ನಿಖರವಾದ ಬೆಳೆ ಸಮೀಕ್ಷೆಯಿಂದ ಅರ್ಹ ರೈತರಿಗೆ ಅನುಕೂಲ

By Kannadaprabha NewsFirst Published Oct 7, 2023, 10:43 AM IST
Highlights

ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ ನಿಖರವಾದ ಬೆಳೆ ಸಮೀಕ್ಷೆ ಮಾಡಬೇಕು. ನಿಖರ ಬೆಳೆ ಸಮೀಕ್ಷೆಯಿಂದ ಸರ್ಕಾರದ ಸೌಲಭ್ಯಗಳನ್ನು ಅರ್ಹ ರೈತರಿಗೆ ನೀಡಲು ಅನುಕೂಲವಾಗುತ್ತದೆ ಎಂದು ಹೆಚ್ಟುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ತಿಳಿಸಿದರು.

 ಮೈಸೂರು :  ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ ನಿಖರವಾದ ಬೆಳೆ ಸಮೀಕ್ಷೆ ಮಾಡಬೇಕು. ನಿಖರ ಬೆಳೆ ಸಮೀಕ್ಷೆಯಿಂದ ಸರ್ಕಾರದ ಸೌಲಭ್ಯಗಳನ್ನು ಅರ್ಹ ರೈತರಿಗೆ ನೀಡಲು ಅನುಕೂಲವಾಗುತ್ತದೆ ಎಂದು ಹೆಚ್ಟುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೃಷಿ ಅಂಕಿ ಅಂಶಗಳ, ಬೆಳೆ ವಿಮಾ ಯೋಜನೆ ಹಾಗೂ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಬೆಳೆ ಸಮೀಕ್ಷೆಯಲ್ಲಿ ಅಗತ್ಯ ಸಹಕಾರ ನೀಡಬೇಕು. ಬೆಳೆ ಸಮೀಕ್ಷೆ ಮಾಡುವುದರಿಂದ ಬೆಳೆ ನಷ್ಟ ಪರಿಹಾರ ನೀಡಲು ಸಹಕಾರಿಯಾಗುತ್ತದೆ. ಅಧಿಕಾರಿಗಳು ಕ್ಷೇತ್ರಕ್ಕೆ ಗೆ ಹೋಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಬೆಳೆ ಸಮೀಕ್ಷೆಗೆ ಹೋದಾಗ ಕೆಲವು ವೇಳೆ ಬೆಳೆ ಕಟಾವು ಆಗಿರುತ್ತದೆ. ಕೆಲವು ಸಂದರ್ಭದಲ್ಲಿ ಬಿತ್ತನೆಯೇ ಆಗಿರುವುದಿಲ್ಲ. ಇದರಿಂದ ಕೆಲವು ರೈತರ ಬೆಳೆ ಸಮೀಕ್ಷೆಯಿಂದ ಹೊರಗುಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕ್ಷೇತ್ರಕ್ಕೆ ಭೇಟಿ ನೀಡಿ ವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ಮಾಡಿ ಎಂದು ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಜನನ ಮತ್ತು ಮರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಶೇ. 100ರಷ್ಟು ಮಾಡಬೇಕು. ಜನನ ಅಥವಾ ಮರಣ ಸಂಬoಧಿಸಿದ 21 ದಿನಗಳ ಒಳಗೆ ನೋಂದಣಿ ಆಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಂದ್ರ ಅವರು ಮಾತನಾಡಿ, ಬೆಳೆ ಕಟಾವು ಪ್ರಾಯೋಗಗಳ ಮೂಲಕ ಇಳುವರಿ, ಬೆಳೆಗಳಿಗೆ ಕೀಟ ಬಾಧೆ, ಬೆಳೆ ವಿಮೆ ಸೌಲಭ್ಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅರ್ಲಿ ಕಾರಿಫ್ ನಲ್ಲಿ ಬೆಳೆ ಕಟಾವು ಪ್ರಯೋಗದಲ್ಲಿ ಮೈಸೂರು, ನಂಜನಗೂಡು, ಸರಗೂರು ತಾಲೂಕುಗಳಲ್ಲಿ ಕಡಿಮೆ ಪ್ರಗತಿ ಆಗಿದೆ. ಕೆ.ಆರ್. ನಗರ, ಹುಣಸೂರು, ಪಿರಿಯಾಪಟ್ಟಣ, ಟಿ. ನರಸೀಪುರಗಳಲ್ಲಿ ಉತ್ತಮ ಪ್ರಗತಿ ಆಗಿದೆ. ವಿಮಾ ಕಂಪನಿಯ ಪ್ರತಿನಿಧಿಗಳಿಂದ ನಂಜನಗೂಡು ತಾಲೂಕಿನಲ್ಲಿ 28, ಹುಣಸೂರು ತಾಲೂಕಿನಲ್ಲಿ 9 ಹಾಗೂ ಮೈಸೂರು ತಾಲೂಕಿನಲ್ಲಿ 1 ಸೇರಿದಂತೆ ಒಟ್ಟು 38 ಆಕ್ಷೇಪಣೆ ಬಂದಿವೆ ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಸರ್ಕಾರದ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ

