ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗುಪ್ತ ಲೆಕ್ಕಾಚಾರವೇನು..? ಬಿಚ್ಚಿಟ್ಟರು ಸೀಕ್ರೇಟ್

First Published Jul 8, 2018, 11:42 AM IST
Highlights

 ಕಾಂಗ್ರೆಸ್ ಬದಲಾಗುತ್ತಿದೆ. ಹಿರಿತನಕ್ಕೆ ಸದಾ ಮಣೆ ಹಾಕುತ್ತಿದ್ದ ಪಕ್ಷವೀಗ ಅನುಭ ವವುಳ್ಳ ಯುವ ಪೀಳಿಗೆಗೆ ಹೆಚ್ಚಿನ ಹೊಣೆ ನೀಡಲು ಮುಂದಾಗುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು. ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್‌ರಂತಹ ಘಟಾನುಘಟಿಗಳ ಪೈಪೋಟಿಯ ನಡುವೆಯೂ 48 ವರ್ಷದ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ದ್ದಾರೆ. 

ಗಿರೀಶ್ ಬಾಬು 

ಬೆಂಗಳೂರು : ಕಾಂಗ್ರೆಸ್ ಬದಲಾಗುತ್ತಿದೆ. ಹಿರಿತನಕ್ಕೆ ಸದಾ ಮಣೆ ಹಾಕುತ್ತಿದ್ದ ಪಕ್ಷವೀಗ ಅನುಭ ವವುಳ್ಳ ಯುವ ಪೀಳಿಗೆಗೆ ಹೆಚ್ಚಿನ ಹೊಣೆ ನೀಡಲು ಮುಂದಾಗುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು. ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್‌ರಂತಹ ಘಟಾನುಘಟಿಗಳ ಪೈಪೋಟಿಯ ನಡುವೆಯೂ 48 ವರ್ಷದ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ದ್ದಾರೆ. 

ಕಾಂಗ್ರೆಸ್ ಶಾಸಕಾಂಗ ಪಕ್ಷದ  ನಾಯಕ ಸಿದ್ದರಾಮಯ್ಯ ಹಾಗೂ ಯುವ ಬ್ರಿಗೇಡ್‌ನ ಮತ್ತೊಬ್ಬ ಸಾರಥಿ ಕೃಷ್ಣ ಬೈರೇಗೌಡ ಅವರ ಬೆಂಬಲ ಈ ಹುದ್ದೆ  ಗೇರಲು ಅವರಿಗೆ ಸಹಕಾರಿ ಯಾಗಿದ್ದು ಬಹಿರಂಗ ರಹಸ್ಯ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಹಾಗೂ ಪಕ್ಷದಲ್ಲಿ ಎರಡು ಪ್ರಭಾವಿ ಬಣಗಳು ಇರುವ ಈ ಹಂತದಲ್ಲಿ ಕೆಪಿ ಸಿಸಿ ಅಧ್ಯಕ್ಷ ಸ್ಥಾನ ಕ್ಕೇರಿರುವ ದಿನೇಶ್ ಗುಂಡೂ ರಾವ್‌ಗೆ ಮುಂದೆ ಲೋಕಸಭಾ ಚುನಾವಣೆಯೂ ಸೇರಿದಂತೆ ಸವಾಲುಗಳ ಬೆಟ್ಟವೇ ಇದೆ. ಇದನ್ನು  ಹೇಗೆ ಎದುರಿಸುತ್ತಾರೆ? ದಿನೇಶ್ ಯಾರದ್ದೋ ಒಬ್ಬರ ಕೈಗೊಂಬೆಯಾಗಲಿದ್ದಾರೆ ಎಂಬ ಭಾವನೆಯನ್ನು ಹೇಗೆ ಅಳಿಸಿ ಹಾಕುತ್ತಾರೆ. ಇಷ್ಟಕ್ಕೂ ತಮ್ಮ ರಾಜಕೀಯ ಜೀವನದ ಈ ಹಂತದಲ್ಲಿ ಕೆಪಿಸಿಸಿ ಹುದ್ದೆಗೇರುವುದರ ಹಿಂದಿನ ಗುಪ್ತ 
ಲೆಕ್ಕಾಚಾರವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ದಿನೇಶ್ ಗುಂಡೂರಾವ್ ನೇರ- ದಿಟ್ಟ ಉತ್ತರ ನೀಡಿದ್ದಾರೆ. 

ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದರು. ಇದು ಸಿದ್ದರಾಮಯ್ಯ ಅವರ ಗೆಲುವು ಎಂದು ವಿಶ್ಲೇಷಿಸಲಾಯ್ತು. ಒಪ್ಪುವಿರಾ?

ಹೌದು, ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನು ಸ್ಪಷ್ಟವಾಗಿ ಸೂಚಿಸಿದ್ದರು. ಅವರೊಬ್ಬರೇ ಅಲ್ಲ, ಇನ್ನೂ ಅನೇಕ ನಾಯಕರು ನನ್ನ ಹೆಸರನ್ನು ಈ ಹುದ್ದೆಗೆ ಸೂಚಿಸಿದ್ದರು. ಕೆಲ ನಾಯಕರು ನನ್ನ ಬದಲು ಬೇರೆಯವರನ್ನು ಈ ಹುದ್ದೆಗೆ ಪರಿಗಣಿಸಬಹುದು ಎಂಬ ಸಲಹೆಯನ್ನು ಹೈಕಮಾಂಡ್‌ಗೆ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯುವಾಗ ಎಲ್ಲ ನಾಯಕರ ಅಭಿಪ್ರಾಯವನ್ನು ಪಡೆಯಲಾಗುತ್ತದೆ. 

ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗಲು ಮನಸ್ಸಿರಲಿಲ್ಲ. ಹೀಗಾಗಿ ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡರಂತೆ?

ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಅವರ ಸ್ನೇಹಿತರು ಪ್ರಸ್ತಾಪ ಮಾಡಿದ್ದು ನಿಜ. ಆದರೆ, ಸಿದ್ದರಾಮಯ್ಯ ಅವರು ನಾನು  ಅಧ್ಯಕ್ಷ ಆಗುವುದಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದರು. ಆಮೇಲೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿಕೊಂಡರು. ಇಂತಹ ಪ್ರಶ್ನೆಗಳು ಉದ್ಭವವಾಗುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ತೀರ್ಮಾನವಾಗಬೇಕಾದರೆ ಹೈಕಮಾಂಡ್ ಎಲ್ಲ ರೀತಿಯಿಂದಲೂ ಯೋಚನೆ ಮಾಡಿರುತ್ತದೆ. ನೋಡಿ, ನಾನು ಕೆಪಿಸಿಸಿ ಅಧ್ಯಕ್ಷನಾಗಿ ಯಾರೋ ಒಬ್ಬರ ಪರ ಕೆಲಸ ಮಾಡಲು ಹೋಗುವುದಿಲ್ಲ. ಯಾವುದೇ ವ್ಯಕ್ತಿ ಅವರು ಎಷ್ಟೇ  ದೊಡ್ಡ ವರಾಗಿರಲಿ ಅಥವಾ ಚಿಕ್ಕವರಾಗಿರಲಿ ಪಕ್ಷಕ್ಕೆ ತೊಂದರೆ ಕೊಟ್ಟರೆ ನಾನು ಸಹಿಸಿಕೊಳ್ಳುವುದಿಲ್ಲ. ಈ ಬಗ್ಗೆ ಯಾವುದೇ ಕಾಂಪ್ರೊಮೈಸ್‌ಗೆ ನಾನು ತಯಾರಿಲ್ಲ. ಸಿದ್ದರಾಮಯ್ಯ ನನ್ನ ಪರ ಇದ್ದಾರೆ, ಖರ್ಗೆ ನನ್ನ ಪರ ಇದ್ದಾರೆ ಅಂತ ಅಲ್ಲ. ನಾನು ಪಕ್ಷದ ಪರ. ಪಕ್ಷಕ್ಕೆ ತೊಂದರೆ ಕೊಡುವಂತಹ ಸನ್ನಿವೇಶವನ್ನು ಯಾರೇ ಸೃಷ್ಟಿ ಮಾಡಿದರೂ ಅವರ ವಿರುದ್ಧ ಖಡಕ್ ತೀರ್ಮಾನ ಕೈಗೊಳ್ಳುತ್ತೇನೆ. ಇದು ಖಚಿತ. 

