ಲಾಕ್‌ಡೌನ್‌ನಿಂದಾಗಿ ಗದ್ದೆಯಲ್ಲಿಯೇ ಸೃಷ್ಟಿಯಾಯ್ತು ಮಾರ್ಕೆಟ್..!

By Kannadaprabha NewsFirst Published May 3, 2020, 9:10 AM IST
Highlights

ಕಲ್ಲಂಗಡಿ ಪ್ರಿಯರು ಮತ್ತು ವರ್ತಕರು ಅವರ ಗದ್ದೆಗೆ ಧಾವಿಸಿ ತಮಗೆ ಬೇಕಾದಷ್ಟುಕಲ್ಲಂಗಡಿಯನ್ನು ಕೆ.ಜಿ.ಗೆ ಕೇವಲ 10 ರು.ಯಂತೆ ಖರೀದಿಸಿ ಕೊಂಡೊಯ್ದರು. ತಮ್ಮ ಗದ್ದೆಯಲ್ಲಿಯೇ ಮಾರುಕಟ್ಟೆಸೃಷ್ಟಿಯಾಗಿ ಸುರೇಶ್‌ ನಾಯಕ್‌ ಚಕಿತರಾದರು.

ಉಡುಪಿ(ಮೇ.03): ಅನಿರ್ದಿಷ್ಟಾವಧಿಯ ಲಾಕ್‌ಡೌನ್‌ನಿಂದಾಗಿ, ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ರೈತ ಸುರೇಶ್‌ ನಾಯಕ್‌ ಅವರು ತಾನು 13 ಎಕ್ರೆ ಜಮೀನಿನಲ್ಲಿ ಕಷ್ಟಪಟ್ಟು ಬೆಳೆಸಿದ್ದ ಸುಮಾರು 70 ಟನ್‌ ಕಲ್ಲಂಗಡಿಯನ್ನು ಮಾರುವುದಕ್ಕಾಗದೆ ಕಂಗಾಲಾಗಿದ್ದರು.

ಈ ಬಗ್ಗೆ ವಾಟ್ಸ್ಯಾಪ್‌ನಲ್ಲಿ ಸುದ್ದಿ ಹರಿಡಾಡುತ್ತಲೇ, ಕಲ್ಲಂಗಡಿ ಪ್ರಿಯರು ಮತ್ತು ವರ್ತಕರು ಅವರ ಗದ್ದೆಗೆ ಧಾವಿಸಿ ತಮಗೆ ಬೇಕಾದಷ್ಟುಕಲ್ಲಂಗಡಿಯನ್ನು ಕೆ.ಜಿ.ಗೆ ಕೇವಲ 10 ರು.ಯಂತೆ ಖರೀದಿಸಿ ಕೊಂಡೊಯ್ದರು. ತಮ್ಮ ಗದ್ದೆಯಲ್ಲಿಯೇ ಮಾರುಕಟ್ಟೆಸೃಷ್ಟಿಯಾಗಿ ಸುರೇಶ್‌ ನಾಯಕ್‌ ಚಕಿತರಾದರು.

ಮಗಳನ್ನು ಮುದ್ದು ಮಾಡದ ಸ್ಥಿತಿ ಯಾರಿಗೂ ಬರಬಾರದು; ಬೆಳಗಾವಿಯ ಸ್ಟಾಫ್‌ ನರ್ಸ್‌ ಭಾವುಕ ಕಥನ!

ಕೊರೀನಾ ಲಾಕ್‌ಡೌನ್‌ನಿಂದಾಗಿ, ಹೀಗೂ ಒಂದು ಮಾರುಕಟ್ಟೆಯ ವ್ಯವಸ್ಥೆಯೊಂದನ್ನು ಮಾಡಿಕೊಳ್ಳಬಹುದು ಎಂಬುದನ್ನು ಅರಿತ ಸುರೇಶ್‌ ನಾಯಕ್‌, ತಾನು ಬೆಳೆದ ಕಲ್ಲಂಗಡಿ ಖಾಲಿಯಾಗುತಿದ್ದಂತೆ, ತನ್ನಂತೆ ತಲೆ ಮೇಲೆ ಕೈಹೊತ್ತು ಕುಳಿತಿದ್ದ ಜಿಲ್ಲೆಯ ಇತರ ಹತ್ತಾರು ರೈತರಿಂದ 200 ಟನ್‌ಗೂ ಅಧಿಕ ಕಲ್ಲಂಗಡಿಯನ್ನು ತಾನೇ ಖರೀದಿಸಿ ಗ್ರಾಹಕರಿಗೆ ತಲುಪಿಸಿದರು. ನಷ್ಟದ ಅಂಚಿನಲ್ಲಿದ್ದ ಜಿಲ್ಲೆಯ ರೈತರಿಗೂ ಲಾಭ ಮಾಡಿಕೊಟ್ಟರು.