ತಿಪಟೂರು: ರೈತರು ಹೊಲ-ತೋಟಗಳಲ್ಲಿ ಬಿತ್ತಿ ಬೆಳೆದಿರುವ ಬೆಳೆಗಳ ಸಮೀಕ್ಷೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ರೈತರೇ ಬೆಳೆದ ಬೆಳೆಯ ಚಿತ್ರಗಳ ಸಮೇತ ಮಾಹಿತಿಯನ್ನು ಸಂಬಂದಿಸಿದ ಆ್ಯಪ್‌ ಬಳಸಿ ಮೊಬೈಲ್‌ನಲ್ಲೇ ದಾಖಲಿಸಬಹುದಾಗಿದೆ. ಸರಕಾರದಿಂದ ಸಿಗುವ ಎಲ್ಲ ಸವಲತ್ತು ಪಡೆಯಲು ಅವಶ್ಯವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಚನ್ನಕೇಶವಮೂರ್ತಿ ತಿಳಿಸಿದ್ದಾರೆ.

ಸರ್ಕಾರಗಳ ಸೌಲಭ್ಯ ಸಿಗಲು ಬೆಳೆ ಸಮೀಕ್ಷೆಯೇ ಮೂಲ ಆಧಾರ. ರೈತರು ತಮ್ಮ ಜಮೀನಿನ ಪಹಣಿ ರಕ್ಷಣೆಯಷ್ಟೇ ಮುಖ್ಯವಾಗಿ ಬೆಳೆ ಸಮೀಕ್ಷೆಯನ್ನು ಮಾಡಲು ಮುತುವರ್ಜಿ ವಹಿಸಬೇಕು. ರೈತರೇ ನೇರವಾಗಿ ಬೆಳೆ ಸಮೀಕ್ಷೆ ಆಪ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಹಿಂದೆಲ್ಲಾ ಅಧಿಕಾರಿಗಳು ಅಥವಾ ಗುತ್ತಿಗೆ ಸಿಬ್ಬಂದಿ ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಆದರೆ, ಈಗ ತಂತ್ರಜ್ಙಾನ ಬೆಳೆದಂತೆ ಎಲ್ಲವೂ ಬದಲಾಗಿದ್ದು, ಮೊಬೈಲ್‌ನಲ್ಲೇ ಬೆಳೆ ಸಮೀಕ್ಷೆ ಮಾಡಿ ಸವಲತ್ತು ಪಡೆಯಬಹುದಾಗಿದೆ ಎಂದರು.

ಬೆಳೆ ಸಮೀಕ್ಷೆಗೆ ಒತ್ತು ನೀಡಿ:  ವಿಷಯದಲ್ಲಿ ಮೊದಲ ಹಂತದಲ್ಲಿ ರೈತರಿಗೆ ಬೆಳೆ ಸಮೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಆ ನಂತರ ಬೆಳೆ ಸಮೀಕ್ಷೆ ಮಾಡಲು ಗುತ್ತಿಗೆ ಆಧಾರದ ಮೇಲೆ ಪ್ರತಿ ಗ್ರಾಮಕ್ಕೆ ನೇಮಿಸಿರುವ ಖಾಸಗಿ ವ್ಯಕ್ತಿಗಳು ಬೆಳೆ ಸಮೀಕ್ಷೆ ಮಾಡುತ್ತಿದ್ದು ತಾವುಗಳು ಅವರನ್ನು ಸಂಪರ್ಕಿಸಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರಗಳನ್ನು ನಿಖರವಾಗಿ ದಾಖಲಿಸುವುದು. ಮೂರನೇ ಹಂತದಲ್ಲಿ ಖಾಸಗಿ ವ್ಯಕ್ತಿಗಳು ಕೊಟ್ಟ ಮಾಹಿತಿಯನ್ನು ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಿದರಷ್ಟೇ ಬೆಳೆ ಸಮೀಕ್ಷೆ ಅಂತಿಮವಾಗಲಿದೆ. ಹೀಗಾಗಿ ರೈತರು ಪರಿಹಾರ ಸೇರಿದಂತೆ ಯಾವುದೆ ಸೌಲಭ್ಯಗಳು ಸಿಗಲಿಲ್ಲ ಎಂದು ಇಲಾಖೆಗಳಿಗೆ ದೂರು ಕೊಡುವುದನ್ನು ಬಿಟ್ಟು ಕಾಲಕಾಲಕ್ಕೆ ಪಕ್ಕಾ ಬೆಳೆ ಸಮೀಕ್ಷೆಗೆ ಒತ್ತು ಕೊಡಬೇಕಿದೆ.

