ನಾನು ಚುನಾವಣೆಯನ್ನು ನೇರವಾಗಿ ಎದುರಿಸುತ್ತೇನೆ. ಪೆನ್‌ಡ್ರೈವ್, ಸಿ.ಡಿ. ಇದೆ ಎಂದು ಹೆದರಿಸುವಂತಹ ಚಿಲ್ಲರೆ ಕೆಲಸಕ್ಕೆ ಕೈ ಹಾಕುವುದಿಲ್ಲ. ಸದನದಲ್ಲಿ ಚರ್ಚೆಗೆ ಬರುವಂತೆ ನೇರವಾಗಿ ಸವಾಲು ಹಾಕುವುದು ನನ್ನ ರಕ್ತದ ಗುಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಮೇ.1): ನಾನು ಚುನಾವಣೆಯನ್ನು ನೇರವಾಗಿ ಎದುರಿಸುತ್ತೇನೆ. ಪೆನ್‌ಡ್ರೈವ್, ಸಿ.ಡಿ. ಇದೆ ಎಂದು ಹೆದರಿಸುವಂತಹ ಚಿಲ್ಲರೆ ಕೆಲಸಕ್ಕೆ ಕೈ ಹಾಕುವುದಿಲ್ಲ. ಸದನದಲ್ಲಿ ಚರ್ಚೆಗೆ ಬರುವಂತೆ ನೇರವಾಗಿ ಸವಾಲು ಹಾಕುವುದು ನನ್ನ ರಕ್ತದ ಗುಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಹಿಂದೆ ಮಹಾನಾಯಕ ಡಿ.ಕೆ. ಶಿವಕುಮಾರ್(DK Shivakumar) ಕೈವಾಡವಿದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಆರೋಪಕ್ಕೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್, ಪ್ರಜ್ವಲ್ ರೇವಣ್ಣ(Prajwal Revanna) ಅವರ ವಿಡಿಯೋ ಹಳೆಯದ್ದು ಎಂದು ಎಚ್.ಡಿ. ರೇವಣ್ಣ ಅವರೇ ಒಪ್ಪಿಕೊಂಡಿದ್ದಾರೆ. ಉಪ್ಪು ತಿಂದವನು ನೀರು ಕುಡಿಯುತ್ತಾನೆ ಎಂದು ಸ್ವತಃ ಕುಮಾರಸ್ವಾಮಿಯೇ ಹೇಳಿದ್ದಾರೆ ಎಂದರು.
ಪ್ರಜ್ವಲ್ ರೇವಣ್ಣ ವಿಡಿಯೋ ಹಗರಣ ರಿಲೀಸ್ ಮಾಡಿದ್ದು ಯಾರು? ಸ್ಫೋಟಕ ಮಾಹಿತಿ ಬಹಿರಂಗ!
ಬಿಜೆಪಿ ನಾಯಕ ದೇವರಾಜೇಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ನಾಯಕರಿಗೆ ವಿಡಿಯೋ ಕುರಿತು ಹಿಂದೆಯೇ ಪತ್ರ ಬರೆದಿದ್ದರು. ಹೀಗಿರುವಾಗ ನನಗೂ ಈ ಪ್ರಕರಣಕ್ಕೂ ಏನು ಸಂಬಂಧ? ನಾನು ಈ ರೀತಿಯ ಚಿಲ್ಲರೆ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಮತ್ತು ಅವರ ಕುಟುಂಬದವರಿಗೆ ನನ್ನನ್ನು ನೆನಪು ಮಾಡಿಕೊಳ್ಳದಿದ್ದರೆ ಊಟ ಸೇರುವುದಿಲ್ಲ. ಹಾಸನದಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಜ್ವಲ್ ತಮ್ಮ ಮಗನೆಂದಿದ್ದರು. ಈಗ ತಮಗೂ, ಪ್ರಜ್ವಲ್ ಕುಟುಂಬಕ್ಕೂ ಸಂಬಂಧವಿಲ್ಲ ಎಂದು ಮಾತು ಬದಲಿಸಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ‘ಹಾಸನದಲ್ಲಿ ಸಮಸ್ಯೆಯಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ, ಅದನ್ನು ದೊಡ್ಡವರು ನೋಡಿಕೊಳ್ಳುತ್ತಾರೆ ಎಂದಿದ್ದಾರೆ’ ಎಂದು ತಿಳಿಸಿದ್ದರು. ಈಗ ತಮ್ಮ ಮಾತನ್ನೇ ಬದಲಿಸುತ್ತಿದ್ದಾರೆ ಎಂದರು.
ಪ್ರಜ್ವಲ್ ವಿಡಿಯೋ ವಿಚಾರ ಮೊದಲೇ ನಮಗೆ ಗೊತ್ತಿದ್ದರೆ ಈ ಹಿಂದೆಯೇ ರಿಲೀಸ್ ಮಾಡಬಹುದಿತ್ತು. ಆದರೆ, ಪ್ರಜ್ವಲ್ ಕಾರು ಚಾಲಕನೇ ಈ ಪೆನ್‌ಡ್ರೈವ್ ವಿಚಾರದಲ್ಲಿ ನಮಗೆ ಸಂಬಂಧವಿಲ್ಲ ಎಂದು ಮಾತನಾಡಿದ್ದಾರೆ. ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತರು, ಅವರ ಮನೆಯ ಕೆಲಸಗಾರರ ಹೆಸರೂ ಕೇಳಿಬರುತ್ತಿದೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದಾರೆ. ಅವೆಲ್ಲವೂ ಕಣ್ಣೊರೆಸುವ ತಂತ್ರ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ನಮ್ಮನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ಈ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವವರಿರುವ ಪಕ್ಷದ ಜತೆ ಅವರು ಮೈತ್ರಿ ಮುಂದುವರಿಸುತ್ತಾರೆಯೇ ಎಂಬ ಬಗ್ಗೆ ತಮ್ಮ ನಿಲುವು ಪ್ರಕಟಿಸಲಿ. ಈ ಪ್ರಕರಣದಿಂದ ನಮ್ಮ ರಾಜ್ಯವಲ್ಲದೆ, ದೇಶಕ್ಕೆ ಅವಮಾನವಾಗಿದೆ ಎಂದರು.
