ತೀವ್ರ ಶಾಖದ ಅಲೆ ದುಷ್ಪರಿಣಾಮಕ್ಕೆ ಹಣ್ಣಿನ ಜ್ಯೂಸ್, ತರಕಾರಿ ತಿನ್ನುವುದು ಬೆಸ್ಟ್

By Kannadaprabha NewsFirst Published May 5, 2024, 12:58 PM IST
Highlights

ಜಿಲ್ಲೆಯಲ್ಲಿ ತೀವ್ರ ಶಾಖದ ಅಲೆ, ಅತಿಯಾದ ಉಷ್ಣಾಂಶದಿಂದಾಗಿ ನಾನಾ ರೀತಿಯ ಅನಾರೋಗ್ಯ ಪರಿಸ್ಥಿತಿ ಸಂಭವಿಸುವ ಸಾಧ್ಯತೆ ಇದೆ. ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಅತಿಯಾದ ಉಷ್ಣಾಂಶದಿಂದ ಸಂಭವಿಸಬಹುದಾದ ಅನಾರೋಗ್ಯ ಪರಿಸ್ಥಿತಿ ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಸಂರಕ್ಷಣಾ ಸಲಹೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ

 ಕೊಪ್ಪಳ :  ಜಿಲ್ಲೆಯಲ್ಲಿ ತೀವ್ರ ಶಾಖದ ಅಲೆ, ಅತಿಯಾದ ಉಷ್ಣಾಂಶದಿಂದಾಗಿ ನಾನಾ ರೀತಿಯ ಅನಾರೋಗ್ಯ ಪರಿಸ್ಥಿತಿ ಸಂಭವಿಸುವ ಸಾಧ್ಯತೆ ಇದೆ. ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಅತಿಯಾದ ಉಷ್ಣಾಂಶದಿಂದ ಸಂಭವಿಸಬಹುದಾದ ಅನಾರೋಗ್ಯ ಪರಿಸ್ಥಿತಿ ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಸಂರಕ್ಷಣಾ ಸಲಹೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

ಹೆಚ್ಚು ನೀರು ಕುಡಿಯುವುದು:ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ಪ್ರಮಾಣದಲ್ಲಿ ಆಗಾಗ್ಗೆ ನೀರನ್ನು ಕುಡಿಯಬೇಕು. ಬಾಯಾರಿಕೆಯು ನಿರ್ಜಲೀಕರಣದ ಪ್ರಮುಖ ಲಕ್ಷಣವಾಗಿದೆ. ಪ್ರಯಾಣ ಮಾಡುವ ಸಂದರ್ಭದಲ್ಲೂ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಪುನರ್ಜಿಲೀಕರಣ ದ್ರಾವಣ ಹಾಗೂ ಮನೆಯಲ್ಲಿಯೇ ಸಿದ್ದಪಡಿಸಿದ ಲಿಂಬು ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನಗಳನ್ನು ಸ್ವಲ್ಪ ಉಪ್ಪಿನೊಂದಿಗೆ ಸೇವಿಸಬೇಕು. ಈ ಋತುವಿನಲ್ಲಿ ಸಿಗುವ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಹಣ್ಣು ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಮೂಸಂಬಿ, ದ್ರಾಕ್ಷಿ, ಅನಾನಸ್, ಸೌತೆಕಾಯಿ ಹಾಗೂ ಸ್ಥಳೀಯವಾಗಿ ಸಿಗುವ ಹಣ್ಣು ತರಕಾರಿಗಳನ್ನು ಸೇವಿಸಬೇಕು. ಎಳನೀರನ್ನು ಸೇವಿಸಬೇಕು.

