ಕೊಡಗು: ಶರವೇಗದಲ್ಲಿ ಮುನ್ನುಗ್ಗಿ ಮೈಜುಮ್ಮೆನಿಸಿದ ಎತ್ತಿನಗಾಡಿ ಓಟ..!

By Kannadaprabha NewsFirst Published Dec 13, 2023, 9:22 PM IST
Highlights

ಹೆಬ್ಬಾಲೆ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಎತ್ತಿನಗಾಡಿ ಓಟದ ಸ್ಪರ್ಧೆ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ರಾಜ್ಯ ವಿವಿಧ ಜಿಲ್ಲೆಗಳಿಂದ ಬಂದಿದ್ದ ಹಳ್ಳಿಕಾರು ಎತ್ತುಗಳು ಚಕ್ರವನ್ನು ಹಗ್ಗದಿಂದ ಬಿಗಿದು ಕಟ್ಟಿದ್ದ ಮರದ ಗಾಡಿಯನ್ನು ತರಗೆಲೆ ಎನ್ನುವಂತೆ ವೇಗವಾಗಿ ಎಳೆದು ಮುನ್ನುಗುತ್ತಿದ್ದರೆ ಅಕ್ಕಪಕ್ಕದಲ್ಲಿ ನಿಂತಿದ್ದ ಸಾವಿರಾರು ಜನರು ಅವುಗಳ ಓಟದ ನೋಟವನ್ನು ಕಂಡು ಸಂಭ್ರಮಿಸಿದರು. 

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಡಿ.13):  ಗ್ರಾಮೀಣ ಜಾತ್ರೆಗಳು ಎಂದರೆ ನಿಜಕ್ಕೂ ವಿಶೇಷ. ಅದರಲ್ಲೂ ಎತ್ತಿನಗಾಡಿ ಓಟದ ಸ್ಪರ್ಧೆ ಇತ್ತು ಎಂದರೆ ಅದರ ಮಜಾನೇ ಬೇರೆ ಅಲ್ವಾ. ಅಂತಹ ಒಂದು ರೋಮಾಂಚನಕಾರಿ ಎತ್ತಿನ ಗಾಡಿ ಓಟದ ಸ್ಪರ್ಧೆಯ ಝಲಕ್ ಇಲ್ಲಿದೆ ನೋಡಿದೆ.  ಬಾಲ ಮೇಲೆತ್ತಿ, ಕೊಂಬನ್ನು ಮುಂದೆ ಚಾಚಿ ಶರವೇಗದಲ್ಲಿ ಮುನ್ನುಗ್ಗುತ್ತಿರುವ ಗೂಳಿಗಳಂತೆ ಇರುವ ಎತ್ತುಗಳು. ಅವುಗಳ ವೇಗ ಮತ್ತಷ್ಟು, ಮಗದಷ್ಟು ಹೆಚ್ಚಿಸಲು ಚಾಟಿ ಏಟು ನೀಡುತ್ತಿರುವ ರೈತರು. ಎತ್ತುಗಳು ಗಾಡಿಗಳ ಎಳೆಯುತ್ತಿದ್ದರೆ ಮೈದಾನದಲ್ಲಿದ್ದ ಸಾವಿರಾರು ಪ್ರೇಕ್ಷಕರು ಸಿಳ್ಳಿ, ಕೇಕೆ ಹಾಕಿ ಮತ್ತಷ್ಟು ರೊಚ್ಚಿಗೇಳಿಸುತ್ತಿದ್ದರು. 

Latest Videos

ಹೌದು, ಇದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆಯಲ್ಲಿ ಬನಶಂಕರಿ ಅಮ್ಮನ ಜಾತ್ರೆಯ ಅಂಗವಾಗಿ ಬಸವೇಶ್ವರ ಬಳಗದಿಂದ ಆಯೋಜಿಸಿದ್ದ  ಚಕ್ರಕಟ್ಟಿ ಓಡಿಸುವ ಎತ್ತಿಗಾಡಿ ಓಟದ ಮೈರೋಮಾಂಚನಕಾರಿ ದೃಶ್ಯಗಳಿವು. ಹೆಬ್ಬಾಲೆ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಎತ್ತಿನಗಾಡಿ ಓಟದ ಸ್ಪರ್ಧೆ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ರಾಜ್ಯ ವಿವಿಧ ಜಿಲ್ಲೆಗಳಿಂದ ಬಂದಿದ್ದ ಹಳ್ಳಿಕಾರು ಎತ್ತುಗಳು ಚಕ್ರವನ್ನು ಹಗ್ಗದಿಂದ ಬಿಗಿದು ಕಟ್ಟಿದ್ದ ಮರದ ಗಾಡಿಯನ್ನು ತರಗೆಲೆ ಎನ್ನುವಂತೆ ವೇಗವಾಗಿ ಎಳೆದು ಮುನ್ನುಗುತ್ತಿದ್ದರೆ ಅಕ್ಕಪಕ್ಕದಲ್ಲಿ ನಿಂತಿದ್ದ ಸಾವಿರಾರು ಜನರು ಅವುಗಳ ಓಟದ ನೋಟವನ್ನು ಕಂಡು ಸಂಭ್ರಮಿಸಿದರು. 