ಕಾಂಗ್ರೆಸ್‌ನಲ್ಲಿ ಈಗ ಎರಡು ಪ್ರಭಾವಿ ಬಣಗಳಿವೆ. ಒಂದು ಸಿದ್ದರಾಮಯ್ಯ ಬಣ. ಇನ್ನೊಂದು ಪರಮೇಶ್ವರ್ ಬಣ. ಬಣ ರಾಜಕೀಯವನ್ನು ಹೇಗೆ ನಿಭಾಯಿಸುವಿರಿ?

ಪಕ್ಷದ ವಿಚಾರ ಬಂದಾಗ ಯಾವ ಹೊಂದಾಣಿಕೆಯನ್ನೂ ಮಾಡಿಕೊಳ್ಳುವುದಿಲ್ಲ. ಯಾವುದೇ ವ್ಯಕ್ತಿಯಿರ ಬಹುದು ಅಥವಾ ಯಾವುದೇ ಬಣವಿರಬಹುದು. ಆ ಬಣದ ತೀರ್ಮಾನ ಹಾಗೂ ನಡವಳಿಕೆಯಿಂದ ಪಕ್ಷಕ್ಕೆ ತೊಂದರೆಯಾಗುವುದು ಕಂಡು ಬಂದರೆ ಖಡಕ್ ತೀರ್ಮಾನ ಕೈಗೊಳ್ಳುತ್ತೇನೆ. ಇದಿಷ್ಟೇ ಅಲ್ಲ, ನಾನು ಯಾವ ವಿರೋಧ ಪಕ್ಷದ ಜತೆಗೂ ಹೊಂದಾಣಿಕೆ ಮಾಡಿಕೊಂಡಿರುವ ವ್ಯಕ್ತಿಯಲ್ಲ. ಯಾರ ಜತೆಗೂ ನನಗೆ ಸಂಬಂಧವಿಲ್ಲ. ಯಾವ ಪಕ್ಷ ಅಥವಾ ನಾಯಕರೊಂದಿಗೂ ಒಳ ಒಪ್ಪಂದ, ಹೊರ ಒಪ್ಪಂದ ಮಾಡಿಕೊಂಡಿಲ್ಲ. ಪಕ್ಷದ ಹಿತಕ್ಕಾಗಿ ಎಲ್ಲರನ್ನೂ ಎದುರು ಹಾಕಿಕೊಳ್ಳಲು ತಯಾರಿರುವವನು ನಾನು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರೇಸ್ ನಡೆದಿ ದ್ದಾಗ, ಪರಮೇಶ್ವರ್ ನಿಮಗೆ ಅಡ್ಡಿ ಹಾಕಿದರಂತೆ? 

ಒಂದು ಸ್ಥಾನಕ್ಕೆ ಪೈಪೋಟಿ ಆರಂಭಗೊಂಡಾಗ ನಾನಾ ರೀತಿಯ ಪ್ರಯತ್ನಗಳು, ಪ್ರಕ್ರಿಯೆಗಳು ನಡೆದಿರುತ್ತವೆ. ಆದರೆ, ಒಂದು ಬಾರಿ ರಾಹುಲ್ ಗಾಂಧಿ ತೀರ್ಮಾನ ಮಾಡಿದ ನಂತರ ಯಾರೂ ಅದರ ಬಗ್ಗೆ ಅಪಸ್ವರ ಎತ್ತಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ನನ್ನ ಹೆಸರು ಘೋಷಣೆಯಾಗುವುದಕ್ಕೆ ಮೊದಲು ಪೈಪೋಟಿಗಳು ನಡೆದಿರಬಹುದು. ಅದರಲ್ಲಿ ಏನೂ ತಪ್ಪಿಲ್ಲ. ಅದನ್ನು ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಒಪ್ಪಬೇಕು. ಅಂತಿಮ ತೀರ್ಮಾನವಾದ ನಂತರ ಎಲ್ಲರೂ ಒಪ್ಪಿ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ಹಿಂದೆ ಏನಾಯ್ತು ಎಂಬುದರ ಬಗ್ಗೆ ಮಾತನಾಡುವ ಅವಶ್ಯಕತೆ ಈಗ ಇಲ್ಲ.