ಸರ್ಕಾರದ ಯೋಜನೆ ರೈತರಿಗೆ: ಪ್ರಕೃತಿ ವಿಕೋಪಗಳಾದಾಗ ನಷ್ಟದ ಸಮೀಕ್ಷೆ, ಬೆಳೆವಿಮೆ, ರಾಗಿಗೆ ಬೆಂಬಲ ಬೆಲೆ, ಸಹಾಯಧನ, ಬೆಳೆ ಪರಿಹಾರ ಹೀಗೆ ಎಲ್ಲಕ್ಕೂ ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ. ನಿಮ್ಮ ಜಮೀನಿನಲ್ಲಿ ಏನು ಬೆಳೆದಿದ್ದೀರಿ ಎನ್ನುವುದರ ಆಧಾರದ ಮೇಲೆ ಸರ್ಕಾರದ ಯೋಜನೆಗಳು ರೈತರಿಗೆ ಸಿಗಲಿವೆ. ಹೀಗಾಗಿ ಎಲ್ಲ ರೈತರು ತಮ್ಮ ಜಮೀನಿನ ದಾಖಲೆಗಳ ಕಡೆ ಹೇಗೆ ಗಮನಹರಿಸುತ್ತೀರೋ ಹಾಗೇ ಬೆಳೆ ಸಮೀಕ್ಷೆಯನ್ನು ಮಾಡಬೇಕಾದ ಅನಿವಾರ್ಯತೆ ಇದೆ.

ಯಾವುದು ಆ್ಯಪ್‌:? : ಖಾರೀಫ್ ಸೀಸನ್ ಫಾರ್ಮರ್ ಸರ್ವೆ 2023-24 ಇದು ಬೆಳೆ ಸಮೀಕ್ಷೆ ಮಾಡಲು ಇರುವ ಆಪ್, ಸ್ಮಾರ್ಟ್ ಫೋನ್‌ಗಳಲ್ಲಿ ಪ್ಲೇ ಸ್ಟೋರ್‌ಗೆ ಹೋಗಿ ಈ ಆಪ್ ಡೌನ್‌ಲೋಡ್ ಮಾಡಿಕೊಂಡರೆ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಆಪ್‌ನಲ್ಲಿ ಲಭ್ಯವಾಗಲಿದೆ. ಬೆಳೆಯ ಫೋಟೋಗಳ ಜೊತೆಗೆ ಸರ್ವೆ ನಂಬರ್, ಬೆಳೆಯ ಸ್ಥಿತಿ ಎಲ್ಲವನ್ನೂ ಈ ಆಪ್‌ನಲ್ಲಿ ಡೌನ್‌ಲೋಡ್ ಮಾಡಬಹುದು.

ಬೆಳೆ ಸಮೀಕ್ಷೆ ಆಪ್ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬಂದಿಸಿದ ರೈತ ಸಂಪರ್ಕ ಕೇಂದ್ರಗಳು ಅಥವಾ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ರೇಷ್ಮೆ ಇಲಾಖೆ ಮತ್ತು ಆಯಾ ಗ್ರಾಮಗಳಿಗೆ ನಿಯೋಜಿಸಿದ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಬಹುದು. ಎಲ್ಲಾ ರೈತ ಬಾಂಧವರು ಕಡ್ಡಾಯವಾಗಿ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಖರವಾಗಿ ತಮ್ಮ ಬೆಳೆಯನ್ನು ದಾಖಲಿಸಬೇಕೆಂದು ಚನ್ನಕೇಶವಮೂರ್ತಿ ತಿಳಿಸಿದ್ದಾರೆ.

click me!