Prajwal Revanna Sex Scandal: ಎಸ್‌ಐಟಿಗೆ ಪೆನ್‌ಡ್ರೈವ್‌ ರಹಸ್ಯ ತಿಳಿಸಿದ ಹಾಸನ ಎಸ್ಪಿ

By Kannadaprabha News  |  First Published Apr 30, 2024, 10:49 AM IST

ಪ್ರಜ್ವಲ್‌ ವಿರುದ್ಧದ ಲೈಂಗಿಕ ಹಗರಣ ಸಂಬಂಧ ಆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಮಹತ್ವದ ಮಾಹಿತಿಯನ್ನು ವಿಶೇಷ ತನಿಖಾ ದಳವು (ಎಸ್‌ಐಟಿ) ಸಂಗ್ರಹಿಸಿದೆ. 


ಬೆಂಗಳೂರು (ಏ.30): ಪ್ರಜ್ವಲ್‌ ವಿರುದ್ಧದ ಲೈಂಗಿಕ ಹಗರಣ ಸಂಬಂಧ ಆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಮಹತ್ವದ ಮಾಹಿತಿಯನ್ನು ವಿಶೇಷ ತನಿಖಾ ದಳವು (ಎಸ್‌ಐಟಿ) ಸಂಗ್ರಹಿಸಿದೆ. ಎಸ್‌ಐಟಿ ಕರೆ ಹಿನ್ನೆಲೆಯಲ್ಲಿ ಸೋಮವಾರ ಹಾಸನ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜೀತಾ ಅವರು ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಕೇಂದ್ರ ಕಚೇರಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಅವರನ್ನು ಭೇಟಿಯಾದರು.

40 ಜಿಬಿ, 2 ಪೆನ್‌ಡ್ರೈವ್‌ಗಳು: 2900ಕ್ಕೂ ಹೆಚ್ಚು ವಿಡಿಯೋ!: ಹಾಸನ ಸಂಸದ ನಡೆಸಿದ್ದಾರೆ ಎನ್ನಲಾದ ರಾಸಲೀಲೆ ವಿಡಿಯೋಗಳನ್ನು ಎಸ್‌ಐಟಿ ಸಂಗ್ರಹಿಸಿದೆ. ಎರಡು ಪೆನ್‌ ಡ್ರೈವ್‌ಗಳಲ್ಲಿ ಸುಮಾರು 40 ಜಿಬಿಯಷ್ಟು 2900ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳಿವೆ. ಈ ವಿಡಿಯೋಗಳಲ್ಲಿರುವ ಮಹಿಳೆಯರ ಫೋಟೋ ತೆಗೆದು ಅವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಎಸ್‌ಐಟಿ ಇಳಿದಿದೆ ಎಂದು ಮೂಲಗಳು ಹೇಳಿವೆ. ಈ ವೇಳೆ ಸಂಸದರ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳು ಹಾಗೂ ಪೆನ್ ಡ್ರೈವ್ ಸ್ಫೋಟದ ಹಿಂದೆ ನಡೆದಿರುವ ಸಂಚು.. ಹೀಗೆ ಹಾಸನ ಜಿಲ್ಲೆಯಲ್ಲಿ ಲೈಂಗಿಕ ಹಗರಣ ಬೆಳಕಿಗೆ ಬಂದ ನಂತರ ಗತಿಸಿರುವ ಬೆಳವಣಿಗೆಗಳ ಬಗ್ಗೆ ಎಸ್ಪಿ ಅವರಿಂದ ಎಸ್ಐಟಿ ಮುಖ್ಯಸ್ಥರು ಮಾಹಿತಿ ಪಡೆದಿದ್ದಾರೆ. ಈ ವೇಳೆ ಕೆಲವು ಮಹತ್ವದ ಮಾಹಿತಿಯನ್ನು ಎಸ್‌ಐಟಿ ಮುಖ್ಯಸ್ಥರೊಂದಿಗೆ ಎಸ್ಪಿ ಹಂಚಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

