* ಹುಬ್ಬಳ್ಳಿಯಲ್ಲಿ ಅನುರಣಿಸಿದ ಅಜ್ಜನ ಜೈಕಾರ/ ಮುಗಿಲು ಮುಟ್ಟಿದ ಭಕ್ತಿಯ ಪರಾಕಾಷ್ಠೆ
* ಮಠದಲ್ಲೇ ಶಿವರಾತ್ರಿಯ ಜಾಗರಣೆ ಕೈಗೊಂಡಿದ್ದ ಭಕ್ತರು
* ಜಿಲ್ಲಾಡಳಿತ ಅನುಮತಿ ನೀಡಿದ್ದರಿಂದ ಸಾಂಗವಾಗಿ ನೆರವರಿದ ರಥೋತ್ಸವ
ಹುಬ್ಬಳ್ಳಿ(ಮಾ.03): ‘ಶ್ರೀ ಸಿದ್ಧಾರೂಢ ಮಹಾರಾಜ(Siddharudha Maharaj) ಕೀ ಜೈ.. ಮಹಾದ್ವಾರಕ ರಥದಾಗ ಅಜ್ಜ ಬಂದಾ.. ಜೈಜೈ ಸಿದ್ಧಾರೂಢ..’ ‘ಹುಬ್ಬಳ್ಳಿ(Hubballi) ಎಂಬುದು ಕಲ್ಯಾಣ ಸಿದ್ಧಾರೂಢಾ ಬಸವಣ್ಣ’.. ! ನಿನ್ನೆ(ಬುಧವಾರ) ಸಂಜೆ ಸಿದ್ಧಾರೂಢ ಮಠದ(Siddharudha Matha) ಆವರಣದಲ್ಲಿ ಅಜ್ಜನ ರಥ ಮಠದ ರಥಬೀದಿಯಲ್ಲಿ ಸಾಂಗವಾದಾಗ ಆಕಾಶದಲ್ಲಿ ಪ್ರತಿಧ್ವನಿಸಿದಂತೆ ಕೇಳಿಬಂದ ಭಾರೀ ಜನಸ್ತೋಮದ ಜಯಘೋಷಗಳಿವು.
ಕೊರೋನಾ(Coronavirus) ಭಯವನ್ನು ಬದಿಗಿಟ್ಟು 3 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿದ್ದು ಕಂಡು ಬಂತು. ಮಹಾರಾಷ್ಟ್ರ, ಗೋವಾ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಅಜ್ಜನ ಸಂಭ್ರಮವನ್ನು ಕಣ್ತುಂಬಿಕೊಂಡು ಪುನೀತರಾದರು.
ಅಜ್ಜನ ರಥವು(Fair) ಮಠದಿಂದ ರಥಬೀದಿಯ ಮೂಲಕ ಮಹಾದ್ವಾರ ತಲುಪುತ್ತಿದ್ದಂತೆ ಲಕ್ಷಾಂತರ ಭಕ್ತರು(Devotees) ಭಾವಪರವಶರಾಗಿ ದೈವಸ್ವರೂಪಿ ಸಿದ್ಧಾರೂಢರಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಸಂಜೆ ಮಠದ ಆವರಣದಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿಗಳ ರಥೋತ್ಸವಕ್ಕೆ ಶ್ರೀಮಠದ ಆಡಳಿತಾಧಿಕಾರಿಯೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ ಚಾಲನೆ ನೀಡಿದರು. ಮಠದ ಗಣ್ಯರು, ಭಕ್ತಸಮೂಹ ರಥವನ್ನು ಎಳೆಯಲು ಪ್ರಾರಂಭಿಸುತ್ತಿದ್ದಂತೆ ಭಕ್ತರು ಉತ್ತತ್ತಿ, ಲಿಂಬು, ಬಾಳೆಹಣ್ಣು, ಪೇರಲ್ ಸೇರಿ ಚಿಕ್ಕ ಹಣ್ಣುಗಳನ್ನು ಭಕ್ತಿಯಿಂದ ತೂರಿದರು. ಹಾಗೆಯೇ ಪ್ರಸಾದ ರೂಪದಲ್ಲಿ ಅದನ್ನು ಆರಿಸಿಕೊಳ್ಳಲು ಕೂಡ ಭಕ್ತರಲ್ಲಿ ಪೈಪೋಟಿ ಉಂಟಾಗಿತ್ತು.
