ ಕಾರಣಗಳಿಗೆ ನಾಟಕಗಳನ್ನು ಬದಲಾಯಿಸುವ ಅಥವಾ ಬಾಯಿ ಮುಚ್ಚಿಸುವ ಅಥವಾ ಸಂಪೂರ್ಣ ನಾಶ ಮಾಡುವ ಪ್ರಕ್ರಿಯೆ ನಡೆದೇ ಇದೆ. ಹೀಗಿರುವಾಗಲೂ ನಾಟಕಾಕರರು ಮತ್ತು ಕಲಾವಿದರು ಈ ಅಡಚಣೆಗಳನ್ನು, ಈ ಬೇಲಿಗಳನ್ನು ತಮ್ಮ ಸೃಜನಶೀಲತೆಯಿಂದ ಹಾಗೂ ಧೈರ್ಯದಿಂದ ದಾಟುತ್ತಲೇ ಬಂದಿದ್ದಾರೆ.

ಉತ್ಸವದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ಗುಚ್ಛ

ಕಲಾವಿದರ ಅಭಿವ್ಯಕ್ತಿಗೆ ಮಾರಕವಾಗುವಂತೆ ಮಾತು ಮಾತಿಗೂ ಆಕ್ಷೇಪಿಸುವ, ಕೃತಿಯಲ್ಲಿ ಲೋಪ ಹುಡುಕುವ, ಗೊತ್ತರಿಯದ ಕಾರಣಗಳಿಗೆ ಅವಮಾನವಾಗಿದೆ ಎಂದು ಆರೋಪಿಸುವ ಸಮಯದಲ್ಲಿ ನಾವಿದ್ದೇವೆ. ಕಲೆಯ ಅಭಿವ್ಯಕ್ತಿಗೆ ಬೇಕಿರುವ ಸೆಲೆಯ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ರಂಗಭೂಮಿಯನ್ನೊಂದು ಚಲನಾ ಶಕ್ತಿಯನ್ನಾಗಿ ಮಾಡಿಕೊಂಡು, ನಾಟಕಗಳ ಮೂಲಕ ಚರ್ಚೆ ಭಿನ್ನಾಭಿಪ್ರಾಯ, ಆಕ್ಷೇಪ ಎಲ್ಲವನ್ನೂ ಬಗೆಹರಿಸಿಕೊಳ್ಳಬಹುದು. ಆದರೆ ನಾಟಕಗಳ ಸದ್ದಡಗಿಸುವುದೆಂದರೆ ವಿಕಸನದ ಹಾದಿಯನ್ನೇ ಮುಚ್ಚಿದಂತೆ. ಇದರಿಂದ ಭವಿಷ್ಯಕ್ಕೆ ಧಕ್ಕೆ ಬರುತ್ತದೆ. ಮನುಷ್ಯನ ಮುಂದಿನ ಹಾದಿ ಮಸುಕಾಗುತ್ತದೆ. 

ದೃಷ್ಟಿಕೋನಗಳನ್ನು, ಇತಿಹಾಸವನ್ನು ಪ್ರಶ್ನಿಸಲು ನಿಂತ ನಾಟಕಗಳು ಹಲವಾರಿವೆ. ಇವತ್ತು ಅವುಗಳಲ್ಲಿ ಕೆಲವಕ್ಕೆ ನಮ್ಮ ಪ್ರಜ್ಞೆಯ ಮೂಲಕ ವಿವರವಾಗಲು ಸಮಯ ಸೂಕ್ತವಾಗಿದೆ ಎಂದು ನಂಬುತ್ತೇವೆ. ಹೀಗೇ ಹುಟ್ಟಿದ್ದು ಈ ನಾಟಕೋತ್ಸವದ ಮುಖ್ಯ ಹೊಳಹು - ರಂಗವೇರದೆ ಉಳಿದುಬಿಡುತ್ತಿದ್ದ ನಾಟಕಗಳು. ಹಳೆಯ ನಾಟಕಗಳನ್ನು ಇಂದಿನ ಪ್ರಜ್ಞೆಯ ಮೂಲಕ ನೋಡುತ್ತ ಹೊಸದಾಗಿ ಆವಾಹಿಸಿಕೊಳ್ಳುವ ಪ್ರಯತ್ನವೇ ರಂಗಶಂಕರ ನಾಟಕೋತ್ಸವ. 

- ವಿವೇಕ್ ಮದನ್, ಉತ್ಸವ ನಿರ್ದೇಶಕರು.

ಕಾಲ, ದೇಶ, ಧರ್ಮ ಯಾವುದೇ ಇರಬಹುದು. ಅಸಹನೆಯ ಕುದಿ ಜಗತ್ತಿನ ಚರಿತ್ರೆಯುದ್ದಕ್ಕೂ ಕಂಡು ಬರುತ್ತದೆ. ಬಡಿದಷ್ಟೂ ಎದೆ ಸೆಟೆಸಿ ನಿಲ್ಲುವ ಸಾಮರ್ಥ್ಯ ಸಾಹಿತ್ಯಕ್ಕಿದೆ. ಹಾಗಾಗಿ ಶತಮಾನಗಳ ಅಸಹನೆಯನ್ನು, ಬಹಿಷ್ಕಾರಗಳನ್ನು ಮೆಟ್ಟಿ ಹೊಸ ಹೊಸ ರೂಪದಲ್ಲಿ ಪ್ರಕಟಗೊಳ್ಳುತ್ತಾ ಬಂದಿದೆ. ನಮ್ಮದೇ ತರ್ಕಗಳನ್ನು ಒರೆಗೆ ಹಚ್ಚಿ ನೋಡುವ, ಧಿಕ್ಕರಿಸಿದ್ದನ್ನು ಮತ್ತೆ ಮುಂಚೂಣಿಗೆ ತಂದು ಚರ್ಚಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದಿದೆ. ಈ ಅಸಹನೆಯ ಕುದಿ ಷೇಕ್ಸ್‌ಪಿಯರ್, ಇಬ್ಸೆನ್ನನಂಥಾ ಮಹಾ ನಾಟಕಕಾರರನ್ನೂ ಕಾಡಿದೆ. ಈ ದಿಸೆಯಲ್ಲಿ ಧಿಕ್ಕರಿಸಿದ, ಬಹಿಷ್ಕರಿಸಿದ ನಾಟಕಗಳನ್ನು ಮತ್ತೊಮ್ಮೆ, ಇಂದಿನ ದೃಷ್ಟಿಕೋನದಲ್ಲಿ ನೋಡುವ ಈ ನಾಟಕೋತ್ಸವ ಇಂದಿನ ದೇಶ-ಕಾಲದಲ್ಲಿ ತುಂಬಾ ಮುಖ್ಯವೆನಿಸುತ್ತದೆ.
-  ಸುರೇಂದ್ರನಾಥ್, ಸೃಜನಾತ್ಮಕ ನಿರ್ದೇಶಕರು, ರಂಗ ಶಂಕರ.

click me!