ಪ್ರಜ್ವಲ್ ಬೇರೆಯವನೇ?: ಎಚ್‌ಡಿಕೆಗೆ ಡಿಕೆಶಿ ಪ್ರಶ್ನೆ
ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ತಮ್ಮ ಕುಟುಂಬವಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ತಪ್ಪು ಮಾಡಿದ್ದರೆ ತಪ್ಪು ಎಂದು ಹೇಳಲಿ. ಆದರೆ, ಕುಟುಂಬವೇ ಅಲ್ಲ ಎಂದರೆ ಹೇಗೆ? ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಹೆಸರಿನ ಮುಂದಿರುವ ಎಚ್.ಡಿ. ಎಂಬುದು ಹೊಳೇನರಸಿಪುರದ ದೇವೇಗೌಡ ಅವರ ಮಗ ಅಂತಲ್ಲವೇ? ತಾವು ತಮ್ಮ ಪತ್ನಿ, ಮಗ, ಸೊಸೆ, ಮೊಮ್ಮಗ ಮಾತ್ರ ತಮ್ಮ ಕುಟುಂಬ ಎನ್ನುವ ಕುಮಾರಸ್ವಾಮಿ ಅವರು ದೇವೇಗೌಡ ಅವರನ್ನು ಹೊರಗಿಟ್ಟಿದ್ದೇಕೆ ಎಂದು ಡಿ.ಕೆ. ಶಿವಕುಮಾರ್ ಕುಟುಕಿದರು.
ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಹುಬ್ಬಳ್ಳಿ ಕೊಲೆ ಪ್ರಕರಣದಲ್ಲಿ ನಮ್ಮ ಸರ್ಕಾರ ಆರೋಪಿಯನ್ನು ಬಂಧಿಸಿ, ತನಿಖೆಯನ್ನು ಸಿಐಡಿಗೆ ವಹಿಸಿದೆ. ಪ್ರಧಾನಿಯಿಂದ ಬಿಜೆಪಿ ನಾಯಕರೆಲ್ಲ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಆದರೆ ಈಗ ಅವರೆಲ್ಲರೂ ಸುಮ್ಮನಾಗಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮಹಿಳೆಯರಿಗೆ ಸುರಕ್ಷಿತವಾಗಿದೆ ಎಂದರು.
ಪರಾರಿಗೆ ನೆರವಾದವರ್‍ಯಾರು?:
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗುವುದಕ್ಕೂ ಮುನ್ನ ಯಾರ್‍ಯಾರು ಎಲ್ಲಿದ್ದರು? ಪ್ರಜ್ವಲ್ ರೇವಣ್ಣ ಯಾರ ಜತೆ ಮಾತನಾಡಿದ್ದರು ಎಂದು ಆತನ ದೂರವಾಣಿ ಕರೆಯ ವಿವರ ತೆಗೆಸಿದರೆ ಗೊತ್ತಾಗುತ್ತದೆ. ನಾವು ಈಗ ಸಂತ್ರಸ್ತೆಯ ರಕ್ಷಣೆ ಮಾಡಬೇಕಿದೆ. ಆರೋಪಿ ಸಂಸದ, ಮಾಜಿ ಪ್ರಧಾನಿಗಳ ಕುಟುಂಬದ ಸದಸ್ಯ. ಮನೆಗೆಲಸದವರ ಮೇಲೂ ದೌರ್ಜನ್ಯ ನಡೆಸಲಾಗಿದೆ ಎಂಬ ಮಾಹಿತಿಯಿದೆ. ಇದು ನೋವಿನ ಸಂಗತಿ. ಸಂತ್ರಸ್ತೆಯರ ಗುರುತನ್ನು ರಹಸ್ಯವಾಗಿಟ್ಟು ತನಿಖೆ ನಡೆಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣ ವಿಡಿಯೋ ಲೀಕ್ ಮಾಡಿದ್ದು ಎನ್‌ಡಿಎ ಮೈತ್ರಿಕೂಟದವರೇ: ನಯನಾ ಮೋಟಮ್ಮ
ನನ್ನ ವಿರುದ್ಧ ಪ್ರತಿಭಟಿಸಲಿ, ಬೇಡ ಎಂದವರ್‍ಯಾರು?
ಡಿಸಿಎಂ ಸ್ಥಾನದಿಂದ ಡಿ.ಕೆ. ಶಿವಕುಮಾರ್ ಅವರನ್ನು ವಜಾಗೊಳಿಸಬೇಕು, ಅವರ ಮನೆ ಮುಂದೆ ಪ್ರತಿಭಟಿಸಬೇಕು ಎಂದು ಕುಮಾರಸ್ವಾಮಿ ಮಾಡಿರುವ ಆಗ್ರಹಕ್ಕೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ನನ್ನ ವಿರುದ್ಧ ಪ್ರತಿಭಟಿಸಲಿ. ಯಾರೂ ಬೇಡ ಎಂದಿಲ್ಲ. ಕುಮಾರಸ್ವಾಮಿ ಏಕೆ ತಡಮಾಡುತ್ತಿದ್ದೀಯಾ? ಯಾವ ಕರೆ ಬೇಕಾದರೂ ನೀಡಲಿ ಎಂದು ವಾಗ್ದಾಳಿ ನಡೆಸಿದರು.