Karnataka Budget 2022-23: ಉತ್ತರದ ಹೆಬ್ಬಾಗಿಲಿಗೆ ಸಿಎಂ ತೋರಣ..!
ಜಗ್ಗಲಗಿ ಮೇಳ, ಗೊಂಬೆ ಕುಣಿತ, ಕರಡಿಮಜಲು, ಡೊಳ್ಳು ಕುಣಿತ ಸೇರಿ ಭಜನಾ ತಂಡಗಳು ರಥದ ಮುಂದೆ ಮುಂದೆ ಸಾಗುತ್ತಿದ್ದವು. ಇವುಗಳೊಟ್ಟಿಗೆ ಜನತೆಯೂ ಹೆಜ್ಜೆ ಹಾಕಿ ಭಕ್ತಿಯನ್ನು ನೃತ್ಯದ ಮೂಲಕ ತೋರ್ಪಡಿಸಿಕೊಂಡರು. ಅದರ ಹಿಂದೆಯೇ ಸಿದ್ಧಾರೂಢ ಅಜ್ಜ ರಥದಲ್ಲಿ ವಿರಾಜಮಾನವಾಗಿ ಕುಳಿತು ರಥ ಬೀದಿಯಲ್ಲಿ ಸಾವಧಾನವಾಗಿ ಆಗಮಿಸುತ್ತಿದ್ದ. ಈ ವೈಭವ ಕಣ್ತುಂಬಿಕೊಂಡ ಭಕ್ತಸಮೂಹ ಅಜ್ಜನಿಗೆ ಜೈಕಾರ ಹಾಕುತ್ತ ಕೈ ಮುಗಿಯುತ್ತ ನಿಂತಿತ್ತು.
ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷ ಸಂಭ್ರಮದ ಜಾತ್ರೆಗೆ ನಿಯಂತ್ರಣ ಹೇರಲಾಗಿತ್ತು. ಅಷ್ಟೊಂದು ಜನ ಸೇರಿರಲಿಲ್ಲ. ಆದರೆ ಈ ವರ್ಷ ಜನಸಾಗರ ಹುಚ್ಚೆದ್ದು ಅಜ್ಜನ ತೇರು ನೋಡಲು ಬಂದಿದ್ದರು. ಈ ವರ್ಷ ಕೂಡ ಅಜ್ಜನ ರಥೋತ್ಸವ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕ ಶುರುವಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸೋಮವಾರದವರೆಗೂ ಜಿಲ್ಲಾಡಳಿತ(District Administration) ರಥೋತ್ಸವಕ್ಕೆ ಅನುಮತಿ ಕೂಡ ನೀಡಿರಲಿಲ್ಲ. ಹೀಗಾಗಿ ಸಾಂಕೇತಿಕವಾಗಿ ನಡೆಸುವ ಕುರಿತು ಮಠದ ಆಡಳಿತ ಮಂಡಳಿ ನಿರ್ಧರಿಸಿತ್ತು. ಆದರೆ ಕೊನೆಗೆ ಜಿಲ್ಲಾಡಳಿತ ಅನುಮತಿ ನೀಡಿದ್ದರಿಂದ ರಥೋತ್ಸವವು ಸಾಂಗವಾಗಿ ನೆರವೇರಿತು.
ಜನವೋ ಜನ:
ಮಠದಿಂದ ಮಹಾದ್ವಾರದವರೆಗಿನ ರಥಬೀದಿಯ ಇಕ್ಕೆಲಗಳು ಭರ್ತಿಯಾಗಿದ್ದವು. ರಥಬೀದಿಯಂತೂ ಕಾಲಿಡಲೂ ಆಗದಷ್ಟು ಕಿಕ್ಕಿರಿದು ಭಕ್ತರಿಂದ ತುಂಬಿ ಹೋಗಿತ್ತು. ಅಜ್ಜನ ತೇರನ್ನು ರಥಬೀದಿಯ ಅಕ್ಕಪಕ್ಕದ ಕಟ್ಟಡಗಳು ಗೋಪುರಗಳ ಮೇಲೆ ನಿಂತು ಜನ ವೀಕ್ಷಿಸಿದರು. ಯುವಕರು ತಮ್ಮ ಹತ್ತಿರ ರಥ ಬರುತ್ತಿದ್ದಂತೆ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಸಂಭ್ರಮಿಸಿದರು. ಇನ್ನು ಸ್ಥಳೀಯ ಭಕ್ತರು ಅಲ್ಲಲ್ಲಿ ರಥಕ್ಕೆ ಹಣ್ಣುಕಾಯಿ ಸೇವೆ ಸಲ್ಲಿಸಿದರು. ಸಂಜೆ 7ಕ್ಕೆ ಗಂಟೆಗೆ ರಥವು ಮಹಾದ್ವಾರ ತಲುಪುತ್ತಿದ್ದಂತೆ ಪಟಾಕಿ, ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಯಿತು. ಅಲ್ಲಿ ಧಾರ್ಮಿಕ ಕೈಂಕರ್ಯ ಕೈಗೊಂಡ ಬಳಿಕ ರಥವು ತಿರುಗಿ ಮಠದತ್ತ ಸಾಗಿತು. ಪುನಃ ಸಿದ್ಧಾರೂಢನ ಹೆಜ್ಜೆಯನ್ನೇ ಅನುಕರಿಸಿದ ಭಕ್ತರು ರಥದ ಹಿಂದೆಯೇ ಮಠದತ್ತ ತಾವೂ ತೆರಳಿದರು.
