ಬಿಬಿಎಂಪಿ 1 ಕಿಮೀ ಹೆಚ್ಚಳ, 243 ವಾರ್ಡ್| ಗ್ರಾಮ, ಗ್ರಾಪಂಗೆ ಸೇರಿದ ಪ್ರದೇಶ ಬಿಬಿಎಂಪಿಗೆ ಸೇರಿಸಲು ಶಿಫಾರಸು| ಉಭಯ ಸದನಗಳಲ್ಲಿ ಬಿಬಿಎಂಪಿ ಕಾಯ್ದೆ-2020 ವರದಿ ಮಂಡನೆ| ಪಾಲಿಕೆ ವ್ಯಾಪ್ತಿಯ ಶಾಸಕರಿಗೂ ಹೆಚ್ಚಿನ ಜವಾಬ್ದಾರಿ| ಸಮೀಕ್ಷೆ, ಜನಗಣತಿ ನೆಪವೊಡ್ಡಿ ಪಾಲಿಕೆ ಚುನಾವಣೆ ಮುಂದೂಡಲು ಸರ್ಕಾರ ಯತ್ನ?|
ಬೆಂಗಳೂರು(ಡಿ.10): ಬಿಬಿಎಂಪಿ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಲು ಬಿಬಿಎಂಪಿ ಸುತ್ತಲೂ ಇರುವ 1 ಕಿಲೋ ಮೀಟರ್ ವ್ಯಾಪ್ತಿಯ ಗ್ರಾಮ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗೆ ಸೇರಿದ ಪ್ರದೇಶವನ್ನು ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು. ಜೊತೆಗೆ ಮೇಯರ್ ಹಾಗೂ ಉಪಮೇಯರ್ ಅವಧಿಯನ್ನು 1 ವರ್ಷದಿಂದ ಎರಡೂವರೆ ವರ್ಷಗಳಿಗೆ ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ಹಲವು ಪ್ರಮುಖ ಶಿಫಾರಸುಗಳನ್ನು ಒಳಗೊಂಡ ‘ಬಿಬಿಎಂಪಿ ವಿಧೇಯಕ-2020’ ಪರಿಶೀಲನಾ ವರದಿಯನ್ನು ಎಸ್.ರಘು ನೇತೃತ್ವದ ಜಂಟಿ ಪರಿಶೀಲನಾ ಸಮಿತಿಯು ಬುಧವಾರ ಉಭಯ ಸದನಗಳಲ್ಲಿ ಮಂಡಿಸಿತು.
159 ಪುಟಗಳ ವರದಿಯಲ್ಲಿ ಬಿಬಿಎಂಪಿ ಕಾರ್ಯವ್ಯಾಪ್ತಿ, ಮೇಯರ್-ಉಪಮೇಯರ್ ಅಧಿಕಾರವಧಿ, ಜವಾಬ್ದಾರಿ, ಆಯುಕ್ತರ ಬದಲಿಗೆ ಮುಖ್ಯ ಆಯುಕ್ತರ ನೇಮಕ, ಸ್ಥಾಯಿ ಸಮಿತಿಗಳು, ವಲಯ ಆಯುಕ್ತರ ಜವಾಬ್ದಾರಿಗಳು ಸೇರಿದಂತೆ ‘ಬಿಬಿಎಂಪಿ ಕಾಯಿದೆ-2020ಯಲ್ಲಿ’ ಇರಬೇಕಾದ ಎಲ್ಲಾ ಅಂಶಗಳ ಬಗ್ಗೆಯೂ ಉಲ್ಲೇಖಿಸಿದೆ.
undefined
ವಾರ್ಡ್ ಸಂಖ್ಯೆ ಹೆಚ್ಚಳ ಉಲ್ಲೇಖವಿಲ್ಲ:
ಆದರೆ, ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಈಗಾಗಲೇ ಹೆಚ್ಚಳ ಮಾಡಿ ಕಾಯಿದೆ ತಿದ್ದುಪಡಿ ಮಾಡಿದ್ದು, ಪರಿಶೀಲನಾ ಸಮಿತಿ ವರದಿಯಲ್ಲಿ ಅದರ ಉಲ್ಲೇಖ ಮಾಡಿಲ್ಲ. ಇನ್ನು ವರದಿ ಪುಸ್ತಕದಲ್ಲಿ ಇರದ ಬಿಬಿಎಂಪಿ ವ್ಯಾಪ್ತಿಯನ್ನು 1 ಕಿ.ಮೀ. ವಿಸ್ತರಿಸುವ ಅಂಶವನ್ನು ಪ್ರತ್ಯೇಕ ಚೀಟಿ ನೀಡಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಸಮಿತಿ ಅಧ್ಯಕ್ಷ ಎಸ್.ರಘು ಕೊನೆ ಕ್ಷಣದಲ್ಲಿ ಓದಿಸಿದರು.
