ಸುರಪುರ: ಕ್ರಿಶ 11ನೇ ಶತಮಾನದ ಕನ್ನಡ ಶಿಲಾಶಾಸನ ಪತ್ತೆ

By Kannadaprabha NewsFirst Published Jan 3, 2023, 10:00 PM IST
Highlights

ಸುರಪುರ ಮೂಲಸಂಸ್ಥಾನದ ವಾಗಣಗೇರಿಯಲ್ಲಿ ಸಂಶೋಧಕ ಡಾ. ಎಂ.ಎಸ್‌. ಶಿರವಾಳರಿಂದ ಶೋಧ

ಸುರಪುರ(ಜ.03):  ಶೂರರನಾಡಿನ ಸುರಪುರ ಮೂಲಸಂಸ್ಥಾನ ಐತಿಹಾಸಿಕ ಗ್ರಾಮ ವಾಗಣಗೇರಿಯಲ್ಲಿ ಸುಮಾರು ಒಂದು ಸಾವಿರ ವರ್ಷಗಳ ಪುರಾತನವಾದ ಕಲ್ಯಾಣ ಚಾಲುಕ್ಯರ ಕಾಲದ ಕನ್ನಡ ಶಿಲಾಶಾಸನವನ್ನು ಸಂಶೋಧಕ ಡಾ. ಎಂ.ಎಸ್‌. ಶಿರವಾಳ ಪತ್ತೆ ಹಚ್ಚಿ ಇತಿಹಾಸಕ್ಕೆ ಮೆರುಗು ನೀಡುವ ಕೆಲಸ ಮಾಡುತ್ತಿದ್ದಾರೆ. ವಾಗಣಗೇರಿ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ಜಮೀನೊಂದರಲ್ಲಿ ಚಾಲುಕ್ಯರ ಶಿಲಾಶಾಸನ ಪತ್ತೆಯಾಗಿದೆ. 5 ಅಡಿ ಉದ್ದ, 2 ಅಡಿ ಅಗಲ ಮತ್ತು 2 ಅಡಿ ದಪ್ಪವಾದ ಕಪ್ಪು ಗ್ರಾನೈಟ್‌ ಕಲ್ಲಿನ ಮೇಲೆ ಹಳೆಗನ್ನಡ ಭಾಷೆಯಲ್ಲಿ ಶಿಲಾಶಾಸನ ಕೆತ್ತಲಾಗಿದೆ.

ಈ ಶಿಲಾಶಾಸವನ್ನು ಎರಡು-ಮೂರು -ನಾಲ್ಕು ಮತ್ತು ಐದನೆಯ ಸಾಲುಗಳಲ್ಲಿ ದಾಖಲಿಸಿರುವ ತೇದಿಯ ಆಧಾರದ ಮೇಲೆ ಹಾಗೂ ಬಳಸಿರುವ ಹಳೆಗನ್ನಡ ಲಿಪಿ ಅಕ್ಷರಗಳ ಸ್ವರೂಪ ಮತ್ತು ಗಾತ್ರಗಳ ಆಧಾರದ ಮೇಲೆ ಈ ಶಾಸನದ ಕಾಲ ಕ್ರಿಶ 1052ರ ಅಕ್ಟೋಬರ್‌ ತಿಂಗಳು ಎಂದು ನಿರ್ಧರಿಸಲಾಗಿದೆ. ಹಳೆಗನ್ನಡ ಲಿಪಿಯ 30 ಸಾಲುಗಳಲ್ಲಿ ಕೆತ್ತಲಾಗಿದೆ.