ಸೂಕ್ತ ಉಡುಪನ್ನು ಧರಿಸುವುದು:

ಹಗುರವಾದ, ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ನಡೆಯುವಾಗ ಸೂರ್ಯನ ನೇರ ಕಿರಣಗಳಿಂದ ರಕ್ಷಣೆ ಪಡೆಯಲು ತಲೆಯನ್ನು ಮುಚ್ಚುವಂತಹ ಟೋಪಿ, ಛತ್ರಿ ಹಾಗೂ ಸಾಂಪ್ರದಾಯಿಕವಾಗಿ ಬಳಸುವ ಟವೆಲ್ ಅನ್ನು ಬಳಸಬೇಕು. ಬಿಸಿಲಿನಲ್ಲಿ ನಡೆಯುವಾಗ ಪಾದರಕ್ಷೆ, ಚಪ್ಪಲ್/ಶೂಗಳನ್ನು ಧರಿಸಬೇಕು.

ಸದಾ ಎಚ್ಚರಿಕೆಯಿಂದಿರಬೇಕು:

ಸ್ಥಳೀಯ ಹವಮಾನದ ಬಗ್ಗೆ ರೇಡಿಯೋ, ಟಿವಿ ಹಾಗೂ ದಿನಪತ್ರಿಕೆಗಳಲ್ಲಿ ಬರುವ ಮಾಹಿತಿಯ ಬಗ್ಗೆ ತಿಳಿದುಕೊಂಡು ಸದಾ ಎಚ್ಚರಿಕೆಯಲ್ಲಿರಬೇಕು.

ಉತ್ತಮ ಗಾಳಿ ಇರುವ ಹಾಗೂ ತಂಪಾಗಿರುವ ಪ್ರದೇಶದಲ್ಲಿರಬೇಕು. ಸೂರ್ಯನ ಶಾಖ ಹಾಗೂ ಬಿಸಿಗಾಳಿಯು ಹಗಲು ಹೊತ್ತಿನಲ್ಲಿ ನೇರವಾಗಿ ಮನೆಯ ಒಳಗಡೆ ಪ್ರವೇಶವಾಗದಂತೆ ಮನೆಯ ಕಿಟಕಿ ಹಾಗೂ ಕರ್ಟನ್‌ ಮುಚ್ಚಬೇಕು. ರಾತ್ರಿಯ ಸಮಯದಲ್ಲಿ ತಂಪಾದ ಗಾಳಿಯ ಸಂಚಾರಕ್ಕೆ ಕಿಟಕಿ ತೆರೆದಿಡಬೇಕು. ಹೊರಗಡೆ ಹೋಗುವ ಪ್ರಸಂಗ ಬಂದರೆ ಆದಷ್ಟು ಬೆಳಗ್ಗೆ ಹಾಗೂ ಸಾಯಂಕಾಲದ ಸಮಯದಲ್ಲಿ ಹೋಗಬೇಕು.

ಯಾವುದೇ ಸಮಯದಲ್ಲಿ ಪ್ರತಿಯೊಬ್ಬರಿಗೂ ಬಿಸಿಗಾಳಿಯ ಒತ್ತಡ ಹಾಗೂ ಅತಿಯಾದ ಉಷ್ಣಾಂಶದಿಂದಾಗಿ ಅಪಾಯವಾಗುವ ಸಾಧ್ಯತೆ ಇದೆ. ಆದರೆ ಈ ಕೆಳಕಾಣಿಸಿರುವ ಗುಂಪಿನ ಜನರಿಗೆ ಬೇರೆಯವರಿಗಿಂತ ಹೆಚ್ಚಿನ ಅಪಾಯವಾಗುವ ಸಾಧ್ಯತೆ ಇರುವ ಹಿನ್ನೆಲೆ ಹೆಚ್ಚುವರಿ ಗಮನ ನೀಡುವುದು ಅವಶ್ಯಕವಾಗಿದೆ. ನವಜಾತ ಶಿಶುಗಳು ಹಾಗೂ ಚಿಕ್ಕಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು ಅದರಲ್ಲೂ ಹೃದಯರೋಗ ಮತ್ತು ಅಧಿಕ ರಕ್ತದ ಒತ್ತಡ ಇರುವವರು, ತಂಪಾದ ವಾತಾವರಣ ಪ್ರದೇಶದಿಂದ ಅತಿಯಾದ ಉಷ್ಣಾಂಶವಿರುವ ಪ್ರದೇಶಕ್ಕೆ ಭೇಟಿ ನೀಡುವವರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು.

