Mandya : ಭಾರತದಲ್ಲಿ ಶೇ.36ರಷ್ಟುಪೈಲ್ಸ್‌ ರೋಗಿಗಳು

By Kannadaprabha NewsFirst Published Nov 18, 2022, 5:44 AM IST
Highlights

ಬದಲಾದ ಆಹಾರ ಮತ್ತು ಜೀವನ ಶೈಲಿಯಿಂದಾಗಿ ಭಾರತದಲ್ಲಿ ಶೇ.36ರಷ್ಟುಪೈಲ್ಸ್‌ ರೋಗಿಗಳು ಇದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ ಎಂದು ಕೊಲೋರೆಕ್ಚಲ್‌ ಸರ್ಜನ್‌ ಡಾ.ಸಿ.ಎಂ. ಪರಮೇಶ್‌ ಆತಂಕ ವ್ಯಕ್ತಪಡಿಸಿದರು.

 ಮಂಡ್ಯ (ನ.18):  ಬದಲಾದ ಆಹಾರ ಮತ್ತು ಜೀವನ ಶೈಲಿಯಿಂದಾಗಿ ಭಾರತದಲ್ಲಿ ಶೇ.36ರಷ್ಟುಪೈಲ್ಸ್‌ ರೋಗಿಗಳು ಇದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ ಎಂದು ಕೊಲೋರೆಕ್ಚಲ್‌ ಸರ್ಜನ್‌ ಡಾ.ಸಿ.ಎಂ. ಪರಮೇಶ್‌ ಆತಂಕ ವ್ಯಕ್ತಪಡಿಸಿದರು.

ಪೈಲ್ಸ್‌, ಫಿಷರ್‌, ಪಿಸ್ತುಲಾ ರೋಗದ  ಬಗ್ಗೆ ಜನರಲ್ಲಿ ಜಾಗೃತಿಯ ಕೊರತೆದೆ. ಈ ಕುರಿತಂತೆ ಕೇಂದ್ರ, ರಾಜ್ಯ ಸರ್ಕಾರಗಳು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ. ಇದರ ಪರಿಣಾಮ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Latest Videos

ಬದಲಾದ (Life Style)  ಶೈಲಿ ಕೇವಲ ನಗರ ಪ್ರದೇಶಗಳಿಗಷ್ಟೇ ಸೀಮಿತವಾಗಿಲ್ಲ. (Rural)  ಭಾಗದಲ್ಲೂ ಸಾಕಷ್ಟುಬದಲಾವಣೆಗಳಾಗಿವೆ. ಮೂರ್ನಾಲ್ಕು ತಿಂಗಳ ಕಾಲ ಮಾಂಸಾಹಾರ ಸೇವನೆ ಮಾಡದಿದ್ದವರು ಈಗ ವಾರದಲ್ಲಿ ಮೂರು ದಿನಗಳ ಅತಿಯಾದ ಮಾಂಸಾಹಾರ ಸೇವಿಸುತ್ತಿದ್ದಾರೆ. ಸೊಪ್ಪು, ತರಕಾರಿ, ಹಣ್ಣುಗಳು ಮತ್ತು ನೀರು ಸೇವನೆ ಕಡಿಮೆಯಾಗಿರುವುದು, ನಿದ್ರೆ, ವ್ಯಾಯಾಮ, ದುಡಿಮೆಯೂ ಕಡಿಮೆಯಾಗಿರುವ ಕಾರಣ ಈ ರೋಗ ಉಲ್ಬಣಗೊಳ್ಳುತ್ತಿದೆ ಎಂದು ವಿವರಿಸಿದರು.

ಬಯಲು ಶೌಚವೂ ಕಾರಣ:

ಭಾರತದಲ್ಲಿ ಶೇ.61ರಷ್ಟುಜನರು ಮಾತ್ರ ಶೌಚಾಲಯ ಬಳಸುತ್ತಿದ್ದಾರೆ. ಉಳಿದ ಶೇ.39ರಷ್ಟುಮಂದಿ ಬಯಲು ಶೌಚಗಳನ್ನು ಉಪಯೋಗಿಸುತ್ತಿದ್ದಾರೆ. ನಿರ್ವಹಣೆ ಕೊರತೆಯಿಂದ ಶೌಚಾಲಯ ಬಳಸಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಹಿಳೆಯರೇ ಹೆಚ್ಚು ಈ ರೋಗದಿಂದ ಬಳಲುತ್ತಿದ್ದಾರೆ. ಬಯಲು ಶೌಚಕ್ಕೆ ತೆರಳುವ ಅವರು ಸಂಜೆ ಅಥವಾ ರಾತ್ರಿ ಕತ್ತಲಾದ ನಂತರವಷ್ಟೇ ಹೋಗಬೇಕಾಗಿರುತ್ತೆ. ಕತ್ತಲಲ್ಲಿ ಕ್ರಿಮಿ-ಕೀಟಗಳ ಆತಂಕ, ಯಾರಾದರೂ ಬಂದುಬಿಡಬಹುದೆಂಬ ಭಯದಿಂದ ಪೂರ್ಣ ಶೌಚ ಮಾಡದೆ ಅರ್ಧಕ್ಕೇ ವಾಪಸಾಗುವರು. ಇದರಿಂದ ದೇಹದೊಳಗೆ ಇರುವ ಮಲ ಗಟ್ಟಿಯಾಗುತ್ತದೆ. ಹೊರಗೆ ಹಾಕುವಾಗ ಸಂಕಷ್ಟಅನುಭವಿಸಬೇಕಾಗುತ್ತದೆ. ಈ ವೇಳೆ ಗುದದ್ವಾರ ಹರಿದು ಈ ಕಾಯಿಲೆ ಬರಲು ಮುಖ್ಯ ಕಾರಣವೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಫಿಷರ್‌ನ್ನು ನಿರ್ಲಕ್ಷ ್ಯ ಮಾಡಿದರೆ ಮತ್ತಷ್ಟುಉಲ್ಬಣವಾಗುತ್ತದೆ. ನಂತರ ಪೈಲ್ಸ್‌, ಪಿಸ್ತುಲಾ ಬಂದು ಕ್ಯಾನ್ಸರ್‌ಗೆ ತಿರುಗಬಹುದು. ಹಲವಾರು ಮಂದಿ ಜಠರ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಎಸ್‌.ಡಿ. ಜಯರಾಂ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಾದೇಶ್‌, ಸಿಇಒ ಶ್ರುತಿ, ಅಕ್ಷಯ್‌ ಗೋಷ್ಠಿಯಲ್ಲಿದ್ದರು.

