ರೈತರ ಸಮಸ್ಯೆ ಕೇಳಿ ದಂಗಾದ ಡಿಸಿ

By Web DeskFirst Published Sep 30, 2018, 5:32 PM IST
Highlights

ರೈತರಲ್ಲಿ ಇಷ್ಟೊಂದು ಸಮಸ್ಯೆಗಳಿವೆ ಎಂಬ ನಿರೀಕ್ಷೆಯನ್ನೇ ಮಾಡದಿರುವ ಅವರು ಇಷ್ಟೊಂದು ಸಮಸ್ಯೆ ಇದೆಯಾ ಎಂದು ಅಚ್ಚರಿ ವ್ಯಕ್ತಪಡಿಸಿದರಲ್ಲದೇ, ರೈತರ ಎಲ್ಲ ತೊಂದರೆಗಳನ್ನು ಸಮಾಧಾನದಿಂದ ಆಲಿಸಿ, ಪರಿಹರಿಸುವ ಭರವಸೆ ನೀಡಿದ್ದಲ್ಲದೇ, ಅಧಿಕಾರಿಗಳೂ ಸ್ಪಷ್ಟ ಸೂಚನೆ ನೀಡಿದರು.

ಧಾರವಾಡ[ಸೆ.30]: ಜಿಲ್ಲೆಯ ರೈತರ ಸಮಸ್ಯೆ, ಅನ್ನದಾತರ ಅಹವಾಲು, ಅವರು ಎದುರಿಸುತ್ತಿರುವ ತೊಂದರೆ, ಅಧಿಕಾರಿಗಳು, ಇಲಾಖೆಗಳಿಂದ
ಆಗುತ್ತಿರುವ ನಿರಂತರ ಶೋಷಣೆ ಕೇಳಿ ಜಿಲ್ಲಾಧಿಕಾರಿ ದೀಪಾ ಚೋಳನ್ ಒಂದು ಕ್ಷಣ ದಂಗಾದರು. 

ರೈತರಲ್ಲಿ ಇಷ್ಟೊಂದು ಸಮಸ್ಯೆಗಳಿವೆ ಎಂಬ ನಿರೀಕ್ಷೆಯನ್ನೇ ಮಾಡದಿರುವ ಅವರು ಇಷ್ಟೊಂದು ಸಮಸ್ಯೆ ಇದೆಯಾ ಎಂದು ಅಚ್ಚರಿ
ವ್ಯಕ್ತಪಡಿಸಿದರಲ್ಲದೇ, ರೈತರ ಎಲ್ಲ ತೊಂದರೆಗಳನ್ನು ಸಮಾಧಾನದಿಂದ ಆಲಿಸಿ, ಪರಿಹರಿಸುವ ಭರವಸೆ ನೀಡಿದ್ದಲ್ಲದೇ, ಅಧಿಕಾರಿಗಳೂ ಸ್ಪಷ್ಟ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸ್ಪಂದನಾ ಮನೋಭಾವ ನೋಡಿ ರೈತರೂ ಸಮಾಧಾನಗೊಂಡರು. ಜಿಲ್ಲಾಧಿಕಾರಿ ಅವರು ಶನಿವಾರ ತಮ್ಮ ಕಚೇರಿಯಲ್ಲಿ
ಜಿಲ್ಲೆಯ ವಿವಿಧ ತಾಲೂಕುಗಳ ರೈತರ ಸಭೆ ನಡೆಸಿದ ಸಂದರ್ಭದಲ್ಲಿನ ಚಿತ್ರಣವಿದು. ಬೆಳೆವಿಮೆ, ಸ್ಪಂದಿಸದಿರುವ ಸರ್ಕಾರಿ ಅಧಿಕಾರಿಗಳು ಹಾಗೂ ಇನ್ಸೂರೆನ್ಸ್ ಕಂಪನಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಒಂದೊಂದು ತಾಲೂಕಿನ ರೈತರು ಹೇಳುವ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸಿದ ಸಂದರ್ಭದಲ್ಲಿ ಸ್ವತಃ ಜಿಲ್ಲಾಧಿಕಾರಿಗಳು ದಿಗಿಲುಗೊಂಡಂತೆಯೇ ಕಂಡರು.