ಇತರೆ ಮುನ್ನೆಚ್ಚರಿಕೆ ಕ್ರಮಗಳು:

ಏಕಾಂಗಿಯಾಗಿ ವಾಸಿಸುವ ಹಿರಿಯ ವೃದ್ಧರು ಹಾಗೂ ರೋಗಿಗಳ ಆರೋಗ್ಯ ಸ್ಥಿತಿಯನ್ನು ಪ್ರತಿನಿತ್ಯ ಮೇಲುಸ್ತುವಾರಿ ಮಾಡಬೇಕು. ಮನೆಯ ಒಳಾಂಗಣವನ್ನು ತಂಪಾಗಿರುವಂತೆ ನೋಡಿಕೊಳ್ಳುವುದು ಹಾಗೂ ರಾತ್ರಿ ಸಮಯದಲ್ಲಿ ಕಿಟಕಿ ತೆರೆದಿಡಬೇಕು. ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಅಂತಸ್ತುಗಳಲ್ಲಿ ಇರುವುದು ಉತ್ತಮ. ಫ್ಯಾನ್ ಅಥವಾ ತೇವವಾದ ಬಟ್ಟೆಗಳನ್ನು ಬಳಸಿ ದೇಹವನ್ನು ತಂಪಾಗಿಡಬೇಕು.

ಏನು ಮಾಡಬಾರದು:

ಬಿಸಿಲಿನ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು. ಮಧ್ಯಾಹ್ನದ ಸಮಯದಲ್ಲಿ ಹೊರಾಂಗಣದಲ್ಲಿ ಶ್ರಮದಾಯಕ ಚಟುವಟಿಕೆ ಮಾಡಬಾರದು. ಪಾದರಕ್ಷೆ ಧರಿಸದೇ ಹೊರಗಡೆ ಹೋಗಬಾರದು. ಅಧಿಕ ಬಿಸಿಲಿರುವ ಸಮಯದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಬೇಕು. ಉತ್ತಮ ಗಾಳಿ ಪ್ರಸಾರವಾಗಿ ತಂಪಾಗಿರುವಂತೆ ಕಿಟಕಿ, ಬಾಗಿಲು ತೆರೆದಿಡಬೇಕು. ಮದ್ಯಪಾನ (ಆಲ್ಕೋಹಾಲ್), ಟೀ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯ ಅಥವಾ ಹೆಚ್ಚು ಸಕ್ಕರೆ ಅಂಶ ಹೊಂದಿದ ಪಾನೀಯ ಸೇವನೆ ತಪ್ಪಿಸಬೇಕು. ಇವು ದೇಹವನ್ನು ನಿರ್ಜಲೀಕರಣ ಹಾಗೂ ಹೊಟ್ಟೆ ನೋವನ್ನು ಉಂಟು ಮಾಡುತ್ತವೆ. ಚಿಕ್ಕ ಮಕ್ಕಳನ್ನು ಹಾಗೂ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬಾರದು. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅಪಾಯಕಾರಿಯಾಗಬಹುದು.

ಅತಿಯಾದ ಉಷ್ಣಾಂಶದಿಂದ ಸಂಭವಿಸಬಹುದಾದ ಅನಾರೋಗ್ಯ ಪರಿಸ್ಥಿತಿ ತಡೆಗಟ್ಟಲು, ಸಾರ್ವಜನಿಕರು ತಪ್ಪದೇ ಮೇಲಿನ ಕ್ರಮ ಅನುಸರಿಸಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!