ಈ ಮೂಲಕ ಬಿಬಿಎಂಪಿ ವ್ಯಾಪ್ತಿ ವಿಸ್ತರಣೆ, ಗಡಿ ಗುರುತಿಸುವಿಕೆ, ನೂತನವಾಗಿ ಸೇರ್ಪಡೆ ಆಗಬೇಕಿರುವ ಪ್ರದೇಶಗಳ ಸಮೀಕ್ಷೆ, ಜನಸಂಖ್ಯೆ ಗಣತಿ ಮತ್ತಿತರ ಕಾರ್ಯಗಳ ನೆಪವೊಡ್ಡಿ ಸುಪ್ರೀಂ ಕೋರ್ಟ್‌ನಲ್ಲಿ ಬಿಬಿಎಂಪಿ ಚುನಾವಣೆ ಮುಂದೂಡಲು ಸರ್ಕಾರ ಮನವಿ ಮಾಡಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಬಿಬಿಎಂಪಿ: ಬಡವರಿಗೆ ಶೇ.50 ಕಸ ಶುಲ್ಕ ರಿಯಾಯಿತಿ
ಮೇಯರ್ ಅವಧಿ ಹೆಚ್ಚಳ:
ವರದಿ ಅನ್ವಯ ಬಿಬಿಎಂಪಿಯ ಆಡಳಿತ ಹಾಗೂ ನಿರ್ವಹಣೆ ಸುಗಮಗೊಳಿಸುವ ಉದ್ದೇಶದಿಂದ ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಅವರ ಅಧಿಕಾರ ಅವಧಿಯನ್ನು ಒಂದು ವರ್ಷದಿಂದ 30 ತಿಂಗಳಿಗೆ (ಎರಡೂವರೆ ವರ್ಷಗಳಿಗೆ) ಹೆಚ್ಚಳ ಮಾಡಲಾಗಿದೆ. ಇನ್ನು ಮೇಯರ್ ಹಾಗೂ ಉಪ ಮೇಯರ್ ಕಾರ್ಯವ್ಯಾಪ್ತಿಯನ್ನು ನಿಗದಿ ಮಾಡಿದ್ದು, ಮೇಯರ್ ಯಾವುದಾದರೂ ವರದಿ ಅಥವಾ ಮಾಹಿತಿ ಕೇಳಿದರೆ 15 ದಿನಗಳೊಳಗಾಗಿ ಮುಖ್ಯ ಆಯುಕ್ತರು ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಮೇಯರ್ ಅಧಿಕಾರವನ್ನು ತುಸು ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.
ಮುಖ್ಯ ಆಯುಕ್ತರ ನೇಮಕ:
ಬಿಬಿಎಂಪಿಗೆ ಪ್ರಸ್ತುತ ಇರುವ ಬಿಬಿಎಂಪಿ ಆಯುಕ್ತ ಹುದ್ದೆಯನ್ನು ಮುಖ್ಯ ಹುದ್ದೆಯಾಗಿ ಮಾಡಬೇಕು. ಇದಕ್ಕೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯ ಹುದ್ದೆಗಿಂತ ಕಡಿಮೆ ಇಲ್ಲದವರನ್ನು ಸರ್ಕಾರ ನೇಮಕ ಮಾಡಲಿದೆ. ಜೊತೆಗೆ ಅಧಿಕಾರ ಅವಧಿ ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿಯೋಜನೆ ಮಾಡಬೇಕು. ಎರಡು ವರ್ಷದೊಳಗಾಗಿ ಮುಖ್ಯ ಆಯುಕ್ತರ ಆಡಳಿತ ಹಾಗೂ ನಿರ್ವಹಣೆ ಸರ್ಕಾರಕ್ಕೆ ತೃಪ್ತಿಕರವಾದರೆ, ಆಯುಕ್ತರ ಅಧಿಕಾರ ಅವಧಿಯನ್ನು ಮುಂದುವರಿಸುವ ಅಧಿಕಾರ ಸರ್ಕಾರಕ್ಕೆ ಇರಲಿದೆ. ಅವಧಿಗೆ ಮೊದಲು ವರ್ಗಾವಣೆ ಮಾಡಬೇಕಾದರೆ ಬಿಬಿಎಂಪಿ ಮೇಯರ್ ಅವರಿಗೆ ಕಾರಣಗಳನ್ನು ತಿಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇನ್ನು ವಲಯ ಆಯುಕ್ತರು ಸರ್ಕಾರದ ಕಾರ್ಯದರ್ಶಿ ಹಂತಕ್ಕಿಂತ ಕಡಿಮೆ ಇಲ್ಲದ ಅಧಿಕಾರಿಯಾಗಿರಬೇಕು ಎಂದು ಹೇಳಲಾಗಿದೆ.
