ಪವಿತ್ರ ಕಾವೇರಿ ತ್ಯಾಜ್ಯಗಳಿಂದ ಅಪವಿತ್ರ : ಗಬ್ಬೆದ್ದು ಹೋದ ನದಿ

By Kannadaprabha NewsFirst Published Dec 2, 2019, 11:39 AM IST
Highlights

ಪವಿತ್ರ ಕಾವೇರಿ ನದಿ ಸಂಪೂರ್ಣ ಮಾಲಿನ್ಯವಾಗಿದೆ. ಬಟ್ಟೆ ಪ್ಲಾಸ್ಟಿಕ್ ವಸ್ತುಗಳಿಂದ ಮಲಿನವಾಗಿದೆ. ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. 

ಎಲ್.ವಿ.ನವೀನ್‌ ಕುಮಾರ್‌

ಶ್ರೀರಂಗಪಟ್ಟಣ[ನ.02]:  ಭಾರತದ ಗಂಗಾ ನದಿ ಮಾತ್ರ ಸ್ವಚ್ಛಗೊಳಿಸಿದರೆ ಸಾಲದು. ಕಾವೇರಿ ನದಿಯೂ ಸ್ವಚ್ಛವಾಗಿರಬೇಕು ಮತ್ತು ಪವಿತ್ರವಾಗಿರಬೇಕು. ಈ ಕುರಿತು ಸಂಬಂಧಿಸಿದವರಿಗೆ ಜ್ಞಾನೋದಯ ಆಗುವುದು ಯಾವಾಗ?. ಪುರಸಭೆ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾವೇರಿ ನದಿಯೂ ಮಲಿನವಾಗಿದೆ. ಪ್ರವಾಸಿ ತಾಣಗಳು ಯಾವುದೇ ಸೌಲಭ್ಯ ಮತ್ತು ಸ್ವಚ್ಛತೆ ಇಲ್ಲದೇ ಗಬ್ಬೆದ್ದು ಹೋಗಿವೆ.

ಶ್ರೀರಂಗಪಟ್ಟಣದಲ್ಲಿ ವಿಶ್ವ ಪ್ರಸಿದ್ಧ ಹಾಗೂ ಧಾರ್ಮಿಕ ತಾಣಗಳು ಸಾಕಷ್ಟಿವೆ. ಆದರೆ ಬಹುತೇಕ ತಾಣಗಳಲ್ಲಿ ಮೂಲ ಸೌಕರ್ಯದ ಕೊರತೆ ಹೆಚ್ಚಾಗಿರುವುದರಿಂದ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ನಿರಂತರವಾಗಿ ತೊಂದರೆ ಅನುಭವಿಸುವಂತಾಗಿದೆ.

ಇಲ್ಲಿ ಹರಿಯುವ ಕಾವೇರಿ ನದಿ ಪ್ಲಾಸ್ಟಿಕ್‌ ಹಾಗೂ ಇತರೆ ತ್ಯಾಜ್ಯ ವಸ್ತುಗಳಿಂದ ಅಪವಿತ್ರವಾಗಿದೆ. ಪಟ್ಟಣದ ಪ್ರಸಿದ್ಧ ಶ್ರಾದ್ಧ ಕೇಂದ್ರವಾದ ಪಶ್ಚಿಮ ವಾಹಿನಿ, ಸಂಗಮ್, ಗೋಷಾಯಿಘಾಟ್‌ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹರಿದ್ವಾರ ಮಾದರಿಯಲ್ಲಿಯೇ ಕಾವೇರಿ ನದಿಯಲ್ಲೂ 1 ಕೋಟಿ ರು. ವೆಚ್ಚದಲ್ಲಿ ನದಿ ಮಧ್ಯೆ ಕಟ್ಟೆಗಳನ್ನು ಕಟ್ಟಿಅಸ್ಥಿ ವಿಸರ್ಜನೆ ಮಾಡಲು ಯೋಜನೆ ಸಿದ್ಧ ಪಡಿಸಲಾಗಿತ್ತು. ಈಗಾಗಲೇ 3 ವರ್ಷ ಕಳೆದರೂ ಇದುವರೆಗೆ ಆ ದಿಸೆಯಲ್ಲಿ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಬಿಡುಗಡೆಯಾದ ಹಣ ಏನಾಯ್ತು ಎಂಬ ಬಗ್ಗೆ ಅಧಿಕಾರಿಗಳಲ್ಲೂ ಮಾಹಿತಿ ಇಲ್ಲ. ಇದು ಜಿಲ್ಲಾಡಳಿತದಿಂದ ನೇರವಾಗಿ ಬಂದತಹ ಅನುದಾನ ಎಂದು ಕೆಲವರು ಸಬೂಬು ಹೇಳುತ್ತಾರೆ.