ಪರಮೇಶ್ವರ್ 8 ವರ್ಷ ಅಧ್ಯಕ್ಷರಾಗಿದ್ದರು. ಒಂದು ವ್ಯವಸ್ಥೆ, ತಂಡ ಕಟ್ಟಿದ್ದಾರೆ. ಆ ತಂಡ ಈಗ ಬದಲಾಗುತ್ತಾ?

ಈ ಬಗ್ಗೆ ನಾನು ಈಗಲೇ ಯಾವ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಅಧ್ಯಕ್ಷನನ್ನಾಗಿ ಹಾಗೂ ಈಶ್ವರ್ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದೆ. ಪಕ್ಷವನ್ನು ಭವಿಷ್ಯದಲ್ಲಿ ಹೇಗೆ ಕೊಂಡೊಯ್ಯಬೇಕು ಎಂಬ ಬಗ್ಗೆ ನಾನು ಪಕ್ಷದ ಎಲ್ಲಾ ನಾಯಕರೊಂದಿಗೆ ಮಾತನಾಡುತ್ತಿದ್ದೇನೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು 10 ನೇ ತಾರೀಖು ಭೇಟಿಯಾಗುತ್ತಿದ್ದೇನೆ. ಅವರೊಂದಿಗೂ ಚರ್ಚೆ ಮಾಡುತ್ತೇನೆ. 11 ನೇ ತಾರೀಖು ಪದಗ್ರಹಣ ಮಾಡುತ್ತೇನೆ. ಅದಾದ ನಂತರ ಮುಂದೇನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ. ಈಗಲೇ ಆ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಇದು ಕಾಂಗ್ರೆಸ್ ಸಂಘಟನೆಗೆ ಎಷ್ಟು ಸಹಕಾರಿ?

ಹಿಂದಿನ ಕಾಂಗ್ರೆಸ್ ಸರ್ಕಾರ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡಿದರೂ ಸ್ವಂತ ಶಕ್ತಿಯಿಂದ ಅಧಿಕಾರ ಪಡೆಯುವಷ್ಟು ಸ್ಥಾನಗಳು ನಮಗೆ ಬರಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ದೇಶದಲ್ಲಿ ಹೊಸ ಸರ್ಕಾರ ಬರುವಂತಹ ಪರಿಸ್ಥಿತಿಗೆ ಕರ್ನಾಟಕವೇ ನಾಂದಿ ಹಾಡಬೇಕು. ಹೀಗಾಗಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. 

ಈ ನಿಮ್ಮ ಹೊಂದಾಣಿಕೆ ಲೋಕಸಭೆಯಲ್ಲಿ ಮೈತ್ರಿಯಾಗಿ ಮುಂದುವರೆದರೆ ಕಾಂಗ್ರೆಸ್‌ಗೆ ನಷ್ಟವಾಗುವುದಿಲ್ಲವೇ?

ಇಂದಿನ ಪರಿಸ್ಥಿತಿ ನೂರಕ್ಕೆ ನೂರರಷ್ಟು ಸರಿಯಿದೆ ಎಂದು ಹೇಳುವುದಿಲ್ಲ. ಆದರೆ, ನಮ್ಮ ಉದ್ದೇಶ ಜಾತ್ಯತೀತ ವ್ಯವಸ್ಥೆ ದೇಶದಲ್ಲಿ ಮುಂದುವರೆಯಬೇಕು ಹಾಗೂ ಮೋದಿ ಸರ್ಕಾರವನ್ನು ಬದಲಾಯಿಸಬೇಕು ಎಂಬುದು. ಇದಕ್ಕಾಗಿ ಹೊಂದಾಣಿಕೆ ಅನಿವಾರ್ಯ. ಅದರರ್ಥ ನಾವು ಕಾಂಗ್ರೆಸ್ ಪಕ್ಷವನ್ನು ದುರ್ಬಲ ಮಾಡಿಕೊಳ್ಳುತ್ತೇವೆ ಎಂದೇನಲ್ಲ. ಹೌದು, ಹಳೆ ಮೈಸೂರು ಭಾಗದಲ್ಲಿ ಪೈಪೋಟಿಯಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ. ಇಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಪಕ್ಷಕ್ಕೆ ತೊಂದರೆಯಾಗಬಹುದು ಎಂಬ ಭಾವನೆಯಿದೆ. ಆದರೆ, ನಾವು ಪಕ್ಷ ಸಂಘಟನೆ ಮಾಡುತ್ತೇವೆ. ಈ ಭಾಗದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಏನೇನು ಮಾಡಬೇಕೋ ಅದನ್ನು ಮಾಡುತ್ತೇವೆ.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಬೇಡ ಎಂಬುದು ಸಿದ್ದರಾಮಯ್ಯ ಅವರ ಸ್ಪಷ್ಟ ನಿಲುವು?