ಬೆಳೆವಿಮೆ ಕುರಿತ ಸಭೆಯಲ್ಲಿ ಚರ್ಚೆ ನಡೆದಾಗ ಸಂಬಂಧಿಸಿದ ಅಧಿಕಾರಿಗಳು ಬರದ ಕಾರಣ ತೀವ್ರ ಗಲಾಟೆ ಉಂಟಾಯಿತು. ನಂತರ ಸರ್ಕಾರ ಮೊದಲು ಪ್ರತಿ ರೈತರಿಂದ 10 ಕ್ವಿಂಟಲ್ ಹೆಸರು ಕಾಳು ಖರೀದಿಗೆ ಆದೇಶ ಹೊರಡಿಸಿತ್ತು. ಏಕಾಏಕಿ 4 ಕ್ವಿಂಟಲ್‌ಗೆ ಇಳಿಸಿದ್ದು ರೈತರಿಗೆ ಮಾಡಿದ ಮೋಸ ಎಂದು ಕೆಲ ರೈತರು ತಮ್ಮ ಅಳಲು ತೋಡಿಕೊಂಡರೆ, ಬೇರೆ ತಾಲೂಕುಗಳ ರೈತರು ಇದೇ ಸಮಯದಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿ ಕೊಂಡರು.

ಸಭೆಯಲ್ಲಿ ಗೊಂದಲ ಸೃಷ್ಟಿಯಾಗಿ ಯಾರು ಏನೇನು ಮಾತನಾಡುತ್ತಿದ್ದಾರೆ ಎಂಬುದೇ ಜಿಲ್ಲಾಧಿಕಾರಿಗಳಿಗೆ ಗೊತ್ತಾಗಲಿಲ್ಲ. ಆದಾಗ್ಯೂ ಜಿಲ್ಲಾಧಿಕಾರಿಗಳು ಸಮಾಧಾನದಿಂದ ಎಲ್ಲ ರೈತರಿಗೂ ಪರಿಹಾರ ಸೂಚಿಸುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ 2015ರಿಂದ 18ರವರೆಗೆ ಮುಂಗಾರು-ಹಿಂಗಾರು ಹವಾಮಾನ ಆಧಾರಿತ ಬೆಳೆವಿಮೆ ಹಣ ಸರಿಯಾಗಿ ರೈತರಿಗೆ ಸಿಕ್ಕಿಲ್ಲ. ಕೆಲ ತಾಲೂಕಿಗೆ ಬಿಡುಗಡೆಯಾಗಿ, ಕೆಲ ತಾಲೂಕಿಗೆ ವಂಚಿಸಿದೆ. ಹಣ ಬಿಡುಗಡೆ ಯಾವಾಗ? ಎಂಬ ಪ್ರಶ್ನೆಗೆ ಜಿಲ್ಲಾಧಿಕಾರಿ ಎಂ. ದೀಪಾ, ಜಿಲ್ಲೆಯಲ್ಲಿ ಒಟ್ಟು ರು. 66 ಕೋಟಿ ಬೆಳೆ ವಿಮೆ ಬಾಕಿ ಇದೆ ಎಂದು ತಿಳಿಸಿದರು. ಅಲ್ಲದೇ, ಬಾಕಿ ಹಣದ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಂದ ತಕ್ಷಣವೇ
ರೈತರ ಖಾತೆಗೆ ಜಮಾ ಮಾಡುವುದಾಗಿ ಸ್ಪಷ್ಟಪಡಿಸಿದಲ್ಲದೇ, ಮುಂದಿನ ತಿಂಗಳು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಲಿದ್ದು, ಚರ್ಚಿಸಿ ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಸೂಚಿಸುವಂತಹ ಕೆಲಸ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.