ಸಂಗಮ್‌ನಲ್ಲೂ ಅವ್ಯವಸ್ಥೆ:

ಕಾವೇರಿ ನದಿ ಸಂದಿಸುವ ಗಂಜಾಂ ಬಳಿಯ ಸಂಗಮ ಸ್ಥಳದಲ್ಲೂ ಕೂಡ ಅವ್ಯವಸ್ಥೆ ತಾಂಡವವಾಡುತ್ತಿದೆ. ನದಿ ತೀರದಲ್ಲಿ ಬಟ್ಟೆಗಳು, ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳು ರಾಶಿ ರಾಶಿಯಾಗಿ ಬಿದ್ದಿವೆ. ನದಿಯಲ್ಲಿ ತೇಲಿಬಂದಂತಹ ತ್ಯಾಜ್ಯಗಳು ಸಹ ಅಲ್ಲಲ್ಲಿ ಸಿಕ್ಕಿಹಾಕಿಕೊಂಡಿದೆ. ಸ್ಥಳೀಯ ಪುರಸಭೆ ಪ್ಲಾಸ್ಟಿಕ್‌ ನಿಷೇದಿಸಲಾಗಿದೆ ಎಂಬ ನಾಮಫಲಕವನ್ನು ನೆಪ ಮಾತ್ರಕ್ಕೆ ಅಳವಡಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನದಿಗೆ ಇಳಿಯುವ ಸೋಪಾನಕಟ್ಟೆಅಲ್ಲಲ್ಲಿ ಕುಸಿದಿದ್ದು, ದುರಸ್ತಿಗೊಳಿಸಿಲ್ಲ. ಈ ಸಂಬಂಧ ಲೋಕೋಪಯೋಗಿ ಇಲಾಖೆಗೆ ಸ್ಥಳೀಯರು ಮನವಿ ಮಾಡಿದ್ದರೂ ಯಾರೂ ಇತ್ತ ಗಮನ ಹರಿಸಿಲ್ಲ. ಆದರೆ ಇಲ್ಲಿಗೆ ಬರುವವರ ಬಳಿ ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಅಸ್ಥಿ ವಿಸರ್ಜನೆಗೆ ತಲಾ 100 ರು. ಶುಲ್ಕವನ್ನು ಸ್ಥಳೀಯ ಪುರಸಭೆ ವಸೂಲಿ ಮಾಡುತ್ತಿದೆ. ಆದರೆ ಆಧಿಕಾರಿಗಳ ಆಸ್ತಿ ಹಣ ವಸೂಲಿಗೆ ಮಾತ್ರ ಸ್ಥೀಮಿತವಾಗಿದೆ. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಿಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ವಾಹನ ಶುಲ್ಕವೂ ದುಬಾರಿ:

ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬರುವಂತಹ ವಾಹನಗಳಿಗೆ ಟೆಂಡರ್‌ ಪಡೆದಿರುವವರು ಅತಿ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಬಸ್‌, ಟೆಂಪೋ ಟ್ರ್ಯಾವೆಲರ್‌, ಕಾರುಗಳಲ್ಲಿ ಬರುವ ಪ್ರವಾಸಿಗರ ಬಳಿ ಶೇ.50ರಷ್ಟುಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಅನಧಿಕೃತ ಟಿಕೆಟ್‌ಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ ಎಂಬ ಬಗ್ಗೆ ಪ್ರವಾಸಿಗರು ಹತ್ತಾರು ಬಾರಿ ದೂರು ನೀಡಿದ್ದಾರೆ. ಆದರೂ ಈ ದಂಧೆ ಇನ್ನೂ ಮುಂದುವರೆಯುತ್ತಲೇ ಇದೆ.

ಬಟ್ಟೆಬದಲಿಸಲು ಜಾಗವಿಲ್ಲ:

ಪಟ್ಟಣದ ಸೋಪಾನ ಕಟ್ಟೆಬಳಿ ಪ್ರತಿ ದಿನ ನೂರಾರು ಮಂದಿ ಸ್ಥಾನ ಮಾಡುವುದು ವಾಡಿಕೆ. ಹೀಗೆ ಇಲ್ಲಿ ಸ್ಥಾನ ಮಾಡಿ ಬಟ್ಟೆಬದಲಾಯಿಸಿಕೊಳ್ಳಲು ಸ್ಥಳೀಯ ಆಡಳಿತ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಮಹಿಳೆಯರು ಮಜುಗರ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇಲ್ಲಿ ಬಟ್ಟೆಬದಲಾಯಿಸುವ ಮನೆ ಮತ್ತು ವ್ಯವಸ್ಥಿತವಾದ ಶೌಚಾಲಯ ನಿರ್ಮಾಣದ ಅಗತ್ಯವಿದೆ.

