ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ: ಬೃಹತ್‌ ಉದ್ಯೋಗ ಮೇಳ

By Suvarna NewsFirst Published Jan 4, 2020, 7:38 AM IST
Highlights

ಫೆಬ್ರವರಿ ತಿಂಗಳಿನಲ್ಲಿ ಬೃಹತ್‌ ಉದ್ಯೋಗ ಮೇಳ| ಹಾವೇರಿ, ಧಾರವಾಡ, ಗದಗ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಭಾಗಿ| ಮೇಳದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ ಹೇಳಿಕೆ| 2015ರ ನಂತರ ಜಿಲ್ಲೆಯಲ್ಲಿ ಯಾವುದೇ ಬೃಹತ್‌ ಉದ್ಯೋಗ ಮೇಳಗಳು ನಡೆದಿಲ್ಲ| ಮೇಳವನ್ನು ಆಯೋಜಿಸುವುದರ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶ|

ಹುಬ್ಬಳ್ಳಿ[ಜ.04]: ಜಿಲ್ಲಾಡಳಿತದ ವತಿಯಿಂದ ಫೆಬ್ರವರಿ ತಿಂಗಳಿನಲ್ಲಿ ಬೃಹತ್‌ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯ ಉದ್ಯೋಗದಾತರು ಹಾಗೂ ಉದ್ಯೋಗಕಾಂಕ್ಷಿಗಳು ಭಾಗಿಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದ್ದಾರೆ.

ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಬೃಹತ್‌ ಉದ್ಯೋಗ ಮೇಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

2015ರ ನಂತರ ಜಿಲ್ಲೆಯಲ್ಲಿ ಯಾವುದೇ ಬೃಹತ್‌ ಉದ್ಯೋಗ ಮೇಳಗಳು ನಡೆದಿಲ್ಲ. ಮೇಳವನ್ನು ಆಯೋಜಿಸುವುದರ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶ ಲಭಿಸುವಂತೆ ಮಾಡಲಾಗುವುದು. ಹಲವು ಯುವಕರು ಉದ್ಯೋಗವನ್ನು ಅರಸಿ ಜಿಲ್ಲಾಧಿಕಾರಿಗಳ ಕಚೇರಿ ಬರುತ್ತಾರೆ ಮತ್ತು ಜಿಲ್ಲೆಯಲ್ಲಿ ಇರುವ ಉದ್ಯೋಗದಾತರಿಗೆ ಸೂಕ್ತವಾದ ಅಭ್ಯರ್ಥಿಗಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಉದ್ಯೋಗದಾತರು ಹಾಗೂ ಆಕಾಂಕ್ಷಿಗಳನ್ನು ಬೆಸೆಯುವ ಕೆಲಸವನ್ನು ಉದ್ಯೋಗ ಮೇಳದ ಮೂಲಕ ಮಾಡಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉದ್ಯೋಗದಾತರು ಮೇಳದಲ್ಲಿ ಭಾಗವಹಿಸಲು ಕೌಶಲ್ಯಾಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ತಮ್ಮ ಬೇಡಿಕೆ ಅನುಸಾರ ಖಾಲಿ ಹುದ್ದೆಗಳಿಗೆ ಅಗತ್ಯ ಕೌಶಲ್ಯ ಮತ್ತು ವಿದ್ಯಾರ್ಹತೆಯನ್ನು ಹೊಂದಿರುವ ಯುವಕರನ್ನು ಆರಿಸಿ ಕೊಳ್ಳುವ ಸುವರ್ಣ ಅವಕಾಶ ಇದಾಗಿದೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಇತರೆ ಉದ್ಯೆಮೆಗಳ ಮುಖ್ಯಸ್ಥರು ಮೇಳದ ಯಶಸ್ವಿಗೆ ಸಹರಿಸಬೇಕು ಎಂದರು.

ಜಿಲ್ಲಾ ಉದ್ಯೋಗ ಮಿನಿಮಯ ಕೇಂದ್ರ ಹಿರಿಯ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ ಮಾತನಾಡಿ, ಇಲಾಖೆಯ ವತಿಯಿಂದ ಪ್ರತಿ ತಿಂಗಳು ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಆದರೆ ಹಲವು ವರ್ಷಗಳಿಂದ ಬೃಹತ್‌ ಮಟ್ಟದಲ್ಲಿ ಆಯೋಜನೆ ಮಾಡಿರಲಿಲ್ಲ. ಫೆಬ್ರವರಿಯಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸುವ ಮೂಲಕ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಜಿಲ್ಲಾಡಳಿತದ ಉದ್ದೇಶ ಎಂದು ನುಡಿದರು.

ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡ ಕಂಪನಿಗಳು ಮೇಳದ ಅಂತ್ಯದಲ್ಲಿ ಆಕಾಂಕ್ಷಿಗಳಿಗೆ ನೇಮಕಾತಿ ಪತ್ರ ವಿತರಿಸಬೇಕು. ಧಾರವಾಡ ಜಿಲ್ಲೆಯ ಉದ್ಯೋಗದಾತರಿಗೆ ಮೊದಲ ಆದ್ಯತೆ. ನಂತರ ಉಳಿದವರಿಗೆ ನೀಡಲಾಗುವುದು. ನಕಲಿ ಉದ್ಯೋಗತಾರರಿಗೆ ಅವಕಾಶವಿಲ್ಲ. ವಿಶೇಷಚೇತನ ಅಭ್ಯರ್ಥಿಗಳಿಗೆ ಮಾನವೀಯತೆ ಆಧಾರದಲ್ಲಿ ಅವಕಾಶ ಮಾಡಿಕೊಡುವಂತಹ ಕಾರ್ಯವಾಗಬೇಕು. ತರಬೇತಿ ನೀಡಿ ನೇಮಕ ಮಾಡಿಕೊಳ್ಳಲು ಅವಕಾಶ ಒದಗಿಸಲಾಗುವುದು. ಗೊಂದಲಗಳಿದ್ದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಎಂದರು.

ಉತ್ತರ ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಕಾರ್ಯದರ್ಶಿ ಮನೋಹರ ಕೊಟ್ರಶೆಟ್ಟರ್‌ ಮಾತನಾಡಿ, ಜಿಲ್ಲೆಯಿಂದ ಹಲವು ಪ್ರತಿಭಾವಂತ ಅಭ್ಯರ್ಥಿಗಳು ಕೆಲಸ ಅರಸಿ ಬೆಂಗಳೂರು ಪುಣೆ, ಮುಂಬೈಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ಹುಬ್ಬಳ್ಳಿ-ಧಾರವಾಡದಲ್ಲಿ ಕೆಲಸ ನೀಡುವಂತಾಗಬೇಕು. ಉತ್ತರ ಕರ್ನಾಟಕದ ಭಾಗಕ್ಕೆ ದೊಡ್ಡ ಉದ್ಯಮ ಬರುತ್ತಿಲ್ಲ ಎನ್ನುವ ಬದಲಾಗಿ ಇರುವ ಉದ್ಯಮವನ್ನೇ ದೊಡ್ಡದಾಗಿ ಬೆಳೆಸುವಂತಹ ಕೆಲಸವಾಗಬೇಕು ಎಂದರು.

ಅಭ್ಯರ್ಥಿಗಳು ಹಾಗೂ ಉದ್ಯೋಗದಾತರಿಗೆ ತೊಂದರೆ ಆಗದಂತೆ ಮಾಹಿತಿ ಕೈಪಿಡಿಯನ್ನು ತಯಾರಿಸಿ, ಯಾವ ಅಭ್ಯರ್ಥಿಗಳಿಗೆ, ಯಾವ ವಲಯದಲ್ಲಿ ಉದ್ಯೋಗ ಅವಕಾಶವಿದೆ, ವೇತನವೆಷ್ಟು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಉದ್ಯಮಿಗಳಿಗೆ ಸಭೆಯಲ್ಲಿ ಸಲಹೆ ನೀಡಲಾಯಿತು.

ಸಭೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ , ಗದಗದ ಅಧ್ಯಕ್ಷ ಜಯದೇವ ಮೆಣಸಗಿ, ಹಾವೇರಿ ಅಧ್ಯಕ್ಷ ಎಂ.ಬಿ.ಹೊಂಬರಡಿ, ಕೆಎಲ್‌ಇ ಬೆಳಗಾವಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ. ಚಂದ್ರಪ್ಪ, ತಹಸೀಲ್ದಾರ್‌ ಶಶಿಧರ ಮಾಡ್ಯಾಳ, ಪ್ರಕಾಶ್‌ ನಾಸಿ ಸೇರಿದಂತೆ ಹಿರಿಯ ಅಧಿಕಾರಿಗಳು, ಉದ್ಯಮಿದಾರರು ಭಾಗವಹಿಸಿದ್ದರು.

click me!