ಕಲಘಟಗಿ ತಾಲೂಕು: 
ಹಗಲಿನಲ್ಲಿಯೇ ವಿದ್ಯುತ್ ಸಮಸ್ಯೆ ಉಂಟು. ರೈತರ ಪಂಪಸೆಟ್‌ಗೆ ಹಗಲು-2, ರಾತ್ರಿ-4 ಗಂಟೆ ವಿದ್ಯುತ್ ನೀಡುವ ಬದಲಿಗೆ ಬೆಳಿಗ್ಗೆ 4ರಿಂದ ನಿರಂತರ 6 ಗಂಟೆ ವಿದ್ಯುತ್ ಒದಗಿಸಬೇಕು. ರೈತರ ಹೊಲದಲ್ಲಿ ಜೋತು ಬಿದ್ದ ವಿದ್ಯುತ್ ತಂತಿ ಮೇಲಕ್ಕೇತ್ತರಿಸಬೇಕು. ಕೆಟ್ಟಿರುವ ಟ್ರಾನ್ಸ್ ಫಾರ್ಮ್‌ರ ತಕ್ಷಣವೇ ಬದಲಾಯಿಸಬೇಕೆಂದು ಕಲಘಟಗಿ ರೈತರು ಒತ್ತಾಯಿಸಿದರು. ತಹಸೀಲ್ದಾರ್‌ಗಳ ಕಚೇರಿಯಲ್ಲಿ ಉತಾರ ಕೊಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಬೆಂಬಲ ಬೆಲೆಯಡಿ ಗೋವಿನಜೋಳ ಹಾಗೂ ಸೋಯಾಬಿನ್ ಖರೀದಿ ಕೇಂದ್ರ ಆರಂಭಿಸಬೇಕು. ಎಷ್ಟು ಹೆಕ್ಟೇರ್ ಬಿತ್ತನೆ,ಇಳವರಿ ಪ್ರಮಾಣ, ರೈತರಿಂದ ಎಷ್ಟು ಖರೀದಿಸಬೇಕೆಂದು ವರದಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕಳಿಸಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಸಮಸ್ಯೆ ಕುರಿತಂತೆ ಹೆಸ್ಕಾಂ ಇಲಾಖೆ ಹಾಗೂ ರೈತರ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಜೋತು ಬಿದ್ದ ತಂತಿ ಮೇಲಕ್ಕೇರಿಸಲು ಸೂಚಿಸಲಾಗುತ್ತದೆ. ಈಗಾಗಲೇ ಮೆಕ್ಕಜೋಳ ಹಾಗೂ ಸೋಯಾಬಿನ್ ಖರೀದಿ ಕೇಂದ್ರ ಆರಂಭಿಸಿದ್ದು, ಸರ್ಕಾರದ ನಿರ್ದೇಶನ ಬಂದ ನಂತರ ಖರೀದಿ ಪ್ರಕ್ರಿಯೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

ನವಲಗುಂದ ತಾಲೂಕಿಗೆ ನಿರಂತರ ಜ್ಯೋತಿ ಕಲ್ಪಿಸುವ ಕೆಲಸ ಇನ್ನೂ ನಡೆದಿಲ್ಲ. ಮೂರು ದಿನಗಳಿಂದ ವಿವಿಧ ಹಳ್ಳಿಗಳಲ್ಲಿ ವಿದ್ಯುತ್ ಇಲ್ಲ. ಹೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಯಾರನ್ನು ಕೇಳಬೇಕು ಎನ್ನುವ ಮಾತಿಗೆ ಜಿಲ್ಲಾಧಿಕಾರಿ ಎಂ. ದೀಪಾ, ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರಲ್ಲದೇ, ಹೆಸರು ಖರೀದಿ ಅವಧಿ ವಿಸ್ತರಣೆ ಮಾಡುವುದಾಗಿ ಹೇಳಿದರು. ಜಿಲ್ಲೆಯ ಧಾರವಾಡ, ನವಲಗುಂದ, ಕಲಘಟಗಿ, ಕುಂದಗೋಳ, ಹುಬ್ಬಳ್ಳಿ,ಅಣ್ಣಿಗೇರಿ, ಅಳ್ನಾವರ ತಾಲೂಕಿನ ರೈತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
 

click me!