ನಾನು ಅದರ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ರಾಜ್ಯ ಉಸ್ತುವಾರಿ ವೇಣುಗೋಪಾಲ್ ಲೋಕಸಭಾ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಈಗಾಗಲೇ ಘೋಷಿಸಿದ್ದಾರೆ. ಭವಿಷ್ಯದಲ್ಲಿ ಈ ಬಗ್ಗೆ ಏನಾದರೂ ಬದಲಾವಣೆಯಿದ್ದರೆ ಅದನ್ನು ಎಲ್ಲರೂ ಕುಳಿತು  ತೀರ್ಮಾನಿ ಸಬೇಕಾಗುತ್ತದೆ. ಮುಖ್ಯ ಉದ್ದೇಶ- ಕಳೆದ ಐದಾರು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯು ರಾಜ್ಯದಲ್ಲಿ ಸತತವಾಗಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತಿದೆ. ಆ ಪರಿಸ್ಥಿತಿಯನ್ನು ಬದಲಾಯಿಸಬೇಕು. ಅದಕ್ಕೆ ಬೇಕಾದ ಕಾರ್ಯತಂತ್ರ ರೂಪಿಸುತ್ತೇವೆ.

ಲೋಕಸಭೆಯಲ್ಲಿ ಎಷ್ಟು ಸ್ಥಾನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಿರಿ?

ಅದನ್ನು ನಾನು ಈಗಲೇ ಮಾತನಾಡಲು ಸಾಧ್ಯವಿಲ್ಲ. ಇಷ್ಟಕ್ಕೂ ನಾನು ಇನ್ನು ಅಧಿಕಾರ ಸ್ವೀಕಾರ ಮಾಡಿಲ್ಲ. ಈಗಲೂ ಪರಮೇಶ್ವರ್ ಅವರೇ ಅಧ್ಯಕ್ಷರು. ಅಧಿಕಾರ ಹಸ್ತಾಂತರವಾದ ನಂತರ ಅದರ ಬಗ್ಗೆ ಚರ್ಚೆ ಮಾಡಿ ಅಮೇಲೆ ನಿಮಗೆ ಹೇಳುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಮೇಲುಗೈ ಸಾಧಿಸುತ್ತಿದೆ. ಇದಕ್ಕೆ ಬಜೆಟ್ ಸ್ಪಷ್ಟ ನಿದರ್ಶನ. 

ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಿತ ಹೇಗೆ ಕಾಪಾಡುವಿರಿ? 

ಬಜೆಟ್‌ನಲ್ಲಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಮುಂದುವರೆದಿವೆ. ಸಾಲಮನ್ನಾ ಮಾಡುವ ಯೋಜನೆ ಸೇರಿದಂತೆ ಕೆಲವೊಂದು ಮಾರ್ಪಾಡು ಮಾತ್ರ ಆಗಿದೆ. ಇನ್ನು ಜೆಡಿಎಸ್ ಹಳೆ ಮೈಸೂರು ಭಾಗದ ಜಿಲ್ಲೆಗಳಿಗೆ ಹೆಚ್ಚು ಕಾರ್ಯಕ್ರಮ ನೀಡಿದೆ ಎಂದು ಆರೋಪಿಸುತ್ತಾರೆ. ಆದರೆ, ಅದು ನಿಜವಲ್ಲ. ಆ ಜಿಲ್ಲೆಗಳಿಗೆ ಸಾವಿರಾರು ಕೋಟಿ ರು.ಗಳೇನೂ ನೀಡಿಲ್ಲ. ಸಮ್ಮಿಶ್ರ ಸರ್ಕಾರದ ಕಾರ್ಯ ವೈಖರಿ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಕೆಲ ಬದಲಾವಣೆಗಳಿದ್ದರೆ ಹೊಂದಾಣಿಕೆ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಮೂಲ ಸಿದ್ಧಾಂತದ ವಿಚಾರದಲ್ಲಿ ಹೊಂದಾಣಿಕೆಗೆ ಸುತಾರಾಂ ಸಿದ್ಧರಿಲ್ಲ. ಪಕ್ಷದ ಮೂಲ ಸಿದ್ಧಾಂತವಾದ ಜಾತ್ಯತೀತವಾದ ಹಾಗೂ ಸಾಮಾಜಿಕ ನ್ಯಾಯ ಪರಿಪಾಲನೆಯಾಗಲೇಬೇಕು. ಉಭಯ ಪಕ್ಷಗಳು ಮೈತ್ರಿ ಧರ್ಮ ಪಾಲಿಸಬೇಕು. ಇದು ಎಲ್ಲಿಯವರೆಗೂ ಸರಿಯಿರುತ್ತದೆಯೋ ಅಲ್ಲಿಯವರೆಗೂ ಯಾವುದೇ ಸಮಸ್ಯೆಯಾಗುವುದಿಲ್ಲ. 