ಅಜ್ಜನ ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಲು ಮೂರ್ನಾಲ್ಕು ದಿನಗಳಿಂದಲೇ ವಿವಿಧ ಜಿಲ್ಲೆಗಳಿಂದ ಜನತೆ ಆಗಮಿಸಿದ್ದರು. ಹಲವರು ಮಠದಲ್ಲೆ ಶಿವರಾತ್ರಿಯ ಜಾಗರಣೆ ಕೈಗೊಂಡಿದ್ದರು. ಇನ್ನು ಹಲವರು ನೆಂಟರಿಷ್ಟರ, ಸ್ನೇಹಿತರ ಮನೆಯಲ್ಲಿದ್ದು ರಥೋತ್ಸವದ ವೇಳೆಗೆ ಮಠದತ್ತ ಹೆಜ್ಜೆ ಹಾಕಿದ್ದರು.
Maha Shivaratri Special ಕಣ್ಮನ ಸೆಳೆಯುವ ಶಿವ, ಅರ್ಧನಾರೀಶ್ವರ, ಅಘೋರಿ ಫೋಟೋ ಶೂಟ್
ಮಠಕ್ಕೆ ಬಂದು ಸೇರುವ ಆರ್.ಎನ್.ಶೆಟ್ಟಿ ಫ್ಯಾಕ್ಟರಿ ರಸ್ತೆ, ಹೆಗ್ಗೇರಿ ರಸ್ತೆ, ಗಿರಣಿಚಾಳ್ ರಸ್ತೆ, ಹಳೇಹುಬ್ಬಳ್ಳಿ ಮಾರ್ಕೇಟ್ ರಸ್ತೆ, ಆನಂದನಗರ ರಸ್ತೆ, ಕಲಘಟಗಿ ರಸ್ತೆಗಳಲ್ಲೆಲ್ಲ ವಾಹನಗಳು ಮೂರ್ನಾಲ್ಕು ಕೀಮಿ ಉದ್ದಕ್ಕೂ ಸಾಲುಗಟ್ಟಿದ್ದವು. ಗೋಕುಲ ರಸ್ತೆ, ಕಿತ್ತೂರು ಚೆನ್ನಮ್ಮ ವೃತ್ತ, ವಿಕಾಸನಗರ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ರಥಬೀದಿಗೆ ಬಂದಿದ್ದರು ಭಕ್ತರು. ಹಾಗಾಗಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್(Traffic Jam) ಸಹಜವಾಗಿತ್ತು.
ರಥೋತ್ಸವದಲ್ಲಿ ಶ್ರೀಮಠದ ಚೇರಮನ್ ದೇವೇಂದ್ರಪ್ಪ ಡಿ.ಮಾಳಗಿ, ವೈಸ್ ಚೇರಮನ್ ಗೋವಿಂದ ಮಣ್ಣೂರ, ಗೌರವ ಕಾರ್ಯದರ್ಶಿ ಜಗದೀಶ ಮಗಜಿಕೊಂಡಿ, ಧರ್ಮದರ್ಶಿಗಳಾದ ಎಸ್.ಐ. ಕೊಳಕೂರ, ಶಾಮಾನಂದ ಪೂಜೇರಿ, ವ್ಯವಸ್ಥಾಪಕ ಈರಣ್ಣ ತುಪ್ಪದ ಸೇರಿ ಗಣ್ಯರು ಉಪಸ್ಥಿತರಿದ್ದರು.