Tap to resize

Latest Videos

ಪ್ರಜ್ವಲ್ ಪ್ರಕರಣವನ್ನು ಪ್ರಧಾನಿ ಮೋದಿ, ಬಿಜೆಪಿ ಹೊಣೆ ಹೊರಬೇಕೆಂಬುದು ಹಾಸ್ಯಾಸ್ಪದ: ಚೇತನ್ ಅಹಿಂಸಾ

ಜೀವ ಭೀತಿಗೊಳಗಾದ ಸಂತ್ರಸ್ತೆಯರು: ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ಪತ್ತೆಗೆ ಸಹಕಾರ ನೀಡುವಂತೆ ಎಸ್ಪಿ ಅವರಿಗೆ ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಶೋಷಣೆಗೊಳಗಾದ ಮಹಿಳೆಯರ ಪೈಕಿ ಕೆಲವರನ್ನು ಗುರುತಿಸಲಾಗಿದೆ. ಆದರೆ ಕೆಲವರು ಮರ್ಯಾದೆ ಹಾಗೂ ಜೀವ ಭೀತಿಗೊಳಗಾಗಿ ತಮ್ಮ ಮೇಲಿನ ದೌರ್ಜನ್ಯ ಬಗ್ಗೆ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಎಸ್‌ಐಟಿಗೆ ಸ್ಥಳೀಯರ ಪೊಲೀಸರು ಗಮನಕ್ಕೆ ತಂದಿದ್ದಾರೆ. ಈ ಜೀವ ಭೀತಿ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಸ್ಥಳೀಯ ಪೊಲೀಸರಿಗೆ ಎಸ್‌ಐಟಿ ಅಧಿಕಾರಿಗಳು ಸೂಚಿಸಿರುವುದಾಗಿ ತಿಳಿದು ಬಂದಿದೆ.

ದೂರು ನೀಡಿದ ಸಂತ್ರಸ್ತೆ ವಿಚಾರಣೆ: ಇನ್ನು ಹಾಸನ ಸಂಸದ ಪ್ರಜ್ವಲ್ ಹಾಗೂ ಅವರ ತಂದೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸಂತ್ರಸ್ತೆಯನ್ನು ಎಸ್‌ಐಟಿ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತಂದೆ-ಮಗನ ಮೇಲೆ ಲೈಂಗಿಕ ಕಿರುಕುಳ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯನ್ನು ಕರೆಸಿ ಪ್ರಾಥಮಿಕ ಹಂತದ ಮಾಹಿತಿಯನ್ನು ಎಸ್‌ಐಟಿ ಪಡೆದುಕೊಂಡಿದ್ದು, ಮತ್ತೆ ವಿಚಾರಣೆಗೆ ಹಾಜರಾಗುವಂತೆ ಆಕೆಗೆ ಸೂಚಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಾಸನದಲ್ಲೇ ಎಸ್‌ಐಟಿ ತಂಡ ಬೀಡು: ಲೈಂಗಿಕ ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ಮಾಡಲು ಎಸ್‌ಐಟಿ ಮುಖ್ಯಸ್ಥರು ನಿರ್ಧರಿಸಿದ್ದಾರೆ. ಅಂತೆಯೇ ಡಿವೈಎಸ್ಪಿ ನೇತೃತ್ವದ ಒಂದು ತಂಡವು ಹಾಸನ ಜಿಲ್ಲೆಯಲ್ಲೇ ಬೀಡು ಬಿಟ್ಟು ಸ್ಥಳೀಯ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಲಿದೆ. ಈ ತಂಡಕ್ಕೆ ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಮೇಲುಸ್ತುವಾರಿ ನಡೆಸಲಿದ್ದು, ಹಾಸನ ಜಿಲ್ಲೆಗೆ ತೆರಳಿ ಸಂತ್ರಸ್ತೆ ಮಹಿಳೆಯರನ್ನು ಎಸ್ಪಿ ಕೂಡಾ ಖುದ್ದು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನೊಂದು ತಂಡವು ಅಶ್ಲೀಲ ವಿಡಿಯೋಗಳನ್ನು ಪರಿಶೀಲಿಸಲಿದೆ. ಇದಕ್ಕೆ ಸಿಐಡಿ ಸೈಬರ್ ವಿಭಾಗದ ಅಧಿಕಾರಿಗಳು ನೆರವು ನೀಡಲಿದ್ದಾರೆ. ಮತ್ತೊಂದು ತಂಡವು ಎಸ್‌ಐಟಿ ಕೇಂದ್ರ ಕಚೇರಿಗೆ ಸಂತ್ರಸ್ತರನ್ನು ಕರೆಸಿ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಿದೆ. ಇದಕ್ಕೆ ಎಐಜಿಪಿ ಸುಮನಾ ಪನ್ನೇಕರ್ ಉಸ್ತುವಾರಿ ವಹಿಸಲಿದ್ದಾರೆ. ಈ ಮೂರು ತಂಡಗಳು ತಾವು ಸಂಗ್ರಹಿಸಿರುವ ಮಾಹಿತಿಯನ್ನು ಎಸ್‌ಐಟಿ ಮುಖ್ಯಸ್ಥರಿಗೆ ವರದಿ ಮಾಡಲಿವೆ ಎನ್ನಲಾಗಿದೆ.