ಯಾದಗಿರಿ: ಬಸವಸಾಗರಕ್ಕೆ ದೆಹಲಿ ವಕೀಲರ ತಂಡ ಭೇಟಿ

ಯುದ್ಧದಲ್ಲಿ ವೀರಮರಣವನ್ನಪ್ಪಿದ ಅಂಗಾಸಿರೇನಾಯಕನಿಗೆ ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದ ಮಾಸಿರಾಜ ಮತ್ತು ಮರುಳನಾಯಕರು 575 ಎಕರೆ ಭೂಮಿಯನ್ನು ದತ್ತಿಯಾಗಿ ನೀಡಿದ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ.
ಐತಿಹಾಸಿಕ ಮಹತ್ವದ ವಾಗಣಗೇರಿ ಪ್ರದೇಶವನ್ನು ಮಾಸಿರಾಜ ಮತ್ತು ಮರುಳನಾಯಕರು ಸಾಮಂತರಾಗಿ ಆಳುತ್ತಿದ್ದರು ಎಂಬ ಅಂಶ ತಿಳಿದು ಬರುತ್ತದೆ. ಶೌರ್ಯ ಅಂದಿನ ಜೀವನ ಮೌಲ್ಯವಾಗಿತ್ತು. ನಾಡಿನ ರಕ್ಷಣೆಗಾಗಿ ಜನ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದರು ಹಾಗೂ ವೀರಮರಣವನ್ನಪ್ಪಿದ ವೀರರಿಗೆ ಅರಸರು ಯಥೇಚ್ಛವಾಗಿ ದತ್ತಿಯನ್ನು ನೀಡಿ ಗೌರವಿಸುತ್ತಿದ್ದರು ಎಂಬ ಸಾಮಾಜಿಕ ಅಂಶ ಈ ಶಾಸನದಿಂದ ತಿಳಿದು ಬರುತ್ತದ

ಈ ಶಾಸನದಲ್ಲಿ ದಾಖಲಾಗಿರುವ ಅರುಗನ ಕೋಲು, ಮತ್ತರು, ತೊರೆ ಭೂಮಿ ಎಂಬ ಪದಗಳು ಅಂದಿನ ಆರ್ಥಿಕಸ್ಥಿತಿ ಅಧ್ಯಯನಕ್ಕೆ ಪ್ರಮುಖ ಅಂಶಗಳಾಗಿವೆ. ಅಲ್ಲದೇ ಕೊಟ್ಟಮಾತಿಗೆ ತಪ್ಪದೇ ಇರುವುದು, ಅಂದಿನ ಜನರ ಜೀವನ ಮೌಲ್ಯವಾಗಿತ್ತು ಎಂಬುದನ್ನು ಮನಗಾಣಬಹುದಾಗಿದೆ.

ಶಾಸನದ ಮೇಲ್ಭಾಗದಲ್ಲಿ ನಂದಿ, ಲಿಂಗ, ಸೂರ್ಯ, ಚಂದ್ರ ಆಕಳು-ಕರು ಮತ್ತು ಖಡ್ಗ ಚಿತ್ರಗಳಿವೆ. ನಂದಿ ಮತ್ತು ಲಿಂಗ ಶೈವ ಧರ್ಮ, ಸೂರ್ಯ-ಚಂದ್ರರು ಇರುವ ತನಕ ಶಾಶ್ವತವಾಗಿರಬೇಕು. ಆಕಳು ಮತ್ತು ಕರು ಸತ್ಯ ಮತ್ತು ನ್ಯಾಯದ ಪರಿಪಾಲನೆ ಕುರಿತು ತಿಳಿಸುತ್ತದೆ. ಶಾಸನ ದತ್ತಿಯನ್ನು ರಕ್ಷಿಸಿದರೆ, ಗೋವನ್ನು ರಕ್ಷಿಸಿದ ಪುಣ್ಯ ಹಾಗೂ ಖಡ್ಗವು ದತ್ತಿ ಶಾಸನವನ್ನು ಕೆಡಿಸಿದವರೆಗೆ ಶಿಕ್ಷಿಸುವ ನ್ಯಾಯ ದಂಡಗಳ ಮಹತ್ವಪೂರ್ಣವಾದ ಅಂಶಗಳು ಪ್ರತಿನಿಧಿಸುತ್ತದೆಂದು ಸಂಶೋಧಕ ಡಾ. ಎಂ.ಎಸ್‌. ಶಿರವಾಳ ತಿಳಿಸಿದ್ದಾರೆ.

ಪ್ರಸ್ತುತ ಶೋಧಿಸಿರುವ ಶಿಲಾಶಾಸನವನ್ನು ನಿಧಿಗಳ್ಳರೋ ಅಥವಾ ಇದರ ಮಹತ್ವವನ್ನರಿಯದ ಕಿಡಿಗೇಡಿಗಳು ಭಗ್ನ ಗೊಳಿಸಿದ್ದಾರೆ. ಹೀಗಾಗಿ ಬಹುತೇಕ ಮಾಹಿತಿಗಳು ಚದುರಿಹೋಗಿ ಎಷ್ಟೋ ಐತಿಹಾಸಿಕ ಮಹತ್ವದ ಅಂಶಗಳು ಹಾಳಾಗಿವೆ.