ಬಾಕ್ಸ್‌...

ನಕಲಿ ವೈದ್ಯರ ಹಾವಳಿ

ನಕಲಿ ವೈದ್ಯರು ಪೈಲ್ಸ್‌, ಪಿಸ್ತುಲಾ, ಫಿಷರ್‌ಗೆ ಚಿಕಿತ್ಸೆ ಕೊಡುವುದಾಗಿ ಹೇಳಿ ಹಣವನ್ನೂ ಸುಲಿಗೆ ಮಾಡುವುದರ ಜೊತೆಗೆ ಆರೋಗ್ಯವನ್ನೂ ಹಾಳು ಮಾಡುತ್ತಿದ್ದಾರೆ. ಕೆಲವರು ಮೇಕೆಯ ಕೊಂಬನ್ನು ಗುದದ್ವಾರಕ್ಕೆ ಹಾಕಿ ಅಗಲ ಮಾಡುವುದಾಗಿ ಹೇಳಿ ದೊಡ್ಡ ಮತ್ತು ಸಣ್ಣ ಕರುಳಿಗೆ ಹಾನಿ ಮಾಡಿರುವ ಪ್ರಕರಣಗಳೂ ಇವೆ. ಇನ್ನು ಕೆಲವರು ಎಡಗೈ ಬೆರಳಿಗೆ ಬೆಳ್ಳಿಯ ಉಂಗುರ ನೀಡಿ ಸುಲಿಗೆ ಮಾಡುತ್ತಿರುವುದೂ ಕಂಡುಬಂದಿದೆ. ಇದರಲ್ಲಿ ಹೆಚ್ಚಿನವರು ಮುಸ್ಲಿಮರು ಮತ್ತು ಬೆಂಗಾಲಿಯವರೇ ಹೆಚ್ಚಿದ್ದಾರೆ. ಹಣ ಕಡಿಮೆ ಮತ್ತು ಸಂಕೋಚ ಸ್ವಭಾವದಿಂದ ನಕಲಿ ವೈದ್ಯರ ಮೊರೆ ಹೋಗುವ ಜನರು ರೋಗದಿಂದ ಮುಕ್ತಿ ಕಾಣದೆ ಕೆಲವರು ಆತ್ಮಹತ್ಯೆಗೆ ಶರಣಾಗಿರುವ ನಿದರ್ಶನಗಳೂ ಇವೆ ಎಂದು ಡಾ.ಪರಮೇಶ್‌ ವಿವರಿಸಿದರು.

ಬೆಂಗಳೂರಿನ ನಮ್ಮ ಆಸ್ಪತ್ರೆಯಲ್ಲಿ ಕಳೆದ ವರ್ಷ 68 ಲಕ್ಷ ರಿಯಾಯ್ತಿ ನೀಡಿದ್ದೇವೆ. ಅಶಕ್ತರಾದ ಕೆಲವರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ, ಸಲಹೆ ನೀಡಿದ್ದೇವೆ ಎಂದರು.

ಜಿಲ್ಲೆಯಲ್ಲೂ ಪೈಲ್ಸ್‌ ರೋಗ ಹೆಚ್ಚಾಗುತ್ತಿದೆ. ತಿಂಗಳಿಗೆ ಕನಿಷ್ಠ 200ರಿಂದ 300 ಪೈಲ್ಸ್‌ ಸಂಬಂಧಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. ಹಾಗಾಗಿ ರೋಗದ ಬಗ್ಗೆ ಯಾರೂ ಉದಾಸೀನ ಮಾಡಬಾರದು ಎಂದು ಸಲಹೆ ನೀಡಿದರು.

19ರಂದು ಜಾಗೃತಿ ಜಾಥಾ

ವಿಶ್ವ ಪೈಲ್‌ ದಿನಾಚರಣೆ ನಿಮಿತ್ತ ಎಸ್‌.ಡಿ.ಜಯರಾಂ ಆಸ್ಪತ್ರೆಯಿಂದ ನ.19 ರಂದು ಜಾಗೃತಿ ಜಾಥಾ ಆಯೋಜಿಸಲಾಗಿದೆ. ಅಂದು ಪೈಲ್ಸ್‌ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿವರೆಗೆ ವಾಕಥಾನ್‌ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು, ನರ್ಸಿಂಗ್‌, ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳು ಭಾಗವಹಿಸುವರು. 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

click me!