ವಿಪತ್ತು ನಿರ್ವಹಣಾ ಸಮಿತಿ ರಚನೆ:
ನಗರದಲ್ಲಿ ಸಾರ್ವಜನಿಕರಿಗೆ ತುರ್ತಾಗಿ ಸ್ಪಂದಿಸುವ ಉದ್ದೇಶದಿಂದ ವಿಪತ್ತು ನಿರ್ವಹಣಾ ಸಮಿತಿಯನ್ನು ರಚನೆ ಮಾಡುವ ಪ್ರಸ್ತಾವನೆ ಸಹ ಇದೆ. ನಗರದಲ್ಲಿ ಮಳೆಯಿಂದ ಸೃಷ್ಟಿಯಾಗುವ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಸಮಿತಿ ಮಹತ್ವ ಪಡೆದುಕೊಳ್ಳಲಿದೆ.
BBMP ವಾರ್ಡ್ ಸಂಖ್ಯೆ ಹೆಚ್ಚಿಸಿದ್ರೆ ಚುನಾವಣೆ 1 ವರ್ಷ ತಡ..!
ಏರಿಯಾ ಸಭಾ ಅಸ್ತಿತ್ವಕ್ಕೆ ಶಿಫಾರಸು:
ಪಾಲಿಕೆಯ ವ್ಯಾಪ್ತಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರವಾರು ಹಾಗೂ ವಾರ್ಡ್ನಲ್ಲಿ ‘ಪ್ರಾಂತ್ಯ ಸಭೆ’ಗಳನ್ನು (ಏರಿಯಾ ಸಭಾ) ಅಸ್ತಿತ್ವಕ್ಕೆ ತರಬೇಕು ಎಂಬ ಶಿಫಾರಸು ಮಾಡಲಾಗಿದ್ದು, ಏರಿಯಾ ಸಭಾಗಳಲ್ಲಿ ವಾರ್ಡಿನ ಪ್ರತಿಯೊಬ್ಬ ಮತದಾರರೂ ಸದಸ್ಯರಾಗಿರಬೇಕು ಎಂದು ಉಲ್ಲೇಖಿಸಲಾಗಿದೆ.
ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ:
ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ವಾರ್ಡ್ ಮಟ್ಟದ ಸಮಿತಿಗಳು ಅಸ್ತಿತ್ವದಲ್ಲಿ ಇದ್ದವು. ಜೊತೆಗೆ ಬಿಬಿಎಂಪಿ ಆಡಳಿತದಲ್ಲಿ ಶಾಸಕರ ಪಾತ್ರ ತೀರಾ ಕಡಿಮೆ ಇತ್ತು. ಹೀಗಾಗಿ ಉದ್ದೇಶಿತ ಮಸೂದೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಸಮಿತಿಗಳನ್ನು ರಚನೆ ಮಾಡುವ ಪ್ರಸ್ತಾವನೆ ಇದ್ದು, ಇದು ಜಾರಿಯಾದಲ್ಲಿ ಶಾಸಕರು ಸಹ ವಾರ್ಡ್ ಮಟ್ಟದ ಸಮಸ್ಯೆಗಳು ಹಾಗೂ ಯೋಜನೆಗಳ ಬಗ್ಗೆ ಚರ್ಚೆ ಮಾಡುವಂತಾಗಲಿದೆ.
ಪ್ರತ್ಯೇಕ ಬಾಕ್ಸ್.. ಹೊಸ ತೆರಿಗೆ ಪ್ರಸ್ತಾಪ
ಹಾಲಿ ಇರುವ ತೆರಿಗೆಗಳ ಜೊತೆಗೆ ಮನೋರಂಜನಾ ತೆರಿಗೆ ವಿಧಿಸಲು ಶಿಫಾರಸು ಮಾಡಿದ್ದು ಒಂದು ವೇಳೆ ಇದು ಅನುಷ್ಠಾನಗೊಂಡರೆ ಬೆಂಗಳೂರು ನಾಗರಿಕರು ಚಲನಚಿತ್ರ ಹಾಗೂ ಕ್ರಿಕೆಟ್ ಪಂದ್ಯಾವಳಿಗಳ ವೀಕ್ಷಣೆಯಂತಹ ಮನೋರಂಜನಾ ಚಟುವಟಿಕೆಗೆ ಹೆಚ್ಚುವರಿ ಹಣ ಭರಿಸಬೇಕಾಗಲಿದೆ. ಘನತ್ಯಾಜ್ಯ ನಿರ್ವಹಣಾ ಸೆಸ್, ಕಟ್ಟಡ ಸೆಸ್‌ಗಳೊಂದಿಗೆ ಮನೋರಂಜನಾ ತೆರಿಗೆ ಹಾಗೂ ಭೂ ಸಾರಿಗೆ ಉಪಕರ ಇದಾಗಿದೆ. ಸಮಯಾನುಸಾರ ಪಾಲಿಕೆ ತೆರಿಗೆ ವಿಧಿಸುವ ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಪರಿಷ್ಕರಣೆ ಮಾಡುವ ಅಧಿಕಾರವನ್ನು ಸಹ ಹೊಂದಿದೆ ಎಂದು ಹೇಳಲಾಗಿದೆ.