ಶಾಸನದ ಸಾಹಿತ್ಯ, ಭಾಷೆ, ಅಕ್ಷರಗಳು, ಸಾಲುಗಳು ಮತ್ತು ಚಿತ್ರಗಳು ಇಲ್ಲಿನ ಸುಂದರ ಹಾಗೂ ಸ್ಪಷ್ಟವಾಗಿ ಮೂಡಿಬಂದಿಲ್ಲ. ಹೀಗಾಗಿ ಇಲ್ಲಿನ ಬಹುತೇಕ ಅಂಶಗಳನ್ನು ಖಚಿತವಾಗಿ ಹೇಳುವುದು ಕಷÜ್ಟಸಾಧ್ಯವೆಂದು ಸಂಶೋಧಕರು ತಿಳಿಸಿದ್ದಾರೆ.

ಐತಿಹಾಸಿಕ ಶಾಸನವು ಒಡೆದು ಹೋಗಿದ್ದು, ನೆಲದಲ್ಲಿ ಹೂತು ಹೋಗಿದೆ. ಇಲ್ಲಿನ ಮಹತ್ವದ ಕೋಟೆ-ಕೊತ್ತಲ-ದೇವಾಲಯ-ಬಾವಿ-ಸ್ಮಾರಕಗಳು ಅವಸಾನದ ಅಂಚಿಗೆ ತಲುಪಿವೆ. ಪುರಾತನ ತತ್ವ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾಹಿತಿಗಳು ಇತ್ತ ಗಮನ ನೀಡುತ್ತಾರೆಯೇ ಕಾಯ್ದು ನೋಡಬೇಕಿದೆ.

ಯಾದಗಿರಿಯಲ್ಲಿ ಸಂಭ್ರಮದ ಎಳ್ಳ ಅಮವಾಸ್ಯೆ 'ಚೆರಗ ಚೆಲ್ಲಿದ' ರೈತರು

ಶಾಸನ ಸಂಶೋಧನೆಗೆ ಎಚ್‌.ಎಂ. ಪತ್ತಾರ, ಶಾಂತಪ್ಪ ಬೂದಿಹಾಳ, ಮಾನಪ್ಪ ಗುತ್ತೇದಾರ, ಎಂ.ಎಸ್‌. ರೋಹಿಣಿ, ಸಂಗಣ್ಣ ಮುತ್ಕೋಡ್ಕರ್‌, ಶರಣಬಸಪ್ಪ ಸಿರವಾಳ, ಭೀಮರಾಯ ಕುಸ್ತಿ, ಎಂ.ಎಸ್‌. ವೆಂಕಟಸಾಯಿ, ಶ್ರೀನಿವಾಸ, ಬಾಲಾಜಿ, ಮೋದಿನ ಪಟೇಲ ಅಣಬಿ, ಅಶೋಕ ಬಾಬರೆ ಇತರರು ಸಹಕರಿಸಿದ್ದಾರೆಂದು ಶಿರವಾಳ ತಿಳಿಸಿದ್ದಾರೆ.

ವಿಶ್ವದ ಲಿಪಿಗಳ ರಾಜ ರಾಣಿ ಎಂದೆನಿಸಿರುವ ಕನ್ನಡ ಲಿಪಿಯಲ್ಲಿ ಈ ಶಾಸನವನ್ನು 30 ಸಾಲುಗಳಲ್ಲಿ ಒಂದಿಂಚು ಗಾತ್ರದ ಅಕ್ಷರಗಳಲ್ಲಿ ಕೆತ್ತಲಾಗಿದೆ. ಸುರಪುರ ತಾಲೂಕು ಐತಿಹಾಸಿಕ ಕ್ಷೇತ್ರವಾಗಿದ್ದು, ಇಲ್ಲಿನ ಶಾಸನಗಳು ಹಾಗೂ ಸ್ಮಾರಕಗಳನ್ನು ರಕ್ಷಿಸಲು ಪುರಾತನ ತತ್ವ ಇಲಾಖೆ ಮುಂದಾಗಬೇಕು ಅಂತ ಸಂಶೋಧಕ ಡಾ. ಎಂ.ಎಸ್‌. ಶಿರವಾಳ ತಿಳಿಸಿದ್ದಾರೆ. 

click me!