ನನ್ನ, ಎಚ್‌.ಡಿ.ರೇವಣ್ಣ ಕುಟುಂಬ ಬೇರೆ ಬೇರೆ: ಎಚ್‌.ಡಿ.ಕುಮಾರಸ್ವಾಮಿ

ಮನಃಶಾಸ್ತ್ರಜ್ಞರ ನೆರವು ಕೋರಿದ ಎಸ್ಐಟಿ: ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರನ್ನು ತನಿಖೆಗೊಳಪಡಿಸುವ ಮುನ್ನ ಅವರಿಗೆ ನಿಮ್ಹಾನ್ಸ್ ಸಂಸ್ಥೆಯ ಮನಃಶಾಸ್ತ್ರಜ್ಞರಿಂದ ಆಪ್ತ ಸಮಾಲೋಚನೆಗೊಳಪಡಿಸಲು ಎಸ್‌ಐಟಿ ಮುಂದಾಗಿದೆ. ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಮನಸ್ಥಿತಿ ಅರಿಯಬೇಕಿದೆ. ಈ ಕೃತ್ಯದ ವಿಡಿಯೋಗಳು ಬಹಿರಂಗವಾಗಿರುವ ಕಾರಣ ಸಂತ್ರಸ್ತೆಯರು ಮಾನಸಿಕ ಆಘಾತಕ್ಕೊಳಗಾಗಿರಬಹುದು. ಹೀಗಾಗಿ ಏಕಾಏಕಿ ಅವರನ್ನು ವಿಚಾರಣೆಗೊಳಪಡಿಸಿದರೆ ಮತ್ತಷ್ಟು ಮಾನಸಿಕ ಖಿನ್ನತೆಗೊಳಗಾಗಬಹುದು. ಈ ಕಾರಣಕ್ಕೆ ಸಂತ್ರಸ್ತೆಯರನ್ನು ಆಪ್ತ ಸಮಾಲೋಚನೆ (ಕೌನ್ಸೆಲಿಂಗ್‌) ಗೊಳಪಡಿಸಿ ಆ ನಂತರ ಘಟನೆ ಕುರಿತು ಹೇಳಿಕೆ ಪಡೆಯಲಾಗುತ್ತದೆ. ಈ ಸಂಬಂಧ ನಿಮ್ಹಾನ್ಸ್ ಸಂಸ್ಥೆಗೆ ಎಸ್‌ಐಟಿ ಪತ್ರ ಬರೆದು ನೆರವು ಕೋರಲಿದೆ ಎಂದು ತಿಳಿದು ಬಂದಿದೆ.

click me!