ಬಗೆಹರಿಯದ ಸಚಿವ ಸಂಪುಟ ಕಗ್ಗಂಟು; ರಾಹುಲ್ ಆಗಮನದ ನಂತರ ನಿರ್ಧಾರ

First Published May 31, 2018, 7:36 AM IST
Highlights

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಇನ್ನೂ ಉಳಿದಿರುವ ಕೆಲ ಗೊಂದಲಗಳು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲೇ ಪರಿಹಾರವಾಗ ಬೇಕಿರುವುದರಿಂದ ಸಂಪುಟ ವಿಸ್ತರಣೆ ನಾಲ್ಕಾರು ದಿನ ಮುಂದಕ್ಕೆ ಹೋಗಿದೆ. 

ಬೆಂಗಳೂರು (ಮೇ. 31):  ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಇನ್ನೂ ಉಳಿದಿರುವ ಕೆಲ ಗೊಂದಲಗಳು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲೇ ಪರಿಹಾರವಾಗ ಬೇಕಿರುವುದರಿಂದ ಸಂಪುಟ ವಿಸ್ತರಣೆ ನಾಲ್ಕಾರು ದಿನ ಮುಂದಕ್ಕೆ ಹೋಗಿದೆ. 

ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಶನಿವಾರ ದೆಹಲಿಗೆ ಆಗಮಿಸಲಿದ್ದಾರೆ. ನಂತರ ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅವರೊಂದಿಗೆ ಚರ್ಚೆ ನಡೆಸುವ ಸಾಧ್ಯತೆಯಿದ್ದು, ಅನಂತರ ಸಂಪುಟ ವಿಸ್ತರಣೆ ವಿಚಾರ ಇತ್ಯರ್ಥವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್ - ಕಾಂಗ್ರೆಸ್ ನಡುವೆ ಪ್ರಮುಖ ಖಾತೆಗಳ ಪೈಕಿ ಯಾವುದು ಯಾರಿಗೆ ಎಂಬುದು ರಾಹುಲ್ ಸಮ್ಮುಖದಲ್ಲೇ ಇತ್ಯರ್ಥವಾಗಬೇಕಿದೆ. ಇದರ ಜತೆಗೆ, ಕಾಂಗ್ರೆಸ್ ಪಾಲಿನಲ್ಲಿ ಯಾವ ಮಂತ್ರಿ ಪದವಿಯನ್ನು ಯಾರಿಗೆ ನೀಡಬೇಕು ಹಾಗೂ ಎಷ್ಟು ಹಂತದಲ್ಲಿ ಸಂಪುಟ ವಿಸ್ತರಿಸಬೇಕು ಎಂಬುದೂ ರಾಹುಲ್ ಅವರ ಆಗಮನದ ನಂತರವೇ ಬಗೆಹರಿಯಬೇಕಿದೆ.

ಒಂದು ಮೂಲದ ಪ್ರಕಾರ ರಾಹುಲ್ ಹಿಂತಿರುಗಿದ ನಂತರ ರಾಜ್ಯ ನಾಯಕರ ದಂಡು ಮತ್ತೊಮ್ಮೆ ದೆಹಲಿಗೆ ತೆರಳಲಿದೆ. ಈ ವೇಳೆ ಕುಮಾರಸ್ವಾಮಿ ಅವರನ್ನೂ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಆಹ್ವಾನಿಸುವ ಸಾಧ್ಯತೆಯಿದ್ದು, ತೆರಳುವ ಬಗ್ಗೆ ಜೆಡಿಎಸ್ ನಾಯಕತ್ವ ಅಂತಿಮ ಹಂತದಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ. ಕೆಲ ಪ್ರಮುಖ ಖಾತೆಗಳ ಹಂಚಿಕೆ ವಿಚಾರ ಇತ್ಯರ್ಥವಾದ ನಂತರ ಕಾಂಗ್ರೆಸ್ ನಾಯಕತ್ವ  ಪಕ್ಷದಲ್ಲಿ ಯಾರಿಗೆ ಯಾವ ಖಾತೆಗಳನ್ನು ನೀಡಬೇಕು ಎಂಬುದನ್ನು ತೀರ್ಮಾ ನಿಸಬೇಕಿದೆ. 

click me!