ಅದೇ ರೀತಿ ಜಿ.ಬಿ ಗೇಟ್‌, ವಾಟರ್‌ ಗೇಟ್‌, ಕರ್ನಲ್ ಬೇಲಿ ಡಂಜನ್‌ ಬಳಿ ಕೂಡ ಸೂಕ್ತ ವ್ಯವಸ್ಥೆಗಳು ಇಲ್ಲದೆ ಪ್ರವಾಸಿಗರು ಪರದಾಡುತ್ತಿದ್ದಾರೆ. ಪಟ್ಟಣ ಮಾತ್ರವಲ್ಲದೆ ಆಸುಪಾಸಿನ ಸ್ಥಳಗಳ ಕುರಿತ ಸೂಕ್ತ ಮಾಹಿತಿಯನ್ನು ಪ್ರವಾಸಿಗರಿಗೆ ಒದಗಿಸಬೇಕಾಗಿದೆ. ಇವೆಲ್ಲವೂ ಪ್ರವಾಸೋದ್ಯಮ ಇಲಾಖೆ ಕರ್ತವ್ಯ. ಆದರೆ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳ ಬಗ್ಗೆ ಕನಿಷ್ಠ ಕಿರುಹೊತ್ತಿಗೆಯನ್ನೂ ಇದುವರೆಗೂ ಪ್ರಕಟಿಸಿಲ್ಲ. 3 ಕೋಟಿ ರು. ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ರೂಪಿಸಿದ ಧ್ವನಿ ಬೆಳಕು ಕಾರ್ಯಕ್ರಮ ಪ್ರಾರಂಭವಾದ ದಿನದಿಂದ ಇದುವರೆಗೂ ನಾಲ್ಕæೖದು ಬಾರಿ ನಿಂತು, ನಿಂತು ನಡೆಯುತ್ತಿದೆ. 2014ರಲ್ಲಿ ಪ್ರಾರಂಭವಾದ ಈ ಧ್ವನಿ ಬೆಳಕು ಕಾರ್ಯಕ್ರಮ ಇದುವರೆಗೂ ನಿರಂತರವಾಗಿ ನಡೆದ ಉದಾಹರಣೆಗಳಿಲ್ಲ. ಆದರೆ ಅದರ ಅಭಿವೃದ್ಧಿಯ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರು. ಸಾರ್ವಜನಿಕರ ಹಣ ಪೋಲಾಗುತ್ತಿದೆ.

ಪ್ರವಾಸೋದ್ಯಮ ಇಲಾಖೆ, ಭಾರತೀಯ ಪ್ರಾಚ್ಯವಸ್ತು ಇಲಾಖೆ ಹಾಗೂ ರಾಜ್ಯ ಪ್ರಾಚ್ಯವಸ್ತು ಇಲಾಖೆಗಳು ಪ್ರವಾಸಿತಾಣಗಳ ಬಗ್ಗೆ ಆಸಕ್ತಿ ವಹಿಸಬೇಕು. ಸ್ಥಳೀಯ ಪುರಸಭೆ ಕೂಡ ಪ್ರವಾಸಿ ತಾಣಗಳು ಬಗ್ಗೆ ಮಾರ್ಗಸೂಚಿ ಇರುವಂತಹ ಫಲಕಗಳನ್ನು ಅಳವಡಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಪ್ರವಾಸಿಗರಿಂದ ಮಂಗಳಾರತಿ

ಗಂಗಾವತಿಯ ಅಶೋಕ್‌ ಸ್ವಾಮಿ ಹೇರೂರು ಎಂಬುವರು ಶ್ರೀರಂಗಪಟ್ಟಣದಲ್ಲಿ ನದಿ ಅವ್ಯವಸ್ಥೆ, ಪ್ಲಾಸ್ಟಿಕ್‌ ಮಯವಾಗಿರುವುದು, ಕೊಳಕು ನೀರು ಇತ್ಯಾದಿ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟುಬರೆದು ಪ್ರವಾಸೋದ್ಯಮ, ಪುರಸಭೆ ಹಾಗೂ ಜಿಲ್ಲಾಡಳಿತಕ್ಕೆ ಮಂಗಳಾರತಿ ಮಾಡಿದ್ದಾರೆ.

ಪ್ರತಿದಿನ ರಾಜ್ಯ, ಹೊರರಾಜ್ಯಗಳಿಂದ ನೂರಾರು ಮಂದಿ ಇಲ್ಲಿ ಅಸ್ಥಿ ವಿಸರ್ಜನೆ, ಪಿಂಡಪ್ರಧಾನ, ಹೋಮ ಹವನ ಇತರ ಕೈಂಕರ್ಯಗಳನ್ನು ನಡೆಸಲು ಬರುತ್ತಾರೆ. ಇಲ್ಲಿಗೆ ಬರುವವರಿಗೆ ಇಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಗಳಿಲ್ಲ, ಕುಡಿಯಲು ನೀರು, ಶೌಚಾಲಯ ಸೇರಿದಂತೆ ಇತರೆ ಮೂಲ ಸೌಲಭ್ಯಗಳೂ ಇಲ್ಲ, ಮುಖ್ಯವಾಗಿ ತ್ಯಾಜ್ಯವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಡಿವೆ. ತ್ಯಾಜ್ಯ ವಸ್ತುಗಳು ದುರ್ವಾಸನೆ ಬೀರುತ್ತಿವೆ. ಸೊಳ್ಳೆ, ನೊಣಗಳ ಹಾವಳಿ ಮಿತಿ ಮೀರುತ್ತಿವೆ. ಸ್ವಚ್ಛತೆ ಮರೀಚಿಕೆಯಾಗಿದೆ ಎಂದು ಪ್ರವಾಸಿಗ ಅಶೋಕಸ್ವಾಮಿ ಹೇರೂರ ಬೇಸರದಿಂದ ಹೇಳಿದ್ದಾರೆ.

click me!