ಬೆಲೆಯಿಲ್ಲದೆ ಬಾಕಿಯಾಗಿದ್ದ ಪಪ್ಪಾಯಿ ಬೆಳೆ ಮನೆಯಿಂದಲೇ ಸೇಲಾಯ್ತು

ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸುರೇಶ್‌ ನಾಯಕ್‌, ತೋಟಗಾರಿಕಾ ಇಲಾಖೆ, ಕೆವಿಕೆ ಸಹಾಯದಿಂದ ಬೇರೆ ಜಿಲ್ಲೆಯಿಂದಲೂ ಕಲ್ಲಂಗಡಿ ಮಾತ್ರವಲ್ಲದೆ, ಕ್ಯಾಬೇಜ್‌, ಟೊಮೆಟೋ, ಬೀಟ್‌ರೂಟ್‌, ಗೆಣಸು, ಸಾಂಬಾರ್‌ ಸೌತೆ ಇತ್ಯಾದಿಗಳನ್ನು ಟನ್‌ಗಟ್ಟಲೆ ತನ್ನ ಗದ್ದೆಯ ಪಕ್ಕ ಹಾಕಲಾಗಿರುವ ಸಣ್ಣ ಚಪ್ಪರಕ್ಕೆ ತರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ.

ಭಾರಿ ಬೇಡಿಕೆ, ಬೆಲೆ ಇದೆ:

ಉಡುಪಿಯಲ್ಲಿ ಬೆಳೆಯದ ಈ ತರಕಾರಿಗಳಿಗೆ ಇಲ್ಲಿ ಭಾರಿ ಬೇಡಿಕೆಯೂ ಇದೆ, ಒಳ್ಳೆಯ ಬೆಲೆಯೂ ಇದೆ. ಹಾಗಂತ ಸುರೇಶ್‌ ನಾಯಕ್‌ ಎಲ್ಲಾ ಲಾಭವನ್ನು ತಾನೇ ಮಾಡುತ್ತಿಲ್ಲ. ಚಿತ್ರದುರ್ಗದಲ್ಲಿ ತಾನೇ ಬೆಳೆದ ಈರುಳ್ಳಿ ಕೆಜಿಗೆ 2 - 3 ರು.ಗೂ ಕೊಳ್ಳುವವರಿಲ್ಲದೆ ಚರಂಡಿಗೆ ಸುರಿಯಲು ಸಿದ್ಧರಾಗುತಿದ್ದ ರೈತ ಮಹಿಳೆ ವಸಂತ ಕುಮಾರಿ ಅವರಿಂದ ಕೆ.ಜಿ.ಗೆ 8 - 9 ರು. ಕೊಟ್ಟು ಸುಮಾರು 10 ಟನ್‌ ಉಡುಪಿಗೆ ತರಿಸಿಕೊಂಡು 10 ರು.ಗೆ ಮಾರುತ್ತಿದ್ದಾರೆ. ವರ್ತಕರು - ಗ್ರಾಹಕರು ಅವರ ಗದ್ದೆಗೆ ಬಂದು ಖರೀದಿಸುತ್ತಿದ್ದಾರೆ.