ಕ್ಷೇತ್ರ ಸಮಾಲೋಚನಾ ಸಮಿತಿ
ಸರ್ಕಾರವು ಪಾಲಿಕೆ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ವಿಧಾನಸಭಾ ಸಮಾಲೋಚನಾ ಸಮಿತಿಯನ್ನು ರಚನೆ ಮಾಡಲಿದೆ. ಆಯಾ ವಿಧಾನಸಭಾ ಕ್ಷೇತ್ರದ ಶಾಸಕರೇ ಈ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಾರ್ಡ್‌ಗಳ ವಾರ್ಡ್ ಸದಸ್ಯರು ಈ ವಾರ್ಡ್ನಲ್ಲಿ ಸದಸ್ಯರಾಗಿರಲಿದ್ದಾರೆ. ಈ ಸಮಿತಿಯ ಅಧಿಕಾರ ಅವಧಿ 30 ತಿಂಗಳು ಇರಲಿದೆ. ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಲಯಕ್ಕೂ ಒಂದು ಸಮಿತಿಯನ್ನು ರಚನೆ ಮಾಡಲು ನಿರ್ಧರಿಸಲಾಗಿದೆ.
ಸ್ಥಾಯಿ ಸಮಿತಿ ಸಂಖ್ಯೆ ಇಳಿಕೆ
ಬಿಬಿಎಂಪಿಯ ಸ್ಥಾಯಿ ಸಮಿತಿಗಳ ಸಂಖ್ಯೆಯನ್ನು 12ರಿಂದ 8ಕ್ಕೆ ಇಳಿಸಲಾಗಿದೆ. ಅಪೀಲುಗಳ ಸಮಿತಿಯನ್ನು ಕೈಬಿಡಲಾಗಿದೆ. ನಗರದಲ್ಲಿ ಆಡಳಿತಾತ್ಮಕ ನಿರ್ವಹಣೆ ಮಾಡುವ ಉದ್ದೇಶದಿಂದ ಆರೋಗ್ಯ ಸ್ಥಾಯಿ ಸಮಿತಿಯಿಂದ ಘನತ್ಯಾಜ್ಯ ನಿರ್ವಹಣೆಯನ್ನು ಪ್ರತ್ಯೇಕ ಮಾಡಿ ಹೊಸ ಸಮಿತಿ ಸೃಜಿಸಲಾಗಿದೆ. ಅಲ್ಲದೆ, ವಿಪತ್ತು ನಿರ್ವಹಣೆ ಸಮಿತಿಯನ್ನು ಸಹ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಹಾಲಿ ಅಸ್ತಿತ್ವದಲ್ಲಿದ್ದ ನಾಲ್ಕು ಸಮಿತಿಗಳನ್ನು ಇತರ ಸಮಿತಿಗಳೊಂದಿಗೆ ವಿಲೀನ ಮಾಡಲಾಗಿದೆ.
ಕನ್ನಡದಲ್ಲಿಲ್ಲ ವರದಿ!
ಕರುನಾಡ ರಾಜಧಾನಿ ಬೆಂಗಳೂರಿನ ಪಾಲಿಕೆಗೆ ಕಾಯಿದೆ ರೂಪಿಸಲು ಸಲ್ಲಿಸಿರುವ ಜಂಟಿ ಪರಿಶೀಲನಾ ಸಮಿತಿಯ ವರದಿಯು ಕನ್ನಡದಲ್ಲಿ ಇಲ್ಲ. ಹೌದು, ವರದಿ ಪುಸ್ತಕದ ಮುಖಪುಟ, ಮೊದಲ ಎರಡು ಹಾಗೂ ಕೊನೆಯ ಎರಡು ಪುಟಗಳು ಮಾತ್ರ ಕನ್ನಡದಲ್ಲಿವೆ. ಉಳಿದಂತೆ 150ಕ್ಕೂ ಹೆಚ್ಚು ಪುಟಗಳಲ್ಲಿನ ಎಲ್ಲಾ ಶಿಫಾರಸುಗಳೂ ಇಂಗ್ಲಿಷ್‌ನಲ್ಲಿಯೇ ನೀಡಲಾಗಿದೆ.