 ಹೌದು, ಈ ಹಂತದಲ್ಲಿ ನೀವು ಕೆಪಿಸಿಸಿ ಅಧ್ಯಕ್ಷರಾಗಿದ್ದು ಏಕೆ, ಇದು ರೈಟ್ ಟೈಮಾ?

ಇಲ್ಲಿ ರೈಟ್ ಟೈಮ್ ಅಥವಾ ರಾಂಗ್ ಟೈಮ್ ಎಂಬ ಪ್ರಶ್ನೆ ಉದ್ಬವವಾಗುವುದಿಲ್ಲ. ಬಹುಶಃ ಇಂದಿನ ಪರಿಸ್ಥಿತಿಯಲ್ಲಿ ಕೆಪಿಸಿಸಿ ಹುದ್ದೆ ಅಲಂಕರಿಸಲು ನಾನೇ ಸೂಕ್ತ ವ್ಯಕ್ತಿ ಎಂದು ಹೈಕಮಾಂಡ್ ನಿರ್ಧರಿಸಿರಬಹುದು. ಏಕೆಂದರೆ, ಹಿರಿಯ ಮುಖಂಡರಾದ ಸಿದ್ದರಾಮಯ್ಯ ಅವರು ಒಂದು ಕಡೆಯಿದ್ದಾರೆ. ಪರಮೇಶ್ವರ್ ಎಂಟು ವರ್ಷ ಕೆಲಸ ಮಾಡಿ ಡಿಸಿಎಂ ಆಗಿದ್ದಾರೆ. ಶಿವಕುಮಾರ್ ಅವರು ಪ್ರಮುಖ ಸಚಿವರಾಗಿದ್ದಾರೆ. ಹಿರಿಯ ನಾಯಕರು ಲೋಕಸಭಾ ಚುನಾವಣೆ ಸಜ್ಜಾಗುತ್ತಿದ್ದಾರೆ. ಹೀಗಾಗಿ ಪಕ್ಷಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡು ಕೆಲಸ ಮಾಡುವವರು ಬೇಕಿತ್ತು. ಹೀಗಾಗಿ ನನ್ನನ್ನು ಹೈಕಮಾಂಡ್ ಆಯ್ಕೆ ಮಾಡಿದೆ.

ನಿಮ್ಮ ಪೊಲಿಟಿಕಲ್ ಕೆರಿಯರ್‌ಗೆ ಏನು ಲಾಭ?