ಹೊರ ಜಿಲ್ಲೆಗೆ ಹೋದ್ರೆ, ಬಂದ್ರೆ ಹೋಂ ಕ್ವಾರಂಟೈನ್‌ ಕಡ್ಡಾಯ

ಬೆಳಗಾವಿಯಿಂದ 60 ಟನ್‌ ಕಲ್ಲಂಗಡಿ, 5 ಟನ್‌ ಕ್ಯಾಬೇಜ್‌, 5 ಟನ್‌ ಬೀಟ್‌ರೂಟ್‌, ಬಾಗಲಕೋಟೆಯಿಂದ 30 ಟನ್‌ ಕಲ್ಲಂಗಡಿ, ಚಿಕ್ಕಮಗಳೂರಿನಿಂದ 24 ಟನ್‌ ಸಿಹಿಗೆಣಸು ತರಿಸಿ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಉಡುಪಿ ಜಿಲ್ಲೆಯ ನಾಗೂರು, ಸಾಲಿಗ್ರಾಮ, ಬೈಂದೂರು, ಶಿರೂರು ಕಡೆಯಿಂದಲೂ ಸೌತೆ ಕಾಯಿ, ಕಲ್ಲಂಗಡಿಗಳನ್ನು ತರಿಸಿ ಗದ್ದೆಯಂಚಿನಿಂದಲೇ ಗ್ರಾಹಕರಿಗೆ ಪೂರೈಕೆ ಮಾಡುತಿದ್ದಾರೆ.

ರೈತರ ಕಷ್ಟರೈತರಿಗೆ ಮಾತ್ರ ಅರ್ಥ ಆಗುತ್ತದೆ. ಈ ಲಾಕ್‌ಡೌನ್‌ ಸಂದರ್ಭದಲ್ಲಿ ಊರಿಗೆಲ್ಲಾ ಊಟ ಹಾಕುವ ರೈತರ ಸಹಾಯಕ್ಕೆ ನಿಲ್ಲದಿದ್ದರೆ ರೈತರಿಗೆ ಮಾತ್ರವಲ್ಲ, ಊರಿಗೆಲ್ಲಾ ಕಷ್ಟದ ದಿನಗಳು ಬರುತ್ತವೆ ಎನ್ನುತ್ತಲೇ ಸುರೇಶ್‌ ನಾಯಕ್‌, ಶಿವಮೊಗ್ಗದ ಯಾರೋ ರೈತರೊಂದಿಗೆ ಮೊಬೈಲಿನಲ್ಲಿ ತರಕಾರಿಯ ವ್ಯವಹಾರದಲ್ಲಿ ಮಗ್ನರಾದರು.

ಗದ್ದೆಯಂಚಿನ ಮಾರುಕಟ್ಟೆಯೇ ಚಾಲ್ತಿ ಬರ್ತದೆ

ಎಂಪಿಎಂಸಿ ಮಾರುಕಟ್ಟೆಯಲ್ಲಿ ನಮ್ಮಂತಹ ರೈತರಿಗೂ ಬೆಲೆ ಇಲ್ಲ, ನಾವು ಬೆಳೆದ ಬೆಳೆಗೂ ಬೆಲೆ ಇಲ್ಲ, ನಮ್ಮಿಂದ ತರಕಾರಿ ಖರೀದಿಸಿದ ಮಧ್ಯವರ್ತಿಗಳು ಇಂದಿಗೂ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಆದ್ದರಿಂದ ನಾವು ರೈತರು ಪರ್ಯಾಯ ಮಾರುಕಟ್ಟೆಹುಡುಕುವ ಅವಶ್ಯಕತೆ ಬಹಳ ಇದೆ. ಈ ಕೊರೋನಾ ಲಾಕ್‌ಡೌನ್‌ ನಮ್ಮ ಗದ್ದೆಯಲ್ಲಿಯೇ ಮಾರುಕಟ್ಟೆಹುಟ್ಟುಹಾಕಿದೆ. ಅದಕ್ಕೆ ಸಾಮಾಜಿಕ ಜಾಲತಾಣಗಳು ಬಹಳ ಸಹಾಯ ಮಾಡಿದೆ. ಇದೇ ಮಾರುಕಟ್ಟೆಪದ್ದತಿ ಮುಂದೆ ರೈತರಿಗೆ ಮಧ್ಯವರ್ತಿಗಳ ಕಾಟ ತಪ್ಪಿಸಿ ವರದಾನವಾಗಲಿದೆ ಎಂದು ಪ್ರಗತಿಪರ ರೈತ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

-ಸುಭಾಶ್ಚಂದ್ರ ಎಸ್‌. ವಾಗ್ಳೆ

click me!