ಕೊಡಗು: ಎರಡು ವಿವಿಗಳ ಗೊಂದಲಕ್ಕೆ ಸಿಬ್ಬಂದಿ, ವಿದ್ಯಾರ್ಥಿಗಳ ಪರದಾಟ..!

ಕಳೆದ ಮೂರು ವರ್ಷಗಳಿಂದ ಕೋವಿಡ್ ಆಗಿದ್ದರಿಂದ ಎತ್ತಿನಗಾಡಿ ಓಟದ ಸ್ಪರ್ಧೆ ನಡೆದಿರಲಿಲ್ಲ. ಹೀಗಾಗಿ ಮೂರು ವರ್ಷಗಳ ಬಳಿಕ ಈ ಬಾರಿ ಅದ್ಧೂರಿಯಾಗಿ ಎತ್ತಿಗಾಡಿ ಓಟದ ಸ್ಪರ್ಧೆ ನಡೆದಿದೆ. ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನರು ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ. ಇದು ನಮಗೂ ಸಾಕಷ್ಟು ಖುಷಿ ತಂದಿದೆ ಎಂದು ಮದುವೆಯ ಬಳಿಕ ತಮ್ಮ ತವರೂರಿನ ಜಾತ್ರೆಯ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ನವವಧು ಐಶ್ವರ್ಯ ಹೇಳಿದರು. ಕಳೆದ ಐವತ್ತು ವರ್ಷಗಳಿಂದಲೂ ಬನಶಂಕರಿ ಅಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿದ್ದ ಈ ಎತ್ತಿನಗಾಡಿ ಓಟದ ಸ್ಪರ್ಧೆಗೆ ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗ ಸೇರಿದಂತೆ ಕೊಡಗು ಜಿಲ್ಲೆಯಿಂದಲೂ 40 ಕ್ಕೂ ಹೆಚ್ಚು ಜೊತೆ ಎತ್ತುಗಳೊಂದಿಗೆ ರೈತರು ಭಾಗವಹಿಸಿದ್ದರು. 

ಕರ್ನಾಟಕದ ಸ್ವರ್ಗ ಕೂರ್ಗ್‌ನಲ್ಲಿ ಹೆಚ್ಚಾಗುತ್ತಿದೆ ಹೃದಯ ಸಂಬಂಧಿ ಕಾಯಿಲೆ: 5 ವರ್ಷದ ದತ್ತಾಂಶ ಇಲ್ಲಿದೆ ನೋಡಿ..

ಕಟುಮಸ್ತಾದ ಮೈಕಟ್ಟಿನ ಹಳ್ಳಿಕಾರು ಎತ್ತುಗಳನ್ನು ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಹೂಡಿ ರೈತರು ತಮ್ಮ ಎತ್ತುಗಳ ಬಲಾಬಲವನ್ನು ಪ್ರದರ್ಶಿಸಿದರು. ಕೆಲವು ಎತ್ತುಗಳು 300 ಮೀಟರ್ ಉದ್ದದ ಸ್ಪರ್ಧೆಯನ್ನು ಕೇವಲ 10 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದರೆ ಮತ್ತೆ ಕೆಲವು ಎತ್ತುಗಲು 11, 12 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದವು. ಸ್ಪರ್ಧೆಯಲ್ಲಿ ವಿಜೇತವಾದ ಎತ್ತುಗಳಿಗೆ 8 ಗ್ರಾಂ ಚಿನ್ನವನ್ನು ಪ್ರಶಸ್ತಿ ಘೋಷಿಸಲಾಗಿತ್ತು. ಎರಡನೇ ಸ್ಥಾನಕ್ಕೆ 6 ಗ್ರಾಂ, 3 ಸ್ಥಾನಕ್ಕೆ 4 ಗ್ರಾಂ, 4 ನೇ ಸ್ಥಾನಕ್ಕೆ 2 ಗ್ರಾಂ ಹಾಗೂ ಐದನೇ ಸ್ಥಾನಕ್ಕೆ 1 ಗ್ರಾಂ ಚಿನ್ನವನ್ನು ಪ್ರಶಸ್ತಿ ಘೋಷಿಸಲಾಗಿತ್ತು. ಇವುಗಳನ್ನು ತಮ್ಮದಾಗಿಸಿಕೊಳ್ಳಲು ಎತ್ತುಗಳ ಜೊತೆಗೂಡಿ ರೈತರು ಭಾರೂ ಪೈಪೋಟಿ ನಡೆಸುತ್ತಿದ್ದಾರೆ ಎಂದು ಆಯೋಜಕರಲ್ಲಿ ಒಬ್ಬರಾದ ಕುಮಾರ್ ಅವರು ಹೇಳಿದರು. 

ಒಟ್ಟಿನಲ್ಲಿ ಅರೆಮಲೆನಾಡಿನಂತಿರುವ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಬನಶಂಕರಿಯಮ್ಮ ದೇವಾಲಯದ ಜಾತ್ರೆ ಮಹೋತ್ಸವ ಅಂಗವಾಗಿ ನಡೆದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ 40 ಕ್ಕೂ ಹೆಚ್ಚು ಜೊತೆ ಎತ್ತುಗಳು ಸ್ಪರ್ಧೆಯಲ್ಲಿ ಭಾಗಹಿಸಿ ಎಲ್ಲರ ಗಮನಸೆಳೆದವು. 

click me!