ಕೆಪಿಸಿಸಿ ಅಧ್ಯಕ್ಷ ಎಂಬುದೇ ದೊಡ್ಡ ಸ್ಥಾನ. ನಿಜಲಿಂಗಪ್ಪ, ಸಾಹುಕಾರ್ ಚೆನ್ನಯ್ಯ, ಕೆ.ಎಚ್. ರಂಗನಾಥ್, ದೇವರಾಜ ಅರಸು, ಬಂಗಾರಪ್ಪರಂತಹ ದಿಗ್ಗಜರು ಕೆಲಸ ಮಾಡಿದ್ದಾರೆ. ಅಂತಹ ಸ್ಥಾನಕ್ಕೆ ನಾನು ಪರಿಗಣಿಸ್ಪಟ್ಟಿರುವುದೇ ದೊಡ್ಡದು. ಲಾಭ ಹಾಗೂ ನಷ್ಟದ ಯೋಜನೆ ನನಗೆ ಇಲ್ಲ. ಈ ಹುದ್ದೆಯೇ ಒಂದು ಗೌರವ. ಕಾಂಗ್ರೆಸ್ ನಲ್ಲಿ ಮಂತ್ರಿ ಸ್ಥಾನಕ್ಕಿಂತ ಅಧ್ಯಕ್ಷ ಸ್ಥಾನ ದೊಡ್ಡದು. ಪಕ್ಷ ಹಾಗೂ ಸರ್ಕಾರದ ನಡುವೆ ಆಯ್ಕೆ ಬಂದಾಗ ಸದಾ ನನ್ನ ಆಯ್ಕೆ ಪಕ್ಷ. ಈಗಲೂ ಅಷ್ಟೇ ಭವಿಷ್ಯದಲ್ಲೂ ಅಷ್ಟೇ.

ಬ್ರಾಹ್ಮಣರಾದ ನಿಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಾಗ ಜಾತಿ ಲೆಕ್ಕಾಚಾರ ನಡೆದಿಲ್ಲ ಅಂತಾರೆ?

ನೋಡಿ, ಕಾಂಗ್ರೆಸ್‌ನಲ್ಲಿ ಸದಾ ಜಾತಿ ಲೆಕ್ಕಾಚಾರ ನಡೆಯುತ್ತದೆ ಎಂಬುದು ತಪ್ಪು ತಿಳಿವಳಿಕೆ. ಪರಮೇಶ್ವರ್ ದಲಿತ ಎಂಬ ಏಕೈಕ ಕಾರಣಕ್ಕೆ ಅವರನ್ನು ಅಧ್ಯಕ್ಷರನ್ನಾಗಿಸಲಿಲ್ಲ. ಖರ್ಗೆ, ಕೃಷ್ಣ ಅವರನ್ನು ಕೇವಲ ಅವರ ಜಾತಿ ಕಾರಣಕ್ಕೆ ಪಕ್ಷದ ಉನ್ನತ ಹುದ್ದೆ ನೀಡಿರಲಿಲ್ಲ. ಆ ನಾಯಕರಲ್ಲಿನ ನಾಯಕತ್ವದ ಗುಣ ನೋಡಿರುತ್ತಾರೆ. ಅದರ ಜತೆಗೆ ಜಾತಿಯೂ ಸೇರಿರಬಹುದು. ಇನ್ನು ಕಾಂಗ್ರೆಸ್ ಎಲ್ಲ ಜಾತಿ ವರ್ಗಕ್ಕೂ ಅವಕಾಶ ನೀಡಿದೆ. ಅದೇ ರೀತಿ ನನ್ನನ್ನು ಅಧ್ಯಕ್ಷನ್ನಾಗಿ ಮಾಡಿದೆ. ಎಲ್ಲ ವರ್ಗದ ಜನ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾಗಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಿ ನಿಮ್ಮ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳೇನು?

ಉತ್ತಮ ಕಾರ್ಯಕ್ರಮ ನೀಡಿದ ಹೊರತಾಗ್ಯೂ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಈ ಬಗ್ಗೆ ಕಾರ್ಯಕರ್ತರಲ್ಲಿ ನೋವು ಹಾಗೂ ನಿರುತ್ಸಾಹವಿದೆ. ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಸ್ವಲ್ಪ ಗೊಂದಲವೂ ಇದೆ. ಅವೆಲ್ಲವನ್ನು ನಿವಾರಣೆ ಮಾಡುವುದು ಮತ್ತು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುವುದು ಮುಖ್ಯ.ಇನ್ನು ಲೋಕಸಭಾ ಚುನಾವಣೆ ಡಿಸೆಂಬರ್‌ನಲ್ಲಿ ಬರುವ ಸಾಧ್ಯತೆಯಿದೆ. ಅದಕ್ಕೆ ಪಕ್ಷವನ್ನು ಅಣಿಗೊಳಿಸಬೇಕು. ಈ ದಿಸೆಯಲ್ಲಿ ನನ್ನ ಕಾರ್ಯತಂತ್ರಗಳು ಇರುತ್ತವೆ.

click me!